ಲಾಯ ಉತ್ಸವ ಐತಿಹಾಸಿಕ ಕ್ಷಣ: ಹುಚ್ಚೇಶ್ವರ ಶ್ರೀ

KannadaprabhaNewsNetwork | Published : Jan 18, 2025 12:47 AM

ಸಾರಾಂಶ

6ನೇ ಶತಮಾನದಲ್ಲಿ ಚಾಲುಕ್ಯರ ಕಾಲದ ಲಾಯ ಎಂಬುದು ಅವರು ಬಳಸುವ ಕುದುರೆ ಕಟ್ಟುವ ಸ್ಥಳವಾಗಿತ್ತು. ಇಲ್ಲಿ ಕುದುರೆ ಕಟ್ಟುವ ಕಾರಣ ಲಾಯದಗುಂದಿ ಎಂದು ಗ್ರಾಮಕ್ಕೆ ಹೆಸರು ಬಂದಿದೆ.

ಕನ್ನಡಪ್ರಭ ವಾರ್ತೆ ಗುಳೇದಗುಡ್ಡ

50 ವರ್ಷಗಳ ಹಿಂದೆ ಮಲ್ಲಿಕಾರ್ಜುನ ದೇವರ ದೇವಸ್ಥಾನವನ್ನು 12ನೇ ಹುಚ್ಚೇಶ್ವರ ಶ್ರೀಗಳ ಮಾರ್ಗದರ್ಶನದಲ್ಲಿ ಕಟ್ಟಿಸಿ, ರಥ ನಿರ್ಮಿಸಿ ಜಾತ್ರೆ ಆರಂಭಿಸಿ ಇಂದು ಉತ್ಸವ ಮಾಡುತ್ತಿರುವುದು ಐತಿಹಾಸಿಕ ಕ್ಷಣವಾಗಿದೆ. ನಮ್ಮ ಹಿರಿಯರನ್ನು ಸ್ಮರಿಸಬೇಕಾಗಿದೆ ಎಂದು ಕಮತಗಿ-ಕೋಟೇಕಲ್‌ದ ಹೊಳೆ ಹುಚ್ಚೇಶ್ವರ ಶ್ರೀಗಳು ಹೇಳಿದರು.

ತಾಲೂಕಿನ ಲಾಯದಗುಂದಿ ಗ್ರಾಮದಲ್ಲಿ ನಡೆದ ಲಾಯ ಉತ್ಸವ ಸಮಾರಂಭ ಉದ್ಘಾಟಿಸಿ ಮಾತನಾಡಿ, 6ನೇ ಶತಮಾನದಲ್ಲಿ ಚಾಲುಕ್ಯರ ಕಾಲದ ಲಾಯ ಎಂಬುದು ಅವರು ಬಳಸುವ ಕುದುರೆ ಕಟ್ಟುವ ಸ್ಥಳವಾಗಿತ್ತು. ಇಲ್ಲಿ ಕುದುರೆ ಕಟ್ಟುವ ಕಾರಣ ಲಾಯದಗುಂದಿ ಎಂದು ಗ್ರಾಮಕ್ಕೆ ಹೆಸರು ಬಂದಿದೆ. ಇಂತಹ ಐತಿಹಾಸಿಕ ನೆಲೆ ನಮ್ಮ ಗ್ರಾಮಕ್ಕೆ ಇದೆ ಎಂದರು. ಜೆಡಿಎಸ್ ಜಿಲ್ಲಾಧ್ಯಕ್ಷ ಹನಮಂತ ಮಾವಿನಮರದ ಮಾತನಾಡಿ, ಗ್ರಾಮದಲ್ಲಿ ಮಲ್ಲಿಕಾರ್ಜುನ ರಥೋತ್ಸವಕ್ಕೆ 50 ವರ್ಷ ತುಂಬಿದೆ. ಎಲ್ಲ ರೀತಿಯ ಆಚರಣೆಗಳ ಮೂಲಕ ಇಂದಿಗೂ ಬೆಳೆಸಿಕೊಂಡು ಮುಂದಿನ ಪೀಳಿಗೆಗೆ ಪರಿಚಯಿಸುವ ಮಾದರಿ ಉತ್ತಮವಾಗಿದೆ. ಐತಿಹಾಸಿಕವಾಗಿ ಲಾಯ ಉತ್ಸವ ಮಾದರಿಯಾಗಿದೆ ಎಂದರು. ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷೆ ವೀಣಾ ಕಾಶಪ್ಪನವರ ಮಾತನಾಡಿ, ಇಂದು ಮಹಿಳೆಯರು ಎಲ್ಲ ರಂಗಗಳಲ್ಲೂ ಮುಂದೆ ಇದ್ದಾರೆ. ಜಾತ್ರೋತ್ಸವದಲ್ಲಿ ಮಹಿಳೆಯರ ಪಾತ್ರ ಬಹು ಮುಖ್ಯವಾಗಿದೆ ಎಂದರು.

ಮಾಜಿ ಶಾಸಕ ಎಂ.ಕೆ.ಪಟ್ಟಣಶೆಟ್ಟಿ, ಕಾಂಗ್ರೆಸ್ ಮುಖಂಡ ಮಹೇಶ ಹೊಸಗೌಡರ ಮಾತನಾಡಿದರು. ಮುರುಘಾಮಠದ ಕಾಶೀನಾಥ ಶ್ರೀ, ಮರಡಿಮಠದ ಕಾಡಸಿದ್ದೇಶ್ವರ ಶ್ರೀ, ಶಿವಪ್ಪ ಮುತ್ಯಾ ಅಚನೂರ ರಾಜೇಂದ್ರ ಶಿವಯೋಗಿಗಳು ಸಾನ್ನಿಧ್ಯ ವಹಿಸಿ ಮಾತನಾಡಿದರು. ಇದೇ ವೇಳೆ ತುಳಸಿಗೇರಿ ಸರ್ಕಾರಿ ಪ್ರೌಢ ಶಾಲಾ ವಿದ್ಯಾರ್ಥಿಗಳಿಂದ ಮಲ್ಲಗಂಭ ಪ್ರದರ್ಶನ, ಜನಪದ ವಿದ್ವಾಂಸ ಸಿದ್ದಪ್ಪ ಬಿದರಿ ವಿಶೇಷ ಉಪನ್ಯಾಸ, ಬಸವರಾಜ ಸಿಂದಗಿಮಠ, ವೈಷ್ಣವಿ ಗೂಳಿ ತಂಡದವರಿಂದ ಸಂಗೀತ ಕಾರ್ಯಕ್ರಮ, ಡೊಳ್ಳುಕುಣಿತ ಮುಂತಾದ ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿತ್ತು. ವಿವಿಧ ಸಾಧಕರನ್ನು, ಸಹಾಯ, ಸಹಕಾರ ಮಾಡಿದವರನ್ನು ಗೌರವಿಸಲಾಯಿತು.

ಬಿಜೆಪಿ ಜಿಲ್ಲಾಧ್ಯಕ್ಷ ಶಾಂತಗೌಡ ಪಾಟೀಲ, ಜಿಪಂ ಮಾಜಿ ಸದಸ್ಯ ಆಸಂಗೆಪ್ಪ ನಕ್ಕರಗುಂದಿ, ಮುಖಂಡ ಮಹೇಶ ಬಿಜಾಪೂರ, ಗ್ರಾ.ಪಂ.ಅಧ್ಯಕ್ಷೆ ಸತ್ಯವ್ವ ಕುರಿ ಉಪಸ್ಥಿತರಿದ್ದರು.

Share this article