ತರಳಬಾಳು ಶ್ರೀಗಳಿಗೆ ರೈತ ಸಂಘಟನೆಗಳ ಮುಖಂಡರ ದುಂಬಾಲು । ರೈತರ ಬೆಂಬಲಕ್ಕೆ ಇರುತ್ತೇವೆ ಎಂದ ಶ್ರೀ । ಪ್ರತಿಭಟನೆ, ಧರಣಿ ಬಿಟ್ಟು ಸರ್ಕಾರದ ಮನವೊಲಿಸುವಂತೆ ಸಲಹೆಕನ್ನಡಪ್ರಭ ವಾರ್ತೆ ಸಿರಿಗೆರೆ
ಮಠದ ಸದ್ಧರ್ಮ ನ್ಯಾಯಪೀಠದ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ರೈತರ ಕಡೆಯಿಂದ ಕೇಳಿ ಬಂದ ಹೋರಾಟದ ನೇತೃತ್ವ ತಾವೇ ವಹಿಸಿಕೊಳ್ಳಬೇಕೆಂಬ ಹಕ್ಕೊತ್ತಾಯವ ಸೂಕ್ಷ್ಮವಾಗಿ ನಿರಾಕರಿಸಿದ ಶ್ರೀಗಳು ರೈತರ ಜೊತೆಗೆ ತಾವು ಸದಾ ಇರುವುದಾಗಿ ಹೇಳಿದರು. ಸರ್ಕಾರದ ಮೇಲೆ ಒತ್ತಡ ಹಾಗಿ ರಾಜನಹಳ್ಳಿ ಏತ ನೀರಾವರಿ ಯೋಜನೆ ಸಾಕಾರಗೊಳಿಸಿರುವ ಶ್ರೀಗಳು ನೂರಾರು ಕೆರೆಗಳ ಭರ್ತಿ ಮಾಡಿದ್ದಾರೆ. ಹಾಗಾಗಿ ಭದ್ರಾ ಮೇಲ್ದಂಡೆ ಹೋರಾಟದ ಸಾರಥ್ಯವ ಶ್ರೀಗಳೇ ವಹಿಸಿಕೊಳ್ಳಬೇಕೆಂಬ ಸಹಜ ಬೇಡಿಕೆ ರೈತರದ್ಗಾಗಿತ್ತು.
ಭದ್ರಾ ಮೇಲ್ದಂಡೆ ಯೋಜನೆ ಸಾಗಿ ಬಂದ ಹಾದಿ ಹಾಗೂ ಸದ್ಯದ ಪರಿಸ್ಥಿತಿ ಕುರಿತು ಸಭೆಗೆ ಮಾಹಿತಿ ನೀಡಿದ ಮುಖ್ಯ ಎಂಜಿನಿಯರ್ ಫಕೀರಪ್ಪ ಹರಿಶ್ಚಂದ್ರ ಲಮಾಣಿ, ಚಿತ್ರದುರ್ಗ, ದಾವಣಗೆರೆ, ಚಿಕ್ಕಮಗಳೂರು ಮತ್ತು ತುಮಕೂರು ಜಿಲ್ಲೆಯ 2.25 ಲಕ್ಷ ಹೆಕ್ಟೇರ್ ಪ್ರದೇಶಕ್ಕೆ ನೀರುಣಿಸುವ ಯೋಜನೆ ಇದಾಗಿದ್ದು ಸುಮಾರ್ 367 ಕೆರೆಗಳ ತುಂಬಿಸಲಾಗುತ್ತಿದೆ. ಇದಕ್ಕಾಗಿ ತುಂಗಾ ಹಾಗೂ ಭದ್ರಾ ಜಲಾಶಯದಿಂದ ಒಟ್ಟು 29.90 ಟಿಎಂಸಿ ನೀರು ಬಳಸಿಕೊಳ್ಳಲಾಗುತ್ತದೆ. ಭದ್ರಾ ಮೇಲ್ದಂಡೆ ರಾಷ್ಟೀಯ ಯೋಜನೆಯಾಗಿ ಘೋಷಣೆ ಮಾಡಿ ಅಗತ್ಯ ಅನುದಾನ ನೀಡುವಂತೆ ರಾಜ್ಯದಿಂದ ಕೇಂದ್ರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿತ್ತು.ಕೃಷಿ ಸಂಚಾಯಿನಿ ಯೋಜನೆಯಡಿ 5,300 ಕೋಟಿ ರು. ಅನುದಾನದ ಭರವಸೆ ದೊರೆತಿತ್ತು. ಆದರೆ ಕಾರಣಾಂತರದಿಂದ ಅನುದಾನ ಬಿಡುಗಡೆಯಾಗಲಿಲ್ಲ. ಇದೀಗ ಯೋಜನೆಯ ಪರಿಷ್ಕೃತಗೊಳಿಸಿ 21 ಸಾವಿರ ಕೋಟಿ ರು. ಪ್ರಸ್ತಾವನೆ ಸಲ್ಲಿಸಲಾಗಿದೆ. ಈ ಕೇಂದ್ರದಿಂದ ಕನಿಷ್ಟ 6 ಸಾವಿರ ಕೋಟಿ ರು. ಅನುದಾನದ ಭರವಸೆ ಇದೆ ಎಂದರು.
ತರಳಬಾಳು ಮಠದ ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಯೋಜನೆಗೆ ಆಡ್ಡಿಯಾಗಿದ್ದ ರೈತರ ಸಮಸ್ಯೆ ನಿವಾರಣೆ ಆಗಿದೆ. ಅಜ್ಜಂಪುರ ಸಮೀಪ ಕಾಮಗಾರಿಗೆ ಅಡ್ಡಿಯಾಗಿರುವ ರೈತರನ್ನು ಕರೆದು ಮಾತನಾಡಿ ಸಮಸ್ಯೆ ಇತ್ಯರ್ಥಗೊಳಿಸಿದ್ದೇವೆ. ಮುಂದಿನ ಜವಾಬ್ದಾರಿಯ ಜನ ಪ್ರತಿನಿಧಿಗಳು ವಹಿಸಿಕೊಳ್ಳಬೇಕು. ಸಂಸದ ಗೋವಿಂದ ಕಾರಜೋಳ ಕೇಂದ್ರ ಜಲಶಕ್ತಿ ಹಾಗೂ ಹಣಕಾಸು ಇಲಾಖೆಯೊಂದಿಗೆ ವ್ಯವಹರಿಸಿ 5300 ಕೋಟಿ ರು. ಅನುದಾನ ಬಿಡುಗಡೆ ಮಾಡಿಸಬೇಕೆಂದರು.
ಧರಣಿ, ಸತ್ಯಾಗ್ರಹ ಮತ್ತು ಚಳುವಳಿಗಳಿಂದ ಸರ್ಕಾರ ಮಣಿಯುತ್ತದೆ ಎಂಬ ಮನೋಭಿಪ್ರಾಯವ ರೈತರು ದೂರ ಸರಿಸಬೇಕು ಚಳುವಳಿಗಳನ್ನು ಬಿಟ್ಟು ಸರ್ಕಾರವ ಮನವೊಲಿಸುವ ಕಾರ್ಯ ಮಾಡಬೇಕೆಂದು ತರಳಬಾಳು ಶ್ರೀ ಹೇಳಿದರುರೈತ ಸಂಘದ ರಾಜ್ಯಾಧ್ಯಕ್ಷ ಎಚ್.ಆರ್.ಬಸವರಾಜಪ್ಪ ಮಾತನಾಡಿ, ತರಳಬಾಳು ಮಠದ ಶ್ರೀಗಳಿಗೆ ರಾಜ್ಯ ಮತ್ತು ಕೇಂದ್ರ ಸರ್ಕಾರದಲ್ಲಿ ಗೌರವ ಇದೆ. ಅವರ ಸಾಮಾಜಿಕ ನೆರವಿನ ಕೆಲಸಗಳು ಸರ್ಕಾರದ ಗಮನದಲ್ಲಿವೆ. ಭದ್ರಾ ಮೇಲ್ದಂಡೆ ವಿಚಾರದಲ್ಲಿ ಕೇಂದ್ರದ ಗಮನ ಸೆಳೆಯಲು ಶ್ರೀಗಳು ಮುಂದಾಗಬೇಕು. ಭದ್ರಾವತಿಯ ಉಕ್ಕು ಕಾರ್ಖಾನೆ ಮರು ಆರಂಭಿಸಲು ಶ್ರೀಗಳು 5 ಕೋಟಿ ನೆರವು ಘೋಷಣೆ ಮಾಡಿರುವುದು ಜನಸಮುದಾಯದ ಬಗ್ಗೆ ಅವರಿಗಿರುವ ಕಾಳಜಿ ತೋರಿಸುತ್ತದೆ ಎಂದರು.
ಸಂಸದ ಗೋವಿಂದ ಕಾರಜೋಳ ಮಾತನಾಡಿ, ಭದ್ರಾ ಮೇಲ್ಡಂಡೆ ಯೋಜನೆಗೆ ಬಿಜೆಪಿ ಸರ್ಕಾರ ಅತಿ ಹೆಚ್ಚು ಅನುದಾನ ನೀಡಿದೆ. 2019ರಲ್ಲಿ ಬಿ.ಎಸ್ ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾಗ ಒಮ್ಮೆ 1700 ಕೋಟಿ, ಮತ್ತೊಮ್ಮೆ 1500 ಕೋಟಿ ರು. ನಂತರ ಬಸವರಾಜ ಬೊಮ್ಮಾಯಿ ರ ಕಾಲದಲ್ಲಿ 2,600 ಕೋಟಿ ರು ಬಿಡಗಡೆ ಮಾಡಿದ್ದರು.ಯೋಜನೆಯ ಅನುದಾನ ಬಿಡುಗಡೆಗೆ ಒತ್ತಾಯಿಸಿ ಹಲವು ಬಾರಿ ಕೇಂದ್ರ ಹಣಕಾಸು ಸಚಿವರು ಮತ್ತು ಪ್ರಧಾನ ಮಂತ್ರಿಗಳನ್ನು ಭೇಟಿ ಮಾಡಿದ್ದೇನೆ. ಇಂತಹ ದೊಡ್ಡ ಯೋಜನೆಗಳ ಜಾರಿಗೆ ಸಂಸದರ ಮನೆ ಮುಂದೆ ಧರಣಿ ಕುಳಿತರೆ ಪರಿಹಾರ ಸಿಗುತ್ತದೆಯೇ? ಎಂದು ಕಾರಜೋಳ ಪ್ರಶ್ನೆ ಮಾಡಿದರು.
ಮಾಜಿ ಸಚಿವ ಜಿ.ಎಂ.ಸಿದ್ದೇಶ್ವರ, ವಿಧಾನ ಪರಿಷತ್ ಸದಸ್ಯ ಕೆ.ಎಸ್.ನವೀನ್, ಕೃಷಿಕ ಸಮಾಜದ ಎಚ್.ಆರ್.ತಿಮ್ಮಯ್ಯ, ರೈತ ಸಂಘದ ಕೆ.ಟಿ.ತಿಪ್ಪೇಸ್ವಾಮಿ, ಕಬ್ಬಿಗೆರೆ ನಾಗರಾಜ್ ಇದ್ದರು.