ಆಗ್ನೇಯ ಪದವೀಧರರ ಕ್ಷೇತ್ರದ ಚುನಾವಣೆ । ಬಿಜೆಪಿ ಜೆಡಿಎಸ್ ಸಮನ್ವಯ ಸಭೆ । ಒಟ್ಟಾಗಿ ಕೆಲಸ ಮಾಡಿ ಯಶಸ್ಸು ಗಳಿಸುತ್ತೇವೆ: ಓಂಶಕ್ತಿ ಚಲಪತಿ
ಮುಂಬರುವ ಆಗ್ನೇಯ ಪದವೀಧರರ ಕ್ಷೇತ್ರದ ವಿಧಾನ ಪರಿಷತ್ ಚುನಾವಣೆಗೆ ಸಂಬಂಧಿಸಿದಂತೆ ನಗರದ ಹೊರವಲಯದ ರತ್ನ ಕನ್ವೆನ್ಷನ್ ಹಾಲ್‌ನಲ್ಲಿ ಬಿಜೆಪಿ- ಜೆಡಿಎಸ್ ಸಂಯುಕ್ತ ಸಮನ್ವಯ ಹಾಗೂ ಪೂರ್ವಭಾವಿ ಸಭೆ ಹಮ್ಮಿಕೊಳ್ಳಲಾಗಿತ್ತು. ಸಭೆಯ ನಂತರ ಪತ್ರಿಕಾಗೋಷ್ಠಿಯಲ್ಲಿ ಮೈತ್ರಿಕೂಟದ ಅಭ್ಯರ್ಥಿ ಕೆ.ಎಂ. ಸುರೇಶ್ ಅವರ ಗೆಲುವಿಗಾಗಿ ಒಗ್ಗಟ್ಟಿನಿಂದ ಶ್ರಮಿಸುವುದಾಗಿ ಜಿಲ್ಲಾ ಬಿಜೆಪಿ ಅಧ್ಯಕ್ಷ ಓಂಶಕ್ತಿ ಚಲಪತಿ ಘೋಷಿಸಿದರು.
ಜೆಡಿಎಸ್ ರಾಜ್ಯ ಅಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ, ಜಿ.ಟಿ.ದೇವೇಗೌಡ, ಎಲ್.ಎನ್.ರೇಣುಪ್ರಸಾದ್ ಹಾಗೂ ಯುವ ಘಟಕದ ರಾಜ್ಯ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಅವರ ಅನುಭವ ಮತ್ತು ಹಿರಿಯ ನಾಯಕರ ಸಹಕಾರದೊಂದಿಗೆ ಸಭೆಯನ್ನು ಯಶಸ್ವಿಯಾಗಿ ನಡೆಸಲಾಗುತ್ತಿದೆ ಎಂದರು.ಶ್ರೀನಿವಾಸಪುರ ಶಾಸಕ ವೆಂಕಟಶಿವರೆಡ್ಡಿ ಮಾತನಾಡಿ, ಇಂದಿನ ಈ ಕಾರ್ಯಕ್ರಮ ಅತ್ಯಂತ ಪ್ರಮುಖವಾದುದಾಗಿದ್ದು, ತಾವೆಲ್ಲರೂ ಒಟ್ಟಾಗಿ ಬಂದು ಯಶಸ್ವಿಗೊಳಿಸಬೇಕು. ಯಾವುದೇ ಭಿನ್ನಾಭಿಪ್ರಾಯಗಳಿಲ್ಲದೆ ಒಗ್ಗಟ್ಟಾಗಿ ಪೂರ್ವಭಾವಿ ಸಭೆ ನಡೆಸುತ್ತಿದ್ದೇವೆ ಎಂದು ತಿಳಿಸಿದರು.
ಮಾಜಿ ವಿಧಾನಪರಿಷತ್ ಸದಸ್ಯ ವೈ.ಎ.ನಾರಾಯಣಸ್ವಾಮಿ ಮಾತನಾಡಿ, ಕೋಲಾರ ಜಿಲ್ಲೆಯಲ್ಲಿ ಸುಮಾರು ೩೩ ರಿಂದ ೩೪ ಸಾವಿರ ಪದವೀಧರ ಮತದಾರರಿದ್ದು, ಕೋಲಾರ-ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಒಟ್ಟು ೬೦ ಸಾವಿರ ಮತದಾರರಿದ್ದಾರೆ. ಇಡೀ ಕ್ಷೇತ್ರದಲ್ಲಿ ೨ ಲಕ್ಷ ಮತದಾರರಿದ್ದು, ಶೇ. ೩೩ರಷ್ಟು ಮತದಾರರು ನಮ್ಮ ಜಿಲ್ಲೆಯಲ್ಲಿದ್ದಾರೆ ಎಂದರು.
ಸಂಸದ ಎಂ.ಮಲ್ಲೇಶ್ ಬಾಬು ಮಾತನಾಡಿ, ಜೆಡಿಎಸ್ ಮತ್ತು ಬಿಜೆಪಿ ಇಂದು ಸಭೆ ನಡೆಸಿ ಪ್ರಚಾರದ ರೂಪುರೇಷೆಗಳನ್ನು ಚರ್ಚಿಸಿವೆ, ಎನ್.ಡಿ.ಎ ಕಡೆಯಿಂದ ನಾಲ್ಕು ಜನರೂ ಗೆಲ್ಲಬೇಕು, ಅದರಲ್ಲೂ ಕೋಲಾರ ಜಿಲ್ಲೆಯಲ್ಲಿ ಸುರೇಶ್ ಅವರನ್ನು ಗೆಲ್ಲಿಸುವ ನಿಟ್ಟಿನಲ್ಲಿ ಪ್ರಮುಖ ಮುಖಂಡರನ್ನು ಒಟ್ಟುಗೂಡಿಸಿ ಸಂದೇಶ ತಲುಪಿಸುತ್ತಿದ್ದೇವೆ ಎಂದರು.
ಕೋಲಾರ ಜಿಲ್ಲೆಯಲ್ಲಿ ರೈತರಿಗೆ ಮತ್ತು ಜನರಿಗೆ ತೊಂದರೆ ಕೊಡುತ್ತಿದ್ದು ಅಭಿವೃದ್ಧಿ ಶೂನ್ಯ. ಜೆಡಿಎಸ್-ಬಿಜೆಪಿಯ ಎಲ್ಲಾ ಮಂಡಲದ ಅಧ್ಯಕ್ಷರು, ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ’ನಾನೇ ಸುರೇಶ್’ (ನಾನೇ ಅಭ್ಯರ್ಥಿ) ಎನ್ನುವ ರೀತಿಯಲ್ಲಿ ಹೆಚ್ಚಿನ ಮತಗಳನ್ನು ಕೊಡಿಸುವುದರ ಮೂಲಕ ಗೆಲುವಿಗೆ ದಾರಿ ಮಾಡಿಕೊಡಬೇಕು ಎಂದು ಕರೆ ನೀಡಿದರು.
ಸುದ್ದಿಗೋಷ್ಠಿಯಲ್ಲಿ ವಿಧಾನ ಪರಿಷತ್ ಸದಸ್ಯ ಕೇಶವ ಪ್ರಸಾದ್, ಮಾಜಿ ಶಾಸಕರಾದ ವರ್ತೂರು ಪ್ರಕಾಶ್, ಬಿ.ಪಿ.ವೆಂಕಟಮುನಿಯಪ್ಪ, ಬ್ಯಾಟರಂಗೇ ಗೌಡ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಹೇಶ್, ಮುಖಂಡರಾದ ರಾಮಚಂದ್ರಗೌಡ, ರಮೇಶ್ ಬಾಬು, ಸಿಎಂಆರ್ ಶ್ರೀನಾಥ್, ಅರುಣಮ್ಮ, ವಿಜಯಕುಮಾರ್, ಡಾ.ವೇಣುಗೋಪಾಲ್, ಕೆಂಬೋಡಿ ನಾರಾಯಣಸ್ವಾಮಿ, ಶಿಳ್ಳಂಗೆರೆ ಮಹೇಶ್ ಇದ್ದರು.