ಮಂಡ್ಯ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಮೊದಲ ಬಾರಿ ಪಟ್ಟು ಬಿಡದೆ ಬಾಡೂಟ ಬಡಿಸಿದ ಮುಖಂಡರು

KannadaprabhaNewsNetwork | Updated : Dec 23 2024, 11:48 AM IST

ಸಾರಾಂಶ

 ಕನ್ನಡ ಸಾಹಿತ್ಯ ಸಮ್ಮೇಳನದ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಎಂಬಂತೆ ಮಂಡ್ಯದಲ್ಲಿ ಸಂಘಟಕರ ವಿರೋಧವನ್ನೂ ಲೆಕ್ಕಿಸದೆ ಕೆಲ ಮುಖಂಡರು ಸಾರ್ವಜನಿಕರಿಗೆ ಬಾಡೂಟ ವಿತರಿಸಿ ಸರ್ಕಾರಕ್ಕೆ ಸೆಡ್ಡು ಹೊಡೆದರು.

 ಮಂಡ್ಯ : ಕನ್ನಡ ಸಾಹಿತ್ಯ ಸಮ್ಮೇಳನದ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಎಂಬಂತೆ ಮಂಡ್ಯದಲ್ಲಿ ಸಂಘಟಕರ ವಿರೋಧವನ್ನೂ ಲೆಕ್ಕಿಸದೆ ಕೆಲ ಮುಖಂಡರು ಸಾರ್ವಜನಿಕರಿಗೆ ಬಾಡೂಟ ವಿತರಿಸಿ ಸರ್ಕಾರಕ್ಕೆ ಸೆಡ್ಡು ಹೊಡೆದರು. ಪೊಲೀಸರ ವಿರೋಧದ ನಡುವೆಯೂ ಸಾರ್ವಜನಿಕರಿಗೆ ಕೋಳಿ ಮಾಂಸ, ಮೊಟ್ಟೆ, ಮುದ್ದೆ, ಅನ್ನ, ಸಾಂಬಾರ್‌ ನ್ನು ಉಣಬಡಿಸಿ ಸಾಹಿತ್ಯ ಸಮ್ಮೇಳನದಲ್ಲಿ ಆಹಾರ ಸಂಸ್ಕೃತಿಯಲ್ಲಿ ಸಮಾನತೆ ತಂದಿದ್ದೇವೆಂಬ ಸಂತಸ ವ್ಯಕ್ತಪಡಿಸಿದರು.

ಮಂಡ್ಯ ಬಾಡೂಟಕ್ಕೆ ಹೆಸರುವಾಸಿ. ಸಮ್ಮೇಳನದಲ್ಲಿ ಬಾಡೂಟಕ್ಕೆ ಅವಕಾಶ ನೀಡುವಂತೆ ಪ್ರಗತಿಪರರು ಆರಂಭದಿಂದಲೂ ಜಿಲ್ಲಾಡಳಿತದ ಎದುರು ಪಟ್ಟು ಹಿಡಿದಿದ್ದರು. ಇದಕ್ಕೆ ಜಿಲ್ಲಾಡಳಿತ ಮನ್ನಣೆ ನೀಡದ ಕಾರಣ ಪ್ರಗತಿಪರರು ಸಮ್ಮೇಳನದ ಕೊನೆಯ ದಿನ ಸಾರ್ವಜನಿಕರಿಗೆ ಬಾಡೂಟ ಬಡಿಸುವ-ಸಿದ್ಧತೆ ಮಾಡಿಕೊಂಡು ಸಮ್ಮೇಳನ ಸ್ಥಳಕ್ಕೆ ಆಗಮಿಸಿದ್ದರು.

ಸಮ್ಮೇಳನ ನಡೆಯುವ ಪ್ರವೇಶದ್ವಾರದ ಎದುರು ಸೇರಿದ ಪ್ರಗತಿಪರ ಸಂಘಟನೆಗಳ ಮುಖಂಡರು ವಾಹನವೊಂದರಲ್ಲಿ ಮಾಂಸಾಹಾರ ಪದಾರ್ಥಗಳನ್ನು ಸಿದ್ಧಪಡಿಸಿಕೊಂಡು ತಂದಿದ್ದರು. 25 ಕೆ.ಜಿ. ಕೋಳಿಮಾಂಸ, 700 ಮೊಟ್ಟೆಯ ಜತೆಗೆ ಆಗಮಿಸಿದ್ದ ಅವರು ಸಾರ್ವಜನಿಕರಿಗೆ ಇನ್ನೇನು ಬಡಿಸಬೇಕು ಎಂದು ಹೊರಟಾಗ ಸ್ಥಳದಲ್ಲಿದ್ದ ಪೊಲೀಸರು ತಡೆದರು. ತಂದಿದ್ದ ಆಹಾರ ಪದಾರ್ಥಗಳನ್ನು ತಡೆಯಲು ಮುಂದಾದರು. ಈ ವೇಳೆ ಪೊಲೀಸರು ಮತ್ತು ಮುಖಂಡರ ನಡುವೆ ಕೆಲಕಾಲ ಮಾತಿನ ಚಕಮಕಿ ನಡೆಯಿತು.

ಬಳಿಕ ಆಹಾರ ಪದಾರ್ಥಗಳೊಂದಿಗೆ ಮುಖಂಡರು ಎರಡು ಗುಂಪಾಗಿ ತೆರಳಿ ಪೊಲೀಸರ ದಿಕ್ಕು ತಪ್ಪಿಸಿದರು. ಆಗ ಸ್ಥಳದಲ್ಲಿದ್ದ ಪೊಲೀಸರು ಒಂದು ಗುಂಪನ್ನು ಮಾತ್ರ ತಡೆದರೆ ಇನ್ನೊಂದು ಗುಂಪು ಸಾರ್ವಜನಿಕರಿಗೆ ಸ್ಥಳದಲ್ಲೇ ಮಾಂಸಾಹಾರ ವಿತರಿಸಿತು. ಇದನ್ನು ಕಂಡ ಪೊಲೀಸರು ಊಟ ವಿತರಣೆ ಮಾಡುತ್ತಿದ್ದ ಗುಂಪಿನತ್ತ ಓಡಿ ಬಂದು ಕೋಳಿ ಮಾಂಸ, ಮೊಟ್ಟೆ, ಕೋಳಿಸಾರನ್ನು ವಶಪಡಿಸಿಕೊಳ್ಳಲು ಮುಂದಾದಾಗ ಕೆಲಕಾಲ ಗದ್ದಲ ಏರ್ಪಟ್ಟಿತು.

ನಮ್ಮ ಆಹಾರ ನಮ್ಮ ಸಂಸ್ಕೃತಿ ತಡೆಯಲು ನೀವ್ಯಾರು ಎಂದು ಮುಖಂಡರು ಪೊಲೀಸರ ವಿರುದ್ಧವೇ ತಿರುಗಿ ಬಿದ್ದರು. ತಿನ್ನುವ ಆಹಾರವನ್ನು ವ್ಯರ್ಥ ಮಾಡಬೇಡಿ, ಇಷ್ಟಪಟ್ಟು ತಿನ್ನುವವರಿಗೆ ಅವಕಾಶ ಮಾಡಿಕೊಡಿ. ನಾವು ಸಸ್ಯಾಹಾರಿ ವಿರೋಧಿಗಳಲ್ಲ. ಯಾರಿಗೂ ಬಲವಂತ ಮಾಡುತ್ತಿಲ್ಲ. ಆಹಾರದಲ್ಲಿ ಸಮಾನತೆ ಸಂದೇಶ ನೀಡುವುದಷ್ಟೇ ನಮ್ಮ ಮೂಲ ಉದ್ದೇಶ ಎಂದು ಮನವರಿಕೆ ಮಾಡಿಕೊಡುವ ಪ್ರಯತ್ನ ಮಾಡಿದರು. ಬಳಿಕ ಪೊಲೀಸರು ವಶಪಡಿಸಿಕೊಂಡಿದ್ದ ಮಾಂಸಾಹಾರ ಪದಾರ್ಥಗಳನ್ನು ಮುಖಂಡರಿಗೆ ವಾಪಸ್‌ ನೀಡಿದ್ದು, ಸ್ಥಳದಲ್ಲಿ ಮಾಂಸಾಹಾರ ವಿತರಣೆ ಮಾಡುವುದು ಬೇಡ. ಸಾರ್ವಜನಿಕರಿಗೆ ಊಟ ವಿತರಿಸುವ ಜಾಗದಲ್ಲೇ ಪ್ರತ್ಯೇಕ ಸ್ಥಳ ಮಾಡಿಕೊಡಲಾಗುವುದು. ಅಲ್ಲಿಗೆ ಬಂದವರಿಗೆ ಮಾತ್ರ ಮಾಂಸಾಹಾರ ನೀಡುವಂತೆ ಷರತ್ತು ವಿಧಿಸಿದರು.

ಇದಕ್ಕೆ ಒಪ್ಪಿದ ಪ್ರಗತಿಪರ ಮುಖಂಡರು ಬಾಡೂಟವನ್ನು ಸಾರ್ವಜನಿಕರಿಗೆ ಊಟ ವಿತರಿಸುವ ಸ್ಥಳಕ್ಕೆ ಕೊಂಡೊಯ್ದರು. ಅಲ್ಲಿ ಸುಮಾರು 200 ರಿಂದ 250 ಜನರಿಗೆ ಬಾಡೂಟ ವಿತರಿಸಿದರು. ಕೋಳಿಸಾರು, ಮುದ್ದೆ, ಮೊಟ್ಟೆಗೆ ಸಾರ್ವಜನಿಕರು ಮುಗಿಬಿದ್ದರು. ಒಂದೂವರೆ ಗಂಟೆಯಲ್ಲಿ ಊಟ ವಿತರಿಸಿ ಆಹಾರ ಸಂಸ್ಕೃತಿಯಲ್ಲಿ ಸಮಾನತೆ ಸಾಧಿಸಿದ ಖುಷಿಯೊಂದಿಗೆ ಎಲ್ಲರೂ ಅಲ್ಲಿಂದ ನಿರ್ಗಮಿಸಿದರು.

ಆಹಾರದಲ್ಲಿ ಸಮಾನತೆ ಇರಬೇಕು. 86 ಸಮ್ಮೇಳನಗಳಲ್ಲಿ ಸಸ್ಯಾಹಾರವನ್ನು ಉಣಬಡಿಸಿಕೊಂಡು ಬರಲಾಗುತ್ತಿದೆ. ಮಾಂಸಾಹಾರವನ್ನು ಕೆಳದರ್ಜೆಯ ಆಹಾರವೆಂಬಂತೆ ಕಾಣಲಾಗುತ್ತಿದೆ. ಜನರಿಗೆ ಇಷ್ಟವಾಗುವ ಆಹಾರವನ್ನು ಉಣಬಡಿಸಬೇಕೇ ಹೊರತು ಅದರಲ್ಲಿ ಅಸಮಾನತೆಯನ್ನು ಉಂಟು ಮಾಡಬಾರದು. ಮಂಡ್ಯ ಬಾಡೂಟವನ್ನು 250 ಜನರಿಗೆ ಹಂಚುವುದರೊಂದಿಗೆ ಹೊಸ ಬದಲಾವಣೆಗೆ ನಾಂದಿ ಹಾಡಿದ್ದೇವೆ.

- ಎಂ.ಬಿ.ನಾಗಣ್ಣಗೌಡ, ಮುಖಂಡ

Share this article