ವಿದ್ಯಾರ್ಥಿ ಜೀವನದಲ್ಲಿ ಯಶಸ್ಸು ಗಳಿಸಲು ನಾಯಕತ್ವ ಗುಣ ಮುಖ್ಯ: ಕುಮಾರ ಬೆಣ್ಣಿ

KannadaprabhaNewsNetwork | Published : Feb 23, 2025 12:31 AM

ಸಾರಾಂಶ

ರಾಣಿಬೆನ್ನೂರು ನಗರದ ಕೆಎಲ್‌ಐ ಸಂಸ್ಥೆ ರಾಜರಾಜೇಶ್ವರಿ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯದಲ್ಲಿ ಶುಕ್ರವಾರ ಜೆಸಿಐ ಘಟಕದ ವತಿಯಿಂದ ವಿದ್ಯಾರ್ಥಿಗಳಿಗೆ ಸಂವಹನ ಮತ್ತು ನಾಯಕತ್ವ ಕೌಶಲ್ಯ ತರಬೇತಿ ಕಾರ್ಯಕ್ರಮ ಆಯೋಜಿಸಲಾಗಿತ್ತು.

ರಾಣಿಬೆನ್ನೂರು: ವಿದ್ಯಾರ್ಥಿ ಜೀವನದಲ್ಲಿ ಯಶಸ್ಸು ಗಳಿಸಬೇಕಾದರೆ ಧೈರ್ಯ ಮತ್ತು ಗುರಿಗಳ ಬಗ್ಗೆ ಚಿಂತನಶೀಲ ನಿರ್ಧಾರಗಳನ್ನು ತೆಗೆದುಕೊಳ್ಳಲು ಸಂವಹನ ಹಾಗೂ ನಾಯಕತ್ವ ಗುಣ ಬಹಳ ಪ್ರಾಮುಖ್ಯತೆ ಪಡೆಯುತ್ತದೆ ಎಂದು ಜೆಸಿಐ ಘಟಕದ ಅಧ್ಯಕ್ಷ ಕುಮಾರ ಬೆಣ್ಣಿ ಹೇಳಿದರು.

ನಗರದ ಕೆಎಲ್‌ಐ ಸಂಸ್ಥೆ ರಾಜರಾಜೇಶ್ವರಿ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯದಲ್ಲಿ ಶುಕ್ರವಾರ ಜೆಸಿಐ ಘಟಕದ ವತಿಯಿಂದ ವಿದ್ಯಾರ್ಥಿಗಳಿಗೆ ಆಯೋಜಿಸಿದ್ದ ಸಂವಹನ ಮತ್ತು ನಾಯಕತ್ವ ಕೌಶಲ್ಯ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು, ಪ್ರಾಮಾಣಿಕತೆ, ವಿಶ್ವಾಸ, ಬದ್ಧತೆ ಮತ್ತು ಸೃಜನಶೀಲತೆ ನಾಯಕತ್ವದ ಗುಣಗಳಾಗಿವೆ. ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳು ತಮ್ಮ ಜೀವನದಲ್ಲಿ ರೂಢಿಸಿಕೊಳ್ಳಬೇಕು. ಇದರ ಜತೆಗೆ ಕಠಿಣ ಪರಿಶ್ರಮ, ಕ್ರಿಯಾಶೀಲತೆ ವಿದ್ಯಾರ್ಥಿ ಜೀವನದಲ್ಲಿ ಅವಶ್ಯವಾಗಿದೆ ಎಂದರು.

ಭಾರತ ಇಂದು ಸುಮಾರು 62 ಕೋಟಿ ಯುವಜನಾಂಗವನ್ನು ಹೊಂದಿದೆ. ದೇಶದ ಭವಿಷ್ಯವನ್ನು ನಿರ್ಮಾಣ ಮಾಡುವಲ್ಲಿ ಪ್ರಮುಖ ಪಾತ್ರ ನಿರ್ವಹಿಸಲಿರುವ ಯುವಕರಿಗೆ ಉತ್ತಮ ಮಾರ್ಗದರ್ಶನ ಮತ್ತು ಉದಾತ್ತ ಚಿಂತನೆಗಳ ಅಗತ್ಯವಿದೆ. ನಾಯಕನಿಗೆ ಇರಬೇಕಾದ ಆತ್ಮವಿಶ್ವಾಸ, ಜನಪರ ಕಾಳಜಿ, ಸಮಾಜ ಸುಧಾರಣೆಯಂತಹ ಉನ್ನತ ಮೌಲ್ಯಗಳನ್ನು ಯುವಕರಲ್ಲಿ ಬೆಳೆಸಬೇಕಾದ ಅನಿವಾರ್ಯತೆ ಇದ್ದು, ರಾಷ್ಟ್ರಮಟ್ಟದಲ್ಲಿ ಅನೇಕ ಯುವಜನ ಉಪಯುಕ್ತ ಯೋಜನೆಗಳು ಅನುಷ್ಠಾನದಲ್ಲಿದ್ದರೂ ನಿರೀಕ್ಷಿತ ಪ್ರಗತಿ, ಅಭಿವೃದ್ಧಿ ಕಾಣಲು ಸಾಧ್ಯವಾಗುತ್ತಿಲ್ಲ. ಕಾರಣ ಅಧ್ಯಾಪಕರು ಮತ್ತು ವಿದ್ಯಾರ್ಥಿಗಳು ಈ ನಿಟ್ಟಿನಲ್ಲಿ ಅಗಾಧ ಚಿಂತನೆ ಮಾಡುವ ಅಗತ್ಯವಿದೆ ಎಂದರು.

ಜೆಸಿಐ ಜೋನ್ ಚೇರ್‌ಮನ್‌ ಪ್ರಭುಲಿಂಗಪ್ಪ ಹಲಗೇರಿ ಮಾತನಾಡಿ, ವಿದ್ಯಾರ್ಥಿಗಳ ಏಳಿಗೆಗೆ ಸಂವಹನ ಹಾಗೂ ನಾಯಕತ್ವ ಜೀವನಕ್ಕೆ ಅತ್ಯಮೂಲ್ಯವಾಗಿದೆ. ನಿಸ್ವಾರ್ಥ ಸೇವಾ ಮನೋಭಾವ, ನಾಯಕತ್ವ ಗುಣ ಹಾಗೂ ರಾಷ್ಟ್ರನಿರ್ಮಾಣ ಕಾರ್ಯದಲ್ಲಿ ತೊಡಗಿಸಿಕೊಳ್ಳಬೇಕು ಎಂದರು.

ಮಹಾವಿದ್ಯಾಲಯದ ಪ್ರಾಚಾರ್ಯ ನಾರಾಯಣ ನಾಯಕ ಅಧ್ಯಕ್ಷತೆ ವಹಿಸಿದರು. ಟ್ರೈನರ್ ಪ್ರಮೋದ್ ಶಾಸ್ತ್ರಿ, ವಿದ್ಯಾರ್ಥಿ ಪ್ರತಿನಿಧಿಯಾದ ರೇಖಾ ಶಿಡೇನೂರು, ಜೆಸಿ ಕಾರ್ಯದರ್ಶಿ ಇಮ್ರಾನ್ ನಿಲಗಾರ್, ಉಪಾಧ್ಯಕ್ಷ ಅಶೋಕ್ ದುರ್ಗದಸೀಮೆ, ನಿಕಟಪೂರ್ವ ಅಧ್ಯಕ್ಷ ಶಿವಶಂಕರ ಕೆ., ಖಜಾಂಚಿ ವಿದ್ಯಾಧರ ಹಲಗೇರಿ, ಕಾರ್ಯಕ್ರಮ ಅಧಿಕಾರಿ ಭೋಜರಾಜ ಗುಲಗಂಜಿ, ವಿನಾಯಕ ಕುಮಾರ ಗುಲಗಂಜಿ, ವಿನಾಯಕ ಎಕ್ಕನಹಳ್ಳಿ, ಮಂಜುನಾಥ ಜಿ., ಪ್ರಕಾಶ ಗಚ್ಚಿನಮಠ, ಜಯಣ್ಣ ಕರಡೆರ, ಶಿವಾನಂದ ಹಿತ್ತಲಮನಿ, ವೆಂಕಟೇಶ್ ಕಾಕಿ, ಶರತ್ ಕುಮಾರ್ ಇದ್ದರು.

Share this article