ಕನಕಪುರ: ಮಹಾಶಿವರಾತ್ರಿ ಹಬ್ಬದ ಪ್ರಯುಕ್ತ ಹರಕೆ ಹೊತ್ತ ಲಕ್ಷಾಂತರ ಭಕ್ತಾದಿಗಳು, ತಲೆಯ ಮೇಲೊಂದು ಚೀಲ, ಕೈಯಲ್ಲೊಂದು ಕೋಲು ಹಿಡಿದು ಬಿರು ಬೇಸಿಗೆಯನ್ನು ಲೆಕ್ಕಿಸದೆ ಬರಿಗಾಲಲ್ಲಿ ಸಂಗಮ ಬಳಿಯ ಕಾವೇರಿ ನದಿಯನ್ನು ದಾಟಿ ಮಹದೇಶ್ವರ ಬೆಟ್ಟವನ್ನು ತಲುಪಲು ಹಿಂಡು ಹಿಂಡಾಗಿ ಸಾಗುತ್ತಿದ್ದಾರೆ.
ಫೆ.21-23 ಭಾನುವಾರದವರೆಗೆ ಕಾವೇರಿ ನದಿಯಲ್ಲಿ ನೀರಿನ ಪ್ರಮಾಣ ಕಡಿಮೆ ಮಾಡುವಂತೆ, ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳಿಗೆ ಈಗಾಗಲೇ ಸರ್ಕಾರದ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಪತ್ರ ಬರೆದು ಸೂಚಿಸಿದ್ದಾರೆ. ಭಕ್ತರು ಮೂರು ದಿನಗಳ ಕಾಲ ಆತಂಕವಿಲ್ಲದೆ ನದಿ ದಾಟಲು ಸಕಲ ವ್ಯವಸ್ಥೆ ಮಾಡಲಾಗಿದೆ.
ಪ್ರತಿ ವರ್ಷದಂತೆ ಈ ವರ್ಷವೂ ಮಹಾಶಿವರಾತ್ರಿ ಹಬ್ಬದ ಅಂಗವಾಗಿ ಕನಕಪುರದ ಏಳಗಳ್ಳಿಯಿಂದ ಸಂಗಮ ಮಾರ್ಗವಾಗಿ ಮಹದೇಶ್ವರ ಬೆಟ್ಟಕ್ಕೆ ಕಾಲ್ನಡಿಗೆಯಲ್ಲಿ ಹೊರಟ ಭಕ್ತರುರಸ್ತೆಯುದ್ದಕ್ಕೂ ಸಾಗುತ್ತಿದ್ದು ಕಂಡು ಬಂದಿತು. ಹಾದಿಯಲ್ಲಿರುವ ಗ್ರಾಮಗಳ ರಸ್ತೆಯುದ್ದಕ್ಕೂ ನೀರು, ಮಜ್ಜಿಗೆ, ಪಾನಕ, ಸೌತೆಕಾಯಿ, ಹಣ್ಣು ವಿತರಣೆ ಜೊತೆಗೆ ಅಲ್ಲಲ್ಲಿ ಅನ್ನ ದಾಸೋಹವನ್ನೂ ಏರ್ಪಡಿಸಲಾಗಿತ್ತು. ಮಹದೇಶ್ವರ ಬೆಟ್ಟಕ್ಕೆ ಭಕ್ತಾದಿಗಳು ರಸ್ತೆ ಮಾರ್ಗವಾಗಿ ಹೋದರೆ 150 ಕಿ.ಮೀ. ದೂರ ಕ್ರಮಿಸಬೇಕು. ತಾಲೂಕಿನ ಏಳಗಳ್ಳಿ ತಾಯಿಮುದ್ದಮ್ಮ ದೇವಾಲಯದಲ್ಲಿ ಪೂಜೆ ಸಲ್ಲಿಸಿ ಸಂಗಮ ಮಾರ್ಗವಾಗಿ ಕಾವೇರಿ ನದಿ ದಾಟಿ ಕೇವಲ 30 ಕಿಲೋಮೀಟರ್ ದೂರದಲ್ಲಿ ತಾಳಬೆಟ್ಟ ತಲುಪಬಹುದು. ಈ ಮಾರ್ಗದಲ್ಲಿ ಶುಕ್ರವಾರದಿಂದ ಭಾನುವಾರ ಸಂಜೆಯೊಳಗೆ ಒಂದು ಲಕ್ಷಕ್ಕೂ ಹೆಚ್ಚು ಯಾತ್ರಿಕರು ನದಿ ದಾಟಿ, ಮಹಾ ಶಿವರಾತ್ರಿಯ ದಿನ ಬುಧವಾರ ಮಲೆ ಮಹದೇಶ್ವರನ ಬೆಟ್ಟವನ್ನ ತಲುಪಿ ಮಾದಪ್ಪನ ದರ್ಶನ ಪಡೆಯುವುದು ಈ ಹಬ್ಬದ ಈ ಭಾಗದ ಭಕ್ತರಿಗೆ ವಿಶೇಷ.ಕಾವೇರಿ ವನ್ಯಜೀವಿ ಅರಣ್ಯ ಪ್ರದೇಶದ ಮೂಲಕವೇ ಪಾದಯಾತ್ರೆ ಮಾಡಬೇಕಾದ್ದ ರಿಂದ ಕಾವೇರಿ ವನ್ಯಜೀವಿ ವಲಯದಲ್ಲಿ ಆನೆಗಳು ಘೀಳಿಡುವುದನ್ನು ಕೇಳಿ, ಪಾದಯಾತ್ರಿಗಳು, ಗುಂಪುಗುಂಪಾಗಿ, ಸಾಗುವಂತೆ ಸೂಚನೆ ನೀಡಲಾಗಿದೆ.
ಅರಣ್ಯ ಇಲಾಖೆ ಎಸಿಎಫ್ ನಾಗೇಂದ್ರ ಪ್ರಸಾದ್, ಆರ್‌ಎಫ್‌ಒ ಅನಿಲ್ ಕುಮಾರ್, ಡಿಆರ್‌ಎಫ್‌ಒ, ಸದಾಶಿವ ಉಪ್ಪಾರ, ವಲಯ ಅರಣ್ಯ ರಕ್ಷಕ ಬಿ.ಎಸ್.ಮಂಜುನಾಥ್ ಸೇರಿದಂತೆ ಸಿಬ್ಬಂದಿ ಸ್ಥಳದಲ್ಲಿ ಹಾಜರಿದ್ದರು.ಕೆ ಕೆ ಪಿ ಸುದ್ದಿ :
ಮಹದೇಶ್ವರ ಬೆಟ್ಟಕ್ಕೆ ಕಾಳ್ನಡಿಗೆಯಲ್ಲಿ ತೆರಳುತ್ತಿರುವ ಭಕ್ತ ಸಮೂಹ.ಕೆ ಕೆ ಪಿ ಸುದ್ದಿ :
ಕಾವೇರಿ ನದಿ ದಾಟುತ್ತಿರುವ ಭಕ್ತರು.