ಸಚಿವರು ಉದ್ಘಾಟಿಸಿದ ಎರಡೇ ದಿನಕ್ಕೆ ಸುಟ್ಟ ವಿದ್ಯುತ್‌ ಪರಿವರ್ತಕ, ರೈತರಿಂದ ಪ್ರತಿಭಟನೆ

KannadaprabhaNewsNetwork |  
Published : Feb 23, 2025, 12:31 AM IST
ಟ್ರಾನ್ಸ್‌ಫಾರ್ಮರ್‌ ಸುಟ್ಟು ಹೋದ ಹಿನ್ನೆಲೆಯಲ್ಲಿ ಬ್ಯಾಡಗಿ ತಾಲೂಕಿನ ಚಿಕ್ಕಬಾಸೂರು ಗ್ರಾಮದ ವಿದ್ಯುತ್ ಪ್ರಸರಣ ಕೇಂದ್ರದ ಬಳಿ ರೈತರು ಪ್ರತಿಭಟನೆ ನಡೆಸಿದರು. | Kannada Prabha

ಸಾರಾಂಶ

ಬ್ಯಾಡಗಿ ತಾಲೂಕಿನ ಚಿಕ್ಕಬಾಸೂರು ಗ್ರಾಮದಲ್ಲಿ ಸಚಿವ ಕೆ.ಜೆ.ಜಾರ್ಜ್‌ ಉದ್ಘಾಟಿಸಿದ ಎರಡೇ ದಿನಗಳಲ್ಲಿ ವಿದ್ಯುತ್‌ ಪರಿವರ್ತಕ ಸುಟ್ಟುಹೋಗಿದ್ದು, ರೈತರು ಹೆಸ್ಕಾಂ ವಿರುದ್ಧ ಪ್ರತಿಭಟನೆ ನಡೆಸಿದರು.

ಬ್ಯಾಡಗಿ: ತಾಲೂಕಿನ ಚಿಕ್ಕಬಾಸೂರು ಗ್ರಾಮದಲ್ಲಿ ಹೊಸದಾಗಿ ನಿರ್ಮಿಸಿದ ಗ್ರಿಡ್‌ನಲ್ಲಿರುವ ಎರಡೂ ಟ್ರಾನ್ಸ್‌ಫಾರ್ಮರ್‌ಗಳು ಸುಟ್ಟು ಹೋಗಿದ್ದು, ರೈತ ಸಂಘದ ಕಾರ್ಯಕರ್ತರು ಶನಿವಾರ ಕೆಲಕಾಲ ಪ್ರತಿಭಟನೆ ನಡೆಸಿದರಲ್ಲದೇ, ಹೆಸ್ಕಾಂ ನಿರ್ಲಕ್ಷ್ಯತನಕ್ಕೆ ಹಿಡಿಶಾಪ ಹಾಕಿದರು.

ಈ ವೇಳೆ ಮಾತನಾಡಿದ ರೈತ ಸಂಘ ಹಾಗೂ ಹಸಿರುಸೇನೆ ತಾಲೂಕಾಧ್ಯಕ್ಷ ರುದ್ರಗೌಡ್ರ ಕಾಡನಗೌಡ್ರ, ಕಳೆದೆರಡು ದಿನಗಳ ಹಿಂದಷ್ಟೇ ಹೊಸದಾಗಿ 110 ಕೆವಿ ವಿದ್ಯುತ್ ಕೇಂದ್ರ ಕಾರ್ಯಾರಂಭ ಮಾಡಿದ್ದು, ಎರಡು ದಿನಗಳಲ್ಲಿಯೇ ಸ್ಥಗಿತಗೊಂಡಿದ್ದು ನಾಚಿಕೆಗೇಡಿನ ಸಂಗತಿ ಎಂದರು.

ಕಳಪೆ ಗುಣಮಟ್ಟದ ವಸ್ತುಗಳನ್ನು ಬಳಕೆ ಮಾಡಿದ್ದೇ ಟ್ರಾನ್ಸ್‌ಫಾರ್ಮರ್‌ ಸುಟ್ಟು ಹೋಗಲು ಕಾರಣವೆಂದು ಆರೋಪಿಸಿದ ಪ್ರತಿಭಟನಾಕಾರರು, ವಿದ್ಯುತ್ ವಿತರಣೆ ಕೇಂದ್ರದ ಅಧಿಕಾರಿಗಳು ಮಾತ್ರ ರೈತರ ಬದುಕಿನೊಂದಿಗೆ ಚೆಲ್ಲಾಟವಾಡುತ್ತಿದ್ದು, ನೀರಾವರಿ ಕೆಲಸಗಳು ಸಂಪೂರ್ಣವಾಗಿ ಸ್ಥಗಿತಗೊಂಡಿದೆ. ಬೆಳೆಗಳು ಒಣಗಿ ಹೋಗುವ ಆತಂಕ ಎದುರಾಗಿದೆ ಎಂದರು.

ನೀರಿನಲ್ಲಿ ಹೋಮ: ಸರ್ಕಾರ ಒಟ್ಟು ₹15 ಕೋಟಿಗೂ ಹೆಚ್ಚು ಹಣ ವ್ಯಯಿಸಿ ಗ್ರಿಡ್ ಸ್ಥಾಪಿಸಿದೆ. ಆದರೆ ರೈತರಿಗೆ ವಿದ್ಯುತ್ ಪೂರೈಸಲಾಗದೇ ಇರುವುದರಿಂದ ಸರ್ಕಾರದ ಹಣ ನೀರಿನಲ್ಲಿ ಹೋಮ ಮಾಡಿದಂತಾಗಿದೆ. ಇದರಿಂದ 30ಕ್ಕೂ ಹೆಚ್ಚು ಗ್ರಾಮಗಳ ರೈತರು ವಿದ್ಯುತ್‌ಗಾಗಿ ಪರದಾಡುತ್ತಿದ್ದಾರೆ. ಕೂಡಲೇ 20ಕೆವಿ ವಿದ್ಯುತ್ ಕೇಂದ್ರಗಳಿಂದ ವಿದ್ಯುತ್ ಪೂರೈಸುವಂತೆ ಆಗ್ರಹಿಸಿದರು.

ಇಂಧನ ಸಚಿವರು ಕೆ.ಜೆ. ಜಾರ್ಜ್‌ ಖುದ್ದಾಗಿ ಆಗಮಿಸಿ ಉದ್ಘಾಟಿಸಿದ ಎರಡು ದಿನದಲ್ಲಿ ಟ್ರಾನ್ಸ್‌ಫಾರ್ಮರ್‌ ಸುಟ್ಟು ಹೋಗಿದೆ. ನಿಮ್ಮ ಸರ್ಕಾರದ ಕಾರ್ಯವೈಖರಿ ಪ್ರಶ್ನಿಸಬಾರದೇಕೆ? ಈ ಘಟನೆ ಹೆಸ್ಕಾಂ ಸೇರಿದಂತೆ ಸರ್ಕಾರಕ್ಕೆ ನಾಚಿಕೆಗೇಡಿನ ಸಂಗತಿ. ಹೆಸ್ಕಾಂ ಅಧಿಕಾರಿಗಳು ಸೋಮವಾರದೊಳಗೆ ಸರಿಪಡಿಸದಿದ್ದರೆ ಫೆ. 25ರಂದು ಚಿಕ್ಕಬಾಸೂರು ವಿದ್ಯುತ್ ವಿತರಣೆ ಕೇಂದ್ರದ ಎದುರು ಬೃಹತ್ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಸಿದರು.

ಬಳಿಕ ಸ್ಥಳಕ್ಕಾಮಿಸಿದ ಕೆಪಿಟಿಸಿಎಲ್ ಎಂಜಿನಿಯರ್‌ ಜೋಶಿ, ಆಕ್ರೋಶಗೊಂಡ ರೈತರೊಂದಿಗೆ ಮಾತನಾಡಿ, ತಾಂತ್ರಿಕ ದೋಷದಿಂದ ಟ್ರಾನ್ಸ್‌ಫಾರ್ಮರ್‌ ಸುಟ್ಟುಹೋಗಿದ್ದು, ಗಜೇಂದ್ರಗಡಕ್ಕೆ ಸಾಗಿಸಬೇಕಿದ್ದ ಟ್ರಾನ್ಸ್‌ಫಾರ್ಮರ್ ಚಿಕ್ಕಬಾಸೂರಿಗೆ ಬರುತ್ತಿದ್ದು, ಸೋಮವಾರ ದುರಸ್ತಿ ಮಾಡಿಸುವ ಭರವಸೆ ನೀಡಿದರು. ಬಳಿಕ ಪ್ರತಿಭಟನೆ ವಾಪಸ್‌ ಪಡೆದರು.

ಈ ವೇಳೆ ಈಶ್ವರ ಅಜಗೊಂಡ್ರ, ವರುಣ ಮಲ್ಲಿಗಾರ, ಲಿಂಗರಾಜ ತಿಳವಳ್ಳಿ, ಮುನಾಫ್‌ಸಾಬ ಅಜ್ಜನವರ, ಪಿ.ಎಸ್. ಮಕಾಂದಾರ, ಸಿದ್ದರಾಮಗೌಡ್ರ ಚನ್ನಗೌಡ್ರ, ಫಕ್ಕೀರೇಶ ಅಜಗೊಂಡ್ರ, ಶರಣು ಕಣಗಲಬಾವಿ, ವೀರೇಶ ನಿಟ್ಟೂರು, ರೇವಣೆಪ್ಪ ನಿಟ್ಟೂರು ಇತರರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಶೇ.11ರಷ್ಟು ಟೊಯೋಟಾ ಕಾರುಗಳು ರಾಜ್ಯದಲ್ಲೇ ಸೇಲ್‌
ರಾಜ್ಯದಲ್ಲಿ 2 ದಿನ ಮೋಡಕವಿದ ವಾತಾವರಣ, ಮಳೆ