ವಿದ್ಯಾಕಾಶಿಯ ಹಿರಿಮೆ ಹೆಚ್ಚಲಿ: ಸಭಾಪತಿ ಬಸವರಾಜ ಹೊರಟ್ಟಿ

KannadaprabhaNewsNetwork |  
Published : Feb 23, 2025, 12:31 AM IST
ಕಾರ್ಯಕ್ರಮದಲ್ಲಿ ಸಭಾಪತಿ ಬಸವರಾಜ ಹೊರಟ್ಟಿ ಮಾತನಾಡಿದರು. | Kannada Prabha

ಸಾರಾಂಶ

ವಿದ್ಯಾಕಾಶಿ ಎಂದು ಹೆಸರು ಪಡೆದ ಜಿಲ್ಲೆ ಇಂದು ಎಸ್ಸೆಸ್ಸೆಲ್ಸಿ ಫಲಿತಾಂಶದಲ್ಲಿ 22ನೇ ಸ್ಥಾನಕ್ಕೆ ಕುಸಿದಿರುವುದು ನೋವಿನ ಸಂಗತಿ ಎಂದು ವಿಪ ಸಭಾಪತಿ ಹೊರಟ್ಟಿ ಬೇಸರ ವ್ಯಕ್ತಪಡಿಸಿದರು.

ಹುಬ್ಬಳ್ಳಿ: ಎಸ್ಸೆಸ್ಸೆಲ್ಸಿ ಫಲಿತಾಂಶದಲ್ಲಿ ಜಿಲ್ಲೆಯು ಕಳಪೆ ಸಾಧನೆ ತೋರುತ್ತಿದೆ. ಈ ಬಾರಿಯ ಎಸ್ಸೆಸ್ಸೆಲ್ಸಿ ಫಲಿತಾಂಶದ ರ‍್ಯಾಂಕಿಂಗ್‌ನಲ್ಲಿ 10ರೊಳಗೆ ಬರಬೇಕು. ಇಲ್ಲದೇ ಹೋದರೆ ಶಿಕ್ಷಕರು, ಅಧಿಕಾರಿಗಳನ್ನೇ ನೇರ ಹೊಣೆಗಾರರನ್ನಾಗಿ ಮಾಡಲಾಗುವುದು. ಧಾರವಾಡ ಜಿಲ್ಲೆ ವಿದ್ಯಾಕಾಶಿಯಾಗಿಯೇ ಇರಲು ಎಲ್ಲರೂ ಪಣ ತೊಡಿ ಎಂದು ವಿಧಾನ ಪರಿಷತ್‌ ಸಭಾಪತಿ ಬಸವರಾಜ ಹೊರಟ್ಟಿ ಹೇಳಿದರು.

ರಾಜ್ಯ ಮಾಧ್ಯಮಿಕ ಶಾಲಾ ನೌಕರರ ಸಂಘ ಜಿಲ್ಲಾ ಘಟಕ, ಪ್ರೌಢಶಾಲಾ ಮುಖ್ಯೋಪಾಧ್ಯಾಯರ ಸಂಘ ಹಾಗೂ ಪ್ರೌಢಶಾಲಾ ಶಹ ಶಿಕ್ಷಕರ ಸಂಘದಿಂದ ಶನಿವಾರ ಇಲ್ಲಿನ ಆರ್‌.ಎನ್‌. ಶೆಟ್ಟಿ ಕಲ್ಯಾಣ ಮಂಟಪದಲ್ಲಿ ಹಮ್ಮಿಕೊಳ್ಳಲಾಗಿದ್ದ ಎಸ್ಸೆಸ್ಸೆಲ್ಸಿ ಫಲಿತಾಂಶ ಸುಧಾರಣೆ ಮತ್ತು ಶೈಕ್ಷಣಿಕ ಕಾರ್ಯಾಗಾರದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ವಿದ್ಯಾಕಾಶಿ ಎಂದು ಹೆಸರು ಪಡೆದ ಜಿಲ್ಲೆ ಇಂದು ಎಸ್ಸೆಸ್ಸೆಲ್ಸಿ ಫಲಿತಾಂಶದಲ್ಲಿ 22ನೇ ಸ್ಥಾನಕ್ಕೆ ಕುಸಿದಿರುವುದು ನೋವಿನ ಸಂಗತಿ. ಫಲಿತಾಂಶ ಕುಂಠಿತವಾಗಲು ಯಾರು ಕಾರಣ ಎಂಬ ಪ್ರಶ್ನೆಗೆ ಇಂದಿಗೂ ಸಮರ್ಪಕವಾದ ಉತ್ತರ ನಮ್ಮಲ್ಲಿಲ್ಲ. ನಮ್ಮಿಂದ ಏನು ಸುಧಾರಣೆ ತರಬೇಕು ಎಂಬ ಅರಿವು ಪ್ರತಿಯೊಬ್ಬ ಶಿಕ್ಷಕರಲ್ಲಿ ಮೂಡಬೇಕಿದೆ. ಆರೋಪ, ಪ್ರತ್ಯಾರೋಪ ಕೈಬಿಟ್ಟು ಗುಣಮಟ್ಟದ ಶಿಕ್ಷಣ ನೀಡುವಲ್ಲಿ ಆದ್ಯತೆ ನೀಡಿ ಎಂದರು.

ನಿಮ್ಮನ್ನೆ ಹೊಣೆಯನ್ನಾಗಿಸುವೆ:

ನಾನು ಇಷ್ಟು ವರ್ಷಗಳ ಕಾಲ ನಿಮ್ಮೆಲ್ಲ ಕಷ್ಟಗಳಿಗೆ ಸ್ಪಂದಿಸಿದ್ದೇನೆ. ಈಗ ನಿಮ್ಮ ಸರದಿ, ನೀವು ಎಸ್ಸೆಸ್ಸೆಲ್ಸಿ ಫಲಿತಾಂಶ ಹೆಚ್ಚಳಕ್ಕೆ ಶ್ರಮಿಸಬೇಕು. ಈ ಬಾರಿ ಎಸ್ಸೆಸ್ಸೆಲ್ಸಿ ಫಲಿತಾಂಶ 10ನೇ ರ್‍ಯಾಂಕಿಂಗ್‌ನಲ್ಲಿರಬೇಕು. ಇಲ್ಲದೇ ಇದ್ದರೆ ಡಿಡಿಪಿಐ, ಬಿಇಒ, ಶಿಕ್ಷಕರನ್ನೇ ಹೊಣೆಗಾರರನ್ನಾಗಿ ಮಾಡಲಾಗುವುದು ಎಂದರು.

ಹೊಸ ಕಾಯ್ದೆ ತರಲಿ:

ಕಡಿಮೆ ಫಲಿತಾಂಶ ಬಂದಲ್ಲಿ ಅದಕ್ಕೆ ಸಂಬಂಧಿಸಿದ ಶಿಕ್ಷಕರನ್ನು ಹೊಣೆಗಾರರನ್ನಾಗಿಸುವ ಹೊಸ ಕಾಯ್ದೆ ಜಾರಿಗೆ ತರುವ ಅವಶ್ಯಕತೆ ಇದೆ. ಈ ಕುರಿತು ಮುಖ್ಯಮಂತ್ರಿಗಳೊಂದಿಗೆ ಚರ್ಚಿಸುವುದಾಗಿ ತಿಳಿಸಿದರು.

ಸರ್ಕಾರದ ಕೆಲವು ಹೊಸ ಹೊಸ ನೀತಿಗಳಿಂದಾಗಿ ಶಿಕ್ಷಕರು ಸಂಕಷ್ಟ ಅನುಭವಿಸುತ್ತಿರುವುದು ಗಮನಕ್ಕೆ ಬಂದಿದೆ. ಶಿಕ್ಷಕರಿಗಿರುವ ಸಮಸ್ಯೆ ಮೊದಲು ಪರಿಹರಿಸಿ ಅವರು ಒತ್ತಡ ರಹಿತ ಶಿಕ್ಷಣ ನೀಡುವಂತಾಗಲಿ. ಶಿಕ್ಷಕರ ಏನೇ ಸಮಸ್ಯೆಗಳಿದ್ದರೂ ನಾನು ಸರ್ಕಾರದ ಮಟ್ಟದಲ್ಲಿ ಚರ್ಚಿಸಿ ಪರಿಹರಿಸುವ ಕಾರ್ಯ ಮಾಡುವೆ. ಅದರಂತೆಯೇ ಶಿಕ್ಷಕರು ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡುವ ಮೂಲಕ ಜಿಲ್ಲೆಯ ಶೈಕ್ಷಣಿಕ ಬೆಳವಣಿಗೆಗೆ ಕೈಜೋಡಿಸಬೇಕು ಎಂದರು.

ಕೆಲವು ಶಿಕ್ಷಕರು ಅಧಿಕಾರಿಗಳ ಮನವೊಲಿಸುವುದಕ್ಕಾಗಿ ಶಿಕ್ಷಣ ನೀಡುವ ಪರಿಪಾಟ ಹಾಕಿಕೊಂಡು ಬಂದಿದ್ದಾರೆ. ಮೊದಲು ಅದನ್ನು ಕೈಬಿಡಿ, ನಿಮ್ಮ ಕರ್ತವ್ಯಕ್ಕೆ ಅನುಗುಣವಾಗಿ ಮಕ್ಕಳಿಗೆ ಶಿಕ್ಷಣ ನೀಡಿ. ಜತೆಗೆ ಇನ್ಮುಂದೆ ಕಡ್ಡಾಯವಾಗಿ ಶಿಕ್ಷಕರು ಶಾಲಾ ಆರಂಭಕ್ಕೂ ಮೊದಲು ಹಾಗೂ ನಂತರ ಅರ್ಧಗಂಟೆ ಹೆಚ್ಚುವರಿಯಾಗಿ ಶಾಲೆಯಲ್ಲಿ ಇದ್ದುಕೊಂಡು ಮಕ್ಕಳಲ್ಲಿ ಸಮಸ್ಯೆ ಪರಿಹರಿಸುವ ಕಾರ್ಯ ಮಾಡಲಿ ಎಂದರು.

ಕಾರ್ಯಾಗಾರ ಉದ್ಘಾಟಿಸಿದ ಜಿಲ್ಲಾಧಿಕಾರಿ ದಿವ್ಯಪ್ರಭು ಮಾತನಾಡಿ, ಶಿಕ್ಷಕರು ಮಕ್ಕಳ ಮೆದುಳಿಗೆ ಶಿಕ್ಷಣ ನೀಡುವ ಬದಲು ಅವರ ಹೃದಯಕ್ಕೆ ಶಿಕ್ಷಣ ನೀಡುವ ಕಾರ್ಯ ಮಾಡಲಿ. ಜಿಲ್ಲೆಯಲ್ಲಿ ಶೈಕ್ಷಣಿಕ ಮಟ್ಟ ಕುಸಿತವಾಗಿರುವುದನ್ನು ಗಮನದಲ್ಲಿಟ್ಟುಕೊಂದು "ಮಿಷನ್‌ ವಿದ್ಯಾಕಾಶಿ " ಅಡಿ ಕಳೆದ 10 ತಿಂಗಳಿಂದ ಕಲಿಕೆಯಲ್ಲಿ ಹಿಂದುಳಿದ ಮಕ್ಕಳನ್ನು ಗುರುತಿಸಿ ಅವರಿಗೆ ವಿಶೇಷ ಕಾರ್ಯಕ್ರಮ ಹಮ್ಮಿಕೊಳ್ಳುವುದರ ಮೂಲಕ ಶೈಕ್ಷಣಿಕ ಪ್ರಗತಿಗೆ ಶ್ರಮಿಸಲಾಗುತ್ತಿದೆ. ಇದಕ್ಕೆ ಎಲ್ಲ ಶಿಕ್ಷಕರು, ಅಧಿಕಾರಿಗಳು ಕೈಜೋಡಿಸಿ ಜಿಲ್ಲೆಯ ಹೆಸರು ತರಲು ಶ್ರಮಿಸುವಂತೆ ಕರೆ ನೀಡಿದರು.

ಮಾಧ್ಯಮಿಕ ಶಾಲಾ ನೌಕರರ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಜಿ.ಆರ್‌. ಭಟ್‌ ಮಾತನಾಡಿದರು. ಶಿಕ್ಷಕ ಅಶೋಕ ಹಂಚಲಿ ಉಪನ್ಯಾಸ ನೀಡಿದರು. ಈ ವೇಳೆ ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಎಸ್‌.ಎಸ್‌. ಕೆಳದಿಮಠ, ಪ್ರೌಢಶಾಲಾ ಸಹಶಿಕ್ಷಕರ ಸಂಘದ ರಾಜ್ಯಾಧ್ಯಕ್ಷ ಸಿದ್ದಬಸಪ್ಪ ಬಿ, ಪಾಲಿಕೆ ಸದಸ್ಯ ರಾಜಣ್ಣ ಕೊರವಿ, ಸುಧಾಕರ ಶೆಟ್ಟಿ, ಜಿಲ್ಲಾಧ್ಯಕ್ಷರಾದ ವಿ.ಎಸ್‌. ಹುದ್ದಾರ, ಚಂದ್ರಶೇಖರ ಡೊಂಬರ, ನಾರಾಯಣ ಭಜಂತ್ರಿ ಸೇರಿದಂತೆ ಹಲವರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬೆಂಗಳೂರಲ್ಲಿ ಬಸವಣ್ಣ ಜೀವ ವೈವಿಧ್ಯ ಉದ್ಯಾನವನ
ಕೆಎಂಎಫ್‌ನಲ್ಲಿ ಉದ್ಯೋಗದ ನೆಪದಲ್ಲಿ50 ಲಕ್ಷ ವಂಚನೆ:ಇಬ್ಬರ ವಿರುದ್ಧ ಕೇಸ್‌