ಧಾರವಾಡ: ಸಾಕಷ್ಟು ಪ್ರಮಾಣದಲ್ಲಿ ಮಳೆಯಾಗಿದ್ದರಿಂದ ಮುಂಗಾರು ಭರ್ಜರಿ ಬೆಳೆ ನಿರೀಕ್ಷೆಯಲ್ಲಿದ್ದ ರೈತರಿಗೆ ಆಗಾಗ ಹವಾಮಾನ ವೈಪರಿತ್ಯದ ಹೊಡೆತ ಬೀಳುತ್ತಿದೆ. ಧಾರವಾಡ ಹಾಗೂ ಸುತ್ತಲಿನ ಪ್ರದೇಶದ ಉದ್ದು, ಸೋಯಾ, ಗೋವಿನ ಜೋಳಕ್ಕೆ ಈ ಮೊದಲು ಕಾಣಿಸಿಕೊಂಡಿದ್ದ ಬಸವನ ಹುಳು ಇದೀಗ ಕಾಣೆಯಾಗಿದ್ದು, ಒಂದೇ ವಾರದ ಅಂತರದಲ್ಲಿ ಎಲೆ ಹಾಗೂ ಕಾಯಿ ತಿನ್ನುವ ಕೀಟೆಗಳ ಹಾವಳಿ ಜೋರಾಗಿದೆ.
ಈ ಹಿನ್ನೆಲೆಯಲ್ಲಿ ರೈತರ ಆಗ್ರಹದ ಮೇರೆಗೆ ಕೃಷಿ ವಿಶ್ವ ವಿದ್ಯಾಲಯದ ವಿಜ್ಞಾನಿಗಳ ನೇತೃತ್ವದಲ್ಲಿ ಗರಗ ಮತ್ತು ಅಮ್ಮಿನಭಾವಿ ಹೋಬಳಿಯ ವಿವಿಧ ಗ್ರಾಮಗಳಿಗೆ ಮಂಗಳವಾರ ಕ್ಷೇತ್ರ ಭೇಟಿ ಮಾಡಿ, ಈ ಕೀಟೆಗಳ ನಿರ್ವಹಣೆಗೆ ಕೃಷಿ ವಿಜ್ಞಾನಿಗಳು ಸಲಹೆಗಳನ್ನು ನೀಡಿದ್ದಾರೆ.
ಕೃಷಿ ವಿವಿ ವಿಜ್ಞಾನಿಗಳಾದ ಕಲಾವತಿ ಕಂಬಳಿ, ಸಹಾಯಕ ಕೃಷಿ ನೀರ್ದೇಶಕ ರಾಜಶೇಖರ ಅಣಗೌಡರ, ಕೃಷಿ ಅಧಿಕಾರಿಗಳಾದ ಗುರುಪ್ರಸಾದ ಹಿರೇಮಠ ಮತ್ತು ರೇಖಾ ಬೆಳ್ಳಟಿಯವರನ್ನೊಳಗೊಂಡ ತಂಡ ಗರಗ ಹೋಬಳಿಯ ಲೋಕುರು, ಯಾದವಾಡ, ಕಲ್ಲೂರು ಮತ್ತು ಅಮ್ಮಿನಭಾವಿ ಹೋಬಳಿಯ ಹೆಬ್ಬಳ್ಳಿ ಗ್ರಾಮದ ರೈತರ ಹೊಲಗಳಿಗೆ ಭೇಟಿಕೊಟ್ಟು ಪರಿಶೀಲಿಸಿದರು.ಈ ಕೀಡೆಗಳ ಹತೋಟಿಗಾಗಿ ಕ್ಲೊರ‍್ಯಾಂಥ್ರೋನೀಲಿಪ್ರೋಲ್ ಶೇ. 18.5 ಎಸ್ಸಿ, 0.4 ಎಂಎಲ್/ ಲೀಟರ್ ನೀರಿಗೆ ಅಥವಾ ಕ್ಲೊರ‍್ಯಾಂಥ್ರೋನೀಲಿಪ್ರೋಲ್ + ಲ್ಯಾಂಬ್ಡಾಸೈಲೊಥ್ರಿನ್ 0.4 ಎಂಎಲ್/ ಲೀಟರ ಅಥವಾ ಸ್ಪೈನೋಸೈಡ್ 45 ಎಸ್ಸಿ 0.2 ಎಂಎಲ್ ಲೀಟರ ನೀರಿಗೆ ಸಿಂಪರಣೆ ಮಾಡಬೇಕು.
ಎಲ್ಲ ಭಾಗಕ್ಕೂ ಸಿಂಪರಣೆಯಾಗಲಿ: ರೈತರು ಪ್ರತಿ ಎಕರೆಗೆ ಕಡ್ಡಾಯವಾಗಿ 200 ಲೀಟರ್ ದ್ರಾವಣ ಸಿಂಪರಣೆ ಮಾಡಬೇಕು. ಗಿಡದ ಎಲ್ಲಾ ಭಾಗಗಳಿಗೆ ತಲುಪುವ ಹಾಗೆ ಸಿಂಪರಣೆ ಮಾಡಬೇಕು. ಈ ಕೀಟಗಳು ರಾತ್ರಿಯಲ್ಲಿ ತಿನ್ನುವ ಗುಣ ಹೊಂದಿರುವದರಿಂದ ಔಷಧ ಸಿಂಪರಣೆಯನ್ನು ಸಂಜೆ 4ರ ನಂತರ ನಂತರ ಅಥವಾ ಬೆಳಗ್ಗೆ 10 ರೊಳಗೆ ಮಾಡಾವುದರಿಂದ ಉತ್ತಮವಾಗಿ ಹತೋಟಿ ಮಾಡಬಹುದು ಎಂದವರು ಸಲಹೆ ನೀಡಿದ್ದಾರೆ.
ಈ ಸಂದರ್ಭದಲ್ಲಿ ಗರಗ ರೈತರಾದ ಉಳವಯ್ಯ ಚಿಕ್ಕೊಪ್ಪ, ಲೋಕುರಿನ ದ್ಯಾಮಪ್ಪ ರಂಗಣ್ಣವರ, ಪಡೆಪ್ಪ ಬಾಗಲಕೋಟ, ನರಸಿಂಗನವರ, ಯಾದವಾಡದ ಮಹಾಂತೆಶ ಗಳಗಿ, ಕಲ್ಲೂರು ಗ್ರಾಮದ ಸಿದ್ರಾಮ ದಂಡಿನ್, ಹೆಬ್ಬಳ್ಳಿ ಗ್ರಾಮದ ವಿಠಲ್ ಭೊವಿ, ಮಂಜುನಾಥ ಭೀಮಕ್ಕನವರ, ಬಸವರಾಜ ತಟ್ಟಿಮನಿ ಇದ್ದರು.