ಎಲೆಚುಕ್ಕಿ ರೋಗಕ್ಕೆ ಸಮಗ್ರ ನಿರ್ವಹಣೆ ಪದ್ಧತಿ ಅಗತ್ಯ: ಡಾ. ವಿನಾಯಕ ಹೆಗಡೆ

KannadaprabhaNewsNetwork |  
Published : Feb 04, 2026, 02:45 AM IST
ಪೊಟೋ3ಎಸ್‌.ಆರ್‌.ಎಸ್‌1 (ಅಡಿಕೆ ಬೆಳೆಯಲ್ಲಿ ಎಲೆಚುಕ್ಕಿ ರೋಗದ ನಿರ್ವಹಣೆ ಕುರಿತು ಕಾಸರಗೋಡಿನ ಸಿಪಿಸಿಆರ್‍ಐನ ವಿಜ್ಞಾನಿ ಡಾ.ವಿನಾಯಕ ಹೆಗಡೆ ಮಾತನಾಡಿದರು.) | Kannada Prabha

ಸಾರಾಂಶ

ಎಲೆಚುಕ್ಕಿ ರೋಗಕ್ಕೆ ಔಷಧಿ ಸಂಶೋಧನೆಗೆ ದೀರ್ಘ ಸಮಯ ಬೇಕಾಗಲಿದ್ದು, ಬಹು ವಾರ್ಷಿಕ ಬೆಳೆಯಲ್ಲಿ ರೋಗ ಕಾಣಿಸಿಕೊಂಡರೆ ಸಂಪೂರ್ಣ ನಿರ್ಮೂಲನೆ ಮಾಡಲು ಸಾಧ್ಯವಿಲ್ಲ.

ತೋಟಗಾರಿಕಾ ವಿಚಾರ ಗೋಷ್ಠಿಯಲ್ಲಿ ಕಾಸರಗೋಡಿನ ಸಿಪಿಸಿಆರ್‌ಐನ ವಿಜ್ಞಾನಿ ಸಲಹೆ

ಕನ್ನಡಪ್ರಭ ವಾರ್ತೆ ಶಿರಸಿ

ಎಲೆಚುಕ್ಕಿ ರೋಗಕ್ಕೆ ಔಷಧಿ ಸಂಶೋಧನೆಗೆ ದೀರ್ಘ ಸಮಯ ಬೇಕಾಗಲಿದ್ದು, ಬಹು ವಾರ್ಷಿಕ ಬೆಳೆಯಲ್ಲಿ ರೋಗ ಕಾಣಿಸಿಕೊಂಡರೆ ಸಂಪೂರ್ಣ ನಿರ್ಮೂಲನೆ ಮಾಡಲು ಸಾಧ್ಯವಿಲ್ಲ. ಆದ್ದರಿಂದ ಸಮಗ್ರ ನಿರ್ವಹಣೆ ಪದ್ಧತಿಯಿಂದ ಎಲೆಚುಕ್ಕಿ ನಿಯಂತ್ರಣ ಸಾಧ್ಯವಿದೆ ಎಂದು ಕಾಸರಗೋಡಿನ ಸಿಪಿಸಿಆರ್‌ಐನ ವಿಜ್ಞಾನಿ ಡಾ. ವಿನಾಯಕ ಹೆಗಡೆ ಸಲಹೆ ನೀಡಿದರು.ತೋಟಗಾರಿಕಾ ಇಲಾಖೆ, ಕೃಷಿ ಇಲಾಖೆ, ಆತ್ಮ ಯೋಜನೆ, ಕೃಷಿ ಸಂಬಂಧಿತ ಇಲಾಖೆಗಳು ಹಾಗೂ ಉತ್ತರಕನ್ನಡ ಜಿಪಂ ಆಶ್ರಯದಲ್ಲಿ ನಗರದ ತೋಟಗಾರಿಕಾ ಇಲಾಖೆ ಕಚೇರಿ ಆವರಣದಲ್ಲಿ ಹಮ್ಮಿಕೊಂಡ ಫಲಪುಷ್ಪ ಪ್ರದರ್ಶನ ಹಾಗೂ ಸಿರಿಧಾನ್ಯ ಮೇಳದಲ್ಲಿ ಏರ್ಪಡಿಸಲಾಗಿದ್ದ ತೋಟಗಾರಿಕಾ ವಿಚಾರ ಗೋಷ್ಠಿಯಲ್ಲಿ ಅಡಕೆ ಬೆಳೆಯಲ್ಲಿ ಎಲೆಚುಕ್ಕಿ ರೋಗದ ನಿರ್ವಹಣೆ ಕುರಿತು ಮಾಹಿತಿ ನೀಡಿದರು.

ಎಲೆಚುಕ್ಕಿ ರೋಗ ಹಿಂದಿನಿಂದಲೂ ಇತ್ತು. ಈಗ ತೀವ್ರತೆ ಹೆಚ್ಚಾಗಿದ್ದು, 2017-18ರಲ್ಲಿ ರಾಜ್ಯದಲ್ಲಿ ಮೊದಲು ಚಿಕ್ಕಮಗಳೂರು ಜಿಲ್ಲೆಯಲ್ಲಿ ಕಾಣಿಸಿಕೊಂಡಿದೆ. ನಂತರ ವ್ಯಾಪ್ತಿ ವಿಸ್ತಾರಗೊಂಡಿದ್ದು, ಕೇಂದ್ರ ಸರ್ಕಾರವು ಕಾಸರಗೋಡಿನ ಸಿಪಿಸಿಆರ್‌ಐಗೆ ಎಲೆಚುಕ್ಕಿ ರೋಗದ ನಿಯಂತ್ರಣ ಮತ್ತು ರೈತರಿಗೆ ಅದರ ನಿರ್ವಹಣೆ ಪ್ರಾತ್ಯಕ್ಷಿಕೆ ನಡೆಸಲು ಸೂಚನೆ ನೀಡಿದ ಹಿನ್ನೆಲೆ ಸಂಸ್ಥೆಯು ಕಳೆದ ಎಪ್ರಿಲ್ ತಿಂಗಳಿನಿಂದ ಶಿರಸಿ ತಾಲೂಕಿನ ನೇರ್ಲಹದ್ದ, ಬೆಳ್ಳೆಕೇರಿ ಸಿದ್ದಾಪುರ ತಾಲೂಕಿನ ದಾನಮಾಂವ ಕೆಳಗಿನಕೇರಿ, ಹಿರೇಕೈನಲ್ಲಿ 6.5 ಎಕರೆ ತೋಟದಲ್ಲಿ ಪ್ರಾತ್ಯಕ್ಷಿಕೆ ಆರಂಭಿಸಲಾಗಿದ್ದು, ಅಲ್ಲಿ ಸ್ವಲ್ಪ ರೋಗದ ಪ್ರಮಾಣ ಕಡಿಮೆಯಾಗಿದೆ. ಔಷಧಿ ಸಿಂಪಡಣೆ ತಾತ್ಕಾಲಿಕ, ಪ್ರಾರಂಭಿಕ ಹಂತದಲ್ಲಿ ಕಾಳಜಿ ವಹಿಸಬೇಕು. ಗರಿಗಳನ್ನು ಕತ್ತರಿಸಿ, ಹೊರಗಡೆ ಹಾಕಿ ಸುಟ್ಟು ಹಾಕಬೇಕು. ಸಾಮೂಹಿಕ ನಿರ್ವಹಣೆ ಮಾಡಬೇಕು. ಹೊರಗಡೆಯಿಂದ ಸಸಿ ತರಬೇಕಾದ ಎಚ್ಚರಿಕೆ ವಹಿಸಬೇಕು ಎಂದರು.ರೋಗ ಬಾಧಿತ ತೋಟಗಳಲ್ಲಿ ಅಡಕೆ ಗೊನೆಗಳಿಗೆ ಬೋರ್ಡೋ ಮಿಶ್ರಣ ಸಿಂಪಡಣೆ ಮಾಡುವಾಗ ಎಲೆಗಳಿಗೂ ಮಾಡುವುದು ಒಳಿತು. ಹೆಚ್ಚು ರೋಗ ಬಾಧೆಯಿರುವ ತೋಟಗಳಲ್ಲಿ ಆಗಸ್ಟ್‌-ಸೆಪ್ಟೆಂಬರ್‌ ತಿಂಗಳಿನಲ್ಲಿ ಮಳೆ ಇಲ್ಲದಾಗ ಪ್ರೋಪಿಕೊನಝೋಲ್‌ ಅಥವಾ ಟೆಬುಕೊನಝೋಲ್‌ ಶಿಲೀಂಧ್ರ ನಾಶಕವನ್ನು ಒಂದು ಲೀಟರ್ ನೀರಿಗೆ ಒಂದು ಮಿಲಿಲೀಟರ್‌ ಪ್ರಮಾಣದಲ್ಲಿ ಎಲೆಗಳಿಗೆ ಸಿಂಪಡಣೆ ಮಾಡಬೇಕು. ನೀರಾವರಿ, ಡ್ರೈನೆಂಜ್ ಸರಿಯಾಗಿ ಇಲ್ಲವಾದರೆ ರೋಗದ ಲಕ್ಷಣ ಅಧಿಕವಾಗಿರುತ್ತದೆ. ಮಣ್ಣಿನ ಪರೀಕ್ಷೆ ಆಧಾರದ ಮೇಲೆ ಪೋಷಕಾಂಶ ನೀಡಬೇಕು. ಪೊಟ್ಯಾಷ್ ಕಡಿಮೆ ಇರುವ ಪ್ರದೇಶದಲ್ಲಿ ಎಲೆಚುಕ್ಕೆ ಹೆಚ್ಚಿನ ಪ್ರಮಾಣದಲ್ಲಿ ಕಂಡುಬರುತ್ತಿದೆ. ಗಾಳಿಗೆ ಈ ಶಿಲೀಂದ್ರ ಹರಡುತ್ತದೆ. ಚಂಡೆ, ಶಿರ ಕೊಳೆ ರೋಗ ಬಹಳಷ್ಟು ತೋಟದಲ್ಲಿ ಕಂಡುಬರುತ್ತಿದೆ. ಸಮಗ್ರ ನಿರ್ವಹಣೆ ಪದ್ಧತಿ ಅನುಸರಿಸಬೇಕು. ಸಿಂಗಾರ ಒಣಗುವ ರೋಗವು ಕೆಲವು ಕಡೆಗಳಲ್ಲಿ ಕಂಡುಬರುತ್ತಿದ್ದು, ಒಣಗಿದ ಸಿಂಗಾರದಿಂದ ಮಳೆ ಬಂದಾಗ ಶಿಲೀಂಧ್ರ ಬೆಳವಣೆಗೆಯಾಗುತ್ತದೆ. ಹವಾಮಾನ ವೈಪರೀತ್ಯಗಳಿಂದ ಬೇರೆ ರೋಗ, ಕೀಟಗಳು ಕಾಣಿಸಿಕೊಳ್ಳುತ್ತಿವೆ. ಇವುಗಳಿಗೆ ಹೊಂದಾಣಿಕೆಯಾಗಿವ ತಳಿಗಳನ್ನು ಬೆಳೆಸಬೇಕಿದೆ. ನಿರ್ಲಕ್ಷ್ಯ ವಹಿಸದೇ ನೀರು, ಪೋಷಕಾಂಶ ಸರಿಯಾದ ಪ್ರಮಾಣದಲ್ಲಿ ನೀಡುವ ಮೂಲಕ ಸಮಗ್ರ ನಿರ್ವಹಣೆ ಮಾಡಬೇಕು. ಬಸಿ ಕಾಲುವೆ ನಿರ್ವಹಣೆ ಮುಖ್ಯವಾಗಿದೆ ಎಂದು ಹೇಳಿದರು.ಅಡಕೆ ತೋಟದಲ್ಲಿ ಅಂತರ ಬೆಳೆಯಾಗಿ ಕಾಫಿ ಕುರಿತು ಡೆವಲಪ್ಮೆಂಟ್ ಸೊಸೈಟಿಯ ವಿಷಯ ತಜ್ಞ ವಿ.ಎಂ. ಹೆಗಡೆ ಮಾಹಿತಿ ನೀಡಿದರು. ಪ್ರಗತಿಪರ ಕೃಷಿಕರಾದ ಸೀತಾರಾಮ ಹೆಗಡೆ ನೀರ್ನಳ್ಳಿ, ಶ್ರೀಧರ ಭಟ್ಟ ಚವತ್ತಿ ಇದ್ದರು.ತೋಟಗಾರಿಕಾ ಜಂಟಿ ನಿರ್ದೇಶಕ ಡಾ. ಬಿ.ಪಿ. ಸತೀಶ ಪ್ರಾಸ್ತಾವಿಕ ಮಾತನಾಡಿದರು. ತೋಟಗಾರಿಕಾ ಹಿರಿಯ ಸಹಾಯಕ ನಿರ್ದೇಶಕ ಸತೀಶ ಹೆಗಡೆ ಉಪಸ್ಥಿತರಿದ್ದರು. ತೋಟಗಾರಿಕಾ ಸಹಾಯಕ ನಿರ್ದೇಶಕ ಗಣೇಶ ಹೆಗಡೆ ನಿರೂಪಿಸಿದರು.ಮಾಹಿತಿಎಲೆಚುಕ್ಕಿ ರೋಗದ ನಿಯಂತ್ರಣಕ್ಕೆ ಮಣ್ಣು ಪರೀಕ್ಷೆಯ ಆಧಾರದ ಮೇಲೆ ಗೊಬ್ಬರ ನೀಡುವುದು, ಹುಳಿ ಮಣ್ಣಿಗೆ ಸುಣ್ಣ ಹಾಕುವುದು ಒಳಿತು. ಸಾಮಾನ್ಯವಾಗಿ ಅಡಕೆ ಮರಕ್ಕೆ 12 ಕಿಲೋ ಗ್ರಾಪಂ ಹಟ್ಟಿಗೊಬ್ಬರ, ಹಸಿರೆಲೆ ಯೂರಿಯ 220 ಗ್ರಾಂ, ರಾಕ್‌ ಫಾಸ್ಪೇಟ್‌ 200 ಗ್ರಾಂ, ಪೋಟಾಷ್‌ 250ರಿಂದ 350 ಗ್ರಾಂ, ನೀಡಬೇಕು. ರಸಗೊಬ್ಬರಗಳನ್ನು ಕನಿಷ್ಠ 2 ಕಂತುಗಳಲ್ಲಿ ನೀಡಬೇಕು. ಲಘುಪೋಷಕಾಂಶಗಳಾದ ಸತುವಿನ ಸಲ್ಫೇಟ್‌ 5 ಗ್ರಾಂ, ಬೊರಾಕ್ಸ್‌ 5 ಗ್ರಾಂ ಕೂಡ ನೀಡಬಹುದು ಎಂದು ಸಿಪಿಸಿಆರ್‌ಐ ವಿಜ್ಞಾನಿ ಡಾ. ವಿನಾಯಕ ಹೆಗಡೆ ಮಾಹಿತಿ ನೀಡಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಜಿ ರಾಮ್‌ ಜಿ ರದ್ದು ಮಾಡಿ, ನರೇಗಾ ಮರುಸ್ಥಾಪಿಸಿ: ಸಿದ್ದು
ಸಚಿವ ತಿಮ್ಮಾಪುರ ರಾಜೀನಾಮೆಗೆ ಅಹೋರಾತ್ರಿ ಧರಣಿ