ವಿಘಟನೆ ಹಿಂದೆ ಇರುವ ಶಕ್ತಿಗಳ ಬಗ್ಗೆ ಅರಿಯರಿ

KannadaprabhaNewsNetwork |  
Published : Jun 14, 2026, 01:30 AM IST
 | Kannada Prabha

ಸಾರಾಂಶ

ಬಹುಸಮಾಜದ ವಿಘಟನೆ ಹಿಂದೆ ಇರುವ ಶಕ್ತಿಗಳ ಬಗ್ಗೆ ಅರಿಯದೇ ಹೋದರೆ ಸಂವಿಧಾನ ದುರ್ಬಲಗೊಳ್ಳಲಿದೆ ಎಂದು ಹಿರಿಯ ಪತ್ರಕರ್ತ ದಿನೇಶ್ ಅಮೀನ್ ಮಟ್ಟು ಅಭಿಪ್ರಾಯಪಟ್ಟರು.

ಕನ್ನಡಪ್ರಭ ವಾರ್ತೆ, ತುಮಕೂರು

ಬಹುಸಮಾಜದ ವಿಘಟನೆ ಹಿಂದೆ ಇರುವ ಶಕ್ತಿಗಳ ಬಗ್ಗೆ ಅರಿಯದೇ ಹೋದರೆ ಸಂವಿಧಾನ ದುರ್ಬಲಗೊಳ್ಳಲಿದೆ ಎಂದು ಹಿರಿಯ ಪತ್ರಕರ್ತ ದಿನೇಶ್ ಅಮೀನ್ ಮಟ್ಟು ಅಭಿಪ್ರಾಯಪಟ್ಟರು.

ನಗರದಲ್ಲಿ ಬಿ.ಕೃಷ್ಣಪ್ಪ ಪ್ರತಿಷ್ಠಾನ, ಒಳ ಮೀಸಲಾತಿ ಹೋರಾಟ ಸಮಿತಿ, ಜಿಲ್ಲಾ ಮಾದಿಗ ನೌಕರರ ಸಂಘದ ವತಿಯಿಂದ ಹಮ್ಮಿಕೊಂಡಿದ್ದ ಪ್ರೊ.ಬಿ.ಕೃಷ್ಣಪ್ಪ ಜನ್ಮದಿನಾಚರಣೆ ಹಾಗೂ ಒಳ ಮೀಸಲಾತಿ ಸಾಮಾಜಿಕ ನ್ಯಾಯ ಕುರಿತು ವಿಚಾರ ಸಂಕಿರಣ ದಲ್ಲಿ ಮಾತನಾಡಿದರು.

ದಲಿತ ಚಳವಳಿ ಎಲ್ಲ ಸಮುದಾಯವನ್ನು ಒಳಗೊಂಡಿತ್ತು, ಆದರೆ ಇಂದಿನ ಕಾಲಮಾನದಲ್ಲಿ ದಲಿತ ಚಳವಳಿ ವಿಘಟನೆಗೆ ಒಳಗಾಗಿ ಎಡ-ಬಲ ಎನ್ನುವಂತಾಗಿದೆ. ಇದು ದಲಿತ ಚಳವಳಿಗೆ ಅಪಾಯವನ್ನು ತರಲಿದೆ. ಮೀಸಲಾತಿ ವಿರೋಧಿಸುತ್ತಿದ್ದ ಗುಂಪುಗಳು ಇಂದು ಮೀಸಲಾತಿಯನ್ನು ವಿರೋಧಿಸುತ್ತಿಲ್ಲ ಎಂದರೆ ಅವರೆಲ್ಲ ಒಪ್ಪಿಕೊಂಡಿದ್ದಾರೆ ಎಂದಲ್ಲ ಮೀಸಲಾತಿ ಬಡತನ ನಿರ್ಮೂಲನೆಯ ಕಾರ್ಯಕ್ರಮವಲ್ಲ. ಸಮಾನ ಹಂಚಿಕೆಯಷ್ಟೇ ಪಡೆದಿರುವ ಮೀಸಲಾತಿಯನ್ನು ಹಂಚಿಕೊಳ್ಳಲು ಕರುಣೆ, ಸಾಮರಸ್ಯ, ಸಮಾನತೆ ಇರಬೇಕು ಇಂದು ಮೀಸಲಾತಿಗೆ ಒಳಗಿನಿಂದಲೇ ಕಂಟಕವಿದೆ ಎಂದರು.

ಒಳ ಮೀಸಲಾತಿಯಲ್ಲಿ ಮಾದಿಗ ಸಮುದಾಯಕ್ಕೆ ಎಲ್ಲ ಸಮಿತಿಗಳು ಶೇ.6ರಷ್ಟು ಮೀಸಲಾತಿ ನೀಡಿವೆ ಅದಕ್ಕೆ ಯಾರು ವಿರೋಧ ವ್ಯಕ್ತಪಡಿಸಿಲ್ಲ, ಮಾದಿಗರು ಹೆಚ್ಚಿಗೆ ಮೀಸಲಾತಿ ಕೇಳಿಲ್ಲ, ಯಾವ ಮಾನದಂಡ ಬಳಸಿದರೂ ಮಾದಿಗ ಸಮುದಾಯಕ್ಕೆ ಅನ್ಯಾಯವಾಗಿರುವುದು ಸತ್ಯ, ಅವರಿಗೆ ನ್ಯಾಯಯುತ ಅವಕಾಶ ಕೊಡಬೇಕು ಎಂದರು.

ಮೀಸಲಾತಿ ನಂತರ ಒಳ ಮೀಸಲಾತಿ ಎಲ್ಲ ವರ್ಗಗಳಿಗೂ ಸಿಗಬೇಕು ಅದು ಸಾಮಾಜಿಕ ನ್ಯಾಯದ ನೈಸರ್ಗಿಕ ಕ್ರಿಯೆ, ಒಳ ಮೀಸಲಾತಿ ಇಲ್ಲದೇ ಹೋದಲ್ಲಿ ಮೀಸಲಾತಿಗೆ ಅರ್ಥವೇ ಇಲ್ಲದಂತಹ ಪರಿಸ್ಥಿತಿ ಇದೆ. ಸಾಮಾಜಿಕ, ಆರ್ಥಿಕ, ಶೈಕ್ಷಣಿಕ, ರಾಜಕೀಯವಾಗಿ ಮಾದಿಗ ಸಮುದಾಯಕ್ಕೆ ಅನ್ಯಾಯವಾಗಿರುವುದನ್ನು ದೊಡ್ಡ ಅಧ್ಯಯನ ಮಾಡುವ ಅಗತ್ಯವಿಲ್ಲದಷ್ಟು ಕಣ್ಣಿಗೆ ಕಾಣುತ್ತದೆ ಎಂದರು.

ಕೇವಲ ದಲಿತ ಚಳವಳಿಯಷ್ಟೇ ಅಲ್ಲ, ಅಹಿಂದ ಸಮುದಾಯ ಒಡೆದು ಚೂರಾಗಿದೆ. ದಲಿತ ಸಮುದಾಯ, ಹಿಂದುಳಿದ, ಅಲ್ಪಸಂಖ್ಯಾತರು ಸಹ ವಿಘಟನೆಗೊಳಗಾಗಿವೆ. ಮುಂದಿನ ರಾಜಕೀಯ ತೀರ್ಮಾನಗಳಲ್ಲಿ ಯಾವ ನಿರ್ಧಾರ ತೆಗೆದುಕೊಳ್ಳಲಿದೆಯೋ ಗೊತ್ತಿಲ್ಲ, ಯುವ ಸಮೂಹದ ಅಸಮಾಧಾನ ನಿರ್ಣಾಯಕವಾಗಲಿದೆ ಎಂದರು.

ಹಿಂದುಳಿದ ವರ್ಗದ 2ಎ ಗುಂಪಿನಲ್ಲಿ ಕುರುಬ, ಈಡಿಗರನ್ನು ಬಿಟ್ಟರೆ ಬೇರೆ ಯಾವ ಸಮುದಾಯಗಳು ಗ್ರಾಪಂ ಸದಸ್ಯರಾಗಲು ಸಾಧ್ಯವಾಗಿಲ್ಲ ಇಲ್ಲಿಯೂ ಸಹ ಒಳ ಮೀಸಲಾತಿ ಅವಶ್ಯಕ, ಅಹಿಂದ ವರ್ಗಗಳನ್ನು ವಿಘಟನೆಗೊಳಿಸುವ ಪ್ರಕ್ರಿಯೆಯನ್ನು ಎಚ್ಚರಿಕೆಯಿಂದ ಬಾಹ್ಯ ಶಕ್ತಿಗಳು ವ್ಯವಸ್ಥಿತವಾಗಿ ನಡೆಸುತ್ತಿವೆ ಅದರ ವಿರುದ್ಧವಾಗಿ ಜಾಗೃತರಾಗುವುದು ಅವಶ್ಯಕ ಎಂದರು.

ದಲಿತ ಹೋರಾಟಗಾರ ಅಂಬಣ್ಣ ಅರೋಲಿಕರ್ , ಒಳ ಮೀಸಲಾತಿ ಹೋರಾಟ ಸಮಿತಿಯ ಬಸವರಾಜ್ ಕೌತಾಳ್ ಮಾತನಾಡಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರೊ.ದೊರೈರಾಜು ವಹಿಸಿದ್ದರು. ಕಾರ್ಯಕ್ರಮದಲ್ಲಿ ದಲಿತ ಹೋರಾಟಗಾರ ನರಸೀಯಪ್ಪ, ಡಾ.ವೈ.ಕೆ.ಬಾಲಕೃಷ್ಣಪ್ಪ, ನರಸಿಂಹಯ್ಯ, ಡಾ.ಹೆಚ್.ನಾಗರಾಜು, ಜಿ.ಪಂ.ಮಾಜಿ ಸದಸ್ಯ ಕೆಂಚಮಾರಯ್ಯ ಸೇರಿದಂತೆ ಇತರರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

17ರಂದು ಡಾ.ಶಾಮನೂರು ಜನ್ಮದಿನ, ಸಾಮೂಹಿಕ ವಿವಾಹ
53 ಅತಿಥಿ ಶಿಕ್ಷಕರ ನಿಯೋಜನೆಗೆ ಕ್ರಮ: ಶಾಂತನಗೌಡ