- ಈಗಾಗಲೇ 50 ಶಿಕ್ಷಕರನ್ನು ಶಾಲೆಗಳಿಗೆ ನಿಯೋಜಿಸಲಾಗಿದೆ: ಶಾಸಕ

- - -

ಕನ್ನಡಪ್ರಭ ವಾರ್ತೆ ಹೊನ್ನಾಳಿ

ಒಂದೇ ಬಾರಿಗೆ 1.10 ಲಕ್ಷ ಶಿಕ್ಷಕರನ್ನು ಪಾರದರ್ಶಕವಾಗಿ ನೇಮಕ ಮಾಡಿಕೊಂಡ ರಾಜ್ಯ ಎಂದರೆ ಅದು ಕರ್ನಾಟಕ ರಾಜ್ಯ .ಇದರ ಸಂಪೂರ್ಣ ಶ್ರೇಯಸ್ಸು ಶಿಕ್ಷಣ ಸಚಿವರಾಗಿದ್ದ ದಿವಂಗತ ಗೋವಿಂದೇ ಗೌಡ ಅವರಿಗೆ ಸಲ್ಲಬೇಕು. ರಾಜ್ಯದ ಎಲ್ಲ ಶಿಕ್ಷಕ ಸಮುದಾಯ ಮನೆಗಳಲ್ಲಿ ಅ‍ವರ ಭಾವಚಿತ್ರವನ್ನಿಟ್ಟು ಪೂಜಿಸಬೇಕು ಎಂದು ಶಾಸಕ ಡಿ.ಜಿ. ಶಾಂತನಗೌಡ ಹೇಳಿದರು.

ಪಟ್ಟಣದ ಗುರುಭವನದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಬೆಂಗಳೂರು ತಾಲೂಕು ಘಟಕದ ನೂತನ ಅಧ್ಯಕ್ಷರು, ಪದಾಧಿಕಾರಿಗಳ ಪದಗ್ರಹಣ ಹಾಗೂ ಗುರು ಭವನದ ನೂತನ ಮಳಿಗೆಗಳ ಉದ್ಘಾಟನಾ ಸಮಾರಂಭಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.


ಖಾಸಗಿ ಶಾಲೆಗಳನ್ನು ಮೀರಿಸುವ ರೀತಿಯಲ್ಲಿ ಸರ್ಕಾರಿ ಶಾಲೆಗಳಿಗೆ ಎಲ್ಲ ರೀತಿಯ ಸೌಲಭ್ಯಗಳನ್ನು ನೀಡಲಾಗುತ್ತಿದೆ. ಪ್ರಸ್ತುತ ತಾಲೂಕಿನಲ್ಲಿ 4 ಕೆ.ಪಿ.ಎಸ್. ಶಾಲೆಗಳಿದ್ದು, ಈ ಶಾಲೆಗಳಿಗೆ ಮಕ್ಕಳನ್ನು ಕರೆ ತರಲು ವಾಹನದ ಅವಶ್ಯಕತೆ ಇರುವವರು ತಮ್ಮ ಗಮನಕ್ಕೆ ತಂದರೆ ಶಾಸಕರ ಅನುದಾನದಲ್ಲಿ ₹5 ಲಕ್ಷ ಮಂಜೂರು ಮಾಡಿಸುವುದಾಗಿ ತಿಳಿಸಿದರು. ತಾಲೂಕಿನಲ್ಲಿ 103 ಅತಿಥಿ ಶಿಕ್ಷಕರನ್ನು ನಿಯೋಜಿಸಬೇಕಾಗಿದ್ದು ಈ ಪೈಕಿ ಈಗಾಗಲೇ 50 ಶಿಕ್ಷಕರನ್ನು ಶಾಲೆಗಳಿಗೆ ನಿಯೋಜಿಸಲಾಗಿದೆ ಇನ್ನುಳಿದ 53 ಅತಿಥಿ ಶಿಕ್ಷಕರನ್ನು ನಿಯೋಜನೆ ಮಾಡಿಕೊಳ್ಳಲಾಗುವುದು ಎಂದು ತಿಳಿಸಿದರು.

ಶಿಕ್ಷಕರ ಬಹುದಿನ ಬೇಡಿಕೆಯಾದ ಗುರು ಭವನದ ಮೇಲ್ಜಾವಣೆ ನಿರ್ಮಾಣಕ್ಕೆ ಇ-ಸ್ವತ್ತು ಸಮರ್ಪಕ ದಾಖಲೆಗಳನ್ನು ಒದಗಿಸಿದಲ್ಲಿ ಸರ್ಕಾರದ ಹಂತದಲ್ಲಿ ಅನುದಾನ ಬಿಡುಗಡೆ ಮಾಡಿಸುವ ಪ್ರಮಾಣಿಕ ಪ್ರಯತ್ನ ಮಾಡುವುದಾಗಿ ತಿಳಿಸಿದ ಅವರು, ಶಿಕ್ಷಕರಿಗೆ ಮಾತ್ರವಲ್ಲ ಎಲ್ಲ ಇಲಾಖೆಗಳಿಗೂ ಕೆ.ಎ.ಎ.ಎಂ.ಎಸ್. (ಕಾಮ್ಸ) ಹಾಜರಾತಿ ವ್ಯವಸ್ಥೆ ಜಾರಿಗೆ ತಂದಿದ್ದು ಶಿಕ್ಷಕರಿಗೆ ಇದರಲ್ಲಿ ರಿಯಾಯಿತಿ ನೀಡುವ ಬಗ್ಗೆ ಸದನದಲ್ಲಿ ಚರ್ಚಿಸುವುದಾಗಿ ಭರವಸೆ ನೀಡಿದರು.

ನೂತನ ಅಧ್ಯಕ್ಷ ಜಿ,ಎಸ್.ತಿಮ್ಮಪ್ಪ ಅ‍ವರು ಶಿಕ್ಷಕರಾಗಿರುವ ಕಮ್ಮಾರಗಟ್ಟೆ ಶಾಲೆಗೆ ಮಕ್ಕಳನ್ನು ಶಾಲೆಗೆ ಕರೆತರಲು ಹೊಸ ವಾಹನ ವ್ಯವಸ್ಥೆ ಮಾಡಿರುವುದು ಇಡೀ ತಾಲೂಕಿಗೆ ಮಾದರಿಯಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಸರ್ಕಾರಿ ಪ್ರಾಥಮಿಕ ಶಾಲೆ ಶಿಕ್ಷಕರ ಸಂಘದ ನೂತನ ತಾಲೂಕು ಅಧ್ಯಕ್ಷ ಜಿಎಸ್. ತಿಮ್ಮಪ್ಪ ಅವರು ಸನ್ಮಾನ ಸ್ವೀಕರಿಸಿ ಮಾತನಾಡಿ, ಈ ತಾಲೂಕಿನಲ್ಲಿ ಶಿಕ್ಷಕ ಬಂಧುಗಳು 3 ಬಾರಿ ನಿರ್ದೇಶಕನನ್ನಾಗಿ ಆಯ್ಕೆ ಮಾಡಿ, ಈ ಬಾರಿ ತಾಲೂಕು ಅಧ್ಯಕ್ಷನನ್ನಾಗಿ ಆಯ್ಕೆ ಮಾಡಿದ್ದಾರೆ. ಅವರ ನಿರೀಕ್ಷೆಗೆ ತಕ್ಕಂತೆ ಸಂಘದ ಪದಾಧಿಕಾರಿಗಳ ಸಹಕಾರದಿಂದ ತಾನು ಕೇವಲ ಭರವಸೆಗಳನ್ನು ಕೊಡದೇ ಕೆಲಸಗಳನ್ನು ಮಾಡಿ ತೋರಿಸುತ್ತೇನೆ. ಗುರುಭವನದ ಮೇಲ್ಚಾವಣೆ ನಿರ್ಮಾಣಕ್ಕಾಗಿ ಶಾಸಕರ, ಎಲ್ಲ ಶಿಕ್ಷಕರ ಸಹಕಾರ ಪಡೆದು ₹50 ಲಕ್ಷ ಅನುದಾನ ಮಂಜೂರು ಮಾಡಿಸಲು ಎಲ್ಲಾ ರೀತಿಯ ಪ್ರಯತ್ನ ಮಾಡಲಾಗುವುದೆಂದು ತಿಳಿಸಿದರು.

ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಎಸ್.ಜಿ, ಉಮಾಪತಿ, ಕ್ಷೇತ್ರ ಶಿಕ್ಷಣಾಧಿಕಾರಿ ಕೆ.ಟಿ.ನಿಂಗಪ್ಪ, ಕ್ಷೇತ್ರ ಸಂಪನ್ಮೂಲ ಸಮನ್ವಯ ಅಧಿಕಾರಿ ಎಂ. ತಿಪ್ಪೇಶಪ್ಪ, ತಿರ್ಥಹಳ್ಳಿಯ ಶಿಕ್ಷಕರ ವಿವಿದ್ದೋದ್ದೇಶ ಸಂಘದ ಅಧ್ಯಕ್ಷ ಮಹಾಬಲೇಶ್ವರ ಹೆಗಡೆ, ತಾಲೂಕು ಅಧ್ಯಕ್ಷ ನಾಗರಾಜ ದೊಂಕತ್ತಿ ಮಾತನಾಡಿದರು.

ಶಿಕ್ಷಕರ ಸಂಘದ ನಿಕಟಪೂರ್ವ ಅಧ್ಯಕ್ಷ ಎಚ್.ಕೆ. ಚಂದ್ರಶೇಖರ ಅವರು ಪ್ರಸ್ತಾವಿಕವಾಗಿ ಸಂಘದ ಸ್ಥಿತಿಗತಿಗಳ ಕುರಿತು ಮಾತನಾಡಿದರು. ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಅರುಣ ಕೆ. ಸಾವಿತ್ರಿಬಾಯಿ ಪುಲೆ ಸಂಘ ಸೇರಿದಂತೆ ಶಿಕ್ಷಕರ ವಿವಿಧ ಸಂಘಟನೆಗಳ ಪದಾಧಿಕಾರಿಗಳು ನೂತನ ಅಧ್ಯಕ್ಷರು ಮತ್ತು ಪದಾಧಿಕಾರಿಗಳನ್ನು ಸನ್ಮಾನಿಸಿದರು.

ಪದಾಧಿಕಾರಿಗಳಾದ ತಿಮ್ಮಪ್ಪ ಜಿಎಸ್., ಪ್ರಕಾಶ್ ನಾಯ್ಕ ಕೆ. ಜಿಲ್ಲಾಧ್ಯಕ್ಷ ,ತಾಲೂಕು ನಿರ್ದೇಶಕ ಉಮಾಪತಿ, ಜಿ,ನಾಗೇಶ್, ಸವಿತಾ ಬಿ.ಎನ್, ಎಂ.ವಿ.ಮಂಗಳಮ್ಮ, ಎಂ. ಪ್ರಶಾಂತ್ ಶಿವಪ್ಪ ಆರ್. ಶೋಭಾ ಕೆ.ಆರ್. ಅ‍ವರನ್ನು ಸನ್ಮಾನಿಸಲಾಯಿತು.

- - -

-13ಎಚ್.ಎಲ್.ಐ1:

ಸಮಾರಂಭವನ್ನು ಹೊನ್ನಾಳಿ ಕ್ಷೇತ್ರ ಶಾಸಕ ಡಿ.ಜಿ.ಶಾಂತನಗೌಡ ಉದ್ಘಾಟಿಸಿದರು.