ನವದೆಹಲಿ: ‘ನರೇಂದ್ರ ಮೋದಿಯವರದ್ದು ಜವಾಬ್ದಾರಿಯುತ ಸರ್ಕಾರ. ಕೇಂದ್ರವು ನೀಟ್‌ಗೆ ಸಂಬಂಧಿಸಿದ ಪ್ರತಿ ಪ್ರಶ್ನೆಗೂ ಉತ್ತರ ನೀಡಲಿದೆ. ಆದರೆ ರಾಹುಲ್ ಗಾಂಧಿ ರಾಜಕೀಯ ಮೈಲೇಜ್ ಪಡೆಯಲು ಯತ್ನಿಸುತ್ತಿದ್ದಾರೆಯೇ ಹೊರತು, ಅವರಿಗೆ ವಿದ್ಯಾರ್ಥಿಗಳ ಬಗ್ಗೆ ಯಾವ ಕಾಳಜಿಯೂ ಇಲ್ಲ. ಕರ್ನಾಟಕ ಸೇರಿದಂತೆ ಕಾಂಗ್ರೆಸ್ ಆಡಳಿತದ ರಾಜ್ಯಗಳಲ್ಲಿನ ಪ್ರಶ್ನೆಪತ್ರಿಕೆ ಸೋರಿಕೆ ಬಗ್ಗೆ ರಾಹುಲ್ ಚಕಾರವೆತ್ತುತ್ತಿಲ್ಲ’ ಎಂದು ಕೇಂದ್ರ ಸಚಿವ ಜೆ.ಪಿ. ನಡ್ಡಾ ಬುಧವಾರ ಆರೋಪಿಸಿದ್ದಾರೆ.
ಬಿಜೆಪಿ ಪ್ರಧಾನ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು, ‘ಮೋದಿ ನೇತೃತ್ವದ ಎನ್‌ಡಿಎ ಸರ್ಕಾರವು ಜವಾಬ್ದಾರಿಯುತ ಮತ್ತು ಸ್ಪಂದನಶೀಲ ಸರ್ಕಾರವಾಗಿದ್ದು, ಈ ವಿಷಯದ ಬಗ್ಗೆ ಅತ್ಯಂತ ಗಂಭೀರವಾಗಿದೆ. ನೀಟ್ ಸೋರಿಕೆಯು ತನಿಖೆಗೆ ಒಳಪಡಬೇಕಾದ ವಿಷಯ. ಇದರ ಪ್ರತಿಯೊಂದು ಅಂಶಕ್ಕೂ ಸರ್ಕಾರ ಜನರ ಮುಂದೆ ಉತ್ತರವನ್ನಿಡಲಿದೆ. ಈ ಕುರಿತು ಸಂಸತ್ತಿನಲ್ಲಿ ವಿಸ್ತೃತ ಚರ್ಚೆಗೆ ಸರ್ಕಾರ ಸಿದ್ಧವಿದೆ’ ಎಂದು ಸ್ಪಷ್ಟಪಡಿಸಿದರು.
ಕಾಂಗ್ರೆಸ್ ಸರ್ಕಾರಗಳಲ್ಲೂ ಸೋರಿಕೆ:
ಬುಧವಾರ ಪತ್ರಿಕಾಗೋಷ್ಠಿ ನಡೆಸಿದ ರಾಹುಲ್, ಬಿಜೆಪಿ ಅವಧಿಯಲ್ಲಿನ ಸುಮಾರು 150 ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣಗಳನ್ನು ಉಲ್ಲೇಖಿಸಿ, ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದರು. ಇದಕ್ಕೆ ತಿರುಗೇಟು ನೀಡಿದ ನಡ್ಡಾ, ‘ಕಾಂಗ್ರೆಸ್ ಸರ್ಕಾರವಿರುವ ಕರ್ನಾಟಕದಲ್ಲಿ ಬೋರ್ಡ್ ಪರೀಕ್ಷೆಯ ಪ್ರಶ್ನೆಪತ್ರಿಕೆ ಸೋರಿಕೆಯಾಗಿದೆ. ಪಿಯುಸಿ ಪ್ರಶ್ನೆಪತ್ರಿಕೆ ಸೋರಿಕೆಯಾಗಿದೆ. ಕಾಂಗ್ರೆಸ್ ಸರ್ಕಾರವಿದ್ದ ಜಮ್ಮು ಕಾಶ್ಮೀರ, ಹಿಮಾಚಲ ಪ್ರದೇಶ, ಜಾರ್ಖಂಡ, ತೆಲಂಗಾಣದಲ್ಲೂ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿದೆ. ಈ ಪಟ್ಟಿ ಸಾಕಷ್ಟು ದೊಡ್ಡದಿದೆ. ಸೂಕ್ತ ಸಮಯ ಬಂದಾಗ ನಾವು ಇದರ ಬಗ್ಗೆ ಚರ್ಚಿಸುತ್ತೇವೆ’ ಎಂದು ಚಾಟಿ ಬೀಸಿದರು.
ರಾಹುಲ್ ಆರೋಪ ಸೆಲೆಕ್ಟಿವ್:
‘ರಾಹುಲ್ ಗಾಂಧಿಯವರೇ, ನೀವೇಕೆ ಹೀಗೆ ಆಯ್ದ ವಿಷಯಗಳ ಬಗ್ಗೆ ಮಾತ್ರ ಗಮನಹರಿಸುತ್ತೀರಿ? ವಿದ್ಯಾರ್ಥಿಗಳ ಹಿತಾಸಕ್ತಿಯೇ ನಿಮ್ಮ ಉದ್ದೇಶವಲ್ಲ ಎಂಬುದು ಇದರಿಂದ ಸ್ಪಷ್ಟವಾಗುತ್ತದೆ. ವಿದ್ಯಾರ್ಥಿಗಳ ಬೇಡಿಕೆಗಳನ್ನು ಮುಂದಿಟ್ಟುಕೊಂಡು ರಾಜಕೀಯ ಲಾಭ ಪಡೆಯಲು ಮತ್ತು ರಾಜಕೀಯ ಮಾಡಲು ನೀವು ಆಸಕ್ತಿ ಹೊಂದಿದ್ದೀರಿ. ಇದು ದುರದೃಷ್ಟಕರ’ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸಂಸತ್ತಿನಲ್ಲಿ ಚರ್ಚೆಗೆ ಸಿದ್ಧ:
‘ಸಂಸತ್ತಿನಲ್ಲಿ ಪ್ರಶ್ನೆಪತ್ರಿಕೆ ಸೋರಿಕೆ ಸಂಬಂಧಿತ ಎಲ್ಲಾ ವಿಷಯಗಳ ಬಗ್ಗೆ ಸಮಗ್ರವಾಗಿ ಚರ್ಚಿಸಲು ಸಿದ್ಧರಿದ್ದೇವೆ. ವಿರೋಧ ಪಕ್ಷಗಳು ತಮ್ಮ ಅಭಿಪ್ರಾಯಗಳನ್ನು ಮಂಡಿಸಬೇಕು. ಅದಕ್ಕೆ ಸರ್ಕಾರ ಉತ್ತರಿಸುತ್ತದೆ. ಆರೋಪ-ಪ್ರತ್ಯಾರೋಪಗಳನ್ನು ಬದಿಗಿಟ್ಟು, ಸೋರಿಕೆಗೆ ಕಾರಣವೇನು? ಅದರ ಹಿಂದೆ ಯಾರಿದ್ದಾರೆ? ಎಂಬ ಬಗ್ಗೆ ಆಳವಾದ ಚರ್ಚೆ ಮಾಡಬೇಕು. ಮೊದಲನೆಯದಾಗಿ, ಇದು ರಾಜಕೀಯವಾಗಬಾರದು. ಇದರಿಂದ ರಾಜಕೀಯ ಲಾಭ ಪಡೆಯುವುದು ಸರಿಯಲ್ಲ’ ಎಂದು ತಿಳಿಸಿದರು.
