ರಾಮನಗರ: ಗ್ರೇಟರ್ ಬೆಂಗಳೂರು ಸಮಗ್ರ ಉಪನಗರ (ಬಿಡದಿ ಟೌನ್ ಶಿಪ್) ಯೋಜನೆಗಾಗಿ ನಡೆಯುತ್ತಿರುವ ಭೂಸ್ವಾಧೀನ ಪ್ರಕ್ರಿಯೆ ವಿರೋಧಿಸಿ ಬಿಡದಿ ಭಾಗದ ರೈತರು ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ ಅವರಿಗೆ ಅಂಚೆ ಪತ್ರ ಚಳವಳಿ ನಡೆಸಿದರು.

ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಹಾಗೂ ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಅವರು ಇತ್ತೀಚೆಗೆ ಎಐಸಿಸಿ ನಾಯಕ ರಾಹುಲ್ ಗಾಂಧಿ ಅವರಿಗೆ ಪತ್ರ ಬರೆದು ಮಧ್ಯಪ್ರವೇಶಕ್ಕೆ ಕೋರಿದ್ದರು. ಈಗ ರೈತರೂ ಅದೇ ಹಾದಿ ತುಳಿದಿದ್ದಾರೆ. ಬಿಡದಿ ಸೀಮೆಯ ನೂರಾರು ರೈತರು ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿಯವರಿಗೆ ಪತ್ರ ಬರೆದು, ಭೂಸ್ವಾಧೀನ ಪ್ರಕ್ರಿಯೆಗೆ ತಕ್ಷಣವೇ ಬ್ರೇಕ್ ಹಾಕುವಂತೆ ಒತ್ತಾಯಿಸಿದ್ದಾರೆ.

ರೈತರ ಪತ್ರದಲ್ಲಿ ಏನಿದೆ?

ಬಿಡದಿಯ ಬಡ ರೈತನಾದ ನಾನು ಈ ಬೃಹತ್ ಭೂ ಸ್ವಾಧೀನದ ದೌರ್ಜನ್ಯದಿಂದ ನನ್ನ ಬದುಕನ್ನು ಉಳಿಸಿಕೊಡಬೇಕಾಗಿ ತಮ್ಮಲ್ಲಿ ಕೈಮುಗಿದು ಪ್ರಾರ್ಥಿಸುತ್ತಿದ್ದೇನೆ. ಸಿಎಂ ಡಿಕೆ ಶಿವಕುಮಾರ್ ಅವರ ನೇತೃತ್ವದ ಕಾಂಗ್ರೆಸ್ ಸರ್ಕಾರ 2026ರ ಜೂನ್ 12ರಂದು 33,562 ಕೋಟಿ ರು.ಗಳ ರಿಯಲ್ ಎಸ್ಟೇಟ್ ದಂಧೆಗಾಗಿ 3 ಹಳ್ಳಿಗಳ 498 ಎಕರೆ ಕೃಷಿ ಭೂಮಿಯನ್ನು ಕಸಿದುಕೊಳ್ಳಲು ಅಂತಿಮ ಅಧಿಸೂಚನೆ ಹೊರಡಿಸಿದೆ. ಅಷ್ಟೇ ಅಲ್ಲದೆ, ಇದೇ ಭಾಗದಲ್ಲಿ ಇನ್ನೂ 7 ಸಾವಿರಕ್ಕೂ ಹೆಚ್ಚು ಎಕರೆ ರೈತರ ಭೂಮಿಯನ್ನು ನುಂಗಲು ಸಂಚು ರೂಪಿಸಿದೆ.

ಈ ಕರಾಳ ಯೋಜನೆಯು 30 ಲಕ್ಷ ಮರಗಳನ್ನು ಹಾಗೂ ತಿಂಗಳಿಗೆ 6 ಲಕ್ಷ ಲೀಟರ್ ಹಾಲು ನೀಡುವ ನಮ್ಮ ಹೈನುಗಾರಿಕೆ ಅವಲಂಬಿಸಿರುವ ರೈತ ಕುಟುಂಬಗಳನ್ನು ಬೀದಿಗೆ ತಳ್ಳುತ್ತಿದೆ. ಇದರಲ್ಲಿ ಕಡಿಮೆ ಭೂಮಿ ಹೊಂದಿರುವ ದಲಿತ ಮತ್ತು ಹಿಂದುಳಿದ ವರ್ಗದ ಬಡ ರೈತರಿದ್ದಾರೆ. ಮುಖ್ಯಮಂತ್ರಿಗಳು ತಮ್ಮ ಸ್ವಂತ ಕ್ಷೇತ್ರ ಕನಕಪುರ ರೈತರಿಗೆ ಭೂಮಿ ಮಾರಬೇಡಿ ಎಂದು ಬುದ್ಧಿ ಹೇಳುತ್ತಾರೆ. ಆದರೆ, ನಮ್ಮನ್ನು 450 ದಿನಗಳಿಂದ ಬೀದಿಯಲ್ಲಿ ಅಳುವಂತೆ ಮಾಡಿದ್ದಾರೆ. ನೀವು ದೇಶದಾದ್ಯಂತ ಗ್ರೀನ್ ಓವರ್ ಗ್ರೀಡ್ ಎಂದು ಪರಿಸರ ರಕ್ಷಣೆಗೆ ಕರೆ ನೀಡಿದ್ದೀರಿ. ದಯವಿಟ್ಟು ಮಧ್ಯಪ್ರವೇಶಿಸಿ ತಕ್ಷಣವೇ ಈ ಅಂತಿಮ ನೋಟಿಫಿಕೇಷನ್ ಅನ್ನು ಹಿಂಪಡೆಯಲು ನಿಮ್ಮ ಸರ್ಕಾರಕ್ಕೆ ಕಟ್ಟುನಿಟ್ಟಿನ ಆದೇಶ ನೀಡಬೇಕಾಗಿ ವಿನಂತಿಸುತ್ತೇನೆ.


17ಕೆಆರ್ ಎಂಎನ್ 3.ಜೆಪಿಜಿ

ರಾಹುಲ್ ಗಾಂಧಿ ಅವರಿಗೆ ರೈತರು ಬರೆದಿರುವ ಅಂಚೆ ಪತ್ರಗಳು.