ಕನ್ನಡದ ಇತಿಹಾಸ, ಶ್ರೀಮಂತಿಗೆ ಅರಿಯಿರಿ

KannadaprabhaNewsNetwork |  
Published : Nov 02, 2026, 04:15 AM IST
ಕನ್ನಡ | Kannada Prabha

ಸಾರಾಂಶ

ಕನ್ನಡಪ್ರಭ ವಾರ್ತೆ ಮುದ್ದೇಬಿಹಾಳ ಕನ್ನಡ ಭಾಷೆ ಶ್ರೀಮಂತ ಸಾಹಿತ್ಯ ಪರಂಪರೆ ಹಾಗೂ ಸಾಂಸ್ಕೃತಿಕ ಹಿರಿಮೆಯನ್ನು ಹೊಂದಿದೆ. ಶಾಸ್ತ್ರೀಯ ಭಾಷೆಯ ಸ್ಥಾನಮಾನ ಪಡೆಯಲು ಕನ್ನಡ ಎಲ್ಲ ಅರ್ಹತೆ ಹೊಂದಿದ್ದು, ಕನ್ನಡದ ಇತಿಹಾಸ ಮತ್ತು ಸಾಹಿತ್ಯದ ಶ್ರೀಮಂತಿಕೆಯನ್ನು ಪ್ರತಿಯೊಬ್ಬರೂ ಅರಿತುಕೊಳ್ಳಬೇಕೆಂದು ತಹಸೀಲ್ದಾರ್‌ ಆನಂದ ಕೊಲ್ಹಾರ ಹೇಳಿದರು.

ಕನ್ನಡಪ್ರಭ ವಾರ್ತೆ ಮುದ್ದೇಬಿಹಾಳ

ಕನ್ನಡ ಭಾಷೆ ಶ್ರೀಮಂತ ಸಾಹಿತ್ಯ ಪರಂಪರೆ ಹಾಗೂ ಸಾಂಸ್ಕೃತಿಕ ಹಿರಿಮೆಯನ್ನು ಹೊಂದಿದೆ. ಶಾಸ್ತ್ರೀಯ ಭಾಷೆಯ ಸ್ಥಾನಮಾನ ಪಡೆಯಲು ಕನ್ನಡ ಎಲ್ಲ ಅರ್ಹತೆ ಹೊಂದಿದ್ದು, ಕನ್ನಡದ ಇತಿಹಾಸ ಮತ್ತು ಸಾಹಿತ್ಯದ ಶ್ರೀಮಂತಿಕೆಯನ್ನು ಪ್ರತಿಯೊಬ್ಬರೂ ಅರಿತುಕೊಳ್ಳಬೇಕೆಂದು ತಹಸೀಲ್ದಾರ್‌ ಆನಂದ ಕೊಲ್ಹಾರ ಹೇಳಿದರು.

ಪಟ್ಟಣದ ತಾಲೂಕಾ ಆಡಳಿತದಿಂದ ತಾಲೂಕಾ ಆಡಳಿತ ಸೌಧದ ಆವರಣದಲ್ಲಿ ಹಮ್ಮಿಕೊಂಡಿದ್ದ ಕರ್ನಾಟಕ ರಾಜ್ಯೋತ್ಸವ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು. ಜಗತ್ತಿನ ಗಮನ ಸೆಳೆದ ೧೨ನೇ ಶತಮಾನವು ಕನ್ನಡ ನಾಡಿನ ಇತಿಹಾಸದಲ್ಲಿ ಸುವರ್ಣಯುಗವಾಗಿದೆ. ಬಸವಣ್ಣನವರೂ ಸೇರಿದಂತೆ ಅನೇಕ ಶರಣರು ತಮ್ಮ ವಚನಗಳ ಮೂಲಕ ಸಮಾಜಕ್ಕೆ ಸಮಾನತೆ, ಕಾಯಕ, ದಾಸೋಹ ಹಾಗೂ ಮಾನವೀಯ ಮೌಲ್ಯಗಳ ಸಂದೇಶ ಸಾರಿದ್ದಾರೆ. ರನ್ನ, ಜನ್ನ, ಕುವೆಂಪು, ದ.ರಾ.ಬೇಂದ್ರೆ ಸೇರಿದಂತೆ ಅನೇಕ ಮಹಾನ್ ಸಾಹಿತಿಗಳ ಸಾಹಿತ್ಯ ಸೇವೆಯ ಫಲವಾಗಿ ಕರ್ನಾಟಕ ಎಂಟು ಜ್ಞಾನಪೀಠ ಪ್ರಶಸ್ತಿಗಳನ್ನು ತನ್ನದಾಗಿಸಿಕೊಂಡಿದೆ. ಇದು ಕನ್ನಡ ಭಾಷೆಯ ಸಾಹಿತ್ಯಿಕ ಶ್ರೀಮಂತಿಕೆ ಹಾಗೂ ಶಕ್ತಿಗೆ ಸಾಕ್ಷಿಯಾಗಿದೆ ಎಂದರು. ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದ ಮಡಿಕೇಶ್ವರ ಸರ್ಕಾರಿ ಪ್ರೌಢಶಾಲೆ ಶಿಕ್ಷಕರಾದ ಬಸವರಾಜ ಹಂಚಲಿ, ಕನ್ನಡಿಗರೆಲ್ಲರೂ ಒಟ್ಟಾಗಿ ಹೋರಾಡಿ ಒಂದಾಗಿರುವ ಸಂಭ್ರಮದ ಪ್ರತೀಕ ಕನ್ನಡ ರಾಜ್ಯೋತ್ಸವ. ಇದು ಒಂದು ದಿನದ ಆಚರಣೆಯಲ್ಲ, ಕನ್ನಡಿಗರ ವ್ಯಕ್ತಿತ್ವದ, ಸ್ವಾಭಿಮಾನ ಹಾಗೂ ಒಗ್ಗಟ್ಟಿನ ಸಂಕೇತವಾಗಿದೆ. ಕನ್ನಡ ನಾಡು ನುಡಿ ಮತ್ತು ಭಾಷೆಯ ಉಳಿವಿಗಾಗಿ ಅನೇಕ ಮಹನೀಯರು ಹೋರಾಟ, ತ್ಯಾಗ ಹಾಗೂ ಪರಿಶ್ರಮ ಪಟ್ಟಿದ್ದಾರೆ ಅವರ ಹೋರಾಟದ ಇತಿಹಾಸವನ್ನು ಅರಿತುಕೊಂಡಾಗ ಮಾತ್ರ ಕನ್ನಡ ರಾಜ್ಯೋತ್ಸವದ ನಿಜವಾದ ಮಹತ್ವ ತಿಳಿಯುತ್ತದೆ ಎಂದರು.

ಕಸಾಪ ತಾಲೂಕು ಅಧ್ಯಕ್ಷ ಕಾಮರಾಜ ಬಿರಾದಾರ ಮಾತನಾಡಿ, ಸರ್ಕಾರಿ ಶಾಲೆ ವಿದ್ಯಾರ್ಥಿಗಳ ಪ್ರತಿಭೆಯನ್ನು ಗುರುತಿಸಿ ಅವರನ್ನು ಉನ್ನತಮಟ್ಟಕ್ಕೆ ಕೊಂಡೊಯ್ಯುವ ನಿಟ್ಟಿನಲ್ಲಿ ಸರ್ಕಾರಿ ಶಾಲೆಗಳ ಶಿಕ್ಷಕರು ಶ್ಲಾಘನೀಯ ಕಾರ್ಯ ಮಾಡುತ್ತಿದ್ದಾರೆ. ವಿದ್ಯಾರ್ಥಿಗಳಲ್ಲಿ ಕನ್ನಡ ಭಾಷೆ, ಸಾಹಿತ್ಯ ಹಾಗೂ ಸಾಂಸ್ಕೃತಿಕ ಅಭಿರುಚಿಯನ್ನು ಬೆಳೆಸುವ ಉದ್ದೇಶದಿಂದ ಪ್ರಬಂಧ ಸ್ಪರ್ಧೆ, ಕವನ ವಾಚನ, ಭಾಷಣ ಸ್ಪರ್ಧೆ ಸೇರಿ ಕನ್ನಡಪರ ಚಟುವಟಿಕೆಗಳನ್ನು ಆಯೋಜಿಸಲಾಗುತ್ತದೆ ಎಂದು ತಿಳಿಸಿದರು.ಪಟ್ಟಣದ ಪ್ರಮುಖ ಬೀದಿಗಳಲ್ಲಿ ಭುವನೇಶ್ವರಿದೇವಿಯ ಭಾವಚಿತ್ರ ಹಾಗೂ ಸ್ತಬ್ದಚಿತ್ರಗಳ ಮೆರವಣಿಗೆ ನಡೆಯಿತು. ಕಾರ್ಯಕ್ರಮದಲ್ಲಿ ತಾಪಂ ಇಒ ಸಂಗನಗೌಡ ಬಿರಾದಾರ, ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಎಸ್.ಬಡದಾನಿ, ಸಿಪಿಐ ಮೋಹ್ಮದ ಫಸಿವುದ್ದೀನ್, ಮುಖ್ಯಾಧಿಕಾರಿ ಮಲ್ಲನಗೌಡ ಬಿರಾದಾರ, ಹಿರಿಯ ಸಾಹಿತಿ ಬಿ.ಎಂ.ಹಿರೇಮಠ, ಕಸಾಪ ನಿಕಟಪೂರ್ವ ಅಧ್ಯಕ್ಷ ಎಂ.ಬಿ.ನಾವದಗಿ, ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಡಾ.ಎಂ.ಎಂ.ಬೆಳಗಲ್ಲ, ಕೆಎಸ್‌ಆರ್‌ಟಿಸಿ ವ್ಯವಸ್ಥಾಪಕ ಭೋವಿ, ಅನುದಾನ ರಹಿತ ಖಾಸಗಿ ಶಾಲಾ ಒಕ್ಕೂಟ ಜಿಲ್ಲಾಧ್ಯಕ್ಷ ಮಂಜು ಕೊಪ್ಪ, ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಪ್ರಾಂಶುಪಾಲ ಶರಣು ಪಾಟೀಲ, ಬಿಸಿಎಂ ಇಲಾಖೆ ಅಧಿಕಾರಿ, ವೆಂಕನಗೌಡ ಪಾಟೀಲ, ಸಿಕಂದರ ಜಾನ್ವೇಕರ, ಕರ್ನಾಟಕ ನವನಿರ್ಮಾಣ ಸೇನೆಯ ಅಧ್ಯಕ್ಷ ರಾಜುಗೌಡ ತುಂಬಗಿ, ಸಾಹಿತಿ ಶಿವಪುತ್ರಪ್ಪ ಅಜಮನಿ, ಸಾಮಾಜಿಕ ಕಾರ್ಯಕರ್ತ ರಾಜು ರಾಯಗೊಂಡ, ವಿವಿಧ ಸಂಘಟನೆಗಳ ಪದಾಧಿಕಾರಿಗಳು ಹಾಗೂ ಶಾಲಾ ಶಿಕ್ಷಕರು, ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

ಸಿಆರ್‌ಪಿ ಗುಂಡು ಚವ್ಹಾಣ ಸ್ವಾಗತಿಸಿದರು. ಟಿ.ಡಿ.ಲಮಾಣಿ ನಿರೂಪಿಸಿ ವಂದಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಜ್ಞಾನೇಶ್ ಕುಮಾರ್‌ ಜೈಲಿಗಟ್ಟುತ್ತೇವೆ : ರಾಹುಲ್‌ ಗುಡುಗು
ಕನ್ನಡ ಬಾವುಟಕ್ಕೆ ನಾಡಧ್ವಜ ಸ್ಥಾನಮಾನ: ಸಿಎಂ