ಕನ್ನಡಪ್ರಭ ವಾರ್ತೆ ಬೆಳಗಾವಿ
ಕರ್ನಾಟಕದ ಏಕೀಕರಣದ ಇತಿಹಾಸ, ಕನ್ನಡದ ಅಸ್ಮಿತೆ, ನಾಡಿನ ಸಂಸ್ಕೃತಿ, ಪರಂಪರೆ ಹಾಗೂ ಜನಪದ ಸಿರಿವಂತಿಕೆಯನ್ನು ಸಾರಿದ ಅದ್ಧೂರಿ ರಾಜ್ಯೋತ್ಸವ ಮೆರವಣಿಗೆಗೆ ಜನಸಾಗರವೇ ಸಾಕ್ಷಿಯಾಯಿತು. ಕನ್ನಡದ ನೆಲದಲ್ಲಿ ಕನ್ನಡದ ಹಬ್ಬವನ್ನು ಆಚರಿಸುವ ಸಂಭ್ರಮಕ್ಕೆ ಪಾರವೇ ಇರಲಿಲ್ಲ. ಗಡಿನಾಡಿನ ಕನ್ನಡಿಗರ ಭಾಷಾಭಿಮಾನ, ಒಗ್ಗಟ್ಟು ಮತ್ತು ನಾಡಪ್ರೇಮದ ಶಕ್ತಿ ನಗರದ ಪ್ರಮುಖ ಬೀದಿಗಳಲ್ಲಿ ಅನಾವರಣಗೊಂಡಿತು.
ಬೆಳಗ್ಗೆಯಿಂದಲೇ ಕಿತ್ತೂರು ರಾಣಿ ಚನ್ನಮ್ಮ ವೃತ್ತದತ್ತ ಕನ್ನಡಿಗರ ದಂಡು ಸಾಗರೋಪಾದಿಯಲ್ಲಿ ಹರಿದುಬರುತ್ತಿತ್ತು. ಕುಟುಂಬ ಸಮೇತರಾಗಿ ಆಗಮಿಸಿದವರು, ಯುವಕ-ಯುವತಿಯರು, ಮಹಿಳೆಯರು, ಮಕ್ಕಳು, ಶಾಲಾ-ಕಾಲೇಜುಗಳ ವಿದ್ಯಾರ್ಥಿಗಳು ಸೇರಿದಂತೆ ಎಲ್ಲ ವಯೋಮಾನದ ಜನರು ರಾಜ್ಯೋತ್ಸವದ ಸಂಭ್ರಮದಲ್ಲಿ ಪಾಲ್ಗೊಂಡಿದ್ದರು. ರಸ್ತೆಯ ಇಕ್ಕೆಲಗಳಲ್ಲಿ ಜನರು ಕಿಕ್ಕಿರಿದು ನಿಂತಿದ್ದರು. ಕಟ್ಟಡಗಳ ಮಾಳಿಗೆ, ಮಳಿಗೆಗಳ ಮೇಲಿನಿಂದಲೂ ಮೆರವಣಿಗೆಯನ್ನು ಕಣ್ತುಂಬಿಕೊಳ್ಳುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು.ನಗರದ ಪ್ರಮುಖ ರಸ್ತೆಗಳು, ವೃತ್ತಗಳು ಹಳದಿ-ಕೆಂಪು ಬಾವುಟಗಳಿಂದ ಕಂಗೊಳಿಸುತ್ತಿದ್ದವು. ವಾಹನಗಳ ಮೇಲೆ ಕನ್ನಡದ ಧ್ವಜಗಳು ಪಟಪಟನೆ ಹಾರಾಡಿದರೆ, ಬೀದಿಗಳುದ್ದಕ್ಕೂ ನೆಟ್ಟಿದ್ದ ಬಾವುಟಗಳು ಕನ್ನಡದ ಹಬ್ಬಕ್ಕೆ ಹೊಸ ಕಳೆ ನೀಡಿದ್ದವು. ಸ್ವಾಗತ ಕಮಾನುಗಳು, ಬ್ಯಾನರ್ಗಳು, ಭಿತ್ತಿಚಿತ್ರಗಳು ಕಣ್ಮನ ಸೆಳೆದವು. ಕನ್ನಡಾಂಬೆಗೆ ಜಯವಾಗಲಿ, ಕರ್ನಾಟಕ ಮಾತೆಗೆ ಜಯವಾಗಲಿ ಎಂಬ ಘೋಷಣೆಗಳು ಮುಗಿಲುಮುಟ್ಟಿದವು.
ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಅವರು ರಾಜ್ಯೋತ್ಸವ ಮೆರವಣಿಗೆಗೆ ಚಾಲನೆ ನೀಡಿದರು. ಬಳಿಕ ವಿವಿಧ ಕನ್ನಡಪರ ಸಂಘಟನೆಗಳು, ಕನ್ನಡಾಭಿಮಾನಿಗಳು, ಶಾಲಾ-ಕಾಲೇಜುಗಳ ವಿದ್ಯಾರ್ಥಿಗಳು, ಜಾನಪದ ಕಲಾತಂಡಗಳು ಹಾಗೂ ಸರ್ಕಾರಿ ಇಲಾಖೆಗಳ ಸ್ತಬ್ಧಚಿತ್ರಗಳು ಮೆರವಣಿಗೆಯಲ್ಲಿ ಪಾಲ್ಗೊಂಡವು. ಕನ್ನಡ ಚಲನಚಿತ್ರಗಳ ಜನಪ್ರಿಯ ಗೀತೆಗಳು ಮೊಳಗುತ್ತಿದ್ದಂತೆ ಯುವಜನತೆ ಮೈಮರೆತು ಕುಣಿಯತೊಡಗಿತು. ಅಲ್ಲಲ್ಲಿ ಗುಂಪುಗುಂಪಾಗಿ ಕುಣಿಯುತ್ತಿದ್ದ ಯುವಕರ ಉತ್ಸಾಹಕ್ಕೆ ಸುಡುವ ಬಿಸಿಲೂ ಅಡ್ಡಿಯಾಗಲಿಲ್ಲ. ಹಸಿವು, ಬಾಯಾರಿಕೆಯನ್ನೂ ಮರೆತು ಕನ್ನಡದ ಹಾಡುಗಳಿಗೆ ಹೆಜ್ಜೆ ಹಾಕಿದರು. ಮಹಿಳೆಯರು, ಮಕ್ಕಳು ಕೂಡ ಸಂಭ್ರಮದಲ್ಲಿ ಭಾಗಿಯಾಗಿ ಮೆರವಣಿಗೆಯ ಮೆರುಗು ಹೆಚ್ಚಿಸಿದರು. ಸಿನೆಮಾ ಹಾಡುಗಳ ಇಂಚರ, ಡೊಳ್ಳು-ಹಲಗೆಗಳ ನಾದ, ವಾದ್ಯಮೇಳಗಳ ಸದ್ದು ಹಾಗೂ ಕನ್ನಡದ ಜಯಘೋಷಗಳು ಇಡೀ ನಗರವನ್ನೇ ಸಂಭ್ರಮದ ವೇದಿಕೆಯನ್ನಾಗಿಸಿದ್ದವು.
ಸಾಲುಗಟ್ಟಿ ಸಾಗಿದ ಮೇಳದವರು ರಣಕಹಳೆ ಮೊಳಗಿಸುತ್ತಿದ್ದಂತೆ ನೆರೆದಿದ್ದವರಲ್ಲಿ ಹೊಸ ಹುರುಪು ಮೂಡುತ್ತಿತ್ತು. ಬಣ್ಣಬಣ್ಣದ ವೇಷಭೂಷಣಗಳ ಕಲಾವಿದರ ಪ್ರದರ್ಶನ ಮಕ್ಕಳಿಂದ ಹಿಡಿದು ಹಿರಿಯರವರೆಗೆ ಎಲ್ಲರ ಗಮನ ಸೆಳೆಯಿತು. ಕಲಾವಿದರ ಲಯಬದ್ಧ ಹೆಜ್ಜೆ, ವಾದ್ಯಗಳ ನಿನಾದ ಹಾಗೂ ರಣಕಹಳೆಯ ಮೊಳಗು ಕನ್ನಡದ ಕೆಚ್ಚನ್ನು ಬಡಿದೆಬ್ಬಿಸುವಂತಿತ್ತು. ಮೆರವಣಿಗೆಯ ಮತ್ತೊಂದು ಪ್ರಮುಖ ಆಕರ್ಷಣೆಯಾಗಿದ್ದವು ವಿವಿಧ ಕನ್ನಡ ಸಂಘಟನೆಗಳ ರೂಪಕ ವಾಹನಗಳು ಹಾಗೂ ಸರ್ಕಾರಿ ಇಲಾಖೆಗಳ ಸ್ತಬ್ಧಚಿತ್ರಗಳು. ನಾಡಿನ ಇತಿಹಾಸ, ಕನ್ನಡದ ಹಿರಿಮೆ, ವೀರವನಿತೆಯರು, ಸ್ವಾತಂತ್ರ್ಯ ಹೋರಾಟಗಾರರು, ಸಾಂಸ್ಕೃತಿಕ ಪರಂಪರೆ, ಜನಪದ ಕಲೆ ಮತ್ತು ಸಾಮಾಜಿಕ ಸಂದೇಶಗಳನ್ನು ಸಾರುವ ರೂಪಕಗಳು ಸಾರ್ವಜನಿಕರ ಗಮನ ಸೆಳೆದವು.
ಮೆರವಣಿಗೆ ಸಾಗುವ ಮಾರ್ಗದಲ್ಲಿ ಕಟ್ಟಡಗಳ ಮೇಲಿನಿಂದ ಹೂವಿನ ಸುರಿಮಳೆಗೈದು ಕನ್ನಡಾಭಿಮಾನಿಗಳು ಸ್ವಾಗತಿಸಿದರು. ಹಲವೆಡೆ ಗಣ್ಯರನ್ನು ಸತ್ಕರಿಸಿ ಗೌರವಿಸಲಾಯಿತು. ಮೊಬೈಲ್ಗಳಲ್ಲಿ ಸಂಭ್ರಮದ ಕ್ಷಣಗಳನ್ನು ಸೆರೆಹಿಡಿಯಲು ಜನರು ಮುಗಿಬಿದ್ದಿದ್ದರು. ರಸ್ತೆಯ ಇಕ್ಕೆಲಗಳಲ್ಲಿ ನಿಂತಿದ್ದ ಜನರು ಕನ್ನಡದ ಬಾವುಟಗಳನ್ನು ಬೀಸುತ್ತ ಕಲಾತಂಡಗಳನ್ನು ಹುರಿದುಂಬಿಸಿದರು.
ಗಡಿ ಭಾಗದಲ್ಲಿರುವ ಬೆಳಗಾವಿಯಲ್ಲಿ ಕರ್ನಾಟಕ ರಾಜ್ಯೋತ್ಸವಕ್ಕೆ ವಿಶೇಷ ಮಹತ್ವವಿದೆ. ಭಾಷಾವಾರು ಪ್ರಾಂತ್ಯಗಳ ರಚನೆಯ ನಂತರವೂ ಗಡಿನಾಡಿನ ಕನ್ನಡಿಗರು ಕನ್ನಡ ಭಾಷೆ, ಸಂಸ್ಕೃತಿ ಮತ್ತು ನೆಲದ ಅಸ್ಮಿತೆಯನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ನಿರಂತರವಾಗಿ ಶ್ರಮಿಸುತ್ತಿದ್ದಾರೆ. ಹೀಗಾಗಿ ಇಲ್ಲಿನ ರಾಜ್ಯೋತ್ಸವ ಮೆರವಣಿಗೆ ಕೇವಲ ಉತ್ಸವಕ್ಕೆ ಸೀಮಿತವಾಗದೆ ಕನ್ನಡಿಗರ ಒಗ್ಗಟ್ಟು, ಹಕ್ಕಿನ ಪ್ರತಿಪಾದನೆ ಹಾಗೂ ಭಾಷಾಭಿಮಾನದ ಅಭಿವ್ಯಕ್ತಿಯ ವೇದಿಕೆಯಾಗಿದೆ.
ಮೆರವಣಿಗೆಯಿಂದಾಗಿ ನಗರದ ಪ್ರಮುಖ ರಸ್ತೆಗಳಲ್ಲಿ ಕೆಲಕಾಲ ಸಂಚಾರ ದಟ್ಟಣೆ ಉಂಟಾದರೂ, ಜನರ ಉತ್ಸಾಹಕ್ಕೆ ಅದರಿಂದ ಯಾವುದೇ ಹಿನ್ನಡೆಯಾಗಲಿಲ್ಲ. ಜನಸಂದಣಿಯ ಮಧ್ಯೆ ಯಾವುದೇ ಅಹಿತಕರ ಘಟನೆ ನಡೆಯದಂತೆ ಪೊಲೀಸರು ಬಿಗಿ ಬಂದೋಬಸ್ತ್ ಕೈಗೊಂಡಿದ್ದರು.