ಸಾಮರಸ್ಯದಿಂದ ಬಾಳುವುದು ಕಲಿತುಕೊಳ್ಳಿ: ಪಿಎಸ್‌ಐ ವಿಜಯಪ್ರತಾಪ್

KannadaprabhaNewsNetwork | Published : Jul 16, 2024 12:33 AM

ಸಾರಾಂಶ

ಸಂವಿಧಾನದ ಆಶಯದಂತೆ ನಾವೆಲ್ಲರೂ ಒಂದೇ ಎನ್ನುವ ಭಾವನೆಯನ್ನು ಪ್ರತಿಯೊಬ್ಬರು ಅಳವಡಿಸಿಕೊಂಡು ಸಮಾಜದಲ್ಲಿ ಸಹಭಾಗಿತ್ವ, ಸಾಮರಸ್ಯದಿಂದ ಬಾಳುವುದನ್ನು ಕಲಿತುಕೊಳ್ಳಬೇಕು.

ಕನ್ನಡಪ್ರಭ ವಾರ್ತೆ ಯಲಬುರ್ಗಾ

ಸಂವಿಧಾನದ ಆಶಯದಂತೆ ನಾವೆಲ್ಲರೂ ಒಂದೇ ಎನ್ನುವ ಭಾವನೆಯನ್ನು ಪ್ರತಿಯೊಬ್ಬರು ಅಳವಡಿಸಿಕೊಂಡು ಸಮಾಜದಲ್ಲಿ ಸಹಭಾಗಿತ್ವ, ಸಾಮರಸ್ಯದಿಂದ ಬಾಳುವುದನ್ನು ಕಲಿತುಕೊಳ್ಳಬೇಕು ಎಂದು ಸ್ಥಳೀಯ ಠಾಣೆಯ ಪಿಎಸ್‌ಐ ವಿಜಯ ಪ್ರತಾಪ್ ಹೇಳಿದರು.

ಪಟ್ಟಣದ ಪೊಲೀಸ್ ಠಾಣೆಯ ಆವರಣದಲ್ಲಿ ಭಾನುವಾರ ಸಂಜೆ ನಡೆದ ದಲಿತರ ಕುಂದು-ಕೊರತೆ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದರು.ಪಟ್ಟಣ ಸೇರಿದಂತೆ ಗ್ರಾಮೀಣ ಪ್ರದೇಶದಲ್ಲಿ ದಲಿತ ಸಮುದಾಯದವರನ್ನು ಯಾವುದೇ ರೀತಿಯ ತಾರತಮ್ಯ, ಅಸ್ಪೃಶ್ಯತೆಯಿಂದ ಕಾಣದೆ ಅವರನ್ನು ನಮ್ಮ ಸಹೋದರರಂತೆ ಕಾಣುವ ಮನೋಭಾವನೆ ಎಲ್ಲರಲ್ಲೂ ಮೂಡಿಬರಬೇಕು ಎಂದರು.

ದಲಿತ ಸಮುದಾಯದವರಿಗೆ ಬೇರೆಯವರು ವಿನಾ ಕಾರಣ ಕಿರುಕುಳ, ದೌರ್ಜನ್ಯ, ಹಲ್ಲೆ ಸೇರಿದಂತೆ ಇತರೆ ಸಮಸ್ಯೆಗಳಿದ್ದರೆ ತಕ್ಷಣವೇ ಠಾಣೆಗೆ ಬಂದು ದೂರು ನೀಡಿದರೆ ಅವುಗಳ ಬಗ್ಗೆ ಇಲಾಖೆ ತಕ್ಷಣ ಕ್ರಮ ಕೈಗೊಳ್ಳುತ್ತದೆ. ಇನ್ನೂ ಪ್ರತಿ ತಿಂಗಳು ಎರಡನೇ ಭಾನುವಾರ ಸರ್ಕಾರದ ಆದೇಶದಂತೆ ದಲಿತರ ಕುಂದು-ಕೊರತೆಯ ಸಭೆಗಳನ್ನು ವಿವಿಧ ಇಲಾಖೆಗಳ ಸಹಯೋಗದಲ್ಲಿ ದೊಡ್ಡ ಮಟ್ಟದಲ್ಲಿ ಆಯೋಜಿಸಿ ತೊಂದರೆಯಲ್ಲಿರುವ ಜನತೆಯ ಸಮಸ್ಯೆಗಳನ್ನು ಆಲಿಸುವ ಮೂಲಕ ಅವುಗಳಿಗೆ ಪರಿಹಾರ ಕಂಡುಕೊಳ್ಳಲಾಗುವುದು. ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಎಲ್ಲರೂ ಪ್ರೀತಿ, ವಿಶ್ವಾಸ, ನೆಮ್ಮದಿ, ಸಹಬಾಳ್ವೆಯಿಂದ ಬಾಳಬೇಕು ಎಂದು ಹೇಳಿದರು.

ದಲಿತ ಮುಖಂಡರಾದ ಯಮನೂರಪ್ಪ ನಡುವಲಮನಿ, ಸಿದ್ದಪ್ಪ ಕಟ್ಟಿಕಟ್ಟಿಮನಿ ಹಾಗೂ ವಸಂತಕುಮಾರ ಭಾವಿಮನಿ ಮಾತನಾಡಿ, ಪೊಲೀಸ್ ಇಲಾಖೆಯಿಂದ ನಡೆಯುವ ಸಭೆಗಳನ್ನು ಕೇವಲ ಕಾಟಾಚಾರಕ್ಕಾಗಿ ಮಾಡಬಾರದು. ಅನ್ಯಾಯ, ದೌರ್ಜನ್ಯಕ್ಕೊಳಗಾದ ದಲಿತರಿಗೆ ನ್ಯಾಯ ದೊರಕಿಸಿಕೊಡಬೇಕು. ಇನ್ನೂ ಅನೇಕ ಗ್ರಾಮೀಣ ಪ್ರದೇಶದಲ್ಲಿ ಅಸ್ಪೃಶ್ಯತೆ ಆಚರಣೆಯಲ್ಲಿರುವುದನ್ನು ಪತ್ತೆ ಹಚ್ಚಿ ನಿವಾರಣೆಗೆ ಮುಂದಾಗಬೇಕು. ಅಂತಹ ಗ್ರಾಮೀಣ ಗ್ರಾಮಗಳನ್ನು ಗುರುತಿಸಿ ಇಂತಹ ಸಭೆ ಮಾಡಿದರೆ ಸಾರ್ಥಕವಾಗುತ್ತದೆ ಎಂದು ಸಲಹೆ ನೀಡಿದರು.

ಈ ಸಂದರ್ಭದಲ್ಲಿ ದಲಿತ ಮುಖಂಡರಾದ ಶಂಕರ್ ಭಾವಿಮನಿ, ಯಲ್ಲಪ್ಪ ಲಮಾಣಿ, ಈರಪ್ಪ ಬಣಕಾರ, ಸುರೇಶ ನಡುಲಮನಿ, ಶಿವು ಬಣಕಾರ, ಪ್ರಕಾಶ ಸೇರಿದಂತೆ ಅನೇಕ ಮುಖಂಡರು ಹಾಗೂ ಪೊಲೀಸ್ ಸಿಬ್ಬಂದಿ ಬಾಳನಗೌಡ ಪಾಟೀಲ ಇದ್ದರು.

Share this article