ಸಾಧನಗಳಿಂದ ದೂರವಿರುವುದನ್ನು ಕಲಿಯಿರಿ: ಪ್ರೊ.ಜಿ.ಆರ್‌. ಅಂಗಡಿ

KannadaprabhaNewsNetwork |  
Published : May 30, 2025, 12:47 AM IST
1 | Kannada Prabha

ಸಾರಾಂಶ

ಇತ್ತೀಚಿನ ದಿನಗಳಲ್ಲಿ ದೊಡ್ಡವರು, ಚಿಕ್ಕವರು ಎನ್ನದೆ ಎಲ್ಲಾ ವಯೋಮಾನದವರು ಮೊಬೈಲ್‌ ದಾಸರಾಗಿದ್ದೇವೆ. ನಮ್ಮ ಜೀವನವನ್ನೇ ಮೊಬೈಲ್‌ಗೆ ಸ್ಥಳಾಂತರಿಸಿಕೊಂಡಿರುವಂತೆ ಬದುಕುತ್ತಿದ್ದೇವೆ. ಮೊಬೈಲ್‌ ಇಲ್ಲದೆ ಮಕ್ಕಳು ಊಟ ಮಾಡುವುದಿಲ್ಲ ಎಂಬ ಮಟ್ಟಕ್ಕೆ ಪರಿಸ್ಥಿತಿ ಬಂದಿದೆ. ಸಾಧನಗಳ ಅತಿಯಾದ ಅವಲಂಬನೆ ಒಳ್ಳೆಯದಲ್ಲ.

ಕನ್ನಡಪ್ರಭ ವಾರ್ತೆ ಮೈಸೂರು

ಜೀವನಕ್ಕೆ ಅಗತ್ಯವಾದ ಕೌಶಲ್ಯವನ್ನು ಬಿಟ್ಟು ನಮ್ಮ ಜೀವನವನ್ನೇ ಮೊಬೈಲ್‌ಗೆ ಸ್ಥಳಾಂತರಿಸಿಕೊಂಡಂತೆ ಬದುಕುತ್ತಿದ್ದೇವೆ, ನಾವು ಸಾಧನಗಳಿಂದ ಆದಷ್ಟು ದೂರ ಇರುವುದನ್ನು ಕಲಿಯಬೇಕಿದೆ ಎಂದು ಕಲಬುರ್ಗಿಯ ಕರ್ನಾಟಕ ಕೇಂದ್ರಿಯ ವಿವಿ ಶಿಕ್ಷಣ ವಿಭಾಗದ ಮುಖ್ಯಸ್ಥ ಹಾಗೂ ಎನ್‌.ಸಿ.ಟಿ.ಇ ಸದಸ್ಯ ಪ್ರೊ.ಜಿ.ಆರ್‌. ಅಂಗಡಿ ಅಭಿಪ್ರಾಯಪಟ್ಟರು.

ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ ಕಾವೇರಿ ಸಭಾಂಗಣದಲ್ಲಿ ಗುರುವಾರ ಆರಂಭವಾದ ಇಂದಿನ ಡಿಜಿಟಲ್‌ ಯುಗದಲ್ಲಿ ಮಕ್ಕಳು ಮತ್ತು ಯುವಕರ ಜೀವನ ಕೌಶಲ್ಯ ಮತ್ತು ಉತ್ತಮ ಜೀವನ ಕುರಿತ ಎರಡು ದಿನಗಳ ಅಂತಾರಾಷ್ಟ್ರೀಯ ಸಮ್ಮೇಳನದಲ್ಲಿ ಅವರು ಮುಖ್ಯ ಭಾಷಣ ಮಾಡಿದರು.

ಇತ್ತೀಚಿನ ದಿನಗಳಲ್ಲಿ ದೊಡ್ಡವರು, ಚಿಕ್ಕವರು ಎನ್ನದೆ ಎಲ್ಲಾ ವಯೋಮಾನದವರು ಮೊಬೈಲ್‌ ದಾಸರಾಗಿದ್ದೇವೆ. ನಮ್ಮ ಜೀವನವನ್ನೇ ಮೊಬೈಲ್‌ಗೆ ಸ್ಥಳಾಂತರಿಸಿಕೊಂಡಿರುವಂತೆ ಬದುಕುತ್ತಿದ್ದೇವೆ. ಮೊಬೈಲ್‌ ಇಲ್ಲದೆ ಮಕ್ಕಳು ಊಟ ಮಾಡುವುದಿಲ್ಲ ಎಂಬ ಮಟ್ಟಕ್ಕೆ ಪರಿಸ್ಥಿತಿ ಬಂದಿದೆ. ಸಾಧನಗಳ ಅತಿಯಾದ ಅವಲಂಬನೆ ಒಳ್ಳೆಯದಲ್ಲ ಎಂದರು.

ಇಂದು ನಾವೆಲ್ಲರೂ ಡಿಜಿಟಿಲ್ ಯುಗದಲ್ಲಿ ಬದುಕುತ್ತಿದ್ದೇವೆ. ಈ ಡಿಜಿಟಲ್ ಯುಗ ನಮಗೆ ಹಲವು ಕ್ಷೇತ್ರಗಳಲ್ಲಿ ಸಾಕಷ್ಟು ಅವಕಾಶಗಳನ್ನು ಮಾಡಿಕೊಡುತ್ತಿದೆ. ಇದರಿಂದ ಎಷ್ಟು ಉಪಯೋಗವಾಗುತ್ತಿದೆಯೋ ಅಷ್ಟೇ ಸಂಕಷ್ಟಗಳು ಎದುರಾಗುತ್ತಿದೆ. ಈ ಸಮಸ್ಯೆಗಳನ್ನು ಯಾವ ರೀತಿ ಎದುರಿಸಬೇಕು ಎಂಬುದಕ್ಕೆ ನಮಗೆ ಕೌಶಲ್ಯದ ಅವಶ್ಯಕತೆ ಇದೆ ಎಂದು ಅವರು ತಿಳಿಸಿದರು.

ಜೀವನ ನಿರ್ವಹಣೆಗೆ ಕೌಶಲ್ಯ ಮುಖ್ಯವೇ ಹೊರತು ಸಾಧನವಲ್ಲ. ಕೌಶಲ್ಯ ದೊರಕುವುದು ಶಿಕ್ಷಣದಿಂದ. ಆದ್ದರಿಂದ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು. ಅನೇಕ ಹೊಟೇಲ್‌ಗಳಲ್ಲಿ ಮೊಬೈಲ್‌ಬಳಸದೆ ಇದ್ದರೆ ಖರೀದಿಸುವ ಆಹಾರದ ಮೇಲೆ ಇಂತಿಷ್ಟು ರಿಯಾಯಿತಿ ಲಭಿಸುತ್ತದೆ. ಇದೆಲ್ಲವೂ ಒಳ್ಳೆಯ ಬೆಳವಣಿಗೆ. ಇಲ್ಲವೇ ಊಟ ಮಾಡುವಾಗಲೂ ಮೊಬೈಲ್‌ನಲ್ಲಿಯೇ ಮುಳುಗುತ್ತೇವೆಯೇ ಹೊರತು, ಅಕ್ಕಪಕ್ಕದವರ ಪರಿಚಯ, ವಿಶ್ವಾಸ ಬೆಳೆಯುವುದಿಲ್ಲ ಎಂದರು.

ಶಿಕ್ಷಣ ಎಂಬುದು ಜಾಗತಿಕವಾಗಿ ಎಲ್ಲರನ್ನು ಒಂದು ಮಾಡುತ್ತದೆ. ಮಾಹಿತಿ ಕಲೆ ಹಾಕುತ್ತದೆ. ಇದಕ್ಕೆ ಪೂರಕವಾಗಿ ಸಾಧನಗಳು ಕೆಲಸ ಮಾಡಬೇಕು ಎಂದು ಅವರು ಹೇಳಿದರು.

ಕುಲಪತಿ ಪ್ರೊ. ಶರಣಪ್ಪ ವಿ. ಹಲಸೆ ಅಧ್ಯಕ್ಷತೆ ವಹಿಸಿದ್ದರು. ಕುಲಸಚಿವರಾದ ಪ್ರೊ.ಎಸ್‌.ಕೆ. ನವೀನ್‌ಕುಮಾರ್‌, ಪ್ರೊ. ಆನಂದಕುಮಾರ್, ಶೈಕ್ಷಣಿಕ ಡೀನ್‌ ಪ್ರೊ.ಎನ್‌. ಲಕ್ಷ್ಮೀ, ಪ್ರೊ. ರಾಮನಾಥ ನಾಯ್ಡು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನಸಿಕ ಖಿನ್ನತೆ ಸ್ವಯಂ ಮೌಲ್ಯಮಾಪನಕ್ಕೆ ನಿಮ್ಹಾನ್ಸ್‌ ಆ್ಯಪ್‌
ಒಂದೇ ದಿನ ಜಡ್ಜ್‌ ಮುಂದೆ 60 ಪರೋಲ್‌ ಅರ್ಜಿ!