ಕುಂದಾಪುರ: ಇಂದಿನ ಡಿಜಿಟಲ್ ಯುಗದಲ್ಲಿ ವಿದ್ಯಾರ್ಥಿಗಳ ಮನಸ್ಸನ್ನು ವಿಚಲಿತಗೊಳಿಸುವ, ದಾರಿ ತಪ್ಪಿಸುವ ಹತ್ತಾರು ಆಕರ್ಷಣೆಗಳಿವೆ. ಇವೆಲ್ಲವನ್ನೂ ಮೀರಿ ಬೆಳೆಯುವ ಮನೋಭಾವ ನಿಮ್ಮದಾಗಬೇಕು. ಯಾರು ಶ್ರದ್ಧೆಯಿಂದ ಅಭ್ಯಾಸ ಮಾಡುತ್ತಾರೋ ಅವರ ವಿದ್ಯಾರ್ಥಿ ಜೀವನ ಖಂಡಿತವಾಗಿಯೂ ಸಫಲವಾಗುತ್ತದೆ ಎಂದು ನಿವೃತ್ತ ಶಿಕ್ಷಕ, ಉಡುಪಿ ಯಕ್ಷಗಾನ ಕಲಾರಂಗ ಉಡುಪಿಯ ಕಾರ್ಯದರ್ಶಿ ಮುರಲಿ ಕಡೇಕಾರ್ ಹೇಳಿದ್ದಾರೆ.
ಬೈಂದೂರು ಶಾಸಕ ಗುರುರಾಜ ಗಂಟಿಹೊಳೆ ಅವರು ಮಾತನಾಡಿ, ಜೀವನಕ್ಕೊಂದು ಸ್ಪಷ್ಟ ಹಾಗೂ ಉನ್ನತ ಗುರಿ ಅತ್ಯಗತ್ಯ. ನಮ್ಮ ಸಾಂಸ್ಕೃತಿಕ ಬೇರುಗಳು, ಆಚಾರ-ವಿಚಾರಗಳು ಮತ್ತು ಪರಂಪರೆಯನ್ನು ಅರ್ಥೈಸಿಕೊಂಡು ಬದುಕುವುದು ಪ್ರತಿಯೊಬ್ಬ ನಾಗರಿಕನ ಧರ್ಮ ಎಂದರು.ಸಂಸ್ಥೆಯ ಅಧ್ಯಕ್ಷ ರಮೇಶ್ ಶೆಟ್ಟಿ ಮಾತನಾಡಿ, ಒಳ್ಳೆಯ ಕೆಲಸ ಮತ್ತು ಸಾಧನೆಯನ್ನು ಈ ಸಮಾಜ ಎಂದಿಗೂ ಗುರುತಿಸುತ್ತದೆ ಎಂಬುದರ ಅರಿವು ವಿದ್ಯಾರ್ಥಿಗಳಿಗಾಗಬೇಕು ಎಂಬುದು ನಮ್ಮ ಉದ್ದೇಶ ಎಂದರು.ಸಂಸ್ಥೆಯ ಕಾರ್ಯದರ್ಶಿ ಪ್ರತಾಪ್ ಚಂದ್ರ ಶೆಟ್ಟಿ ಮಾತನಾಡಿ, ಶಿಕ್ಷಕರು ನೀಡುವ ಬುದ್ಧಿಮಾತುಗಳನ್ನು ಬದುಕಿನಲ್ಲಿ ಅಳವಡಿಸಿಕೊಂಡರೆ ಮಾತ್ರ ವಿದ್ಯಾರ್ಥಿಗಳ ಭವಿಷ್ಯ ಉಜ್ವಲವಾಗುತ್ತದೆ ಎಂದರು.ಸಂಸ್ಥೆಯ ಖಜಾಂಚಿ ಭರತ್ ಶೆಟ್ಟಿ ಮಾತನಾಡಿ, ನಿಮ್ಮ ಶಿಕ್ಷಣಕ್ಕಾಗಿ ಹೆತ್ತವರು ಪಡುತ್ತಿರುವ ಶ್ರಮ ಹಾಗೂ ಮಾಡುತ್ತಿರುವ ತ್ಯಾಗವನ್ನು ಎಂದಿಗೂ ಮರೆಯಬೇಡಿ ಎಂದರು.
ಶಾಲಾ-ಕಾಲೇಜಿನಲ್ಲಿ ಸುದೀರ್ಘ ಹಾಗೂ ಶ್ರೇಷ್ಠ ಸೇವೆ ಸಲ್ಲಿಸಿದ ವಿದ್ಯಾರಣ್ಯ ಆಂಗ್ಲಮಾಧ್ಯಮ ಶಾಲೆಯ ಶಿಕ್ಷಕಿ ಪ್ರೀತಿ ಚಂದ್ರಶೇಖರ ಹಾಗೂ ಸುಜ್ಞಾನ ಪಿಯು ಕಾಲೇಜಿನ ಉಪನ್ಯಾಸಕಿ ಚರಿಷ್ಮಾ ಅವರನ್ನು ಸಂಸ್ಥೆಯ ಪರವಾಗಿ ಗೌರವಿಸಲಾಯಿತು.ಸುಜ್ಞಾನ ನ್ಯಾಷನಲ್ ಪಿಯು ಕಾಲೇಜಿನ ಪ್ರಾಂಶುಪಾಲ ಪ್ರಕಾಶ್ ಆಚಾರ್ಯ, ವಿದ್ಯಾರಣ್ಯ ಗ್ಲೋಬಲ್ ಸ್ಕೂಲ್‌ನ ಪ್ರಾಂಶುಪಾಲ ಅನಿತಾ ಕುಮಾರಿ, ಮುಖ್ಯೋಪಾಧ್ಯಾಯ ಸ್ಪೂರ್ತಿ ಎ. ಮತ್ತಿತರರಿದ್ದರು.ಸುಜ್ಞಾನ ಪಿಯು ಕಾಲೇಜಿನ ಪ್ರಾಂಶುಪಾಲ ರಂಜನ್ ಬಿ. ಶೆಟ್ಟಿ ಸ್ವಾಗತಿಸಿದರು. ಸಂಸ್ಕೃತ ಉಪನ್ಯಾಸಕ ರಜತ್ ಭಟ್ ನಿರೂಪಿಸಿದರು. ವಿದ್ಯಾರಣ್ಯ ಆಂಗ್ಲಮಾಧ್ಯಮ ಶಾಲೆಯ ಮುಖ್ಯೋಪಾಧ್ಯಾಯ ಪ್ರದೀಪ್ ಕುಮಾರ್ ವಂದಿಸಿದರು.