-ರಾಜ್ಯ ಮಟ್ಟದ ಜೂಡೋ ಕ್ರೀಡಾ ಕೂಟದಲ್ಲಿ ನಗರಸಭೆ ಅಧ್ಯಕ್ಷೆ ಸುಮಿತಾ ಬಿ.ಎನ್ ಅಭಿಮತ
ಕನ್ನಡಪ್ರಭವಾರ್ತೆ ಚಿತ್ರದುರ್ಗ
ಪ್ರಸ್ತುತ ಸಮಾಜದಲ್ಲಿ ಹೆಣ್ಣು ಮಕ್ಕಳ ಆತ್ಮರಕ್ಷಣೆಗೆ ಜೂಡೋ ಕಲಿಕೆ ಸಹಕಾರಿ ಎಂದು ನಗರಸಭೆ ಅಧ್ಯಕ್ಷೆ ಸುಮಿತಾ ಬಿ.ಎನ್ ಅಭಿಮತ ವ್ಯಕ್ತಪಡಿಸಿದರು.ಶಾಲಾ ಶಿಕ್ಷಣ ಇಲಾಖೆ ಪದವಿ ಪೂರ್ವ ವಿಭಾಗ ಹಾಗೂ ನಮ್ಮ ಎಕ್ಸ್ಪರ್ಟ್ ಪಿಯು ಕಾಲೇಜು ವತಿಯಿಂದ ನಗರದ ಒನಕೆ ಓಬವ್ವ ಜಿಲ್ಲಾ ಕ್ರೀಡಾಂಗಣದಲ್ಲಿ ಆಯೋಜಿಸಲಾದ ರಾಜ್ಯ ಮಟ್ಟದ ಜೂಡೋ ಕ್ರೀಡಾಕೂಟಕ್ಕೆ ಚಾಲನೆ ನೀಡಿ ಮಾತನಾಡಿದ ಅವರು ಜೂಡೋ ಕ್ರೀಡೆ ಮೂಲತಃ ಆತ್ಮರಕ್ಷಣೆ ಕಲೆಯಾಗಿದೆ. ಇದು ಮೊದಲು ಜಪಾನ್ ದೇಶದಲ್ಲಿ ಆರಂಭವಾಯಿತು. ವಿಶೇಷವಾಗಿ ಮಹಿಳೆಯರ ಸ್ವಯಂ ರಕ್ಷಣೆಗೆ ಜೂಡೋ ತುಂಬಾ ಅನುಕೂಲವಾಗಲಿದೆ. ಪ್ರತಿಯೊಂದು ಶಾಲಾ ಕಾಲೇಜಿನಲ್ಲಿ ಈ ಕ್ರೀಡೆಯನ್ನು ಕಲಿಸಿದಲ್ಲಿ ಮಕ್ಕಳಿಗೆ ಸಹಕಾರಿ ಎಂದರು.
ಈ ಸಂದರ್ಭದಲ್ಲಿ ಪದವಿ ಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕ ಆರ್.ಪುಟ್ಟಸ್ವಾಮಿ, ಜೂಡೋ ಹಿರಿಯ ತರಬೇತುದಾರೆ ಡಾ.ಎಂ.ಎನ್.ತ್ರಿವೇಣಿ, ಪ್ರಾಂಶುಪಾಲರ ಸಂಘದ ಅಧ್ಯಕ್ಷ ಎಸ್.ದೇವೇಂದ್ರಪ್ಪ, ಕಾರ್ಯದರ್ಶಿ ಆರ್.ಮುಸ್ತಾಫ್, ಖಜಾಂಚಿ ಜೆ.ರಂಗಸ್ವಾಮಿ, ಜಿಲ್ಲಾ ಉಪನ್ಯಾಸಕರ ಸಂಘದ ಜಿಲ್ಲಾಧ್ಯಕ್ಷ ಬಿ.ಆರ್.ಮಲ್ಲೇಶ್, ಐಡಿಯಲ್ ಎಜುಕೇಷನ್ ಸೊಸೈಟಿ ಹಾಗೂ ನಮ್ಮ ಎಕ್ಸ್ಪರ್ಟ್ಸ್ ಪಿಯು ಕಾಲೇಜು ಪ್ರಾಂಶುಪಾಲ ಪಿ.ಅರುಣ್ ಕುಮಾರ್ ಸೇರಿದಂತೆ ವಿವಿಧ ಕಾಲೇಜುಗಳ ಪ್ರಾಂಶುಪಾಲರು ಉಪಸ್ಥಿತರಿದ್ದರು.
ಮಹಿಳೆಯರ ಮೊದಲ ನಾಲ್ಕು ಸುತ್ತಿನಲ್ಲಿ ವಿವಿಧ ವಿಭಾಗಗಳಲ್ಲಿ ವಿಜೇತರಾದ ಬಾಗಲಕೋಟೆ ಜಿಲ್ಲೆಯ ಸ್ವಾತಿ, ಚಿಕ್ಕೋಡಿಯ ಅನುರಾಧ ಹಾಗೂ ಬೆಂಗಳೂರು ದಕ್ಷಿಣ ವಿಭಾಗದ ವರಲಕ್ಷ್ಮಿ ಚಿನ್ನದ ಪದಕ ಪಡೆದು ಮಿಂಚಿದರು.
---------------
-------