ಕನ್ನಡಪ್ರಭ ವಾರ್ತೆ ನರಸಿಂಹರಾಜಪುರ
ಕರ್ನಾಟಕ ರಾಜ್ಯದಲ್ಲಿ ವಾಸ ಮಾಡುವ ಪ್ರತಿಯೊಬ್ಬರೂ ಕಡ್ಡಾಯವಾಗಿ ಕನ್ನಡ ಭಾಷೆ ಕಲಿಯಬೇಕು ಎಂದು ಮೆಣಸೂರು ಮೌಂಟ್ ಕಾರ್ಮೆಲ್ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲೆ ಸಿಸ್ಟರ್ ಶುಭ ತಿಳಿಸಿದರು.ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಆಶ್ರಯದಲ್ಲಿ ಶುಕ್ರವಾರ ಮೌಂಟ್ ಕಾರ್ಮೆಲ್ ಪದವಿಪೂರ್ವ ಕಾಲೇಜಿನಲ್ಲಿ ಏರ್ಪಡಿಸಿದ್ದ ಶ್ರಾವಣ ಸಾಹಿತ್ಯ ಸಂಭ್ರಮ, ಪ್ರತಿಭಾ ಪುರಸ್ಕಾರ ಹಾಗೂ ರಸ ಪ್ರಶ್ನೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಕರ್ನಾಟಕ ರಾಜ್ಯವು ಉತ್ತಮ ಸಂಸ್ಕೃತಿ ಇರುವ ರಾಜ್ಯವಾಗಿದೆ. ಕನ್ನಡ ನಾಡಿನಲ್ಲಿ ಹುಟ್ಟಿರುವುದಕ್ಕೆ ನಾವು ಹೆಮ್ಮೆ ಪಡಬೇಕಾಗಿದೆ.ಕನ್ನಡ ಭಾಷೆಯ ಉಳಿವಿಗಾಗಿ ಕ.ಸಾ.ಪ ಸದಾ ಹೋರಾಟ ಮಾಡುತ್ತಾ ಬಂದಿದೆ ಎಂದರು.ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಪೂರ್ಣೇಶ್ ಮಾತನಾಡಿ, ಕನ್ನಡ ಸಾಹಿತ್ಯ ಪರಿಷತ್ 115 ವರ್ಷದಿಂದ ಕನ್ನಡ ಭಾಷೆಯ ಉಳಿವಿಗಾಗಿ ಹೋರಾಟ ಮಾಡುತ್ತಿರುವ ಏಕೈಕ ಪ್ರಾತಿನಿಧಿಕ ಸಂಸ್ಥೆಯಾಗಿದೆ. ಮಾತನಾಡಿದ್ದನ್ನು ಸೃಷ್ಠವಾಗಿ ಬರೆಯುವ ಹಾಗೂ ಬರೆದಿರುವುದನ್ನು ಸೃಷ್ಠವಾಗಿ ಓದಬಲ್ಲ ಏಕೈಕ ಭಾಷೆ ಕನ್ನಡವಾಗಿದೆ. ನೆಲ,ಜಲ,ಭಾಷೆ, ಸಂಸ್ಕೃತಿಗೆ ದಕ್ಕೆ ಬಂದಾಗ ಹೋರಾಟದಲ್ಲಿ ಕ.ಸಾ.ಪ ಮುಂದೆ ನಿಲ್ಲುತ್ತದೆ.ಈಗಾಗಲೇ ಆಷಾಡ, ಶ್ರಾವಣ ಮಾಸದಲ್ಲಿ ಹಲವಾರು ವಿಶೇಷವಾದ ಕಾರ್ಯಕ್ರಮ ನಡೆಸಿದ್ದೇವೆ.ಮಕ್ಕಳ ಜ್ಞಾನ ಭಾಂಡಾರ ಹೆಚ್ಚಿಸಲು ಶಾಲಾ, ಕಾಲೇಜಿನಲ್ಲಿ ರಸಪ್ರಶ್ನೆ ಕಾರ್ಯಕ್ರಮ ಹಮ್ಮಿಕೊಂಡಿದ್ದೇವೆ ಎಂದರು.
ತಾಲೂಕು ಕ.ಸಾ.ಪ ಪ್ರಧಾನ ಕಾರ್ಯದರ್ಶಿ ನಂದಿನಿ ಆಲಂದೂರು ಮಾತನಾಡಿ, ಮಕ್ಕಳು ಸಾಹಿತ್ಯದ ಬಗ್ಗೆ ಆಸಕ್ತಿ ಬೆಳೆಸಿಕೊಂಡು ಪುಸ್ತಕಗಳನ್ನು ಓದಬೇಕು.ಕಠಿಣ ಪರಿಶ್ರಮದಿಂದ ಗುರಿ ಸಾಧಿಸಬಹುದು.ಕ.ಸಾ.ಪದಿಂದ ಈಗಾಗಲೇ ಹಲವಾರು ಶಾಲೆಗಳಲ್ಲಿ ರಸ ಪ್ರಶ್ನೆಕಾರ್ಯಕ್ರಮ, ಪ್ರತಿಭಾವಂತ ವಿದ್ಯಾರ್ಥಿಗಳನ್ನು ಗುರುತಿಸಿ ಕನ್ನಡದ ಕಣ್ಮಣಿ ಎಂಬ ಬಿರುದು ನೀಡಿದ್ದೇವೆ ಎಂದರು.ಹಿರಿಯ ಪತ್ರಕರ್ತ ಯಡಗೆರೆ ಮಂಜುನಾಥ್ ಮಾತನಾಡಿ, ಕನ್ನಡ ಸಾಹಿತ್ಯ ಪರಿಷತ್ ಹಾಗೂ ದಿನ ಪತ್ರಿಕೆಗಳು ಒಂದೇ ನಾಣ್ಯ ಎರಡು ಮುಖಗಳಿದ್ದಂತೆ.ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಕನ್ನಡ ಭಾಷೆಯ ಬೆಳವಣಿಗೆ ಬಗ್ಗೆ ವಿಭಿನ್ನ ಕಾರ್ಯಕ್ರಮ ಹಮ್ಮಿಕೊಳ್ಳುತ್ತಿದೆ.ಮಕ್ಕಳು ಪಠ್ಯ ಪುಸ್ತಕದ ಜೊತಗೆ ಕನ್ನಡ ದಿನಪತ್ರಿಕೆಗಳನ್ನು ಪ್ರತಿ ನಿತ್ಯ ಓದುವ ಅಭ್ಯಾಸ ಮಾಡಿಕೊಳ್ಳಬೇಕು.ದಿನಪತ್ರಿಕೆಗಳನ್ನು ಓದುವುದರಿಂದ ಕನ್ನಡ ಭಾಷಾ ಜ್ಞಾನ ಬೆಳೆಯಲಿದೆ. ಅಲ್ಲದೆ ಪ್ರಚಲಿತ ಸಂಗತಿಗಳು,ತಾಲೂಕು, ಜಿಲ್ಲಾ ಹಾಗೂ ರಾಜ್ಯದ ಸುದ್ದಿಗಳು ತಿಳಿಯಲಿದೆ ಎಂದರು.
ಅತಿಥಿಗಳಾಗಿ ಮೌಂಟ್ ಕಾರ್ಮೆಲ್ ಪದವಿಪೂರ್ವ ಕಾಲೇಜಿನ ಉಪನ್ಯಾಸಕ ಟಿ.ಮಂಜುನಾಥ್ ಇದ್ದರು. ಮೌಂಟ್ ಕಾರ್ಮೆಲ್ ಪದವಿಪೂರ್ವ ಕಾಲೇಜಿನ ದ್ವಿತೀಯ ಪಿ.ಯು.ಸಿ.ಯಲ್ಲಿ ಅತಿ ಹೆಚ್ಚು ಅಂಕ ಪಡೆದ ಸುಗಣ ಅವರಿಗೆ ಕನ್ನಡ ಕಣ್ಮಣಿ ಎಂಬ ಬಿರುದು ನೀಡಿ ಸನ್ಮಾನಿಸಲಾಯಿತು. ನಂತರ ತಾಲೂಕು ಕ.ಸಾ.ಪ ಅಧ್ಯಕ್ಷ ಪೂರ್ಣೇಶ್ ಮಕ್ಕಳಿಗೆ ರಸಪ್ರಶ್ನೆ ಕಾರ್ಯಕ್ರಮ ನಡೆಸಿಕೊಟ್ಟರು. ಗೆದ್ದ ತಂಡಗಳಿಗೆ ಪ್ರಥಮ, ದ್ವಿತೀಯ ಹಾಗೂ ತೃತೀಯ ಬಹುಮಾನ ನೀಡಲಾಯಿತು.