ಧಾರವಾಡ: ಸಂಗೀತ ಬಹಳ ಕಠಿಣ ವಿದ್ಯೆ, ಅದನ್ನು ಕರಗತ ಮಾಡಿಕೊಳ್ಳಲು ಶ್ರದ್ಧೆ ಮತ್ತು ಪರಿಶ್ರಮ ಅಗತ್ಯ ಎಂದು ಹಿರಿಯ ವಯೋಲಿನ್ ವಾದಕ ಪಂ. ಬಿ.ಎಸ್. ಮಠ ಹೇಳಿದರು.
ಬಿ.ಎಸ್. ಮಠ ಗುರು ಮುಖೇನ ಒದಗುವ ಶಿಕ್ಷಣ, ಭಾರತೀಯ ಪರಂಪರೆಯ ಬಹುಮುಖ್ಯವಾದ ಶಿಕ್ಷಣವಾಗಿದೆ. ಆದರೆ, ಬದಲಾದ ಸಂದರ್ಭದಲ್ಲಿ ಗುರು-ಶಿಷ್ಯ ಬಾಂಧವ್ಯ ತನ್ನ ಮಹತ್ವ ಕಳೆದುಕೊಳ್ಳುತ್ತಿರುವುದು ವಿಷಾಧನೀಯ ಎಂದರು.
ಸಂಗೀತ ಕ್ಷೇತ್ರದಲ್ಲಿ ಧಾರವಾಡಕ್ಕೊಂದು ಅಸ್ಮಿತೆ ಇದೆ. ಅನೇಕ ಸಂಗೀತಗಾರರು ತಮ್ಮ ಸಾಧನೆಯ ಮೂಲಕ ಈ ನೆಲಕ್ಕೊಂದು ಘನತೆ ತಂದುಕೊಟ್ಟಿದ್ದಾರೆ. ಅದನ್ನು ಉಳಿಸಿ, ಬೆಳೆಸಿ ಮುಂದುವರೆಸಿಕೊಂಡು ಹೋಗುವ ಬಹುದೊಡ್ಡ ಹೊಣೆಗಾರಿಕೆ ಯುವಪೀಳಿಗೆ ಮೇಲಿದೆ ಎಂದರು.ಹಿರಿಯ ತಬಲಾ ವಾದಕ ಪಂ. ರಘುನಾಥ ನಾಕೋಡ ಮಾತನಾಡಿ, ಇಂದಿನ ಯುವಕರಲ್ಲಿ ರಾತ್ರೋರಾತ್ರಿ ಪ್ರಸಿದ್ಧರಾಗುವ ತವಕ ಹೆಚ್ಚುತ್ತಿದೆ. ಪ್ರಸಿದ್ಧಿಯ ಬೆನ್ನುಬೀಳಬೇಡಿ, ಸಿದ್ದಿಯ ದಾರಿಯಲ್ಲಿ ಗಟ್ಟಿ ಹೆಜ್ಜೆಗಳನ್ನಿಟ್ಟರೆ, ಪ್ರಸಿದ್ದಿ ತಾನಾಗಿಯೇ ಬರುತ್ತದೆ ಎಂದರು.
ನಂತರ ಶಂಕರ ಕಬಾಡಿಯವರ ಶಿಷ್ಯ ವೃಂದದಿಂದ ಸ್ವರ ಝೇಂಕಾರ ವಯೋಲಿನ್ ನಾದ ನಮನ ಕಾರ್ಯಕ್ರಮದಲ್ಲಿ ಮಲ್ಲೇಶ ಹೂಗಾರ, ಭಾಗ್ಯಶ್ರೀ ಹೂಗಾರ, ರಘುನಂದನ, ಸಿಂಚನಾ ದಾನಗೇರಿ ವಿವಿಧ ರಾಗಗಳನ್ನು ಪ್ರಸ್ತುತ ಪಡಿಸಿದರು. ನಂತರ ಪಂ. ಶಂಕರ ಕಬಾಡಿ ಹಾಗೂ ಡಾ. ನಾರಾಯಣ ಹಿರೇಕೊಳಚಿ ವಯೋಲಿನ್ ವಾದನಕ್ಕೆ ಪಂ. ಸಾತಲಿಂಗಪ್ಪ ದೇಸಾಯಿ ಕಲ್ಲೂರ, ಡಾ. ರವಿಕಿರಣ ನಾಕೋಡ ತಬಲಾ ಸಾಥ್ ಸಂಗತ ನೀಡಿದರು.