ಸಿಂಪಲ್‌ ಟ್ಯಾಗ್‌ಲೈನ್‌ ಬಿಟ್ಟು ಅಭಿವೃದ್ಧಿ ಮಾಡುವವರಿಗೆ ಮತ ನೀಡಿ: ರಮೇಶ್‌ ಕಾಂಚನ್‌

KannadaprabhaNewsNetwork |  
Published : Apr 01, 2024, 12:45 AM IST
ರಮೇಶ್ 31 | Kannada Prabha

ಸಾರಾಂಶ

ಪ್ರಸ್ತುತ ಬಿಜೆಪಿ ಅಭ್ಯರ್ಥಿ ತನ್ನ ಸುದೀರ್ಘ ರಾಜಕೀಯ ದಾರಿಯಲ್ಲಿ ಹೇಳಿಕೊಳ್ಳುಗವಂತಹ ಯಾವುದೇ ಕೆಲಸಗಳನ್ನು ಮಾಡಿಲ್ಲ. ಕರಾವಳಿಗರಿಗೆ ಕುಚ್ಚಲಕ್ಕಿ ನೀಡುವುದಾಗಿ ಹೇಳಿ ಕಿವಿಯ ಮೇಲೆ ಹೂ ಇಟ್ಟಿದ್ದು ಬಿಟ್ಟರೆ ಇಲ್ಲಿಯ ತನಕ ಕುಚ್ಚಲಕ್ಕಿ ನೀಡಲು ಸಾಧ್ಯವಾಗಿಲ್ಲ ಎಂದು ರಮೇಶ್ ಕಾಂಚನ್ ಹೇಳಿದರು.

ಕನ್ನಡಪ್ರಭ ವಾರ್ತೆ ಉಡುಪಿ

ಸುಳ್ಳನ್ನೇ ಸತ್ಯವಾಗಿಸುವ ಬಿಜೆಪಿ ಅಭ್ಯರ್ಥಿ ಕೋಟ ಶ್ರೀನಿವಾಸ ಪೂಜಾರಿ ಅವರಿಗಿಂತ ನುಡಿದಂತೆ ನಡೆಯುವ ಕಾಂಗ್ರೆಸ್ ಅಭ್ಯರ್ಥಿ ಕೆ.ಜಯಪ್ರಕಾಶ್ ಹೆಗ್ಡೆ ಅವರಿಂದ ಜಿಲ್ಲೆಯ ಸರ್ವಾಂಗೀಣ ಅಭಿವೃದ್ಧಿ ಸಾಧ್ಯವಾಗಲಿದೆ ಎಂದು ಉಡುಪಿ ಬ್ಲಾಕ್ ಕಾಂಗ್ರೆಸ್ ಸಮಿತಿಯ ಅಧ್ಯಕ್ಷ ರಮೇಶ್ ಕಾಂಚನ್ ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಕಳೆದ 10 ವರ್ಷಗಳಲ್ಲಿ ಉಡುಪಿ-ಚಿಕ್ಕಮಂಗಳೂರು ಜನತೆ ದೆಹಲಿಯ ನಾಯಕರನ್ನು ನೋಡಿ ಮತ ಹಾಕಿರುವುದರ ಪರಿಣಾಮ ಉಭಯ ಜಿಲ್ಲೆಗಳು ಯಾವುದೇ ರೀತಿಯ ಅಭಿವೃದ್ಧಿಯನ್ನು ಕಾಣಲು ಸಾಧ್ಯವಾಗಿಲ್ಲ. ಮೀನುಗಾರರ ಸಮಸ್ಯೆ, ಅಡಿಕೆ ಬೆಳೆಗಾರರ ಸಮಸ್ಯೆ, ಮೂರ್ತೆದಾರರ ಸಮಸ್ಯೆ ಇಂತಹ ಹತ್ತು ಹಲವು ಸಮಸ್ಯೆಗಳಿಗೆ ಪರಿಹಾರವೇ ಸಿಗದೆ ಜನರು ನಲುಗುತ್ತಿದ್ದಾರೆ. ಉಡುಪಿ ಜಿಲ್ಲೆಯ ಇತಿಹಾಸದ ದೊಡ್ಡ ದುರಂತವಾದ ಸುವರ್ಣ ತ್ರಿಭುಜ ಬೋಟ್ ದುರಂತಕ್ಕೆ ಇಲ್ಲಿಯ ತನಕ ನಿಜವಾದ ಕಾರಣ ಎನು ಎನ್ನುವುದನ್ನು ಕಂಡು ಹುಡುಕುವಲ್ಲಿ ಹಿಂದಿನ ಸಂಸದೆ ಶೋಭಾ ಕರಂದ್ಲಾಜೆ ಅವರು ವಿಫಲರಾಗಿದ್ದು ಮೀನುಗಾರ ಸಮುದಾಯಕ್ಕೆ ಮಾಡಿದ ಬಹುದೊಡ್ಡ ಮೋಸವಾಗಿದೆ ಎಂದವರು ಆರೋಪಿಸಿದ್ದಾರೆ. ಪ್ರಸ್ತುತ ಬಿಜೆಪಿ ಅಭ್ಯರ್ಥಿ ತನ್ನ ಸುದೀರ್ಘ ರಾಜಕೀಯ ದಾರಿಯಲ್ಲಿ ಹೇಳಿಕೊಳ್ಳುಗವಂತಹ ಯಾವುದೇ ಕೆಲಸಗಳನ್ನು ಮಾಡಿಲ್ಲ. ಕರಾವಳಿಗರಿಗೆ ಕುಚ್ಚಲಕ್ಕಿ ನೀಡುವುದಾಗಿ ಹೇಳಿ ಕಿವಿಯ ಮೇಲೆ ಹೂ ಇಟ್ಟಿದ್ದು ಬಿಟ್ಟರೆ ಇಲ್ಲಿಯ ತನಕ ಕುಚ್ಚಲಕ್ಕಿ ನೀಡಲು ಸಾಧ್ಯವಾಗಿಲ್ಲ. ತಾನು ಬಿಲ್ಲವ ಸಮುದಾಯಕ್ಕೆ ಸೇರಿದ್ದರೂ ಆ ಸಮುದಾಯಕ್ಕೆ ಅನ್ಯಾಯವಾದಾಗಲೂ ಕಣ್ಣು ಮತ್ತು ಕಿವಿಯನ್ನು ಮುಚ್ಚಿಕೊಂಡಿದ್ದಾರೆ. ನಾರಾಯಣ ಗುರುಗಳ ವಿಚಾರವನ್ನು ಪಠ್ಯಪುಸ್ತಕದಿಂದ ಕೈಬಿಟ್ಟಾಗ, ಗಣರಾಜ್ಯೋತ್ಸವ ಪರೇಡ್‌ನಲ್ಲಿ ನಾರಾಯಣ ಗುರುಗಳ ಟ್ಯಾಬ್ಲೋ ನಿಷೇಧ ಮಾಡಿದಾಗ ಕೂಡ ಕೋಟ ಶ್ರೀನಿವಾಸ ಪೂಜಾರಿಯವರು ತುಟಿಕ್ ಪಿಟಿಕ್ ಎನ್ನದೆ ಮೌನವಾಗಿದ್ದರು. ಈಗ ತಾನು ಬಿಲ್ಲವ ಎಂದು ಹೇಳಿಕೊಂಡು ಸಿಂಪತಿ ಪಡೆಯಲು ಹೊರಟಿದ್ದಾರೆ ಎಂದು ಆರೋಪಿಸಿದರು. ಕಾಂಗ್ರೆಸ್ ಪಕ್ಷ ಈ ಬಾರಿ ಸಮರ್ಥ ಅಭ್ಯರ್ಥಿಯನ್ನು ಕಣಕ್ಕಿಳಿಸಿದ್ದು ರಾಜಕೀಯದಲ್ಲಿ ಅಪಾರ ಅನುಭವದೊಂದಿಗೆ ಸಜ್ಜನ ರಾಜಕಾರಣ ಮಾಡಿಕೊಂಡು ಬಂದವರು. ಉಡುಪಿ ಜಿಲ್ಲೆಯ ಉಗಮಕ್ಕೆ ಕಾರಣರಾಗಿದಲ್ಲದೆ ಮೀನುಗಾರಿಕಾ ಸಚಿವರಾಗಿ ಉತ್ತಮ ಯೋಜನೆಗಳನ್ನು ನೀಡಿದವರು ಜಯಪ್ರಕಾಶ್ ಹೆಗ್ಡೆ. ಕೇವಲ 2 ವರ್ಷಗಳ ಅವಧಿಗೆ ಸಂಸದರಾಗಿದ್ದರೂ ಅತೀ ಹೆಚ್ಚಿನ ಅಭಿವೃದ್ಧಿ ಹಾಗೂ ಜನರ ಸಮಸ್ಯೆಗಳಿಗೆ ಧ್ವನಿಯಾಗಿ ಕೆಲಸ ಮಾಡುವ ಮೂಲಕ ರಾಜಕೀಯ ಮುತ್ಸದ್ದಿತನ ತೋರಿಸಿದ್ದಾರೆ. ಇನ್ನೊಮ್ಮೆ ಅವರು ಸಂಸದರಾಗಿ ಆಯ್ಕೆಯಾದಲ್ಲಿ ಜಿಲ್ಲೆಯ ಸಮಸ್ಯೆಗಳನ್ನು ಖುದ್ದಾಗಿ ಮುಂದೆ ನಿಂತು ಪರಿಹಾರ ಕಂಡುಕೊಳ್ಳುವಲ್ಲಿ ಯಶಸ್ವಿಯಾಗಲಿದ್ದಾರೆ ಎನ್ನುವುದರಲ್ಲಿ ಇನ್ನೊಂದು ಮಾತಿಲ್ಲ ಎಂದರು. ಕೇವಲ ಸಿಂಪಲ್ ಎಂಬ ಟ್ಯಾಗ್ ಲೈನ್ ಬಿಟ್ಟು ನೈಜ ಅಭಿವೃದ್ದಿ ಮಾಡುವ ವ್ಯಕ್ತಿಗಳ ಬಗ್ಗೆ ಎರಡು ಜಿಲ್ಲೆಗಳ ಜನರು ಒಲವು ತೋರಬೇಕಾದ ಅಗತ್ಯವಿದೆ ಎಂದು ಉಡುಪಿ ಬ್ಲಾಕ್ ಕಾಂಗ್ರೆಸ್ ಸಮಿತಿಯ ಅಧ್ಯಕ್ಷ ರಮೇಶ್ ಕಾಂಚನ್ ಪತ್ರಿಕಾ ಪ್ರಕಟಣೆಯಲ್ಲಿ ಅಭಿಪ್ರಾಯಪಟ್ಟಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬಿಪಿಎಲ್‌ ಮಾನದಂಡ ಬದಲಿಗೆ ಮುಂದಾದ ರಾಜ್ಯ
ಸರ್ಕಾರಿ ಶಾಲೆಗೆ ಶೀಘ್ರ 11000 ಶಿಕ್ಷಕರ ನೇಮಕ : ಮಧು