ವೈಮನಸ್ಸು ಬಿಟ್ಟು ಕೆಲಸ ಮಾಡಿ: ಮುಖಂಡರಿಗೆ ಎಚ್‌ಡಿಕೆ ಸೂಚನೆ

KannadaprabhaNewsNetwork |  
Published : Nov 01, 2025, 01:30 AM IST
೩೧ಕೆಎಂಎನ್‌ಡಿ-೩ಬಿಡದಿ ತೋಟದ ಮನೆಯಲ್ಲಿ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಅವರು ಜಿಲ್ಲಾ ಮಟ್ಟದ ಜೆಡಿಎಸ್ ನಾಯಕರೊಂದಿಗೆ ಪಕ್ಷ ಸಂಘಟನೆ ಕುರಿತಂತೆ ಮಹತ್ವದ ಚರ್ಚೆ ನಡೆಸಿದರು. | Kannada Prabha

ಸಾರಾಂಶ

ಕಾಂಗ್ರೆಸ್ ಪಕ್ಷ ನಾಯಕತ್ವದ ಕಚ್ಚಾಟದೊಳಗೆ ಮುಳುಗಿದೆ. ಕಾಂಗ್ರೆಸ್ ವಿರೋಧಿ ಅಲೆ ರಾಜ್ಯದೊಳಗೆ ಸೃಷ್ಟಿಯಾಗಿದೆ. ಅದನ್ನು ಸರಿಯಾಗಿ ಬಳಸಿಕೊಂಡು ಪಕ್ಷಕ್ಕೆ ಬಲ ತುಂಬುವುದಕ್ಕೆ ಎಲ್ಲರೂ ಪ್ರಯತ್ನಿಸಬೇಕು. ಸರ್ಕಾರದ ಲೋಪಗಳನ್ನು ಜನರಿಗೆ ಅರಿವು ಮೂಡಿಸುವ ನಿಟ್ಟಿನಲ್ಲಿ ಹೋರಾಟಗಳನ್ನು ರೂಪಿಸಬೇಕು. ಜೆಡಿಎಸ್‌ನತ್ತ ಜನರು ಆಕರ್ಷಿತರಾಗವಂತೆ ಮಾಡುವುದು ಅವಶ್ಯವಾಗಿದೆ.

ಕನ್ನಡಪ್ರಭ ವಾರ್ತೆ ಮಂಡ್ಯ

ಡಿಸಿಸಿ ಬ್ಯಾಂಕ್ ಆಡಳಿತ ಮಂಡಳಿ ಚುನಾವಣೆಯಲ್ಲಿ ಜೆಡಿಎಸ್ ದುರ್ಬಲ ಪ್ರದರ್ಶನದ ಬೆನ್ನಲ್ಲೇ ಎಚ್ಚೆತ್ತಿರುವ ಕೇಂದ್ರ ಸಚಿವ ಹಾಗೂ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಅವರು ಪಕ್ಷದ ಜಿಲ್ಲಾ ನಾಯಕರೊಂದಿಗೆ ಸಭೆ ನಡೆಸಿ ವೈಮನಸ್ಸು, ಭಿನ್ನಾಭಿಪ್ರಾಯವನ್ನು ಮರೆತು ಪಕ್ಷ ಸಂಘಟನೆ, ಹೋರಾಟದಲ್ಲಿ ಅವಿರತವಾಗಿ ತೊಡಗುವಂತೆ ಕಟ್ಟುನಿಟ್ಟಿನ ಸೂಚನೆ ನೀಡಿದರು.

ಬಿಡದಿಯ ತಮ್ಮ ತೋಟದಲ್ಲಿ ಶುಕ್ರವಾರ ಎಚ್.ಡಿ.ಕುಮಾರಸ್ವಾಮಿ ಕರೆದಿದ್ದ ಸಭೆಯಲ್ಲಿ ಯುವ ಜನತಾದಳ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ, ಮಾಜಿ ಮಂತ್ರಿಗಳಾದ ಡಿ.ಸಿ.ತಮ್ಮಣ್ಣ, ಸಿ.ಎಸ್. ಪುಟ್ಟರಾಜು, ಮಾಜಿ ಶಾಸಕರಾದ ರವೀಂದ್ರ ಶ್ರೀಕಂಠಯ್ಯ, ಕೆ.ಸುರೇಶ್ ಗೌಡ, ಡಾ.ಕೆ.ಅನ್ನದಾನಿ, ಶಾಸಕ ಎಚ್.ಟಿ.ಮಂಜು, ಜಿಲ್ಲಾಧ್ಯಕ್ಷ ಡಿ.ರಮೇಶ್, ಮನ್‌ಮುಲ್ ಮಾಜಿ ಅಧ್ಯಕ್ಷ ಬಿ.ಆರ್.ರಾಮಚಂದ್ರ ಪಾಲ್ಗೊಂಡಿದ್ದರು.

ಪಕ್ಷಕ್ಕೆ ಹಾನಿಯಾಗುವಂತೆ ನಡೆದುಕೊಳ್ಳಬೇಡಿ:

ಸಣ್ಣಪುಟ್ಟ ವೈಮನಸ್ಸು ಇದ್ದರೆ ಮೊದಲು ಬಿಡಿ. ಅದರಿಂದ ಪಕ್ಷದ ಬೆಳವಣಿಗೆಗೆ ಧಕ್ಕೆ ಆಗಲಿದೆ. ಯಾರೂ ಪಕ್ಷಕ್ಕೆ ಹಾನಿಯಾಗುವ ರೀತಿ ನಡೆದುಕೊಳ್ಳಬಾರದು. ಏನೇ ಸಮಸ್ಯೆ ಇದ್ದರೂ ಸೌಹಾರ್ದಯುತವಾಗಿ ಸಭೆ ನಡೆಸಿ ಬಗೆಹರಿಸಿಕೊಳ್ಳಿ. ಪಕ್ಷ ಸಂಘಟನೆ ಹಾಗೂ ಸಾಂಸ್ಥಿಕ ನೇಮಕಗಳಲ್ಲಿ ಗುರುತರ ಬದಲಾವಣೆಗಳು ಆಗಲಿವೆ. ಮುಂದಿನ ದಿನಗಳಲ್ಲಿ ಪಕ್ಷದ ವರ್ಚಸ್ಸು, ಬೆಳವಣಿಗೆ ದೃಷ್ಟಿಯಿಂದ ಕೆಲಸ ಮಾಡಬೇಕು. ಕಾಂಗ್ರೆಸ್ ಸರ್ಕಾರದಲ್ಲಿ ಎಲ್ಲವೂ ಸರಿಯಿಲ್ಲ. ಆಂತರಿಕ ಕಚ್ಚಾಟ, ಆಡಳಿತ ವಿರೋಧಿ ಅಲೆ ಸರ್ಕಾರವನ್ನು ಬಾಧಿಸುತ್ತಿದೆ. ಇಂತಹ ಸಮಯದಲ್ಲಿ ನೀವೆಲ್ಲರೂ ಎಚ್ಚರಿಕೆಯಿಂದ ಕೆಲಸ ಮಾಡಬೇಕು ಎಂದು ಖಂಡಾತುಂಡವಾಗಿ ಹೇಳಿದರು.

ನಿಮ್ಮೆಲ್ಲರ ಜವಾಬ್ದಾರಿ ಹೆಚ್ಚಿದೆ:

ಪಕ್ಷವನ್ನು ಯಾರೂ ಲಘುವಾಗಿ ತೆಗೆದುಕೊಳ್ಳಬೇಡಿ. ಪಕ್ಷವಿದ್ದರಷ್ಟೇ ನಾವು ಎಂಬುದನ್ನು ಮರೆಯಬಾರದು. ಸಂಘಟನೆಯಲ್ಲಿ ಬದ್ಧತೆಯಿಂದ ಗಂಭೀರವಾಗಿ ತೊಡಗಿಸಿಕೊಳ್ಳಿ. ಜನಪರ ಕಾರ್ಯಕ್ರಮಗಳನ್ನು ರೂಪಿಸಿ. ರಾಜ್ಯ ಸರ್ಕಾರದ ದುರಾಡಳಿತದಿಂದ ಜನರು ರೋಸಿ ಹೋಗಿದ್ದಾರೆ. ಜಿಲ್ಲೆಯ ರೈತರು ಇನ್ನಿಲ್ಲದ ಸಂಕಷ್ಟದಲ್ಲಿದ್ದಾರೆ. ಮುಖ್ಯವಾಗಿ ಕಬ್ಬು ಬೆಳೆಗಾರರು ಸಕ್ಕರೆ ಕಾರ್ಖಾನೆಗಳಲ್ಲಿ ನಿಗದಿತ ಪ್ರಮಾಣದಲ್ಲಿ ಕಬ್ಬು ಅರೆಯದ ಕಾರಣ ಸಮಸ್ಯೆಗೆ ಸಿಲುಕಿದ್ದಾರೆ. ಇಂತಹ ಸನ್ನಿವೇಶದಲ್ಲಿ ಜಿಲ್ಲೆಯೊಳಗೆ ನಿಮ್ಮೆಲ್ಲರ ಜವಾಬ್ದಾರಿ ಹೆಚ್ಚಿದೆ. ಸದಾ ಜನರ ಜೊತೆಯಾಗಿ ನಿಂತು ಕೆಲಸ ಮಾಡುವಂತೆ ಸೂಚಿಸಿದರು.

ಡಿಸಿಸಿ ಬ್ಯಾಂಕ್ ಚುನಾವಣೆ ಹಿನ್ನಡೆಗೆ ಅತೃಪ್ತಿ:

ಜಿಲ್ಲೆಯ ರಾಜಕೀಯ ಸ್ಥಿತಿಗತಿಗಳ ಬಗ್ಗೆ ಮುಖಂಡರ ಜತೆ ಕೂಲಂಕಷವಾಗಿ ಚರ್ಚೆ ನಡೆಸಿದ ಸಚಿವರು, ಡಿಸಿಸಿ ಬ್ಯಾಂಕ್ ಚುನಾವಣೆಯ ಬಗ್ಗೆ ಪ್ರಸ್ತಾಪಿಸಿ, ಪಕ್ಷದ ಹಿನ್ನಡೆಯ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು. ಇಲ್ಲಿಯವರೆಗೂ ನಡೆದದ್ದು ನಡೆದುಹೋಗಿದೆ. ಇನ್ನು ಮುಂದೆ ಹಾಗಾಗುವುದು ಬೇಡ. ಪಕ್ಷದ ಸಂಘಟನೆ ವಿಚಾರವಾಗಿ ಯಾರೂ ಆಲಕ್ಷ್ಯ ಮಾಡಬಾರದು. ಕಳೆದ ಲೋಕಸಭೆ ಚುನಾವಣೆಯಲ್ಲಿ ದೊಡ್ಡ ಮಟ್ಟದ ಬಹುಮತದಲ್ಲಿ ಜಿಲ್ಲೆಯ ಜನತೆ ನಮ್ಮನ್ನು ಆಶೀರ್ವಾದ ಮಾಡಿದ್ದಾರೆ. ಅಧಿಕಾರವಿರಲಿ, ಇಲ್ಲದಿರಲಿ. ಜನರ ಜತೆ ನೀವು ಸದಾ ಇರಬೇಕು. ಅವರ ನಿರೀಕ್ಷೆಯನ್ನು ಹುಸಿ ಮಾಡಬಾರದು ಎಂದು ಸ್ಪಷ್ಟ ಮಾತುಗಳಲ್ಲಿ ಹೇಳಿದರು.

ಪ್ರತಿ ಮನೆ, ಗ್ರಾಮದಲ್ಲೂ ಪಕ್ಷ ಇರಬೇಕು:

ಈಗಾಗಲೇ ಮಂಡ್ಯ ಜಿಲ್ಲೆಯಲ್ಲಿ ನಿಖಿಲ್ ಕುಮಾರಸ್ವಾಮಿ ಅವರ ಸಂಘಟನಾ ಪ್ರವಾಸ ಮುಗಿದಿದೆ. ಅದಕ್ಕೆ ಉತ್ತಮ ಸ್ಪಂದನೆ ಸಿಕ್ಕಿದೆ. ಆನಂತರ ನೀವು ಹೆಚ್ಚಿನ ಪ್ರಮಾಣದಲ್ಲಿ ಜಿಲ್ಲೆಯೊಳಗೆ ಸದಸ್ಯತ್ವ ನೋಂದಣಿ ಮಾಡಿಸಬೇಕು. ಗ್ರಾಮ ಗ್ರಾಮದಲ್ಲಿಯೂ, ಮನೆ ಮನೆಯಲ್ಲಿಯೂ ಪಕ್ಷದ ಕಾರ್ಯಕರ್ತರು ಇರಬೇಕು ಎಂದು ಕುಮಾರಸ್ವಾಮಿ ಅವರು ಒತ್ತಿ ಹೇಳಿದರು.

ಕಳೆದ ವಿಧಾನಸಭೆ ಚುನಾವಣೆಯಲ್ಲಿ ಜಿಲ್ಲೆಯಲ್ಲಿ ನಮಗೆ ಉತ್ತಮ ಫಲಿತಾಂಶ ಬರಲಿಲ್ಲ. ಆದರೂ ನಾವು ಜನರ ಜತೆಯೇ ಇದ್ದೆವು. ಪರಿಣಾಮವಾಗಿ ಲೋಕಸಭೆ ಚುನಾವಣೆಯಲ್ಲಿ ಜನ ನಮ್ಮ ಕೈ ಹಿಡಿದರು. ಆ ಜನರ ಆಶೀರ್ವಾದದಿಂದ ನಾನು ಸಂಸತ್ ಸದಸ್ಯನಾಗಿ ಆಯ್ಕೆಯಾಗಿ ಕೇಂದ್ರದಲ್ಲಿ ಮಂತ್ರಿಯೂ ಆಗಿದ್ದೇನೆ. ಜಿಲ್ಲೆಯ ಜನರ ಜತೆ ನನಗೆ ರಾಜಕಾರಣಕ್ಕೂ ಮೀರಿದ ಭಾವನಾತ್ಮಕ ಸಂಬಂಧವಿದೆ. ಅದಕ್ಕೆ ಚ್ಯುತಿ ಬಾರದಂತೆ ನೀವು ನಡೆದುಕೊಳ್ಳಬೇಕು. ಆ ಜನರ ಋಣ ತೀರಿಸುವ ಕೆಲಸವನ್ನು ನಾನು ಮಾಡಿಯೇ ಮಾಡುತ್ತೇನೆ. ಹೀಗಾಗಿ ನೀವೆಲ್ಲರೂ ಒಗ್ಗಟ್ಟಾಗಿ, ಪರಸ್ಪರ ಸಹಮತದಿಂದ ಪಕ್ಷದ ಕೆಲಸ ಮಾಡಬೇಕು ಎಂದು ಸಚಿವರು ತಾಕೀತು ಮಾಡಿದರು.

ಪಕ್ಷ ಮತ್ತೆ ಅಧಿಕಾರಕ್ಕೆ ಬರುವ ವಿಶ್ವಾಸ:

ಕಾಂಗ್ರೆಸ್ ಪಕ್ಷ ನಾಯಕತ್ವದ ಕಚ್ಚಾಟದೊಳಗೆ ಮುಳುಗಿದೆ. ಕಾಂಗ್ರೆಸ್ ವಿರೋಧಿ ಅಲೆ ರಾಜ್ಯದೊಳಗೆ ಸೃಷ್ಟಿಯಾಗಿದೆ. ಅದನ್ನು ಸರಿಯಾಗಿ ಬಳಸಿಕೊಂಡು ಪಕ್ಷಕ್ಕೆ ಬಲ ತುಂಬುವುದಕ್ಕೆ ಎಲ್ಲರೂ ಪ್ರಯತ್ನಿಸಬೇಕು. ಸರ್ಕಾರದ ಲೋಪಗಳನ್ನು ಜನರಿಗೆ ಅರಿವು ಮೂಡಿಸುವ ನಿಟ್ಟಿನಲ್ಲಿ ಹೋರಾಟಗಳನ್ನು ರೂಪಿಸಬೇಕು. ಜೆಡಿಎಸ್‌ನತ್ತ ಜನರು ಆಕರ್ಷಿತರಾಗವಂತೆ ಮಾಡುವುದು ಅವಶ್ಯವಾಗಿದೆ. ಮುಂದಿನ ಚುನಾವಣೆಯಲ್ಲಿ ಜೆಡಿಎಸ್ ಪಕ್ಷವನ್ನು ಅಧಿಕಾರಕ್ಕೆ ತರುವುದಕ್ಕೆ ಈಗಿನಿಂದಲೇ ಎಲ್ಲರೂ ಸಂಘಟಿತರಾಗಿ ಒಗ್ಗಟ್ಟನ್ನು ಪ್ರದರ್ಶಿಸಬೇಕು. ಮುಖಂಡರು- ಕಾರ್ಯಕರ್ತರಲ್ಲಿ ಹೊಸ ಉತ್ಸಾಹ, ಹುಮ್ಮಸ್ಸು ತುಂಬುವುದರೊಂದಿಗೆ ಪಕ್ಷವನ್ನು ಬಲವರ್ಧನೆಗೊಳಿಸುವಂತೆ ತಾಕೀತು ಮಾಡಿದರು.

PREV

Recommended Stories

ಇಂದಿರಾರ ಆದರ್ಶವನ್ನು ಎಲ್ಲರೂ ಪಾಲಿಸಬೇಕು : ಸಿದ್ದರಾಮಯ್ಯ
ಕುಡಚಿ ಶಾಸಕ ಪುತ್ರಗೆ ಡಿಕೆಶಿಯಿಂದ ‘ಶಿವಕುಮಾರ್‌’ ಎಂದು ನಾಮಕರಣ!