- ದೂಡಾ ಅಧ್ಯಕ್ಷರಾಗಿದ್ದಾಗ ಕುಟುಂಬ, ಸಂಬಂಧಿಗಳ ಹೆಸರಿಗೆ ನಿವೇಶನ ಪಡೆದು ತಮ್ಮ ಹೆಸರಿಗೆ ದಾಖಲೆ: ದಿನೇಶ ಶೆಟ್ಟಿ ವಾಗ್ದಾಳಿ
- - -ಕನ್ನಡಪ್ರಭ ವಾರ್ತೆ ದಾವಣಗೆರೆ
ಮಾಜಿ ಸಂಸದ ಜಿ.ಎಂ.ಸಿದ್ದೇಶ್ವರ ಶಿಷ್ಯಂದಿರು, ಗಾರ್ಡ್‌ಗಳಾದ ಯಶವಂತ ರಾವ್ ಜಾಧವ್ ಹಾಗೂ ರಾಜನಹಳ್ಳಿ ಶಿವಕುಮಾರ ದೂಡಾ ಅಧ್ಯಕ್ಷರಾಗಿದ್ದ ವೇಳೆ ತಮ್ಮ ಕುಟುಂಬ ಹಾಗೂ ಸಂಬಂಧಿಗಳ ಹೆಸರಿನಲ್ಲಿ ಮಾಡಿಕೊಂಡ ನಿವೇಶನಗಳ ದಾಖಲೆಗಳನ್ನು ಇನ್ನೊಂದು ವಾರದಲ್ಲೇ ಬಿಡುಗಡೆ ಮಾಡುವುದಾಗಿ ದೂಡಾ ಅಧ್ಯಕ್ಷ ದಿನೇಶ ಕೆ. ಶೆಟ್ಟಿ ಹೇಳಿದರು.ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಚೋರ ಗುರು, ಚಾಂಡಾಲ ಶಿಷ್ಯಂದಿರಂತೆ ದಾವಣಗೆರೆ ಜಿಲ್ಲೆಗೆ ಇಂತಹವರು ಒಕ್ಕರಿಸಿಕೊಂಡಿದ್ದಾರೆ. ಅವರ ಹೆಸರನ್ನು ನಾನು ಹೇಳುವುದಿಲ್ಲ. ಆದರೆ, ದೂಡಾ ಅಧ್ಯಕ್ಷರಾಗಿದ್ದ ವೇಳೆ ಈ ಇಬ್ಬರೂ ಪ್ರಾಧಿಕಾರದಿಂದ ತಮ್ಮ ಕುಟುಂಬ, ಸಂಬಂಧಿಗಳ ಹೆಸರಿಗೆ ಹೇಗೆಲ್ಲಾ ನಿವೇಶನ ಪಡೆದುಕೊಂಡು, ನಂತರ ತಮ್ಮ ಹೆಸರಿಗೆ ಮಾಡಿಕೊಂಡಿದ್ದಾರೆಂಬ ದಾಖಲೆ ಬಯಲಿಗಿಡುತ್ತೇನೆ ಎಂದರು.
ಬಡವರು, ಪರಿಶಿಷ್ಟರು, ಹಿಂದುಳಿದ ಯುವಕರಿಗೆ ಪ್ರಚೋದನೆ ನೀಡಿ, ಅಂತಹವರ ಜೀವನವನ್ನೇ ಹಾಳು ಮಾಡುವ ಕೆಲಸ ಇಂತಹವರು ಮಾಡುತ್ತಿದ್ದಾರೆ. 90ರ ದಶಕದಲ್ಲಿ ಶ್ರೀರಾಮ ಮಂದಿರ ಗಲಭೆಯಲ್ಲಿ 8 ಜನ ಪ್ರಾಣತ್ಯಾಗ ಮಾಡಿದ್ದರು. ಅಂತಹ ಹುತಾತ್ಮರ ಕುಟುಂಬಕ್ಕೆ ಬಿಜೆಪಿ ಆಳ್ವಿಕೆಯಲ್ಲಿ ಆಶ್ರಯ ಮನೆ, ನಗರಸಭೆ, ದೂಡಾ ಆಡಳಿತದಲ್ಲಿದ್ದಾಗ ಯಾಕೆ ಯಶವಂತ ರಾವ್, ರಾಜನಹಳ್ಳಿ ಶಿವಕುಮಾರ ಮನೆ ಅಥವಾ ನಿವೇಶನ ಕೊಡಲಿಲ್ಲ ಎಂದು ಪ್ರಶ್ನಿಸಿದರು.ಹುತಾತ್ಮರಾಗಿ 32 ವರ್ಷ ನಂತರ 8 ಜನರ ಭಾವಚಿತ್ರಕ್ಕೆ ಹಾರ ಹಾಕುವುದು, ಮೃತರ ಕುಟುಂಬದವರಿಗೆ ಸನ್ಮಾನಿಸುವ ಕೆಲಸ ಈಗ ಮಾಡುತ್ತಿದ್ದೀರಾ? ಇನ್ನಾದರೂ ಸರ್ಕಾರದ ದುಡ್ಡು ಕೊಳ್ಳೆ ಹೊಡೆದ ನೀವು ನಮ್ಮ ನಿಮ್ಮ ಗುರು ಜಿ.ಎಂ.ಸಿದ್ದೇಶ್ವರ ಹುತಾತ್ಮರ ಕುಟುಂಬಕ್ಕೆ ನೆರವಾಗಿ, ನೀವು ಮಾಡಿರುವ ಪಾಪ ತೊಳೆದುಕೊಳ್ಳಿ. 90ರ ದಶಕದಲ್ಲಿ ಕೋಮುಗಲಭೆಯಾದ ಸಾಮರಸ್ಯ ಮೂಡಿಸುವ ಜೊತೆಗೆ 1 ತಿಂಗಳ ಕಾಲ ಶಾಮನೂರು ಶಿವಶಂಕರಪ್ಪ, ಎಸ್.ಎಸ್. ಮಲ್ಲಿಕಾರ್ಜುನ ಎಲ್ಲ ಕುಟುಂಬಕ್ಕೂ ದಿನಸಿ ನೀಡಿದ್ದರು. ನೀವು ಏನು ಕೊಟ್ಟಿದ್ದಿರಿ ಎಂದು ವ್ಯಂಗ್ಯವಾಡಿದರು.
ಶ್ರೀರಾಮ ಮಂದಿರಕ್ಕೆ ಬೆಳ್ಳಿ ಇಟ್ಟಿಗೆ ನೀಡುವ ಬದಲು ಹುತಾತ್ಮರಾದ 8 ಜನರ ಕುಟುಂಬಕ್ಕೆ ತಲಾ 2 ಕೆ.ಜಿ. ಬೆಳ್ಳಿ ಅಥವಾ ಬಂಗಾರವನ್ನೇ ನೀಡಬಹುದಿತ್ತು. ಬೇಡ ಅಂದರೂ ಅಲ್ಲಿಗೆ ಕೊಡುವ ಅಗತ್ಯ ಏನಿತ್ತು? 32 ವರ್ಷ ಕಾಲ ಬೆಳ್ಳಿ, ಚಿನ್ನ ಸಂಗ್ರಹಿಸಿದ್ದ ಯಶವಂತ ರಾವ್, ರಾಜನಹಳ್ಳಿ ಶಿವಕುಮಾರ ಎಷ್ಟು ದುಡ್ಡು ಮಾಡಿದ್ದಾರೆಂಬ ಬಗ್ಗೆ ಮೊದಲು ಲೆಕ್ಕಪತ್ರ ನೀಡಲಿ. ಯಶವಂತ ರಾವ್, ರಾಜನಹಳ್ಳಿ ಶಿವಕುಮಾರ ಹುತಾತ್ಮರ ಮನೆಗೆ ಹೋಗಿ ಹಾರ, ಶಾಲು ಹಾಕುವ ಕೆಲಸ ಮಾಡುತ್ತಿದ್ದಾರೆ. ಅಷ್ಟೇ ಅಲ್ಲ, ವಿರಕ್ತ ಮಠದ ಶ್ರೀ ಬಸವಪ್ರಭು ಸ್ವಾಮೀಜಿಗೂ ಅಯೋಧ್ಯೆಗೆ ಕರೆದೊಯ್ದು, ಬೆಳ್ಳಿ ಇಟ್ಟಿಗೆ ಮೇಲೆ 8 ಜನ ಹುತಾತ್ಮರ ಹೆಸರು ಬರೆಸಿಕೊಟ್ಟಿದ್ದಾರೆ. ಅದೇ ಇಟ್ಟಿಗೆಯಲ್ಲಿ ತಲಾ 2 ಕೆಜಿ ಹುತಾತ್ಮರ ಕುಟುಂಬಕ್ಕೆ ನೀಡಿದ್ದರೆ ಸಹಾಯ ಮಾಡಿದಂತಾಗುತ್ತಿತ್ತು ಎಂದು ಚಾಟಿ ಬೀಸಿದರು.ಈ ಸಂದರ್ಭ ದೂಡಾ ಸದಸ್ಯರಾದ ವಾಣಿ ನ್ಯಾಮತಿ ಬಕ್ಕೇಶ, ಮಂಜುನಾಥ, ಹರಿಹರದ ಜಬ್ಬಾರ್, ದೂಡಾ ಮಾಜಿ ಅಧ್ಯಕ್ಷ ಅಯೂಬ್ ಪೈಲ್ವಾನ್, ಪಾಲಿಕೆ ಮಾಜಿ ಸದಸ್ಯ ಕೆ.ಜಿ.ಶಿವಕುಮಾರ, ಯುವರಾಜ ಇತರರು ಇದ್ದರು.
- - -(ಬಾಕ್ಸ್) * ಶಾಮನೂರು ಕುಟುಂಬ ಸೇವೆಗೆ ನಾನು ಸದಾ ಸಿದ್ಧ ಹರಿಹರ ಶಾಸಕ ಬಿ.ಪಿ.ಹರೀಶಗೆ ನಾನು ಹುಚ್ಚುನಾಯಿ ಕಡಿದಂತೆ ವರ್ತಿಸುತ್ತಿದ್ದಾರೆಂದು ಹೇಳಿದ್ದೇನೆ ಹೊರತು, ಹುಚ್ಚುನಾಯಿ ಕಡಿದಿದೆ ಅಂದಿಲ್ಲ. ಶಾಮನೂರು ಶಿವಶಂಕರಪ್ಪನವರ ಕುಟುಂಬದ ಸೇವೆ ಮಾಡಲು ನನಗೆ ಯಾವುದೇ ಹಿಂಜರಿಕೆ ಇಲ್ಲ. ದಾನ, ಧರ್ಮ, ಸಾಮಾಜಿಕ, ಶೈಕ್ಷಣಿಕ, ಔದ್ಯೋಗಿಕ ಹೀಗೆ ಪ್ರತಿಯೊಂದು ಕ್ಷೇತ್ರಕ್ಕೂ ಶಾಮನೂರು ಕುಟುಂಬದ ಕೊಡುಗೆ ಇದೆ. ಈ ಹಿಂದೆಯೂ ಸೇವೆ ಮಾಡಿದ್ದೇನೆ, ಇಂದು ಮಾಡುತ್ತಿದ್ದೇನೆ. ಮುಂದೆಯೂ ಮಾಡುತ್ತೇನೆ. ನಾನೊಬ್ಬ ಕ್ರೀಡಾಪಟು, ನಮ್ಮ ಸುಮಾರು 40ಕ್ಕೂ ಹೆಚ್ಚು ಕ್ರೀಡಾಪಟುಗಳಿಗೆ ಶಾಮನೂರು ಕುಟುಂಬ ಉದ್ಯೋಗ ನೀಡಿ, ಬದುಕು ಕಟ್ಟಿಕೊಟ್ಟಿದೆ ಎಂದು ದಿನೇಶ ಶೆಟ್ಟಿ ತಿಳಿಸಿದರು.
- - --31ಕೆಡಿವಿಜಿ2, 3.ಜೆಪಿಜಿ: ದಾವಣಗೆರೆಯಲ್ಲಿ ದೂಡಾ ಅಧ್ಯಕ್ಷ ದಿನೇಶ ಕೆ. ಶೆಟ್ಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.