ಕಾಂಗ್ರೆಸ್‌ ತೊರೆದು ಗೆದ್ದು ತೋರಿಸಿ: ಪ್ರಿಯಾಂಕ್‌ಗೆ ಎಚ್‌ಡಿಕೆ ಚಾಲೆಂಜ್‌

KannadaprabhaNewsNetwork |  
Published : Nov 08, 2026, 01:45 AM IST
ಪ್ರಿಯಾಂಕ್‌ ಖರ್ಗೆ | Kannada Prabha

ಸಾರಾಂಶ

ಕಾಂಗ್ರೆಸ್‌ ಪಕ್ಷ ಬಿಟ್ಟು ಏಕಾಂಗಿಯಾಗಿ ಹೋರಾಟ ಮಾಡಿ ನೀವೊಬ್ಬರೇ ಗೆದ್ದು ತೋರಿಸಿ ಎಂದು ಕೇಂದ್ರ ಸಚಿವ ಎಚ್‌.ಡಿ.ಕುಮಾರಸ್ವಾಮಿ ಅವರು ಗೃಹ ಸಚಿವ ಪ್ರಿಯಾಂಕ್ ಖರ್ಗೆಗೆ ಸವಾಲು ಹಾಕಿದ್ದಾರೆ.

ಕನ್ನಡಪ್ರಭ ವಾರ್ತೆ ಬೆಂಗಳೂರು:

ಕಾಂಗ್ರೆಸ್‌ ಪಕ್ಷ ಬಿಟ್ಟು ಏಕಾಂಗಿಯಾಗಿ ಹೋರಾಟ ಮಾಡಿ ನೀವೊಬ್ಬರೇ ಗೆದ್ದು ತೋರಿಸಿ ಎಂದು ಕೇಂದ್ರ ಸಚಿವ ಎಚ್‌.ಡಿ.ಕುಮಾರಸ್ವಾಮಿ ಅವರು ಗೃಹ ಸಚಿವ ಪ್ರಿಯಾಂಕ್ ಖರ್ಗೆಗೆ ಸವಾಲು ಹಾಕಿದ್ದಾರೆ.

ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿ, ಮಂತ್ರಿಯೊಬ್ಬರು ಜೆಡಿಎಸ್‌ನವರು ಎಂದಾದರೂ 100 ಸೀಟು ಗೆದ್ದಿದ್ದಾರಾ ಎಂದು ಪ್ರಶ್ನಿಸಿದ್ದಾರೆ. ಹೌದು, ನಾವು 100 ಸೀಟು ಗೆದ್ದಿಲ್ಲ. 38-40 ಸೀಟು ಗೆದ್ದು ಮುಖ್ಯಮಂತ್ರಿ ಸ್ಥಾನ ಪಡೆದ ಪಕ್ಷ ನಮ್ಮದು. ನೀವು ಕಾಂಗ್ರೆಸ್‌ ಪಕ್ಷದ ನೆರಳಿನಲ್ಲಿ ಬಂದವರು. ಕಾಂಗ್ರೆಸ್‌ ಪಕ್ಷ ಬಿಟ್ಟು ಏಕಾಂಗಿಯಾಗಿ ಹೋರಾಟ ಮಾಡಿ ಐದಾರು ಮಂದಿ ಗೆಲ್ಲಿಸುವುದು ಬೇಡ, ಬದಲಾಗಿ ನೀವೊಬ್ಬರೇ ಗೆದ್ದು ತೋರಿಸಿ ಎಂದು ತಿರುಗೇಟು ನೀಡಿದರು.

ನಮ್ಮ ಪಕ್ಷದ ಬಗ್ಗೆ ಲಘುವಾಗಿ ಮಾತನಾಡುವವರಿಗೆ ಮುಂದಿನ ಚುನಾವಣೆಯಲ್ಲಿ ಜನರೇ ಉತ್ತರ ಕೊಡುತ್ತಾರೆ. ಈಗಿನ ಕಾಂಗ್ರೆಸ್‌ ಸರ್ಕಾರದ ನಡವಳಿಕೆಯನ್ನು ಜನ ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ. ಇಂಥ ವ್ಯಕ್ತಿಗಳಿಗೆ ಭವಿಷ್ಯದಲ್ಲಿ ರಾಜ್ಯ ಜನ, ಮತದಾರರು ತಕ್ಕ ಉತ್ತರ ನೀಡುತ್ತಾರೆ ಎಂದು ಕುಮಾರಸ್ವಾಮಿ ಹೇಳಿದರು.ಕೆಪಿಎಸ್ಸಿಯ ಎಲ್ಲ ನೇಮಕಾತಿ ಪರೀಕ್ಷೆ ಮುಂದೂಡಿ: ಎಚ್‌ಡಿಕೆಕರ್ನಾಟಕ ಲೋಕಸೇವಾ ಆಯೋಗ (ಕೆಪಿಎಸ್ಸಿ) ಇದೀಗ ಕೈಗೊಂಡಿರುವ ಎಲ್ಲಾ ನೇಮಕಾತಿ ಪರೀಕ್ಷೆಗಳನ್ನು ಮುಂದೂಡುವಂತೆ ಕೇಂದ್ರ ಸಚಿವ ಎಚ್‌.ಡಿ.ಕುಮಾರಸ್ವಾಮಿ ಆಗ್ರಹಿಸಿದರು.

ಶನಿವಾರ ಪಕ್ಷದ ರಾಜ್ಯ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಕೆಪಿಎಸ್ಸಿಯಿಂದ ನ.15ರಂದು ನಡೆಯಲಿರುವ 319 ಗೆಜೆಟೆಡ್‌ ಪ್ರೊಬೆಷನರಿ ಹುದ್ದೆಗಳ ನೇಮಕಾತಿ ಪರೀಕ್ಷೆ ಮುಂದೂಡಬೇಕು. ಕೆಪಿಎಸ್ಸಿಯಲ್ಲಿ ಕಳೆದ ಮೂರ್ನಾಲ್ಕು ವರ್ಷಗಳಿಂದ ನಡೆದಿರುವ ಪರೀಕ್ಷೆ, ನೇಮಕಾತಿ ಅಕ್ರಮಗಳ ಬಗ್ಗೆ ಇ.ಡಿ ಹಾಗೂ ಸಿಐಡಿ ತನಿಖೆಗಳು ನಡೆಯುತ್ತಿವೆ ಎಂದರು.ಹೈಕೋರ್ಟ್‌ ಸೂಚನೆ ಮೇರೆಗೆ ಎಸ್‌ಐಟಿ ಕೂಡ ತನಿಖೆ ನಡೆಸುತ್ತಿದೆ. ಈಗಾಗಲೇ ನೇಮಕಾತಿಯಲ್ಲಿ ಹಣದ ವಹಿವಾಟು ನಡೆದಿರುವುದು ಸಾಬೀತಾಗಿದೆ. ಈ ಹಿನ್ನೆಲೆಯಲ್ಲಿ ಕೆಪಿಎಸ್ಸಿ ಪಾರದರ್ಶಕ, ಪ್ರಾಮಾಣಿಕವಾಗಿ ಪರೀಕ್ಷೆ ನಡೆಸಿ ನೇಮಕಾತಿ ಮಾಡಲಿದೆ ಎಂಬ ನಂಬಿಕೆ ಇಲ್ಲ. ಉದ್ಯೋಗಾಂಕ್ಷಿಗಳು ಇದನ್ನೇ ಹೇಳುತ್ತಿದ್ದಾರೆ. ಹೀಗಾಗಿ ನೇಮಕಾತಿ ಪರೀಕ್ಷೆಗಳನ್ನು ಮುಂದೂಡುವಂತೆ ಒತ್ತಾಯಿಸಿದರು.ದೇಶಪಾಂಡೆ ಸಮಿತಿ ವರದಿ ಏನಾಯ್ತು?:ಕೆಪಿಎಸ್ಸಿಯಲ್ಲಿ ಸುಧಾರಣೆ ತರಲು ಮಾಜಿ ಮಂತ್ರಿ ಆರ್‌.ವಿ.ದೇಶಪಾಂಡೆ ನೇತೃತ್ವದಲ್ಲಿ ರಚಿಸಲಾಗಿದ್ದ ಸಮಿತಿ ಇನ್ನೂ ವರದಿ ನೀಡಿಲ್ಲ. ಉದ್ಯೋಗಾಂಕ್ಷಿಗಳು ಫ್ರೀಡಂ ಪಾರ್ಕಿನಲ್ಲಿ ಪ್ರತಿಭಟಿಸುತ್ತಿದ್ದಾರೆ. ಇಂತಹ ಗೊಂದಲದ ವಾತಾವರಣದಲ್ಲಿ ಪರೀಕ್ಷೆ ನಡೆಸುವುದರಿಂದ ಪ್ರತಿಭಾನ್ವಿತ ಅಭ್ಯರ್ಥಿಗಳಿಗೆ ಅನ್ಯಾಯವಾಗಲಿದೆ. ಹೀಗಾಗಿ ಸಂಸ್ಥೆಯನ್ನು ಸಂಪೂರ್ಣ ಶುದ್ಧೀಕರಿಸಿ, ಪಾರದರ್ಶಕತೆ ತಂದ ಬಳಿಕವೇ ಪರೀಕ್ಷೆ ನಡೆಸಬೇಕು ಎಂದು ಕುಮಾರಸ್ವಾಮಿ ಆಗ್ರಹಿಸಿದರು.ಬೆಳೆ ವಿಮೆಯಲ್ಲಿ ರೈತರಿಗೆ ಮೋಸ:ಬರಗಾಲದಿಂದ ರೈತರು ಕಂಗಾಲಾಗಿದ್ದು, ಬೆಳೆ ವಿಮೆ ವಿಚಾರದಲ್ಲಿ ರೈತರಿಗೆ ದೊಡ್ಡ ಮೋಸವಾಗುತ್ತಿದೆ. ರೈತರು ವಂತಿಗೆ ಕಟ್ಟಿದ್ದರೂ ವಿಮಾ ಕಂಪನಿಗಳು ಅವರಿಗೆ ವಂಚಿಸುತ್ತಿವೆ. ರಾಜ್ಯ ಸರ್ಕಾರ ತನ್ನ ಪಾಲಿನ ಅನುದಾನ ಅಥವಾ ವಂತಿಗೆ ಹಣ ಪಾವತಿಸದೆ ಸಂಪೂರ್ಣ ನಿಷ್ಕ್ರಿಯವಾಗಿದೆ. ಬರೀ ಘೋಷಣೆಗಳನ್ನು ಮಾಡುವ ಮೂಲಕ ರೈತರ ಸಂಕಷ್ಟಕ್ಕೆ ಸ್ಪಂದಿಸುವಲ್ಲಿ ಸರ್ಕಾರ ವಿಫಲವಾಗಿದೆ ಎಂದು ಟೀಕಿಸಿದರು.ಹಳೇ ಬಾಕಿ ನೀಡದೆ ಹೊಸ ಯೋಜನೆ ಘೋಷಣೆ:ರಾಜ್ಯದ ಆರ್ಥಿಕ ಪರಿಸ್ಥಿತಿ ಸಂಪೂರ್ಣವಾಗಿ ಹದಗೆಟ್ಟಿದೆ. ಬಸ್ ಪ್ರಯಾಣ ದರ ಏರಿಕೆ ಖಂಡಿಸಿ ಜನರ ಆಕ್ರೋಶ ಭುಗಿಲೆದ್ದಿದೆ. ಈ ನಡುವೆ ಮುಖ್ಯಮಂತ್ರಿಗಳು ರೈತರಿಗೆ 2,500 ರು. ಪರಿಹಾರ ಘೋಷಿಸಿದರು. ಸಚಿವ ಸಂಪುಟ ಸಭೆಯಲ್ಲಿ 26 ಸಾವಿರ ಕೋಟಿ ರು. ರಸ್ತೆ ಅಭಿವೃದ್ಧಿ ಯೋಜನೆಗಳಿಗೆ ಒಪ್ಪಿಗೆ ನೀಡಲಾಗಿದೆ. ಆದರೆ, ಈಗಾಗಲೇ ಕಾಮಗಾರಿ ಮುಗಿಸಿರುವ ಗುತ್ತಿಗೆದಾರರಿಗೆ 39 ಸಾವಿರ ಕೋಟಿ ರು. ಬಾಕಿ ಉಳಿಸಿಕೊಳ್ಳಲಾಗಿದೆ. ಹಳೆಯ ಬಾಕಿ ನೀಡದೆ ಹೊಸ ಯೋಜನೆಗಳನ್ನು ಘೋಷಿಸುತ್ತಿರುವುದು ಹಾಸ್ಯಾಸ್ಪದ ಎಂದು ವ್ಯಂಗ್ಯವಾಡಿದರು.ಸ್ಥಳೀಯ ಗುತ್ತಿಗೆದಾರರ ಕಡೆಗಣನೆ:ರಾಜ್ಯ ಸರ್ಕಾರವು ಪ್ಯಾಕೇಜ್ ಸಿಸ್ಟಮ್ ಜಾರಿಗೆ ತಂದು ಸ್ಥಳೀಯ ಗುತ್ತಿಗೆದಾರರನ್ನು ಕಡೆಗಣಿಸಿ ಆಂಧ್ರಪ್ರದೇಶ, ಉತ್ತರ ಪ್ರದೇಶದವರಿಗೆ ಗುತ್ತಿಗೆ ನೀಡುತ್ತಿದೆ. ಇದರಿಂದ ರಾಜ್ಯದ ಗುತ್ತಿಗೆದಾರರ ಖಾತೆಗಳು ಎನ್‌ಪಿಎ ಆಗುತ್ತಿವೆ ಎಂದು ಸಚಿವ ಎಚ್‌.ಡಿ.ಕುಮಾರಸ್ವಾಮಿ ಕಳವಳ ವ್ಯಕ್ತಪಡಿಸಿದರು. -ಕೋಟ್‌-ದ್ವೇಷದ ರಾಜಕಾರಣ, ಜಾತಿ ರಾಜಕಾರಣ ಮತ್ತು ಎಸ್ಐಟಿ ಮೊದಲಾದವುಗಳ ದುರ್ಬಳಕೆ ಮಾಡಿ ಸೇಡಿನ ರಾಜಕಾರಣ ಮಾಡುವುದನ್ನು ಬಿಟ್ಟು ರಾಜ್ಯದ ಅಭಿವೃದ್ಧಿಗಾಗಿ ಪ್ರಾಮಾಣಿಕವಾಗಿ ಕೆಲಸ ಮಾಡಿ. - ಎಚ್‌.ಡಿ.ಕುಮಾರಸ್ವಾಮಿ, ಕೇಂದ್ರ ಸಚಿವ

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕವಿ ಹೃದಯದ ಡಾ.ಚೆನ್ನಬಸವ ಶ್ರೀಗಳು: ತೋಂಟದಾರ್ಯ ಶ್ರೀ
ಶಿರಗುಪ್ಪಿ ಕಾರ್ಖಾನೆಯಿಂದ ₹4,000 ದರ ಘೋಷಣೆ