ಹಳಿಯಾಳ: ಒಂದು ಕಡೆ ಮಳೆ ಆರಂಭವಾಗಿದ್ದು, ಇನ್ನೊಂದೆಡೆ ಕೋವಿಡ್ ಸೋಂಕು ಹೆಚ್ಚುತ್ತಿದೆ. ಈ ಹಿನ್ನೆಲೆಯಲ್ಲಿ ಸರ್ಕಾರಿ ಸಿಬ್ಬಂದಿ ರಜೆ ಬಿಟ್ಟು, ನಿರಂತರ ಸೇವೆ ನೀಡಲು ಸಜ್ಜಾಗಬೇಕು ಎಂದು ಶಾಸಕ ಆರ್.ವಿ. ದೇಶಪಾಂಡೆ ಸೂಚಿಸಿದರು.
ನಾನು ಕೆಲವು ದಿನಗಳ ನಂತರ ಗ್ರಾಮಾಂತರ ಭಾಗಗಳಿಗೆ ಭೇಟಿ ನೀಡುತ್ತೇನೆ. ಆಗ ಗ್ರಾಮಗಳಲ್ಲಿ ಸ್ವಚ್ಛತೆ ಕಂಡು ಬರದಿದ್ದರೆ ಸಂಬಂಧಿತ ಅಧಿಕಾರಿಗಳ ಮತ್ತು ಸಿಬ್ಬಂದಿಯ ತಲೆದಂಡ ನಿಶ್ಚಿತ ಎಂದು ಎಚ್ಚರಿಕೆ ನೀಡಿದರು.
ನಕಲಿ ವೈದ್ಯರು, ಕ್ಲಿನಿಕ್ ನಿಯಂತ್ರಿಸಿ:ಸಭೆಯಲ್ಲಿ ನಕಲಿ ವೈದ್ಯರು ಮತ್ತು ನಕಲಿ ಕ್ಲಿನಿಕ್‌ಗಳ ವಿಷಯ ಪ್ರಸ್ತಾಪವಾಯಿತು. ಅದಕ್ಕೆ ಪ್ರತಿಕ್ರಿಯಿಸಿದ ಶಾಸಕರು, ತಹಸೀಲ್ದಾರರು ಮತ್ತು ತಾಲೂಕು ವೈದ್ಯಾಧಿಕಾರಿಗಳು ಮತ್ತು ಪೊಲೀಸರು ಸೇರಿ ಅವುಗಳ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಿದರು. ಸರ್ಕಾರಿ ಆಸ್ಪತ್ರೆಯಲ್ಲಿ ಕೋವಿಡ್ ನಿಯಂತ್ರಣಕ್ಕೆ ಕೈಗೊಂಡ ಕ್ರಮ, ಔಷಧ ಮತ್ತು ವಾರ್ಡ್‌ಗಳ ಪರಿಶೀಲನೆಯನ್ನು ತಹಸೀಲ್ದಾರರು ಮಾಡಬೇಕು ಎಂದು ಸೂಚಿಸಿದರು.
ಪಿಡಿಒಗಳ ಬಗ್ಗೆ ಸಾರ್ವಜನಿಕರಿಂದ ಸಾಕಷ್ಟು ದೂರುಗಳು ಕೇಳಿ ಬರುತ್ತಿದ್ದು, ಪ್ರತಿ ಪಿಡಿಒ ಕೇಂದ್ರ ಸ್ಥಾನದಲ್ಲಿಯೇ ಉಳಿಯಬೇಕು ಎಂದು ದೇಶಪಾಂಡೆ ತಾಕೀತು ಮಾಡಿದರು. ಸರ್ಕಾರಿ ಕಚೇರಿಗಳು, ಗ್ರಾಪಂ ಕಾರ್ಯಾಲಯಗಳು, ಸೊಸೈಟಿಗಳು ಸ್ವಚ್ಛವಾಗಿಡಬೇಕು ಎಂದರು.
ಗ್ರಾಮಗಳು ಸ್ವಚ್ಛವಾಗಲಿ:
ಗ್ರಾಮಾಂತರ ಭಾಗದಲ್ಲಿ ಸ್ವಚ್ಛತೆ ಕೊರತೆ ಕಂಡುಬರುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದ ದೇಶಪಾಂಡೆ, ಗ್ರಾಮೀಣ ಭಾಗದಲ್ಲಿ ಚರಂಡಿ ಸ್ವಚ್ಛತೆ ನಡೆಸಿ, ರಸ್ತೆಯ ಪಕ್ಕ ಬೆಳೆದು ನಿಂತ ಹುಲ್ಲು ಮತ್ತು ಸಸಿಗಳನ್ನು ಮೊದಲು ತೆಗೆಯಿರಿ. ಗ್ರಾಮ ಪ್ರವೇಶಿಸುವ ಮಾರ್ಗದಲ್ಲಿ ಎಲ್ಲೆಂದರಲ್ಲಿ ಘನತ್ಯಾಜ್ಯ ಎಸೆಯುವುದನ್ನು ನಿಯಂತ್ರಿಸಬೇಕು. ಸೊಳ್ಳೆ ನಿವಾರಣೆಗೆ ಕ್ರಮ ಕೈಗೊಳ್ಳಬೇಕು. ಕಸ ತ್ಯಾಜ್ಯ ಎಸೆಯುವರಿಗೆ ದಂಡ ವಿಧಿಸಿ ಆದಷ್ಟು ಗ್ರಾಮಗಳು ಸ್ವಚ್ಛವಾಗಿಡಲು ಆದ್ಯತೆ ನೀಡಬೇಕು ಎಂದರು.
ಪುರಸಭಾ ಅಧ್ಯಕ್ಷೆ ದ್ರೌಪದಿ ಅಗಸರ, ಹಳಿಯಾಳ, ದಾಂಡೇಲಿ, ಜೋಯಿಡಾ ತಾಲೂಕಿನ ತಹಸೀಲ್ದಾರರು, ತಾಪಂ ಇಒಗಳು, ಪಿಡಿಒಗಳು ಮತ್ತು ತಾಲೂಕು ಮಟ್ಟದ ಇಲಾಖಾ ಅಧಿಕಾರಿಗಳು ಇದ್ದರು.