ಅಂಬೇಡ್ಕರ್ ವಿದ್ಯಾರ್ಥಿ ಪರಿಷತ್ ಅಧ್ಯಕ್ಷ ತಿಪ್ಪೇಸ್ವಾಮಿ ವಿಷಾಧ
ಕನ್ನಡಪ್ರಭವಾರ್ತೆ, ಚಿತ್ರದುರ್ಗ
ಹಣ ಮತ್ತು ಪ್ರಚಾರದ ಕೌಶಲ್ಯವಿದ್ದರೆ ವಿಧಾನಪರಿಷತ್ ಚುನಾವಣೆ ಗೆಲ್ಲುವುದು ಸುಲಭ. ಶಿಕ್ಷಣ ಮತ್ತು ಶಿಕ್ಷಕರು, ವಿದ್ಯಾರ್ಥಿಗಳ ಸಮಸ್ಯೆಗಳನ್ನು ಬಿಟ್ಟು, ತಮ್ಮ ಪಕ್ಷದ ಸಿದ್ಧಾಂತ ಕಾರ್ಯಕ್ರಮಗಳಿಗೆ ಹೋರಾಡುವುದೇ ಶಿಕ್ಷಕ ಕ್ಷೇತ್ರದ ಎಂಎಲ್‍ಸಿಗಳ ಕಾಯಕ ವಾಗಿರುವುದು ದುರಂತದ ಸಂಗತಿ ಎಂದು ಅಂಬೇಡ್ಕರ್ ವಿದ್ಯಾರ್ಥಿ ಪರಿಷತ್ ಅಧ್ಯಕ್ಷ ಬಿ.ಪಿ.ತಿಪ್ಪೇಸ್ವಾಮಿ ವಿಷಾದ ವ್ಯಕ್ತಪಡಿಸಿದರು.ಚಿತ್ರದುರ್ಗ ನಗರದ ಕೋಟೆ ನಾಡು ಬುದ್ಧ ವಿಹಾರದಲ್ಲಿ ಭಾನುವಾರ ನಡೆದ ಶಿಕ್ಷಣ, ಶಿಕ್ಷಕ ಮತ್ತು ಶಿಕ್ಷಕರ ಕ್ಷೇತ್ರದಿಂದ ಆಯ್ಕೆಯಾದ ಎಂಎಲ್‌ಸಿ ಗಳ ಕಾರ್ಯವೈಖರಿ ಎಂಬ ಸಂವಾದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಶಿಕ್ಷಕರ ಕ್ಷೇತ್ರದ ಚುನಾವಣೆ ಭರಾಟೆ ಭಯಾನಕ ಸನ್ನಿವೇಷ ಸೃಷ್ಟಿಸಿದೆ. ಶೈಕ್ಷಣಿಕ ಸಮಸ್ಯೆಗಳ ಹೊರತಾಗಿ ಹಣ ಮತ್ತು ವೈಯುಕ್ತಿಕ ಪ್ರಾಭಲ್ಯ ಪ್ರಧಾನವಾಗಿದೆ. ಅಚ್ಚರಿ ಎಂದರೆ ಇಲ್ಲಿಯವರೆಗೆ ವಿಪ ಸದಸ್ಯರಾಗಿದ್ದವರು ಆರೋಗ್ಯ ಸಂಜೀವಿನಿ ಸೌಲಭ್ಯವನ್ನು ಸರಕಾರಿ ನೌಕರರಿಗೆ ನೀಡುವಂತೆ ಅನುದಾನಿತ ಶಾಲಾ ಕಾಲೇಜು ನೌಕರರಿಗೂ ದೊರಕದೇ ಇರುವುದರ ಬಗ್ಗೆ ಒಂದು ದಿನವೂ ತಲೆಕೆಡಿಸಿಕೊಂಡಿಲ್ಲ. ವಯೋನಿವೃತ್ತಿಯಾದಾಗ ಜೀವನ ಭದ್ರತೆಗೆ ಅವಶ್ಯಕವಾದ ಓಪಿಎಸ್ ಪಿಂಚಣಿ ನೀಡುವುದಿಲ್ಲವೆಂದು ಬಿಜೆಪಿ ಸರಕಾರ ಹೇಳಿದಾಗಲೂ ನಮ್ಮ ಶಿಕ್ಷಕ ಕ್ಷೇತ್ರದ ಎಂಎಲ್‍ಸಿಗಳು ಮೌನವಾಗಿ ಬಿಡುತ್ತಾರೆ ಎಂದರು.
ಮಕ್ಕಳು ಹಿಜಾಬ್ ಧರಿಸಿ ಬರಬಾರದೆನ್ನುವ, ಪಠ್ಯಪುಸ್ತಕದಲ್ಲಿ ಜಾತ್ಯತೀತ ವಿಚಾರಗಳನ್ನು ಕಿತ್ತು ಹಾಕುವ, ಮಂದಿರ ಮಸೀದಿ ಕಿತ್ತಾಟದ ಬಗ್ಗೆ, ಶಾಲಾಮಕ್ಕಳಿಗೆ ಮೊಟ್ಟೆ ಕೊಡಬೇಡಿ ಎನ್ನುವ, ಶೈಕ್ಷಣಿಕ ವಿರೋಧಿ ವಿಚಾರಗಳಿಗೆ ಹೆಚ್ಚು ತಲೆ ಕೆಡಿಸಿ ಕೊಳ್ಳುತ್ತಿದ್ದಾರೆ. ತಮ್ಮ ಪಕ್ಷದ ತತ್ವ ಸಿದ್ಧಾಂತಗಳ ಅನುಷ್ಟಾನಕ್ಕಾಗಿಯೇ ಪ್ರತಿದಿನವೂ ಹೋರಾಟ ಮಾಡುತ್ತಿದ್ದಾರೆ. ಪ್ರಜ್ಞಾವಂತ ಶಿಕ್ಷಕ ಮತದಾರರು ಕ್ರಿಯಾಶೀಲರಾದ, ಜಾತ್ಯತೀತ ಮನೋಭಾವದ, ಸಂವಿಧಾನ ಪರ ಇರುವಂತಹ ಶಿಕ್ಷಣ ಪ್ರೇಮಿಗಳನ್ನು ಪದವೀಧರ ಹಾಗೂ ಶಿಕ್ಷಕರ ಕ್ಷೇತ್ರದ ಚುನಾವಣೆಯಲ್ಲಿ ಗೆಲ್ಲಿಸುವಂತಾಗಬೇಕು. ಪ್ರಜಾಪ್ರಭುತ್ವ ಗೆಲ್ಲಿಸ ಬೇಕಾದದ್ದು ಸಾಮಾನ್ಯ ನಾಗರೀಕರಿಗಿಂತ ಶಿಕ್ಷಕರ ಜವಾಬ್ದಾರಿಯೇ ಹೆಚ್ಚಾಗಿದೆ ಎಂಬುದನ್ನು ಮರೆಯಬಾರದು ಎಂದರು.