ಕನ್ನಡಪ್ರಭ ವಾರ್ತೆ ಚಳ್ಳಕೆರೆ
ಚಳ್ಳಕೆರೆ ನಗರಕ್ಕೆ ಸುಮಾರು ೨೫೨ ಕೋಟಿ ವೆಚ್ಚದ ಯುಜಿಡಿ (ಒಳಚರಂಡಿ ವ್ಯವಸ್ಥೆ) ಕಾಮಗಾರಿ ಅನುಷ್ಠಾನಗೊಳಿಸಲು ಸರ್ಕಾರ ಕಳೆದ ಹತ್ತು ವರ್ಷಗಳಿಂದ ಆರ್ಥಿಕ ಇಲಾಖೆ ನೆಪವೊಡ್ಡುತ್ತಿದ್ದು, ಇದು ಸರಿಯಲ್ಲ. ಈ ಬಾರಿ ಸರ್ಕಾರ ಯೋಜನೆಗೆ ಅನುಮೋದನೆ ನೀಡಬೇಕೆಂದು ಕ್ಷೇತ್ರದ ಶಾಸಕ ಟಿ. ರಘುಮೂರ್ತಿ ನಾಲ್ಕನೇ ಬಾರಿಗೆ ವಿಧಾನಸಭೆಯಲ್ಲಿ ಒತ್ತಾಯಿಸಿದರು.ಚಳ್ಳಕೆರೆ ತಾಲೂಕು ವಿಶ್ವಮಟ್ಟದಲ್ಲಿ ಖ್ಯಾತಿಯಾಗುತ್ತಿದೆ, ಕೇವಲ ಭಾರತವಷ್ಟೇಯಲ್ಲ ಹೊರ ರಾಷ್ಟ್ರಗಳೂ ಚಳ್ಳಕೆರೆ ತಾಲೂಕಿನ ಬೆಳವಣಿಗೆಯ ಬಗ್ಗೆ ಗಮನಹರಿಸುತ್ತಿವೆ. ಅಂತಾರಾಷ್ಟ್ರೀಯ ಮಟ್ಟದ ಬಾಬಾ ಅಣು ಸಂಶೋಧನಾ ಕೇಂದ್ರ, ಬಾಹ್ಯಾಕಾಶ ಸಂಶೋಧನೆ, ಡಿಆರ್‌ಡಿಒ ಸಂಸ್ಥೆಗಳು ತಾಲೂಕಿನಲ್ಲಿ ಕಾರ್ಯನಿರ್ವಹಿಸುತ್ತಿವೆ. ಅಂತರಾಷ್ಟ್ರೀಯ ಖ್ಯಾತಿ ವಿಜ್ಞಾನಿಗಳು, ಮಹಾನ್ ನಾಯಕರು ಚಳ್ಳಕೆರೆ ತಾಲೂಕಿಗೆ ನಿರಂತರ ಪ್ರವಾಸ ಕೈಗೊಳ್ಳುತ್ತಾರೆ. ನಗರದಲ್ಲಿ ಪ್ರಸ್ತುತ ೭೦ ಸಾವಿರಕ್ಕೂ ಹೆಚ್ಚು ಜನಸಂಖ್ಯೆ ಇದೆ. ಬಿಸಿಲಿನ ಬೇಗೆ ಹೆಚ್ಚಾದಂತೆ ಸೊಳ್ಳೆ, ಕ್ರಿಮಿಕೀಟಗಳ ಕಾಟ ಹೆಚ್ಚಾಗಿ ಜನರ ಆರೋಗ್ಯವೂ ಹದಗೆಡುವ ಸ್ಥಿತಿ ಇದೆ. ಈಗ ಹಾಲಿ ಇರುವ ಚರಂಡಿ ವ್ಯವಸ್ಥೆ ಸರಿಯಿಲ್ಲ. ಆದ್ದರಿಂದ ಸಾವಿರಾರು ಸಾರ್ವಜನಿಕರು ಯುಜಿಡಿ ಎದುರು ನೋಡುತ್ತಿದ್ದಾರೆ. ಸರ್ಕಾರದ ಮೇಲೆ ವಿಶ್ವಾಸವಿಟ್ಟಿದ್ದಾರೆ. ಮತದಾರರ ವಿಶ್ವಾಸಕ್ಕೆ ಧಕ್ಕೆಯಾಗದಂತೆ ಕಳೆದ ಸುಮಾರು ಹತ್ತು ವರ್ಷಗಳ ಅವಧಿಯಲ್ಲಿ ಸುಮಾರು ಮೂರು ಸಾವಿರ ಕೋಟಿ ರು. ಅಭಿವೃದ್ದಿ ಕಾಮಗಾರಿ ಕೈಗೊಳ್ಳಲಾಗಿದೆ. ಆದರೆ, ಯುಜಿಡಿ ಕಾಮಗಾರಿ ಅನುಮೋದನೆ ನೀಡದೆ ಪದೇಪದೆ ಸುಳ್ಳು ಭರವಸೆ ನೀಡಿದರೆ ಜನತೆಗೆ ಅನ್ಯಾಯ ಮಾಡಿದಂತಾಗುತ್ತದೆ. ಆದ್ದರಿಂದ ಸರ್ಕಾರ ಯುಜಿಡಿ ಕಾಮಗಾರಿಗೆ ಈ ಬಾರಿಯಾದರೂ ಅನುಮೋದನೆ ನೀಡಬೇಕೆಂದು ಒತ್ತಾಯಿಸಿದರು.ನಗರಾಭಿವೃದ್ದಿ ಸಚಿವ ಬೈರತಿಸುರೇಶ್ ಉತ್ತರಿಸಿ, ರಘುಮೂರ್ತಿ ಕಳಕಳಿ ನೈಜ್ಯವಾದದ್ದು. ಈ ಹಿಂದೆ ಯುಜಿಡಿ ಕಾಮಗಾರಿಗೆ ೧೯೭ ಕೋಟಿ ಯೋಜನೆ ಸಿದ್ಧವಾಗಿತ್ತು, ಈಗ ಯೋಜನೆ ವೆಚ್ಚ ೨೫೨ ಕೋಟಿಗೆ ಏರಿಕೆಯಾಗಿದೆ. ಆರ್ಥಿಕ ಇಲಾಖೆ ೨೦೨೧-೨೩ರ ತನಕ ರಾಜ್ಯದ ಯಾವುದೇ ಯುಜಿಡಿ ಕಾಮಗಾರಿಗೆ ಅನುಮೋದನೆ ನೀಡಿಲ್ಲ. ಯುಜಿಡಿ ಕಾಮಗಾರಿ ಕೈಗೆತ್ತಿಕೊಳ್ಳದಂತೆ ನಿರ್ಬಂಧ ಹೇರಿತ್ತು. ಆದರೆ, ಸರ್ಕಾರದ ಆರ್ಥಿಕ ಪರಿಸ್ಥಿತಿ ಗಮನಿಸಿ ಆರ್ಥಿಕ ಇಲಾಖೆಯ ಹಿರಿಯ ಅಧಿಕಾರಿಗಳೊಂದಿಗೆ ಚರ್ಚಿಸಿ ಯುಜಿಡಿ ಕಾಮಗಾರಿ ಅನುಮೋದನೆ ನೀಡುವ ಬಗ್ಗೆ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ ಸೂಕ್ತ ನಿರ್ಧಾರ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.