ಬೌದ್ಧರ ಪವಿತ್ರ ಸ್ಥಳವನ್ನು ಬೌದ್ಧರಿಗೇ ಬಿಡಿ: ಕಮಲರತ್ನ ಭಂತೇಜಿ

KannadaprabhaNewsNetwork | Published : Apr 25, 2025 12:36 AM

ಸಾರಾಂಶ

ಪತ್ರಿಕಾಗೋಷ್ಠಿಯಲ್ಲಿ ಕಮಲರತ್ನ ಪೂಜ್ಯ ಭಂತಜೀ ಪ್ರತಿಭಟನೆಯ ಪೋಸ್ಟರ್‌ ಬಿಡುಗಡೆ ಮಾಡಿದರು

-ಬುದ್ಧಗಯಾ ಆಡಳಿತ ಬೌದ್ಧರಿಗೇ ನೀಡುವಂತೆ ಆಗ್ರಹ । ಮೇ5 ರಂದು ಬೃಹತ್ ಪ್ರತಿಭಟನೆ ಕನ್ನಡಪ್ರಭ ವಾರ್ತೆ ಯಾದಗಿರಿ

ಬೌದ್ಧರ ಪವಿತ್ರ ಸ್ಥಳ ಬುದ್ಧಗಯಾ ಮಹಾಬೋಧಿ ಮಹಾವಿಹಾರದ ಬಿ.ಟಿ.ಆ್ಯಕ್ಟ್ 1949 ರದ್ದುಗೊಳಿಸಿ, ಆಡಳಿತವನ್ನು ಸಂಪೂರ್ಣವಾಗಿ ಬೌದ್ಧರಿಗೆ ಬಿಡುವಂತೆ ಆಗ್ರಹಿಸಿ ಮೇ5 ರಂದು ಯಾದಗಿರಿ ಜಿಲ್ಲಾ ಮಟ್ಟದಲ್ಲಿ ಬೃಹತ್ ಪ್ರತಿಭಟನೆ ಮೆರವಣಿಗೆಯನ್ನು ಹಮ್ಮಿಕೊಳ್ಳಲಾಗಿದೆ ಎಂದು ಕಮಲರತ್ನ ಪೂಜ್ಯ ಭಂತಜೀ ಹೇಳಿದರು.

ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಬೌದ್ಧರಿಗೆ ತಮ್ಮ ಧಾರ್ಮಿಕ ಕ್ಷೇತ್ರ ಸ್ವತಂತ್ರವಾಗಿ ನಿರ್ವಹಿಸುವ ಅವಕಾಶಕ್ಕಾಗಿ ಕಲಂ 13, 25, ಮತ್ತು 29 ಅನ್ನು ಜಾರಿಗೊಳಿಸಲು ಅಡ್ಡಿಯಾಗಿರುವ ಬಿ.ಟಿ ಆ್ಯಕ್ಟ್ 1949ನ್ನುರದ್ದು ಪಡಿಸಬೇಕು ಎಂದರು.

ಬುದ್ಧಗಯಾ ಮಹಾಭೋದಿ ಮಹಾವಿಹಾರದ ಆಡಳಿತವನ್ನು ಸಂಪೂರ್ಣವಾಗಿ ಬೌದ್ಧರಿಗೇ ನೀಡಬೆಕೆಂದು ಒತ್ತಾಯಿಸಿ ಬಿಹಾರದಲ್ಲಿ ಅಪಾರ ಬೌದ್ಧ ಅನುಯಾಯಿಗಳು ಶಾಂತಿಯುತವಾಗಿ ಇಂದಿಗೂ 75 ದಿನಗಳಿಂದ ನಿರಂತರವಾಗಿ ಆಮರಾಣಾಂತ ಹೋರಾಟ ಮಾಡುತ್ತಿರುವ ಪ್ರಯುಕ್ತ, ಯಾದಗಿರಿ ಜಿಲ್ಲೆಯಿಂದ ನಾಡಿನ ಬಿಕ್ಕು ಹಾಗೂ ಸಂಘದ ನೇತೃತ್ವ ಮತ್ತು ಸಮಸ್ತ ದಲಿತ ಸಂಘಟನೆಗಳು, ಬೌದ್ಧ ಸಂಘ ಸಂಸ್ಥೆಗಳು, ಬುದ್ಧ ವಿಹಾರದ ಸಮಿತಿಗಳು ಹಾಗೂ ಯಾದಗಿರಿ ಜಿಲ್ಲೆಯ ಬೌದ್ಧ ಉಪಾಸಕಾ ಮತ್ತು ಉಪಾಸಿಕಾ ಜಿಲ್ಲಾ ಸಮಿತಿಯ ಸಂಯುಕ್ತಾಶ್ರಯದಲ್ಲಿ ಈ ಪ್ರತಿಭಟನೆ ನಡೆಯಲಿದೆ.

ಮೇ5 ರಂದು ಸೋಮವಾರ ಬೆಳಗ್ಗೆ 10 ಗಂಟೆಗೆ ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ವೃತ್ತದಿಂದ ತಹಸೀಲ್ದಾರ ಕಚೇರಿ, ಶಾಸ್ತ್ರಿ ವೃತ್ತ ಮಾರ್ಗವಾಗಿ ಸುಭಾಷ್ ವೃತ್ತದಲ್ಲಿ ಸಮಾವೇಶಗೊಂಡು ಜಿಲ್ಲಾಧಿಕಾರಿ ಮುಖಾಂತರ ರಾಷ್ಟ್ರಪತಿಗಳಿಗೆ ಮತ್ತು ಬಿಹಾರ ಸರ್ಕಾರಕ್ಕೆ ಬೌದ್ಧರ ಪುಣ್ಯಸ್ಥಳವನ್ನು ಬೌದ್ಧರಿಗೆ ಬಿಟ್ಟು ಕೊಡುವಂತೆ ಮನವಿ ಪತ್ರವನ್ನು ಸಲ್ಲಿಸಲಾಗುತ್ತದೆ ಎಂದು ತಿಳಿಸಿದರು.

ಪ್ರತಿಭಟನಾ ಮೆರವಣಿಗೆಯಲ್ಲಿ ಎಲ್ಲ ತಾಲೂಕುಗಳಿಂದ ಮತ್ತು ಸುತ್ತಮುತ್ತಲಿನ ಬೇರೆ ಜಿಲ್ಲೆಯ ಎಲ್ಲ ಬೌದ್ಧ ಅನುಯಾಯಿಗಳು, ಬಾಬಾಸಾಹೇಬ್ ಡಾ. ಬಿ.ಆರ್.ಅಂಬೇಡ್ಕರ್ ಅವರ ಅನುಯಾಯಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಲಿದ್ದಾರೆಂದು ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಮರೆಪ್ಪ ಬುಕ್ಕಲ್, ನೀಲಕಂಠ ಬಡಿಗೇರ, ನಾಗಣ್ಣ ಕಲ್ಲದೇವನಹಳ್ಳಿ, ಭೀಮರಾಯ ಸಿಂದಿಗೇರಿ, ಡಾ. ಭಗವಂತ ಅನವಾರ, ಮಾಳಪ್ಪ ಕಿರದಳ್ಳಿ, ಬಾಬುರಾವ್ ಬುತಾಳಿ, ನಾಗಣ್ಣ ಬಡೀಗೇರ, ಶರಣು ಎಸ್ ನಾಟೇಕಾರ್ ಮುಂತಾದವರು ಇದ್ದರು..

Share this article