ಸ್ವಪ್ರತಿಷ್ಠೆ ಬಿಟ್ಟು ಪಕ್ಷ ಸಂಘಟಿಸಿ: ನಿಖಿಲ್‌ ಕುಮಾರಸ್ವಾಮಿ

KannadaprabhaNewsNetwork |  
Published : May 10, 2026, 01:15 AM IST
ದೊಡ್ಡಬಳ್ಳಾಪುರದಲ್ಲಿ ನಡೆದ ಜೆಡಿಎಸ್ ರಜತ ಮಹೋತ್ಸವ ಸಮಾವೇಶದಲ್ಲಿ ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಮಾತನಾಡಿದರು. | Kannada Prabha

ಸಾರಾಂಶ

ದೊಡ್ಡಬಳ್ಳಾಪುರ: ದೊಡ್ಡಬಳ್ಳಾಪುರ ವಿಧಾನಸಭಾ ಕ್ಷೇತ್ರದಲ್ಲಿ ಜೆಡಿಎಸ್‌ ಪಕ್ಷಕ್ಕೆ ಪ್ರಾಮಾಣಿಕ ಕಾರ್ಯಕರ್ತರಿದ್ದು, ಮುಂದಿನ ದಿನಗಳಲ್ಲಿ ಜೆಡಿಎಸ್ ಅಧಿಕಾರಕ್ಕೆ ಬರುವುದು ಶತಸಿದ್ದ. ಸ್ಥಳೀಯ ನಾಯಕರು ಸ್ವಪ್ರತಿಷ್ಠೆ ಹಾಗೂ ವೈಮನಸ್ಯ ಬಿಟ್ಟು ಪಕ್ಷ ಸಂಘಟನೆಗೆ ಒತ್ತು ನೀಡಬೇಕು ಎಂದು ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಹೇಳಿದರು

ದೊಡ್ಡಬಳ್ಳಾಪುರ: ದೊಡ್ಡಬಳ್ಳಾಪುರ ವಿಧಾನಸಭಾ ಕ್ಷೇತ್ರದಲ್ಲಿ ಜೆಡಿಎಸ್‌ ಪಕ್ಷಕ್ಕೆ ಪ್ರಾಮಾಣಿಕ ಕಾರ್ಯಕರ್ತರಿದ್ದು, ಮುಂದಿನ ದಿನಗಳಲ್ಲಿ ಜೆಡಿಎಸ್ ಅಧಿಕಾರಕ್ಕೆ ಬರುವುದು ಶತಸಿದ್ದ. ಸ್ಥಳೀಯ ನಾಯಕರು ಸ್ವಪ್ರತಿಷ್ಠೆ ಹಾಗೂ ವೈಮನಸ್ಯ ಬಿಟ್ಟು ಪಕ್ಷ ಸಂಘಟನೆಗೆ ಒತ್ತು ನೀಡಬೇಕು ಎಂದು ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಹೇಳಿದರು.

ನಗರದ ಭಗತ್‌ಸಿಂಗ್ ಕ್ರೀಡಾಂಗಣದಲ್ಲಿ ಜೆಡಿಎಸ್ ರಜತ ಮಹೋತ್ಸವದ ಪ್ರಯುಕ್ತ ಜನರೊಂದಿಗೆ ಜನತಾದಳ-ಸಶಕ್ತ ಜನತಾದಳ, ಸಮೃದ್ಧ ಕರ್ನಾಟಕ ಧ್ಯೇಯದೊಂದಿಗೆ ಸಮಾವೇಶದಲ್ಲಿ ಮಾತನಾಡಿದ ಅವರು, ಬೆಂಗಳೂರು ಗ್ರಾಮಾಂತರ ಜಿಲ್ಲೆಗೆ ಮತ್ತು ಇಲ್ಲಿನ ವಿವಿಧ ತಾಲೂಕುಗಳಿಗೆ ಅಧ್ಯಕ್ಷರನ್ನು ನೇಮಕ ಮಾಡಿದ್ದು, ಎಲ್ಲರೂ ಪಕ್ಷವನ್ನು ಸದೃಢವಾಗಿ ಮುನ್ನಡೆಸುವ ವಿಶ್ವಾಸವಿದೆ. ಮುಂಬರುವ ಪಂಚಾಯಿತಿ ಹಾಗೂ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಕಾರ್ಯಕರ್ತರ ಶ್ರಮಕ್ಕೆ ತಕ್ಕ ಅಧಿಕಾರ ಸಿಗಬೇಕು. ಜೆಡಿಎಸ್ ಎಲ್ಲಿದೆ ಎಂದು ಅಪಹಾಸ್ಯ ಮಾಡಿದವರಿಗೆ ತಕ್ಕ ಉತ್ತರ ನೀಡಬೇಕು. ಅದಕ್ಕೆ ಕಾರ್ಯಕರ್ತರು ಸಜ್ಜಾಗಿದ್ದು, ಮುಖಂಡರಲ್ಲಿನ ಪ್ರತಿಷ್ಠೆ ಇಂದಿಗೇ ಮುಕ್ತಾಯವಾಗಬೇಕು. ಕ್ಷೇತ್ರದಲ್ಲಿ ನಮ್ಮ ಪಕ್ಷದ ಸ್ಥಿತಿ ಹೇಗೆನ್ನುವ ಆತಂಕ ಬೇಡ. ಕಾಲವೇ ಎಲ್ಲವನ್ನು ನಿರ್ಧರಿಸಲಿದೆ ಎಂದು ತಿಳಿಸಿದರು.

ಅಹಂ ಬದಿಗಿಟ್ಟು ಕೆಲಸ ಮಾಡಿ:

ರಾಜ್ಯದ ಎಲ್ಲಾ ಜಿಲ್ಲೆಗಳಲ್ಲೂ ಅಧ್ಯಕ್ಷರು ಸೇರಿದಂತೆ ಪದಾಧಿಕಾರಿಗಳನ್ನು ನೇಮಕ ಮಾಡುವ ಮೂಲಕ ಪಕ್ಷಕ್ಕೆ ಹೊಸ ಚೈತನ್ಯ ತುಂಬಲಾಗುತ್ತಿದೆ. 2028ಕ್ಕೆ ಶಾಸಕ ಅಭ್ಯರ್ಥಿಗಳು ಯಾರಾಗಬೇಕು ಎನ್ನುವುದನ್ನು ಪಕ್ಷದ ಹಿರಿಯರು ತೀರ್ಮಾನಿಸುತ್ತಾರೆ. ಆದರೆ, ಈಗಿನಿಂದಲೇ ಎಲ್ಲರು ಒಗ್ಗಟ್ಟಿನಿಂದ ನಡೆದರೆ ಮಾತ್ರ ಪಕ್ಷಕ್ಕೆ ಹಾಗೂ ಎಲ್ಲರಿಗೂ ಒಳ್ಳೆಯದಾಗಲಿದೆ. ಹಾಗಾಗಿ ಮುಖಂಡರು ತಮ್ಮಲ್ಲಿನ ಅಹಂ ಬಿದಿಗಿಟ್ಟು ಕೆಲಸ ಮಾಡಿದರೆ ಮಾತ್ರ ಸೂಕ್ತ ಪ್ರತಿಫಲ ದೊರೆಯಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.

ಯುವ ಸಮುದಾಯ ನಿರ್ಣಾಯಕ:

ದಕ್ಷಿಣ ಭಾರತದ ರಾಜ್ಯಗಳಲ್ಲಿನ ಚುನಾವಣಾ ಫಲಿತಾಂಶವನ್ನು ಗಮನಿಸಿದರೆ ಉತ್ತಮ ಆಡಳಿತಗಾರರನ್ನು ಆಯ್ಕೆ ಮಾಡುವ ಶಕ್ತಿ ಯುವ ಸಮುದಾಯಕ್ಕಿದೆ ಎನ್ನುವುದು ಸಾಬೀತಾಗಿದೆ. ಪ್ರಧಾನಿ ಮೋದಿ ಅವರ ವಿಕಸಿತ ಭಾರತಕ್ಕೆ ಬೆಂಬಲಿಸಬೇಕಿದೆ. ಯುವ ಶಕ್ತಿ, ಜೆಡಿಎಸ್ ಅಧಿಕಾರಕ್ಕೆ ತರಲು ಮುಂದಾಗಬೇಕಿದೆ ಎಂದು ಕರೆ ನೀಡಿದರು.

ರಾಜ್ಯ ಸರ್ಕಾರದ ವೈಫಲ್ಯ ಜನರ ಮುಂದಿಡಿ:

ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಹಿಂದುಳಿದವರ ಪರವಾಗಿದ್ದೇವೆ ಎಂದು ಬಿಂಬಿಸಿಕೊಳ್ಳುತ್ತಿದೆ. ಆದರೆ, ಹಿಂದುಳಿದ ಸಮಾಜದ ಅಭಿವೃದ್ಧಿಗೆ ಮೀಸಲಿಟ್ಟಿದ್ದ ಹಣವೆಲ್ಲವು ಬೇರೆಡೆಗೆ ಹೋಗುತ್ತಿದೆ. 3 ವರ್ಷಗಳ ಕಾಂಗ್ರೆಸ್ ಆಡಳಿತದಲ್ಲಿ ಅಹಿಂದ ವರ್ಗದ ಅಭಿವೃದ್ಧಿ ನಿಗಮಗಳಿಗೆ ಮೀಸಲಿಟ್ಟಿದ್ದ ಹಣ ವಿನಿಯೋಗವಾಗಿಯೇ ಇಲ್ಲ. ಪರಿಶಿಷ್ಟ ಜಾತಿ, ಪಂಗಡ ವರ್ಗದ ಹಣವನ್ನು ಗ್ಯಾರಂಟಿ ಯೋಜನೆಗಳಿಗೆ ಬಳಸಿಕೊಳ್ಳಲಾಗಿದೆ. ಮಹಿಳೆಯರಿಗೆ ₹2 ಸಾವಿರ ಗೃಹಲಕ್ಷ್ಮೀ ಹಣ ನೀಡಿದ ಮಾತ್ರಕ್ಕೆ ಅವರ ಅಭಿವೃದ್ಧಿ ಸಾಧ್ಯವಿಲ್ಲ. ಮಹಿಳೆಯರಿಗೆ ಸಾಂವಿಧಾನಿಕವಾಗಿ ದೊರೆಯಬೇಕಿರುವ ಹಕ್ಕುಗಳನ್ನು ಕಲ್ಪಿಸಬೇಕು ಎಂದು ಹೇಳಿದರು.

ವಿದ್ಯಾವಂತ ಯುವ ಸಮುದಾಯಕ್ಕೆ ಉದ್ಯೋಗಗಳೆ ದೊರೆಯದಾಗಿವೆ. ಸರ್ಕಾರ ಕಾಟಾಚಾರಕ್ಕೆ ಉದ್ಯೋಗ ಮೇಳ ನಡೆಸುವ ಮೂಲಕ ವಿದ್ಯಾವಂತರನ್ನು ವಂಚಿಸಲಾಗುತ್ತಿದೆ. ಕಾಂಗ್ರೆಸ್ ಪಕ್ಷವನ್ನು ರಾಜ್ಯದಿಂದ ಕಿತ್ತು ಹಾಕದೇ ಇದ್ದರೆ ಯುವ ಸಮುದಾಯಕ್ಕೆ ಉದ್ಯೋಗ ದೊರೆಯಲು ಸಾಧ್ಯವೇ ಇಲ್ಲ. ಕೇಂದ್ರೆ ಹಾಗೂ ರಾಜ್ಯ ಸರ್ಕಾರಗಳ ಸಾಧನೆಯನ್ನು ಹಾಗೂ ರಾಜ್ಯ ಸರ್ಕಾರದ ವೈಫಲ್ಯಗಳನ್ನು ಕಾರ್ಯಕರ್ತರು ಜನರ ಮುಂದಿಡಬೇಕು ಎಂದು ವಿವರಿಸಿದರು.

ರೈತರಿಗೆ ಆರ್ಥಿಕ ಸಂಕಷ್ಟ:

ಜೆಡಿಎಸ್ ರಾಜ್ಯ ಕೋರ್‌ಕಮಿಟಿ ಅಧ್ಯಕ್ಷ ಕೃಷ್ಣಾರೆಡ್ಡಿ ಮಾತನಾಡಿ, ತಾಲೂಕಿನಲ್ಲಿ ಹಲವಾರು ರೈತ ಕುಟುಂಬಗಳು ಹೈನುಗಾರಿಕೆಯನ್ನು ನಂಬಿ ಜೀವನ ನಡೆಸುತ್ತಿದ್ದಾರೆ. ಇತ್ತೀಚೆಗೆ ಗ್ರಾಮಗಳಲ್ಲಿ ಹಸುಗಳ ಕಳವು ನಡೆಯುತ್ತಿದೆ. ಆದರೆ ಪೊಲೀಸರು ಮಾತ್ರ ಈ ಬಗ್ಗೆ ಯಾವುದೇ ಕ್ರಮ ಕೈಗೊಂಡಿಲ್ಲ. ಇದರಿಂದ ರೈತರು ಆರ್ಥಿಕವಾಗಿ ಸಂಕಷ್ಟಕ್ಕೆ ಸಿಲುಕಿರುವುದಲ್ಲದೆ ಆತಂಕದಲ್ಲಿ ದಿನ ಕಳೆಯುವಂತಾಗಿದೆ. ರಾಜ್ಯ ಸರ್ಕಾರ ಸುಳ್ಳು ಭರವಸೆಗಳಿಂದ ಆಡಳಿತ ನಡೆಸುತ್ತಿದೆ ಎಂದು ಹೇಳಿದರು.ಸಮಾವೇಶದಲ್ಲಿ ಶಾಸಕ ರವಿಕುಮಾರ್, ಮಾಜಿ ಶಾಸಕರಾದ ನಾರಾಯಣಸ್ವಾಮಿ, ಶ್ರೀನಿವಾಸಮೂರ್ತಿ, ವಿಧಾನ ಪರಿಷತ್ ಮಾಜಿ ಸದಸ್ಯರಾದ ಕೃಷ್ಣಪ್ಪ, ಚೌಡರೆಡ್ಡಿ, ರಮೇಶ್ ಗೌಡ, ರಾಜ್ಯ ಪ್ರಧಾನ ಕಾರ್ಯದರ್ಶಿ ಡಾ.ಎಚ್ ಜಿ.ವಿಜಯಕುಮಾರ್, ಜೆಡಿಎಸ್ ಜಿಲ್ಲಾಧ್ಯಕ್ಷ ಕೆ.ವಿ.ಮಂಜುನಾಥ್, ಮಾಜಿ ಅಧ್ಯಕ್ಷ ಬಿ.ಮುನೇಗೌಡ, ತಾಲೂಕು ಘಟಕದ ಅಧ್ಯಕ್ಷ ಎಸ್.ಎಂ.ಹರೀಶ್ ಗೌಡ, ಮುಖಂಡರಾದ ಎ.ನರಸಿಂಹಯ್ಯ, ಟಿ.ಗೋವಿಂದರಾಜು, ಟಿ.ಎನ್.ಪ್ರಭುದೇವ್, ಹುಸ್ಕೂರು ಆನಂದ್, ಅಂಜನೇಗೌಡ, ಎ.ಪಿ.ರಂಗನಾಥ್, ಜಿ.ಸತ್ಯನಾರಾಯಣ್ ಮತ್ತಿತರರಿದ್ದರು.

ಬಾಕ್ಸ್‌............

ಭೂಸ್ವಾಧೀನ ವಿರೋಧಿ ಹೋರಾಟಕ್ಕೆ ಬೆಂಬಲ:

ತಾಲೂಕಿನ ದೊಡ್ಡಬೆಳವಂಗಲ ಹೊಗುಳಿಯಲ್ಲಿನ ಫಲವತ್ತಾದ 2,100 ಎಕರೆ ಕೃಷಿ ಭೂಮಿ ಸ್ವಾಧೀನದ ವಿರುದ್ಧ ನಡೆಸಲಾಗುತ್ತಿರುವ ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹಕ್ಕೆ ಬೆಂಬಲ ನೀಡುವಂತೆ ಹಾಗೂ ಭೂಸ್ವಾಧೀನವನ್ನು ಕೈಬಿಡುವಂತೆ ಸರ್ಕಾರದ ಮೇಲೆ ಒತ್ತಡ ತರುವೆ ಮೂಲಕ ನಮ್ಮ ಕೃಷಿ ಬದುಕು ಉಳಿಸಿಕೊಡಬೇಕು ಎಂದು ದೊಡ್ಡಬೆಳವಂಗಲ ಭೂಸ್ವಾಧೀನ ವಿರೋಧಿ ಹೋರಾಟ ಸಮಿತಿಯ ಪ್ರಧಾನ ಕಾರ್ಯದರ್ಶಿ ಸಿ.ಎಚ್.ರಾಮಕೃಷ್ಣ ಹಾಗೂ ಸಮಿತಿಯ ಸದಸ್ಯರು ನಿಖಿಲ್ ಕುಮಾರಸ್ವಾಮಿಗೆ ಮನವಿ ಸಲ್ಲಿಸಿದರು.

ಈ ಕುರಿತು ಪ್ರತಿಕ್ರಿಯಿಸಿದ ನಿಖಿಲ್‌, ಜೆಡಿಎಸ್ ಎಂದಿಗೂ ರೈತರ ಪರವಾಗಿದ್ದು, ಕೇಂದ್ರ ಸಚಿವ ಕುಮಾರಸ್ವಾಮಿ ಅವರ ಗಮನಕ್ಕೆ ತರಲಾಗುವುದು ಎಂದು ಹೇಳಿದರು.

ಫೋಟೋ-

9ಕೆಡಿಬಿಪಿ1-

ದೊಡ್ಡಬಳ್ಳಾಪುರದಲ್ಲಿ ನಡೆದ ಜೆಡಿಎಸ್ ರಜತ ಮಹೋತ್ಸವ ಸಮಾವೇಶದಲ್ಲಿ ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಮಾತನಾಡಿದರು.

9ಕೆಡಿಬಿಪಿ2-

ದೊಡ್ಡಬಳ್ಳಾಪುರದಲ್ಲಿ ನಡೆದ ಜೆಡಿಎಸ್ ರಜತ ಮಹೋತ್ಸವ ಸಮಾವೇಶದಲ್ಲಿ ನೆರೆದಿರುವ ಜನಸ್ತೋಮ.

9ಕೆಡಿಬಿಪಿ3-

ದೊಡ್ಡಬಳ್ಳಾಪುರಕ್ಕೆ ಆಗಮಿಸಿದ ನಿಖಿಲ್‌ ಕುಮಾರಸ್ವಾಮಿ ಅವರಿಗೆ ಸಂಭ್ರಮದ ಸ್ವಾಗತ ಬಳಿಕ ತೆರೆದ ವಾಹನದಲ್ಲಿ ಮೆರವಣಿಗೆ ನಡೆಯಿತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ನಂದಿನಿ ಉತ್ಪನ್ನಗಳು ಬಳಸಿದರೆ ರೈತರಿಗೆ ಅನುಕೂಲ
ಯಡಿಯೂರಪ್ಪನವರ ಜನಸೇವೆ ನಮ್ಮೆಲ್ಲರಿಗೂ ದಾರಿದೀಪ