ಎಲ್‌ಇಡಿ ಲೈಟ್‌: ಸಮೀಕ್ಷೆ ಇಲ್ಲದೇ ಟೆಂಡರ್‌?

KannadaprabhaNewsNetwork |  
Published : Mar 27, 2025, 01:01 AM IST
cxcxc | Kannada Prabha

ಸಾರಾಂಶ

. ತರಾತುರಿಯಲ್ಲಿ ಮಾಡಲಾಗುತ್ತಿರುವ ಈ ಟೆಂಡರ್ ಪ್ರಕ್ರಿಯೆ ರದ್ದುಪಡಿಸಿ ಸಮೀಕ್ಷೆ ನಡೆಸಿದ ಬಳಿಕವೇ ಗುತ್ತಿಗೆ ನೀಡಬೇಕು ಎಂಬ ಕೂಗು ಜೋರಾಗಿದೆ.

ವಿಶೇಷ ವರದಿ

ಹುಬ್ಬಳ್ಳಿ: ವಿದ್ಯುತ್‌ ಉಳಿತಾಯಕ್ಕಾಗಿ ಬೀದಿದೀಪಗಳನ್ನೆಲ್ಲ ಎಲ್‌ಇಡಿ ದೀಪಗಳಾಗಿ ಪರಿವರ್ತಿಸಲು ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ನಿರ್ಧರಿಸಿ ಟೆಂಡರ್‌ ಪ್ರಕ್ರಿಯೆ ಮುಕ್ತಾಯ ಹಂತಕ್ಕೆ ತಲುಪಿದೆ. ಆದರೆ, ಅದಕ್ಕಿಂತ ಮುಂಚೆ ವಿದ್ಯುತ್‌ ಕಂಬಗಳ ಸಮೀಕ್ಷೆಯನ್ನೇ ನಡೆಸಿಲ್ಲ. ತರಾತುರಿಯಲ್ಲಿ ಮಾಡಲಾಗುತ್ತಿರುವ ಈ ಟೆಂಡರ್ ಪ್ರಕ್ರಿಯೆ ರದ್ದುಪಡಿಸಿ ಸಮೀಕ್ಷೆ ನಡೆಸಿದ ಬಳಿಕವೇ ಗುತ್ತಿಗೆ ನೀಡಬೇಕು ಎಂಬ ಕೂಗು ಜೋರಾಗಿದೆ. ಇನ್ನು ಬೀದಿ ದೀಪದ ಜವಾಬ್ದಾರಿಯನ್ನು ಪಿಪಿಪಿ ಮಾದರಿಯಲ್ಲಿ ಕೊಡುತ್ತಿರುವುದರಿಂದ ಇದು ಕೂಡ ಎಲ್ಲಿ ನಿರಂತರ ನೀರು ಯೋಜನೆಯಂತೆ (ಎಲ್‌ಆ್ಯಂಡ್‌ಟಿ) ಆಗುತ್ತದೆಯೋ ಎಂಬ ಆತಂಕವನ್ನು ವ್ಯಕ್ತಪಡಿಸಿರುವುದುಂಟು.

ಆಗಿರುವುದೇನು?

ಹುಬ್ಬಳ್ಳಿ-ಧಾರವಾಡ ಮಹಾನಗರದಲ್ಲಿ ಬೀದಿದೀಪಗಳಿಗಾಗಿ ಪ್ರತಿ ತಿಂಗಳು ₹2 ಕೋಟಿ ವಿದ್ಯುತ್‌ ಬಿಲ್‌ ಕಟ್ಟಬೇಕು. ಇದರ ನಿರ್ವಹಣೆಗೆ ಪ್ರತಿವರ್ಷ ಕನಿಷ್ಠ ಏನಿಲ್ಲವೆಂದರೂ ₹4.5ಯಿಂದ ₹5 ಕೋಟಿ ಖರ್ಚಾಗುತ್ತದೆ. ಇದರ ಬದಲಿಗೆ ಎಲ್‌ಇಡಿ ಬಲ್ಬ್‌ ಅಳವಡಿಸಿದರೆ ವಿದ್ಯುತ್‌ ಕೂಡ ಉಳಿತಾಯವಾಗುತ್ತದೆ. ನಿರ್ವಹಣೆಯೂ ಕಷ್ಟವಾಗುವುದಿಲ್ಲ. ಜತೆಗೆ ನಗರದ ಸೌಂದರ್ಯವೂ ಹೆಚ್ಚಾಗುತ್ತದೆ ಎಂಬ ಉದ್ದೇಶ ಪಾಲಿಕೆಯದ್ದು. ಇದು ಒಳ್ಳೆಯ ನಿರ್ಧಾರವೇ ಸರಿ.

ಪಿಪಿಪಿ (ಸಾರ್ವಜನಿಕ ಸಹಭಾಗಿತ್ವ) ಮಾದರಿಯಲ್ಲಿ ಬೀದಿದೀಪಗಳನ್ನು ಎಲ್‌ಇಡಿ ದೀಪಗಳನ್ನಾಗಿ ಪರಿವರ್ತಿಸಲು ಪಾಲಿಕೆ ನಿರ್ಧರಿಸಿದೆ. ಇದಕ್ಕಾಗಿ ₹93.56 ಕೋಟಿಯ ಟೆಂಡರ್‌ ಕೂಡ ಕರೆದಿದೆ. ನಾಲ್ಕೈದು ಏಜೆನ್ಸಿಗಳು ಟೆಂಡರ್‌ನಲ್ಲಿ ಭಾಗವಹಿಸಿವೆ. ಶೀಘ್ರದಲ್ಲೇ ಅಂತಿಮಗೊಳಿಸಿ ಕಾರ್ಯಾದೇಶವನ್ನೂ ನೀಡಲು ಪಾಲಿಕೆ ಎಲ್ಲ ಸಿದ್ಧತೆ ಮಾಡಿಕೊಂಡಿದೆ.

ಏನೇನು ಲಾಭ?

ಎಲ್‌ಇಡಿ ಬಲ್ಬ್‌ಗಳನ್ನು ಅಳವಡಿಸಿದರೆ ಸರಿಸುಮಾರು ಶೇ. 50ರಷ್ಟು ವಿದ್ಯುತ್‌ ಉಳಿತಾಯವಾಗುತ್ತದೆ. ಅಂದರೆ ಈಗ ಕೊಡುವ ಬಿಲ್‌ನಲ್ಲಿ ₹1 ಕೋಟಿ ಕಡಿಮೆಯಾಗುತ್ತದೆ. ಏಳು ವರ್ಷ ನಿರ್ವಹಣೆ ಜವಾಬ್ದಾರಿ ಗುತ್ತಿಗೆ ಪಡೆದ ಏಜೆನ್ಸಿಯದ್ದೇ ಆಗಿರುವುದರಿಂದ ಅದರ ಕಿರಿಕಿರಿಯೂ ಪಾಲಿಕೆಗೆ ತಪ್ಪುತ್ತದೆ. ಏಜೆನ್ಸಿಗೆ ಒಂದು ಕೋಟಿ ಹಾಗೂ ಹೆಸ್ಕಾಂಗೆ ಬಿಲ್‌ ಪಾವತಿಸುತ್ತಾ ಪಾಲಿಕೆ ಹೋಗಬೇಕಾಗುತ್ತದೆ. 8 ತಿಂಗಳಲ್ಲಿ ಎಲ್ಲೆಡೆ ಎಲ್‌ಇಡಿ ಬೀದಿ ದೀಪ ಅಳವಡಿಸಬೇಕು ಎಂಬ ಷರತ್ತು ವಿಧಿಸಲಾಗುತ್ತಿದೆ.

ಮತ್ತೇನು ಸಮಸ್ಯೆ?

ಹೀಗೆ ವಿದ್ಯುತ್‌ ಉಳಿತಾಯದ ದೊಡ್ಡ ಯೋಜನೆ ಮಾಡುತ್ತಿರುವುದಕ್ಕೆ ಯಾವುದೇ ಆಕ್ಷೇಪವಿಲ್ಲ. ಆದರೆ, ಅದಕ್ಕಿಂತ ಮುಂಚೆ ವಿದ್ಯುತ್‌ ಕಂಬಗಳು ಎಷ್ಟಿವೆ ಎಂಬುದರ ಬಗ್ಗೆ ಸಮೀಕ್ಷೆ ನಡೆಸಬೇಕು. ಜತೆಗೆ ಪ್ರತಿ ವಿದ್ಯುತ್‌ ಕಂಬದ ಮೇಲೂ ನಂಬರ್‌ ಬರೆಯಬೇಕು. ಉದಾಹರಣೆಗೆ ವಾರ್ಡ್‌ ನಂ. 1ರಲ್ಲಿನ ಕಂಬದ ಮೇಲೆ ವಾರ್ಡ್‌ ನಂಬರ್‌ ಜತೆಗೆ ಎಷ್ಟನೆಯ ಕಂಬ ಎಂಬುದನ್ನು ನಮೂದಿಸಬೇಕು. ಅಂದಾಗ ಆ ವಿದ್ಯುತ್‌ ಕಂಬದಲ್ಲಿ ಏನಾದರೂ ಸಮಸ್ಯೆಯಾದರೆ ಅದರ ಆಧಾರದ ಮೇಲೆ ದೂರು ನೀಡಲು ಸಾರ್ವಜನಿಕರಿಗೆ ಅನುಕೂಲವಾಗುತ್ತದೆ. ಜತೆಗೆ ಯಾವ ವಿದ್ಯುತ್‌ ಕಂಬದಲ್ಲಿ ಸಮಸ್ಯೆಯಾಗಿದೆ ಎಂಬುದು ಬೇಗ ತಿಳಿಯುತ್ತದೆ. ಆಗ ನಿರ್ವಹಣೆಗೂ ಅನುಕೂಲವಾಗುತ್ತದೆ. ಆದರೆ, ಈಗ ಎಲ್‌ಇಡಿ ಅಳವಡಿಸಲು ಯಾವುದೇ ಸಮೀಕ್ಷೆಯನ್ನೇ ನಡೆಸಿಲ್ಲ ಎಂಬ ಆರೋಪ ಕೇಳಬಂದಿದೆ.

ಆದರೆ, ಇದನ್ನು ಅಲ್ಲಗೆಳೆಯುವ ಪಾಲಿಕೆಯ ವಿದ್ಯುತ್‌ ವಿಭಾಗ, ಈಗ ಸಮೀಕ್ಷೆ ನಡೆಸಿಲ್ಲ. ಆದರೆ 2022ರಲ್ಲಿ ಸಮೀಕ್ಷೆ ನಡೆಸಲಾಗಿದೆ. 75 ಸಾವಿರ ವಿದ್ಯುತ್‌ ಕಂಬಗಳಿವೆ ಎಂದು ತಿಳಿಸುತ್ತದೆ. ಆದರೆ, ನಂಬರ್‌ಗಳನ್ನು ಹಾಕಿಲ್ಲ ಎಂಬುದನ್ನು ಒಪ್ಪಿಕೊಳ್ಳುತ್ತದೆ. ಪಾಲಿಕೆ ವಿದ್ಯುತ್‌ ವಿಭಾಗದ ಅಧಿಕಾರಿ ಇನ್ನಾರು ತಿಂಗಳಲ್ಲಿ ನಿವೃತ್ತಿಯಾಗಲಿದ್ದಾರಂತೆ. ಹೀಗಾಗಿ, ತರಾತುರಿಯಲ್ಲಿ ಮಾಡಲಾಗುತ್ತಿದೆ. ಕೂಡಲೇ ಇದನ್ನು ರದ್ದುಪಡಿಸಬೇಕು ಎಂದು ಆಗ್ರಹಿಸಿ ಕೆಲವರು ಜಿಲ್ಲಾ ಉಸ್ತುವಾರಿ ಸಚಿವರು, ಪ್ರಾದೇಶಿಕ ಆಯುಕ್ತರಿಗೆ ಪತ್ರ ಬರೆದಿದ್ದಾರೆ.

ಕುಡಿಯುವ ನೀರಿನಂತಾಗದಿರಲಿ

ಕುಡಿವ ನೀರಿನ ಯೋಜನೆಯನ್ನು ಎಲ್‌ಆ್ಯಂಡ್‌ಟಿ ಕಂಪನಿಗೆ ಗುತ್ತಿಗೆ ನೀಡಲಾಗಿದೆ. ಆದರೆ ಅದು ಸರಿಯಾಗಿ ನಿರ್ವಹಿಸದೇ ಸಾರ್ವಜನಿಕರು ಸಾಕಷ್ಟು ತೊಂದರೆ ಅನುಭವಿಸುವಂತಾಗಿದೆ. ಕುಡಿವ ನೀರಿನ ವ್ಯವಸ್ಥೆಯೇ ಹದಗೆಟ್ಟಿದೆ. ಅದೇ ರೀತಿ ಬೀದಿ ದೀಪದ್ದು ಆಗಬಾರದು. ಇದನ್ನು ಗಮನದಲ್ಲಿಟ್ಟುಕೊಂಡು ಟೆಂಡರ್‌ ನೀಡಬೇಕೆಂಬ ಆಗ್ರಹ ಸಾರ್ವಜನಿಕರದ್ದು.

ವಿದ್ಯುತ್‌ ಉಳಿತಾಯ

ಸಮೀಕ್ಷೆ ನಡೆಸಲಾಗಿದೆ. ಆದರೆ 2022ರಲ್ಲಿ ಆಗಿದ್ದು, ವಿದ್ಯುತ್‌ ಕಂಬಗಳ ಮೇಲೆ ನಂಬರ್‌ ಬರೆದಿಲ್ಲ ಅಷ್ಟೇ. 75 ಸಾವಿರ ಕಂಬಗಳಿವೆ. ಈ ಯೋಜನೆಯಿಂದ ವಿದ್ಯುತ್‌ ಉಳಿತಾಯವಾಗುತ್ತದೆ.

- ಎಸ್‌.ಎನ್‌. ಗಣಾಚಾರಿ, ಮುಖ್ಯ ಕಾರ್ಯನಿರ್ವಾಹಕ ಅಭಿಯಂತರು, ವಿದ್ಯುತ್‌ ವಿಭಾಗ, ಪಾಲಿಕೆ

PREV

Recommended Stories

ರಾಜ್ಯದ ಸಿರಿಧಾನ್ಯ ಬೆಳೆಗಾರರಿಗೆ ರಾಜ್ಯ ಸರ್ಕಾರದ ಸಿಹಿ ಸುದ್ದಿ
ಬ್ಯಾಲೆಟ್‌ ಬಳಕೆಗೆ ಸುಗ್ರೀವಾಜ್ಞೆ ಅಗತ್ಯವಿಲ್ಲ : ಸಂಪುಟದಲ್ಲಿ ಚರ್ಚೆ