ನಿಗಮ ಮಂಡಳಿಗೆ ಕೋಟೆನಾಡಲ್ಲಿ ಎಡಗೈಗೆ ಪ್ರಾಧಾನ್ಯತೆ

KannadaprabhaNewsNetwork |  
Published : Mar 01, 2024, 02:20 AM IST

ಸಾರಾಂಶ

ನಿಗಮ ಮಂಡಳಿ ಪಟ್ಟಿಯಲ್ಲಿ ಚಿತ್ರದುರ್ಗ ಜಿಲ್ಲೆಗೆ ಸಿಂಹಪಾಲು ದೊರೆತಿದೆ.

ಚಿತ್ರದುರ್ಗ: ಮುಖ್ಯಮಂತ್ರಿ ಸಿದ್ದರಾಮಯ್ಯ ಬುಧವಾರ ಬಿಡುಗಡೆಗೊಳಿಸಿದ ನಿಗಮ ಮಂಡಳಿ ಪಟ್ಟಿಯಲ್ಲಿ ಚಿತ್ರದುರ್ಗ ಜಿಲ್ಲೆಗೆ ಸಿಂಹಪಾಲು ದೊರೆತಿದೆ. ಈ ಮೊದಲು ಶಾಸಕರಾದ ಟಿ.ರಘುಮೂರ್ತಿ, ಬಿ.ಜಿ.ಗೋವಿಂದಪ್ಪ ಪ್ರಮುಖ ನಿಗಮಗಳ ಅಧ್ಯಕ್ಷ ಸ್ಥಾನದ ವಾರಸುದಾರಿಕೆ ಪಡೆದ ನಂತರ 2ನೇ ಹಂತದಲ್ಲಿ ಆರು ಮಂದಿ ಅವಕಾಶ ಪಡೆದುಕೊಂಡಿದ್ದಾರೆ. ಕಾರ್ಮಿಕ ಕಲ್ಯಾಣ ಮಂಡಳಿಗೆ ಉಪಾಧ್ಯಕ್ಷರಾಗಿ ಜಿ.ಎಸ್.ಮಂಜುನಾಥ್, ದ್ರಾಕ್ಷಾರಸ ಮಂಡಳಿಗೆ ಡಾ.ಯೋಗೀಶ್ ಬಾಬು, ಸಫಾಯಿ ಕರ್ಮಚಾರಿ ಆಯೋಗದ ಅಧ್ಯಕ್ಷರಾಗಿ ಸವಿತಾ ರಘು, ಚಿತ್ರದುರ್ಗ ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷರಾಗಿ ಎಂ.ಕೆ.ತಾಜ್ ಪೀರ್, ಕಂಠೀರವ ಸ್ಟುಡಿಯೋ ಅಧ್ಯಕ್ಷರಾಗಿ ಮೆಹಬೂಬ ಪಾಷ ಹಾಗೂ ಲಿಡ್ಕರ್‌ಗೆ ಮುಂಡ್ರಗಿ ನಾಗರಾಜ ಅವರನ್ನು ಅಧ್ಯಕ್ಷರನ್ನಾಗಿ ನೇಮಕ ಮಾಡಲಾಗಿದೆ.

ಮಾದಿಗ ಸಮುದಾಯ ಮೂವರು, ಇಬ್ಬರು ಮುಸ್ಲಿಮರು, ಓರ್ವ ನಾಯಕ ಸಮುದಾಯಕ್ಕೆ ನಿಗಮ ಮಂಡಳಿಯಲ್ಲಿ ಪ್ರಾತಿನಿಧ್ಯ ನೀಡಲಾಗಿದೆ. ಕಾರ್ಮಿಕ ಕಲ್ಯಾಣ ಮಂಡಳಿಗೆ ಅಧ್ಯಕ್ಷರಾಗಿ ನೇಮಕಗೊಂಡಿರುವ ಜಿ.ಎಸ್.ಮಂಜುನಾಥ್ ಹಾಲಿ ಕೆಪಿಸಿಸಿ ಅಸಂಘಟಿತ ಕಾರ್ಮಿಕರ ವಿಭಾಗದ ರಾಜ್ಯಾಧ್ಯಕ್ಷರು. ಪೌರ ಸೇವಾ ನೌಕರರ ಸಂಘದ ರಾಜ್ಯ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು. ಹಿಂದೊಮ್ಮೆ ಮಾಜಿ ಸಚಿವ ಕೆ.ಎಚ್.ರಂಗನಾಥ್ ಅವರಿಗೆ ಟಿಕೆಟ್ ತಪ್ಪಿಸಿ ಹಿರಿಯೂರು ವಿಧಾನಸಭೆ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿ ಸೋಲುಂಡಿದ್ದರು. ಲೋಕಸಭೆ ಚುನಾವಣೆಗೆ ಚಿತ್ರದುರ್ಗ ಕ್ಷೇತ್ರದಿಂದ ಸ್ಪರ್ಧಿಸಲು ಉತ್ಸುಕರಾಗಿರುವ ಮಂಜುನಾಥ್‌ಗೆ ನಿಗಮ ಮಂಡಳಿಯಲ್ಲಿ ಅವಕಾಶ ಕಲ್ಪಿಸಿರುವುದು ಕುತೂಹಲ ಮೂಡಿಸಿದೆ.

ಕಂಠೀರವ ಸ್ಟುಡಿಯೋ ಅಧ್ಯಕ್ಷರಾಗಿರುವ ಮೆಹಬೂಬ ಪಾಷಾ ಮೂಲತಹ ಚಿತ್ರದುರ್ಗದವರಾಗಿದ್ದರೂ ಬೆಂಗಳೂರು ಕೋಟಾದಡಿ ನಿಗಮ ಮಂಡಳಿಯಲ್ಲಿ ಅವಕಾಶ ಪಡೆದಿದ್ದಾರೆ. ಹಿಂದೊಮ್ಮೆ ವಿಧಾನ ಪರಿಷತ್ತಿನ ಸ್ಥಳೀಯ ಸಂಸ್ಥೆಗಳ ಚಿತ್ರದುರ್ಗ ಕ್ಷೇತ್ರದಿಂದ ಕಣಕ್ಕಿಳಿದು ಪಾಷಾ ಸೋಲುಂಡಿದ್ದರು. ಚಿತ್ರದುರ್ಗ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿ ನೇಮಕಗೊಂಡಿರುವ ತಾಜ್ ಫೀರ್ ಕೂಡಾ ಹಿಂದೊಮ್ಮೆ ಚಿತ್ರದುರ್ಗ ವಿಧಾನಸಭೆ ಕ್ಷೇತ್ರದಿಂದ ಸ್ಪರ್ಧಿಸಿ ಸೋತಿದ್ದರು. ಈ ಬಾರಿ ವಿಧಾನಪರಿಷತ್ತಿಗೆ ಅವರನ್ನು ನೇಮಕ ಮಾಡಲಾಗುತ್ತದೆ ಎಂಬ ಮಾತುಗಳು ಕೇಳಿ ಬಂದಿತ್ತು. ತಾಜ್ ಫೀರ್ ಹಾಲಿ ಚಿತ್ರದುರ್ಗ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರು.

ಲಿಡ್ಕರ್ ಅಧ್ಯಕ್ಷರಾಗಿ ನೇಮಕಗೊಂಡಿರುವ ಮುಂಡ್ರಗಿ ನಾಗರಾಜ್ ಮೂಲತಹ ಮೊಳಕಾಲ್ಮುರು ತಾಲೂಕಿನವರು. ಬಳ್ಳಾರಿ ಜಿಲ್ಲೆಯ ಪ್ರಾತಿನಿಧ್ಯದಡಿ ಅವರು ಹೈಕಮಾಂಡ್‌ನಲ್ಲಿ ಗುರುತಿಸಿಕೊಂಡಿದ್ದಾರೆ. ಪರಿಶಿಷ್ಟ ಎಡಗೈಗೆ ಸೇರಿರುವ ಮುಂಡ್ರಗಿ ನಾಗರಾಜ್ ಕಳೆದ ಅವಧಿಯಲ್ಲಿ ಚಿತ್ರದುರ್ಗ ಜಿಲ್ಲಾ ಪಂಚಾಯಿತಿಯಲ್ಲಿ ಸದಸ್ಯರಾಗಿದ್ದರು. ಕಳೆದ ಅವಧಿಯಲ್ಲಿ ಜಿಲ್ಲಾ ಪಂಚಾಯಿತಿ ಸದಸ್ಯರಾಗಿದ್ದು, ಸವಿತಾ ರಘು ಕೂಡಾ ಎಡಗೈಗೆ ಸೇರಿದವರಾಗಿದ್ದಾರೆ. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಹೊಳಲ್ಕೆರೆ ಕ್ಷೇತ್ರದಿಂದ ಕಣಕ್ಕಿಳಿಯಲು ತುದಿಗಾಲಲ್ಲಿ ನಿಂತಿದ್ದರು. ಆಂಜನೇಯ ಅವರಂತಹ ನಾಯಕಗೆ ಟಿಕೆಟ್ ತಪ್ಪಿಸುವುದು ಸುಲಭದ ಸಂಗತಿಯಲ್ಲವೆಂಬ ಅರಿವಿದ್ದರೂ ಟಿಕೆಟ್‌ಗಾಗಿ ಲಾಭಿ ಮಾಡಿದ್ದರು. ಸವಿತಾ ರಘು ಅವರಿಗೆ ಸಫಾಯಿ ಕರ್ಮಚಾರಿ ಆಯೋಗದ ಅಧ್ಯಕ್ಷರನ್ನಾಗಿ ನೇಮಕ ಮಾಡಲಾಗಿದೆ.

ದ್ರಾಕ್ಷಾರಸ ನಿಗಮದ ಅಧ್ಯಕ್ಷರಾಗಿ ನೇಮಕಗೊಂಡಿರುವ ಡಾ.ಯೋಗೀಶ್ ಬಾಬು ಚಿತ್ರದುರ್ಗ ಜಿಲ್ಲಾ ಪಂಚಾಯಿತಿ ಸದಸ್ಯರಾಗಿದ್ದರು. ಹಿಂದೊಮ್ಮೆ ಮೊಳಕಾಲ್ಮೂರು ವಿಧಾನಸಭೆ ಕ್ಷೇತ್ರದಿಂದ ಕಾಂಗ್ರೆಸ್ ಹುರಿಯಾಳಾಗಿ ಸ್ಪರ್ಧಿಸಿ ಸೋಲುಂಡಿದ್ದರು. ಕಳೆದ ಬಾರಿಯ ವಿಧಾನಸಭೆ ಚುನಾವಣೆಯಲ್ಲಿ ಪಕ್ಷ ಎನ್.ವೈ.ಗೋಪಾಲಕೃಷ್ಣ ಅವರಿಗೆ ಮಣೆ ಹಾಕಿದ್ದರಿಂದ ಮುಂದೆ ಅವಕಾಶ ಕಲ್ಪಿಸುವ ಭರವಸೆ ನೀಡಲಾಗಿತ್ತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಅನ್ಯಕೋಮಿನವನ ಜತೆ ಮದುವೆ: ಮೊಮ್ಮಗಳ ಶಿಶು ಕೊಂ*ದ ಅಜ್ಜಿ!
ಕಾಳಸಂತೆಯಲ್ಲಿ ಎಲ್ಪಿಜಿ ಸೇಲ್‌ ಮೇಲೆ ನಿಗಾ - ಅಧಿಕಾರಿಗಳಿಗೆ ಸಿಎಸ್‌ ಸೂಚನೆ