ಮುಂಡಗೋಡ ಕಾಂಗ್ರೆಸ್ಸಿನಲ್ಲಿ ಭುಗಲೆದ್ದ ಆಕ್ರೋಶ

KannadaprabhaNewsNetwork |  
Published : Mar 01, 2024, 02:20 AM IST
ಮುಂಡಗೋಡ: ಪಟ್ಟಣದ ಕಾಂಗ್ರೆಸ್ ಕಛೇರಿಯಲ್ಲಿ ಮಾಜಿ ಶಾಸಕ ವಿ.ಎಸ್ ಪಾಟೀಲ ಅವರ ನೇತ್ರತ್ವದಲ್ಲಿ ನಡೆದ ಕಾರ್ಯಕರ್ತರ ಸಭೆಯಲ್ಲಿ ಕಾರ್ಯಕರ್ತರು ಆಕ್ರೊಶ ವ್ಯಕ್ತಪಡಿಸಿದರು. | Kannada Prabha

ಸಾರಾಂಶ

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರನ್ನು ಬದಲಾಯಿಸಬೇಕೆಂದು ಕಾರ್ಯಕರ್ತರು ಬಹಿರಂಗವಾಗಿ ಒತ್ತಾಯಿಸಿದ ಪ್ರಸಂಗ ಕಾರ್ಯಕರ್ತರ ಸಭೆಯಲ್ಲಿ ನಡೆಯಿತು. ಇದು ಕಾಂಗ್ರೆಸ್ ಪಾಳಯದಲ್ಲಿ ತೀವ್ರ ಕೋಲಾಹಲ ಎಬ್ಬಿಸಿದೆ.

ಮುಂಡಗೋಡ:

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರನ್ನು ಬದಲಾಯಿಸಬೇಕೆಂದು ಕಾರ್ಯಕರ್ತರು ಬಹಿರಂಗವಾಗಿ ಒತ್ತಾಯಿಸಿದ ಪ್ರಸಂಗ ಕಾರ್ಯಕರ್ತರ ಸಭೆಯಲ್ಲಿ ನಡೆಯಿತು. ಇದು ಕಾಂಗ್ರೆಸ್ ಪಾಳಯದಲ್ಲಿ ತೀವ್ರ ಕೋಲಾಹಲ ಎಬ್ಬಿಸಿದೆ.ಪಟ್ಟಣದ ಕಾಂಗ್ರೆಸ್ ಕಚೇರಿಯಲ್ಲಿ ಮಾಜಿ ಶಾಸಕ ವಿ.ಎಸ್. ಪಾಟೀಲ ನೇತೃತ್ವದಲ್ಲಿ ನಡೆದ ಕಾರ್ಯಕರ್ತರ ಸಭೆಯಲ್ಲಿ ಧ್ವನಿ ಎತ್ತಿದ ಕಾರ್ಯಕರ್ತರು, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಜ್ಞಾನದೇವ ಗುಡಿಯಾಳ ನಿಷ್ಠಾವಂತ ಕಾರ್ಯಕರ್ತರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆ ತಮ್ಮ ಮನಬಂದಂತೆ ವರ್ತಿಸುತ್ತಾರೆ. ಪಕ್ಷದ ಯಾವುದೇ ಕಾರ್ಯಕ್ರಮಗಳಿಗೂ ಸಹ ತಿಳಿಸುವುದಿಲ್ಲ. ಪಕ್ಷ ಸಂಘಟನೆಗೆ ಒತ್ತು ನೀಡುತ್ತಿಲ್ಲ. ಅಧ್ಯಕ್ಷ ಸ್ಥಾನವನ್ನು ಕೇವಲ ತಮ್ಮ ವೈಯಕ್ತಿಕ ಸಾಧನೆಗೆ ಬಳಸಿಕೊಳ್ಳುತ್ತಿದ್ದಾರೆ ಎಂದು ಆರೋಪಿಸಿದರು.ತಾಲೂಕು ಪಂಚಾಯಿತಿ ಅಭಿವೃದ್ಧಿಗೆ ಬಂದಿರುವ ₹ ೪೦ ಲಕ್ಷದಲ್ಲಿ ₹ ೨೨ ಲಕ್ಷ ಅನುದಾನವನ್ನು ತಾವೇ ಪಡೆದು ಕಾಮಗಾರಿ ಮಾಡುತ್ತಿದ್ದಾರೆ. ಕಾರ್ಯಕರ್ತರಿಗೆ ಯಾವುದೇ ಕಾಮಗಾರಿ ನೀಡುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ ಕಾರ್ಯಕರ್ತರು, ಇತ್ತೀಚೆಗೆ ಮಂಗಳೂರಿನಲ್ಲಿ ನಡೆದ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಕಾರ್ಯಕ್ರಮಕ್ಕೆ ಮುಂಡಗೋಡದಿಂದ ಹೋಗಿದ್ದ ಬಾಡಿಗೆ ವಾಹನ ಹಣವನ್ನು ಕೂಡ ದುರುಪಯೋಗಪಡಿಸಿಕೊಂಡಿದ್ದಾರೆ ಎಂದು ಕೆಲ ಕಾರ್ಯಕರ್ತರು ಆರೋಪಿಸಿದರು. ಅಧ್ಯಕ್ಷರನ್ನು ಬದಲಾಯಿಸಿ ಎಂದು ಹಲವರು ಕೂಗಿದರೆ, ಕೆಲವರು ಠರಾವು ಬರೆಯುವಂತೆ ಪಟ್ಟುಹಿಡಿದಿದ್ದರು.ಪಕ್ಷದಲ್ಲಿ ಎದ್ದಿರುವ ಗೊಂದಲ ಶಮನವಾಗುವಂತೆ ಕಾಣುತ್ತಿಲ್ಲ. ತಾಲೂಕಿನ ಬ್ಲಾಕ್ ಕಾಂಗ್ರೆಸ್‌ನಲ್ಲಿ ಕೆಲವೊಂದು ಬದಲಾವಣೆ ಹಾಗೂ ಗೊಂದಲ ತಿಳಿಗೊಳಿಸದೇ ಇದ್ದರೆ ಲೋಕಸಭಾ ಚುನಾವಣೆಯಲ್ಲಿ ತೀವ್ರ ಹಿನ್ನಡೆಯಾಗಲಿದೆ ಎಂಬ ಅಭಿಪ್ರಾಯವನ್ನು ನಾಯಕರು ತಿಳಿಸಿದರು. ಪಕ್ಷದ ಹಿರಿಯ ನಾಯಕರು ಮುಂಡಗೋಡಗೆ ಭೇಟಿ ನೀಡಿ ಗೊಂದಲ ಶಮನ ಮಾಡಬೇಕು. ಇಲ್ಲದಿದ್ದರೆ ಬಲಿಷ್ಠವಾಗಿರುವ ಕಾಂಗ್ರೆಸ್ ಹಿನ್ನಡೆ ಸಾಧಿಸಲಿದೆ ಎಂದು ಮನವರಿಕೆ ಮಾಡಲು ರಾಜ್ಯ ನಾಯಕರ ಬಳಿ ನಿಯೋಗ ಹೊರಡಲು ಸ್ಥಳಿಯ ಕಾಂಗ್ರೆಸ್ ನಾಯಕರು ಸಜ್ಜಾಗಿದ್ದಾರೆ ಎನ್ನಲಾಗುತ್ತಿದೆ.ಸ್ಥಳ ಚೌಕಾಶಿ ನಡೆಸಿ ಕಾರ್ಯಕರ್ತ ಅಭಿಪ್ರಾಯ ಸಂಗ್ರಹಿಸದೆ ನೇರವಾಗಿ ಅಧ್ಯಕ್ಷರನ್ನು ನೇಮಿಸಿರುವುದು ಇಂತಹ ಪರಿಸ್ಥಿತಿಗೆ ಕಾರಣವಾಗಿದೆ. ರಾಜ್ಯ ನಾಯಕರು ಈ ಬಗ್ಗೆ ಗಮನ ಹರಿಸಿ ಸೂಕ್ತ ಕ್ರಮಕ್ಕೆ ಮುಂದಾಗಬೇಕು ಎಂದು ಮಾಜಿ ಶಾಸಕ ವಿ.ಎಸ್. ಪಾಟೀಲ ಹೇಳಿದರು.

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು ಪಕ್ಷದ ಬಹುಸಂಖ್ಯಾತ ಕಾರ್ಯಕರ್ತರ ವಿಶ್ವಾಸವನ್ನು ಸಂಪೂರ್ಣವಾಗಿ ಕಳೆದುಕೊಂಡಿದ್ದಾರೆ. ಇದರಿಂದ ಗೊಂದಲ ಸೃಷ್ಟಿಯಾಗಿದ್ದು, ಇದನ್ನು ನಿರ್ಲಕ್ಷಿಸಿದರೆ ಪಕ್ಷದ ಸ್ಥಿತಿ ಮತ್ತಷ್ಟು ಬಿಗಡಾಯಿಸಬಹುದು. ಹಾಗಾಗಿ ರಾಜ್ಯ ನಾಯಕರು ತಕ್ಷಣ ಮಧ್ಯ ಪ್ರವೇಶಿಸಿ ಕಾರ್ಯಕರ್ತರ ಅಭಿಪ್ರಾಯ ಪಡೆದು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ತಾಲೂಕು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಗೋಪಾಲ ಪಾಟೀಲ ತಿಳಿಸಿದರು.

PREV

Recommended Stories

ಮಾನಸಿಕ ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ
ಸಭೆಯಲ್ಲಿ ಪುರಸಭೆ ಮಳಿಗೆಗಳ ಹರಾಜಿನ ಗದ್ದಲ