ಕನ್ನಡಪ್ರಭ ವಾರ್ತೆ ಬಾಗಲಕೋಟೆ
ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ಗುರುವಾರ ಗ್ಯಾರಂಟಿ ಯೋಜನೆಗಳ ಜಿಲ್ಲಾಮಟ್ಟದ ಸಮಾವೇಶದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಸಮಾವೇಶದಲ್ಲಿ 50 ಸಾವಿರ ಫಲಾನುಭವಿಗಳನ್ನು ಸೇರಿಸಲು ನಿರ್ಧರಿಸಲಾಗಿದೆ. ಬಾಗಲಕೋಟೆ ತಾಲೂಕಿನಿಂದ 10 ಸಾವಿರ ಹಾಗೂ ಉಳಿದ ತಾಲೂಕಿನಿಂದ ತಲಾ 7 ಸಾವಿರ ಫಲಾನುಭವಿಗಳನ್ನು ಸಮಾವೇಶಕ್ಕೆ ಕರೆ ತರಲು ಕ್ರಿಯಾಯೋಜನೆ ರೂಪಿಸುವಂತೆ ತಹಸೀಲ್ದಾರರಿಗೆ ತಿಳಿಸಿದರು.
ಸರಕಾರದ ನಿರ್ದೇಶನದ ಮೇರೆಗೆ ಗ್ಯಾರಂಟಿ ಯೋಜನೆಗಳನ್ನು ಅರ್ಹ ಫಲಾನುಭವಿಗಳಿಗೆ ತಲುಪಿಸಲು ಸಮಾವೇಶ ಆಯೋಜಿಸಲಾಗುತ್ತಿದೆ. ಸಮಾವೇಶದಲ್ಲಿ ಭಾಗವಹಿಸಲಿರುವ ಫಲಾನುಭವಿಗಳ ಪಟ್ಟಿ ಮಾಡಲು ಪ್ರತಿ ತಾಲೂಕಿಗೆ ಒಬ್ಬರಂತೆ ಜಿಲ್ಲಾಮಟ್ಟದ ಅಧಿಕಾರಿಗಳನ್ನು ನೋಡಲ್ ಅಧಿಕಾರಿಗಳನ್ನಾಗಿ ಮಾಡಲಾಗಿದ್ದು, ತಮಗೆ ವಹಿಸಿ ಜವಾಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸಬೇಕು. ಕಾರ್ಯಕ್ರಮದಲ್ಲಿ ಭಾಗವಹಿಸುವ ಫಲಾನುಭವಿಗಳಿಗೆ ಬಸ್ ಗಳ ವ್ಯವಸ್ಥೆ ಮಾಡಲಾಗುವುದೆಂದು ತಿಳಿಸಿದರು.ಅರ್ಹ ಫಲಾನುಭವಿಗಳು ಮಾಹಿತಿ ಕೊರತೆಯಿಂದ ವಂಚಿತರಾಗಬಾರದು ಎಂಬ ಉದ್ದೇಶದಿಂದ ಜನರಲ್ಲಿ ಜಾಗೃತಿ ಮೂಡಿಸಲು ಗ್ಯಾರಂಟಿ ಸಮಾವೇಶ ಹಮ್ಮಿಕೊಳ್ಳಲಾಗುತ್ತಿದೆ. ಸಮಾವೇಶದಲ್ಲಿ ಗ್ಯಾರಂಟಿ ಯೋಜನೆಗಳಿಗೆ ಸಂಬಂಧಿಸಿದ ಆಯಾ ಇಲಾಖೆಯವರು ಪ್ರತಿ ಯೋಜನೆಗೆ ಎರಡು ಮಳಿಗೆ ಹಾಕಬೇಕು. ಇಲಾಖೆಯಿಂದ ಐಇಸಿ ಚಟುವಟಿಕೆಗಳನ್ನು ಸಹ ಏರ್ಪಡಿಸಬೇಕು. ಇಲಾಖೆಯಿಂದ ಉದ್ಘಾಟನೆ, ಶಂಕುಸ್ಥಾಪನೆ, ಶಿಲಾನ್ಯಾಸಗಳು ಇದ್ದಲ್ಲಿ ಮಾಹಿತಿ ನೀಡಲು ಸೂಚಿಸಿದರು.
ವೇದಿಕೆ ನಿರ್ಮಾಣ, ಸೌಂಡ್ ಸಿಸ್ಟಂ, ವಿದ್ಯುತ್, ಕುಡಿಯುವ ನೀರಿನ ವ್ಯವಸ್ಥೆ ಸೇರಿದಂತೆ ಇತರೆ ಕಾರ್ಯಗಳಿಗೆ ಸಮಿತಿ ರಚಿಸಲಾಗುತ್ತಿದೆ. ಕಾರ್ಯಕ್ರಮ ಯಶಸ್ವಿಗೆ ಎಲ್ಲ ರೀತಿಯ ಕ್ರಮ ವಹಿಸಲಾಗುವುದೆಂದು ತಿಳಿಸಿದರು.