ಕನ್ನಡಪ್ರಭ ವಾರ್ತೆ ಸಕಲೇಶಪುರ
ಎಡಪಂಥೀಯರಿಂದ ಹಿಂದೂಗಳ ಧಾರ್ಮಿಕ ಕೇಂದ್ರಗಳ ಮೇಲೆ ಕಳಂಕ ತರುವ ಕೆಲಸ ನಡೆಯುತ್ತಿದೆ ಎಂದು ಭಾರತೀಯ ಜನತಾ ಪಕ್ಷದ ರಾಜ್ಯಾಧ್ಯಕ್ಷ ವಿಜಯೇಂದ್ರ ಆರೋಪಿಸಿದರು.ಧರ್ಮಸ್ಥಳಕ್ಕೆ ತೆರಳುವ ಮಾರ್ಗ ಮಧ್ಯೆ ಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಧರ್ಮಸ್ಥಳದ ಮೇಲೆ ಒಂದು ಗುಂಪು ಕಳೆದ ಒಂದು ದಶಕದಿಂದ ನಿರಂತರ ಅಪಪ್ರಚಾರದಲ್ಲಿ ತೊಡಗಿದ್ದು, ಒಮ್ಮೆ ತನಿಖೆಯಾಗಲಿ ಎಂಬ ದೃಷ್ಟಿಯಿಂದ ವಿರೇಂದ್ರ ಹೆಗ್ಗಡೆಯವರು ಸುಮ್ಮನಿದ್ದಾರೆ. ಇದು ಧರ್ಮಸ್ಥಳಕ್ಕೆ ಮಾತ್ರ ಸೀಮಿತವಲ್ಲ. ಮತಾಂತರ ತಡೆಯುವ ಹಾಗೂ ನಿರಂತರ ಹಿಂದೂ ಧರ್ಮ ಜಾಗೃತಿ ಮೂಡಿಸುತ್ತಿರುವ ಎಲ್ಲ ಧಾರ್ಮಿಕ ಕ್ಷೇತ್ರಗಳು ಇವರ ಗುರಿಯಾಗಿದೆ. ಸರ್ಕಾರ ಸಣ್ಣದೊಂದು ದೂರನ್ನು ಆಧರಿಸಿ ತನಿಖೆಗೆ ಎಸ್‌ಐಟಿ ನೇಮಿಸಿರುವುದು ಆಶ್ಚರ್ಯಕರ. ಎಸ್‌ಐಟಿ ನೇಮಕಕ್ಕೆ ಮುಖ್ಯಮಂತ್ರಿಗಳ ಮೇಲೆ ಒತ್ತಡ ತಂದವರು ಯಾರು ಎಂಬುದು ಸ್ವಷ್ಟವಾಗಿದೆ. ಎಸ್‌ಐಟಿ ತನಿಖೆ ನಡೆಸಲು ಲಕ್ಷಾಂತರ ರುಪಾಯಿ ವೆಚ್ಚವಾಗಿದ್ದು, ಈ ಮೊತ್ತವನ್ನು ದೂರುದಾರರಿಂದಲೇ ಭರಿಸಬೇಕು. ಮಾಸ್ಕ್ ಹಾಕಿರುವ ವ್ಯಕ್ತಿ ಕ್ರಿಮಿನಲ್ ಆಗಿದ್ದು ಹಣದ ವ್ಯಾಮೋಹದಿಂದ ಕೋಟ್ಯಂತರ ಜನರ ಆರಾಧನ ಕ್ಷೇತ್ರಕ್ಕೆ ಹಾನಿ ಉಂಟು ಮಾಡಲು ಯತ್ನಿಸಿದ್ದಾನೆ. ಸದ್ಯ ಭೂಮಿ ಅಗೆದಿರುವ ಪ್ರದೇಶದಲ್ಲಿ ಏನು ದೂರಕಿಲ್ಲ. ಆದ್ದರಿಂದ ಮಾಸ್ಕ್ ಮ್ಯಾನ್‌ಗೆ ಶಿಕ್ಷೆ ವಿಧಿಸಬೇಕು. ಹಾಗೂ ಈತನ ಬೆನ್ನ ಹಿಂದಿರುವ ವ್ಯಕ್ತಿಗಳನ್ನು ಸರ್ಕಾರ ಪತ್ತೆಹಚ್ಚಬೇಕು. ಇಡೀ ರಾಜ್ಯದ ಜನತೆ ಧರ್ಮಸ್ಥಳದ ಪರವಾಗಿದ್ದು ಹೆಗ್ಗಡೆಯವರು ಎದೆಗುಂದುವ ಅಗತ್ಯವಿಲ್ಲ. ದೇವರ ವಿಚಾರದಲ್ಲಿ ಯಾರು ಹುಡುಗಾಟ ಆಡುವುದು ಬೇಡ ಎಂದರು.ಕಳೆದ ೬೦ ವರ್ಷಗಳಿಂದ ನಡೆಯದ ಮತ ಕಳ್ಳತನದ ವಿಚಾರ ಈಗ ಬಂದಿದೆ. ಕಾಂಗ್ರೆಸ್‌ನವರು ಕಳ್ಳರು ಎಂಬ ವಿಚಾರ ಎಲ್ಲರಿಗೂ ತಿಳಿದಿದೆ. ಕಳ್ಳರು ಮತ್ತೊಬ್ಬರನ್ನು ಕಳ್ಳರೆನ್ನುವುದು ಹಾಸ್ಯಸ್ಪದ. ಅವರು ಮಾಡಿದ ತಪ್ಪನ್ನು ಮುಚ್ಚಿಹಾಕಲು ಈ ತರಹದ ಆರೋಪ ಮಾಡಲಾಗುತ್ತಿದೆ ಎಂದರು.