ಹೂವಿನಹಡಗಲಿ: ಪ್ರತಿಯೊಬ್ಬರೂ ನಿರ್ಭೀತಿಯಿಂದ ಮತಗಟ್ಟೆ ತೆರಳಿ ಮತದಾನ ಮಾಡಬೇಕಿದೆ. ಇದಕ್ಕೆ ಅಡ್ಡಿಪಡಿಸಿದವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಸಹಾಯಕ ಚುನಾವಣಾಧಿಕಾರಿ ರಮೇಶ ಕುಮಾರ ಎಚ್ಚರಿಕೆ ನೀಡಿದ್ದಾರೆ.
ಸಿಪಿಐ ದೀಪಕ್ ಬೂಸರೆಡ್ಡಿ ಮಾತನಾಡಿ, ಈ ಹಿಂದೆ ನಡೆದಿರುವ ಚುನಾವಣೆಯ ಸಂದರ್ಭದಲ್ಲಿ ನಡೆದ ಘಟನೆಯಿಂದ ಈ ತಾಂಡದ ಮತಗಟ್ಟೆ ಅತಿಸೂಕ್ಷ್ಮವಾಗಿದೆ. ಪ್ರತಿಯೊಬ್ಬರೂ ಶಾಂತಿಯುತವಾಗಿ, ಮತಗಟ್ಟೆ ಬಂದು ದಿಟ್ಟತನದಿಂದ ಮತದಾನ ಮಾಡಿದರೆ ಅತಿಸೂಕ್ಷ್ಮ ಮತಗಟ್ಟೆ ಎಂಬ ಪಟ್ಟವನ್ನು ತೆಗೆದು ಹಾಕುತ್ತೇವೆ. ಆದರೂ ಯಾರಾದರೂ ಮತಗಟ್ಟೆ ಬಳಿ ಹಾಗೂ ಮತದಾನಕ್ಕೆ ಅಡ್ಡಿಪಡಿಸಿದ್ದಲ್ಲಿ ಕ್ರಮಕ್ಕೆ ಮುಂದಾಗುತ್ತೇವೆಂದು ಹೇಳಿದರು.
ತಹಸೀಲ್ದಾರ್ ಟಿ. ಜಗದೀಶ ಮಾತನಾಡಿ, ಈ ಹಿಂದೆ 2019ರ ವಿಧಾನಸಭಾ ಚುನಾವಣೆಯಲ್ಲಿ ಅತಿ ಕಡಿಮೆ ಮತದಾನ ದಾಖಲಾಗಿದೆ. ಶೇ. 68ರಷ್ಟು ಮಾತ್ರ ಮತದಾನವಾಗಿತ್ತು. ಈ ಬಾರಿ ಮತದಾರರು ಈ ಚುನಾವಣೆಯನ್ನು ಹಬ್ಬದಂತೆ ಆಚರಿಸುವ ಮೂಲಕ ಪ್ರತಿಯೊಬ್ಬರೂ ಮತದಾನಕ್ಕೆ ಮುಂದಾಗಬೇಕಿದೆ ಎಂದರು.ಪಿಎಸ್‌ಐ ವೆಂಕಟೇಶ ನಾಯಕ, ಸೆಕ್ಟರ್ ಅಧಿಕಾರಿ ಪ್ರದೀಪ್, ಮತಗಟ್ಟೆ ಅಧಿಕಾರಿಗಳು ಹಾಗೂ ಸಾರ್ವಜನಿಕರು ಸಭೆಯಲ್ಲಿ ಉಪಸ್ಥಿತರಿದ್ದರು.