ಹಿರಿ ಕಲಾವಿದರ ಗುರ್ತಿಸುವ ತುರ್ತಿದೆ: ಪ್ರಶಾಂತ ಮಧ್ಯಸ್ಥ

KannadaprabhaNewsNetwork |  
Published : Apr 19, 2024, 01:01 AM IST
ಫೋಟೊ:೧೮ಕೆಪಿಸೊರಬ-೦೨ : ಸೊರಬ ತಾಲೂಕಿನ ಕಟ್ಟಿನಕೆರೆ ಗ್ರಾಮದ ಶ್ರೀಧಾಮ ನಿವಾಸದಲ್ಲಿ ಹಮ್ಮಿಕೊಂಡಿದ್ದ ಗುರುವಂದನೆ ಕಾರ್ಯಕ್ರಮದಲ್ಲಿ ಚಂಡೆ ವಾದಕ ಅಶೋಕ್ ಭಟ್ ಮತ್ತು ಪೂರ್ಣಿಮಾ ದಂಪತಿಗಳನ್ನು ಗೌರವಿಸಿ ಸನ್ಮಾನಿಸಲಾಯಿತು. | Kannada Prabha

ಸಾರಾಂಶ

ಸೊರಬ ತಾಲೂಕಿನ ಕಟ್ಟಿನಕೆರೆ ಗ್ರಾಮದ ಶ್ರೀಧಾಮ ನಿವಾಸದಲ್ಲಿ ಹಮ್ಮಿಕೊಂಡಿದ್ದ ಗುರುವಂದನೆ ಕಾರ್ಯಕ್ರಮದಲ್ಲಿ ಚಂಡೆ ವಾದಕ ಅಶೋಕ್ ಭಟ್ ಮತ್ತು ಪೂರ್ಣಿಮಾ ದಂಪತಿಗಳನ್ನು ಗೌರವಿಸಿ ಸನ್ಮಾನಿಸಲಾಯಿತು.

ಕನ್ನಡಪ್ರಭ ವಾರ್ತೆ ಸೊರಬ

ವೃತ್ತಿಪರ ಕಲಾವಿದರಿಗಿಂತ ಮಿಗಿಲಾಗಿ ಹಿರಿಯತನದಲ್ಲಿರುವ ಹವ್ಯಾಸಿ ಕಲಾವಿದರನ್ನು ಗುರುತಿಸಿ ಗೌರವಿಸುವ ಹಾಗೂ ಸನ್ಮಾನಿಸುವ ಪರಂಪರೆ ಸಮಾಜ ಬಾಂಧವರಿಂದ ಮತ್ತು ಕಲಾಭಿಮಾನಿಗಳಿಂದ ಆಗಬೇಕಾದ ಅವಶ್ಯಕತೆ ಇದೆ ಎಂದು ಯಕ್ಷರಂಗದ ಹವ್ಯಾಸಿ ಕಲಾವಿದ, ಅರ್ಥಧಾರಿ, ಭಾಗವತರೂ ಆದ ಪ್ರಶಾಂತ ಮಧ್ಯಸ್ಥ ಗೊರಮನೆ ಅಭಿಪ್ರಾಯ ವ್ಯಕ್ತಪಡಿಸಿದರು.ಬುಧವಾರ ತಾಲೂಕಿನ ಕಟ್ಟಿನಕೆರೆ ಗ್ರಾಮದ ಶ್ರೀಧಾಮ ನಿವಾಸದ ಪ್ರವೇಶ ಸಮಾರಂಭದಲ್ಲಿ ಹಮ್ಮಿಕೊಂಡಿದ್ದ ಗುರುವಂದನೆ, ಸನ್ಮಾನ ಮತ್ತು ತಾಳಮದ್ದಳೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.ಯಕ್ಷಗಾನವನ್ನು ನೋಡುವ, ಆಸ್ವಾಧಿಸುವ ಮತ್ತು ಸಕ್ರಿಯವಾಗಿ ಪಾಲ್ಗೊಳ್ಳುವ ಕಲಾವಿದರಿಗೆ ಶಿಷ್ಯರಿಂದ ಗುರುವಂದನೆ ಹಾಗೂ ಗುರುವನ್ನು ಸನ್ಮಾನಿಸುವ ವಿಷಯ ಬಲು ಅಪರೂಪ. ಈ ಪ್ರದೇಶಗಳಲ್ಲಿ ನಡೆಯುವ ಯಕ್ಷಗಾನ ಮತ್ತು ತಾಳಮದ್ದಳೆಗಳಲ್ಲಿ ಈಗ ಚಂಡೆವಾದಕರಾಗಿ ಪ್ರಸಿದ್ಧರಾದವರಲ್ಲಿ ಈ ಭಾಗದ ಅಶೋಕ ಭಟ್ಟ ಕ್ಯಾಸನೂರು ಅವರೂ ಒಬ್ಬರು. ಇವರು ಬಡಗುತಿಟ್ಟಿನ ಯಕ್ಷಗಾನದಲ್ಲಿರುವ ಎಲ್ಲ ಪ್ರಕಾರಗಳ ತತ್ವಸಾರಗಳ ಬದ್ಧತೆಯಲ್ಲಿ ಸರ್ವ ಸಾಮರ್ಥ್ಯ ವನ್ನೂ ತನ್ನದಾಗಿಸಿ ಮೈಗೂಡಿಸಿಕೊಂಡವರು. ಇವರು ಕಲಿತ, ಅರಿತ ಎಲ್ಲಾ ಪ್ರಕಾರಗಳನ್ನೂ ಅಭಿರುಚಿ ಇರುವ, ಕಲಿಕೆಯಲ್ಲಿ ಆಸಕ್ತಿ ಇರುವ ಕಲಾಭಿಮಾನಿಗಳಿಗೆ ಪರಪಾಠ ಮಾಡುವುದರ ಮೂಲಕ ಗುರುವಾಗಿ, ಯಕ್ಷಗಾನ ಶಿಕ್ಷಣ ನೀಡಲು ಸಮರ್ಥರಾಗಿದ್ದಾರೆ. ಇಂಥವರನ್ನು ಶಿಷ್ಯರು ಗೌರವಿಸುವ ಗುರುವಂದನಾ ಕಾರ್ಯಕ್ರಮ ಸಮಯೋಚಿತವಾಗಿದೆ ಎಂದರು.

ಮಾತಿನ ಚತುರ, ತಾಳಮದ್ದಳೆ ಅರ್ಥದಾರಿ ದೇವೇಂದ್ರ ಬೆಳೆಯೂರು ಮಾತನಾಡಿ, ತಾನು ಕಲಿತ ಕಲೆಯನ್ನು ಬೇರೆಯವರಿಗೆ ಕಲಿಸುವ ವಿಧಾನ ನಿರಂತರವಾಗಿ ಉಳಿಯಬಲ್ಲದು. ಇದೂ ಕೂಡ ಶಿಕ್ಷಣದ ಒಂದು ಭಾಗ ಎಂದರು.ಈ ಸಂದರ್ಭದಲ್ಲಿ ಚಂಡೆವಾದಕ ಅಶೋಕ್ ಭಟ್ ಮತ್ತು ಪೂರ್ಣಿಮಾ ಅವರನ್ನು ಅಮೃತ ದೇವ್, ರಂಜನಾ ದಂಪತಿಗಳು ಗುರುಕಾಣಿಕೆ ಸಲ್ಲಿಸುವ ಮೂಲಕ ಸ್ಮರಣಿಕೆ ನೀಡಿ ಗೌರವಿಸಿದರು. ಕುಟುಂಬದ ಹಿರಿಯರಾದ ಮಂಜುನಾಥ್ ಸನ್ಮಾನ ಪತ್ರ ನೀಡಿದರು. ಕಾರ್ಯಕ್ರಮದಲ್ಲಿ ಲಲಿತಾ ಮಂಜುನಾಥ್, ರಂಜನಾ ಅಮೃತದೇವ್, ಶಿವರಾಮ ಕಂಚಿ, ಶಂಕರನಾರಾಯಣ, ಬಿ.ಟಿ. ಮಂಜುನಾಥ ಮುಂತಾದವರು ಇದ್ದರು.

PREV

Recommended Stories

ರೇಣುಕಾಂಬೆ ದರ್ಶನಕ್ಕೆ ಬಂದಿದ್ದಾಗ ಮಗುವಿಗೆ ಜನ್ಮ ನೀಡಿದ ಅವಿವಾಹಿತೆ
ರಾಜ್ಯದಲ್ಲಿ ಆ.15ರ ಬಳಿಕ ಭಾರೀ ಮಳೆ