ಎನ್‌ಡಿಎ ಅಭ್ಯರ್ಥಿ ಪ್ರಜ್ವಲ್ ರೇವಣ್ಣ ಪರ ಪ್ರಚಾರ । ಜೆಡಿಎಸ್ ನಾಯಕರೊಂದಿಗೆ ಚರ್ಚೆ
ಕನ್ನಡಪ್ರಭ ವಾರ್ತೆ ಹಾಸನ‘ಕರ್ನಾಟಕವು ಭಯೋತ್ಪಾದಕರ ತಾಣವಾಗುವ ಎಲ್ಲಾ ಲಕ್ಷಣಗಳು ಕಾಣುತ್ತಿದ್ದು, ಎಲ್ಲವನ್ನೂ ನೋಡಿದರೆ ನಾವು ಭಾರತದಲ್ಲಿ ಇದ್ದೇವೋ, ಪಾಕಿಸ್ತಾನದಲ್ಲಿ ಇದ್ದೇವೋ ಎಂದು ಭಯವಾಗುತ್ತಿದೆ. ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಆದಾಗಿನಿಂದ ಟಿಪ್ಪು ಸುಲ್ತಾನ ಆಡಳಿತದ ವೈಖರಿ ಕಾಣುತ್ತಿದೆ ಎಂದು ವಿಪಕ್ಷದ ನಾಯಕ ಆರ್.ಅಶೋಕ್ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು.
ನಗರದಲ್ಲಿ ಎನ್‌ಡಿಎ ಅಭ್ಯರ್ಥಿ ಪ್ರಜ್ವಲ್ ರೇವಣ್ಣ ಪರ ಗುರುವಾರ ಪ್ರಚಾರಕ್ಕೆ ಆಗಮಿಸಿ ಖಾಸಗಿ ಹೋಟೆಲೊಂದರಲ್ಲಿ ಜೆಡಿಎಸ್ ನಾಯಕರೊಂದಿಗೆ ಜಂಟಿ ಮಾಧ್ಯಮಗೋಷ್ಠಿ ನಡೆಸಿ ಮಾತನಾಡಿದರು.‘ಜೈ ಶ್ರೀರಾಮ್ ಎಂದಿದ್ದಕ್ಕೆ ಹಲ್ಲೆ ಮಾಡಿದ್ದಾರೆ. ಇನ್ನು ಮುಂದೆ ಜೈ ಶ್ರೀರಾಮ್ ನಡೆಯಲ್ಲ. ಅಲ್ಲಾಹುಅಕ್ಬರ್ ಎನ್ನಬೇಕು ಎಂದು ದಮ್ಕಿ ಹಾಕಿದ್ದಾರೆ. ಇವರು ಹಿಂದೂಗಳ ಮೇಲೆ ಹಾದಿ ಬೀದಿಯಲ್ಲಿ ಹಲ್ಲೆ ಮಾಡುವ, ಹೀಯಾಳಿಸುವ ಚಾಳಿ ಜಾಸ್ತಿ ಆಗ್ತಾ ಇದೆ. ಕಾಂಗ್ರೆಸ್ ಸರ್ಕಾರ ಬಂದ ಮೇಲೆ ಇದು ಹೆಚ್ಚಾಗುತ್ತಿದೆ. ಈಗಾಗಲೇ ವಿಧಾನಸೌಧದಲ್ಲಿ ಪಾಕಿಸ್ತಾನ ಜಿಂದಾಬಾದ್ ಎಂದು ಘೋಷಣೆ ಕೂಗಿದವರು ಕಾಂಗ್ರೆಸ್ ಕಾರ್ಯಕರ್ತರು ಎಂದು ಸಾಬೀತಾಗಿದೆ. ಅವರನ್ನು ರಾಜ್ಯ ಸರ್ಕಾರದ ಸಚಿವರೇ ಬೆಂಬಲಿಸಿದರು. ರಾಮೇಶ್ಚರಂ ಹೋಟೆಲ್ ಪ್ರಕರಣ ತಿರುಚುವ ಯತ್ನವನ್ನು ಡಿ.ಕೆ.ಶಿವಕುಮಾರ್ ಮಾಡಿದರು. ಮಂಡ್ಯದಲ್ಲಿ ಹನುಮ ದ್ವಜ ಇಳಿಸಿದರು. ಹಿಂದುಗಳನ್ನು ಎರಡನೆ ದರ್ಜೆ ಪ್ರಜೆಗಳಂತೆ ಕಾಣುವ ಪರಿಸ್ಥಿತಿ ಬಂದಿದೆ. ಸಿದ್ದರಾಮಯ್ಯ ಸಿಎಂ ಆದ ಮೇಲೆ ಟಿಪ್ಪು ಸಂಸ್ಕೃತಿ ಬಂದಿದೆ. ಜೈ ಶ್ರೀರಾಮ್ ಎಂದು ಕೂಗಿದವರ ವಿರುದ್ದ ಗೂಂಡಾ ಕಾಯಿದೆ ಹಾಕಬೇಕು. ಕಠಿಣ ಕ್ರಮ ಆಗದಿದ್ದರೆ ಸರ್ಕಾರವೇ ಅವರಿಗೆ ಬೆಂಬಲಿಸುತ್ತದೆ ಎನ್ನು ಸಂದೇಶ ಹೋಗುತ್ತದೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.
‘ಕಾಂಗ್ರೆಸ್ ನಾಯಕರು ಮೋದಿಯವರ ಮೇಲೆ ಇಲ್ಲ ಸಲ್ಲದ ಆರೋಪ ಮಾಡುತ್ತಿದ್ದು, ನಾವು ಜೆಡಿಎಸ್ ಜತೆ ಹೊಂದಾಣಿಕೆ ಮಾಡಿಕೊಂಡಿದ್ದು ಇವರಿಗೆ ಹೊಟ್ಟೆಯಲ್ಲಿ ಮೆಣಸಿನಕಾಯಿ ಮುರಿದಂತೆ ಆಗಿದೆ. ಹಳೆಮೈಸೂರು ಭಾಗದ ಹೊಂದಾಣಿಕೆ ಇವರಿಗೆ ಕಷ್ಟವಾಗಿದೆ. ಕೇಂದ್ರ ಸರ್ಕಾರ ಅನುದಾನ ಕೊಟ್ಟಿಲ್ಲ ಎಂದು ವಿಷಯಾಂತರ ಮಾಡಲು ಹೊರಟಿದ್ದಾರೆ. ಅವರಿಗೆ ಚುನಾವಣೆಗಾಗಿ ವಿಚಾರವೇ ಇಲ್ಲ. ಅವರು ತಮ್ಮ ಪ್ರದಾನಿ ಅಭ್ಯರ್ಥಿ ಯಾರೆಂದು ಇನ್ನೂ ಘೋಷಣೆ ಮಾಡಿಲ್ಲ’ ಎಂದು ವ್ಯಂಗ್ಯವಾಡಿದರು.‘ಕಾಂಗ್ರೆಸ್ ನಾಯಕರಲ್ಲಿ ನಾಯಕತ್ವದ ಕೊರತೆ ಇದೆ. ಅವರು ದೇಶಕ್ಕೆ ಏನು ಮಾಡಿದ್ದೇವೆ ಎಂದು ಹೇಳಬಹುದಿತ್ತು. ಆದರೆ ಅವರು ಹೇಳಲು ತಯಾರಿಲ್ಲ. ನಾವು ಅಭಿವೃದ್ಧಿ ಹೆಸರಿನಲ್ಲಿ ಚುನಾವಣೆಗೆ ಹೋಗುತ್ತ ಇದ್ದೀವಿ. ಇದು ರಾಜ್ಯದ ಚುನಾವಣೆ ಅಲ್ಲ, ದೇಶದ ಚುನಾವಣೆ. ಅವರು ಗ್ಯಾರಂಟಿ ಅಂತಾ ಹೇಳ್ತಾರೆ. ನಾವು ೨೮ಕ್ಕೆ ೨೮ ಸ್ಥಾನ ಗೆಲ್ಲುತ್ತೇವೆ. ಈ ಬಾರಿ ನರೇಂದ್ರ ಮೋದಿ ಅಲೆ ಜೋರಾಗಿದೆ. ಹಾಗಾಗಿ ಆಕಾಂಕ್ಷಿಗಳು ಜಾಸ್ತಿ ಆಗಿದ್ದಾರೆ’ ಎಂದು ಹೇಳಿದರು.
ನಂತರ ಮಹಾವೀರ ವೃತ್ತದಿಂದ ಆರ್.ಅಶೋಕ್ ನೇತೃತ್ವದಲ್ಲಿ ಬಿಜೆಪಿ, ಜೆಡಿಎಸ್ ನಾಯಕರು ರೋಡ್ ಶೋ ನಡೆಸಿದರು.ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಪ್ರೀತಂ ಜೆ. ಗೌಡ, ಶಾಸಕ ಸಿಮೆಂಟ್ ಮಂಜು, ಬಿಜೆಪಿ ಜಿಲ್ಲಾಧ್ಯಕ್ಷ ಸಿದ್ದೇಶ್ ನಾಗೇಂದ್ರ, ಮಾಜಿ ಶಾಸಕ ಎಚ್.ಕೆ. ಕುಮಾರಸ್ವಾಮಿ, ಮುಖಂಡ ಯೋಗಾರಮೇಶ್ ಇತರರು ಇದ್ದರು.
ವಿಪಕ್ಷ ನಾಯಕ ಆರ್.ಅಶೋಕ್ ಎನ್‌ಡಿಎ ಅಭ್ಯರ್ಥಿ ಪ್ರಜ್ವಲ್ ರೇವಣ್ಣ ಪರ ಹಾಸನ ನಗರದಲ್ಲಿ ರೋಡ್ ಶೋ ನಡೆಸಿದರು.