ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸಾ ಲೋಪ ಎಸಗಿದರೆ ಕಾನೂನು ಕ್ರಮ: ಜಿಲ್ಲಾಧಿಕಾರಿ ಎಂ.ಎಸ್‌. ದಿವಾಕರ್‌

KannadaprabhaNewsNetwork |  
Published : May 15, 2024, 01:34 AM IST
14ಎಚ್‌ಪಿಟಿ4- ಹೊಸಪೇಟೆಯಲ್ಲಿ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಮಂಗಳವಾರ ನಡೆದ ಸಭೆಯಲ್ಲಿ ಡಿಎಚ್‌ಒ ಡಾ. ಶಂಕರ್‌ ನಾಯ್ಕ ಮಾತನಾಡಿದರು. ಜಿಲ್ಲಾಧಿಕಾರಿ ಎಂ.ಎಸ್‌. ದಿವಾಕರ್‌, ಎಸ್ಪಿ ಶ್ರೀಹರಿಬಾಬು ಇದ್ದರು. | Kannada Prabha

ಸಾರಾಂಶ

ವಿಜಯನಗರ ಜಿಲ್ಲೆಯಲ್ಲಿರುವ ಖಾಸಗಿ ಆಸ್ಪತ್ರೆಗಳ ಮುಖ್ಯಸ್ಥರು ಮತ್ತು ಆರೋಗ್ಯ ಇಲಾಖೆಯ ಅಧಿಕಾರಿಗಳೊಂದಿಗೆ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಮಂಗಳವಾರ ಸಭೆ ನಡೆಯಿತು.

ಕನ್ನಡಪ್ರಭ ವಾರ್ತೆ ಹೊಸಪೇಟೆ

ನಗರದ ಕೆಲ ಖಾಸಗಿ ಆಸ್ಪತ್ರೆಗಳಲ್ಲಿ ಸರಿಯಾಗಿ ಚಿಕಿತ್ಸೆ ನೀಡದೇ ಸಾವುಗಳು ಸಂಭವಿಸುತ್ತಿವೆ ಎಂದು ಸ್ಥಳೀಯ ಸಂಘ ಸಂಸ್ಥೆಗಳಿಂದ ದೂರುಗಳು ಬಂದ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಎಂ.ಎಸ್. ದಿವಾಕರ್‌ ಅವರ ಅಧ್ಯಕ್ಷತೆಯಲ್ಲಿ ಹಾಗೂ ಎಸ್ಪಿ ಬಿ.ಎಲ್‌. ಶ್ರೀಹರಿಬಾಬು ಅವರ ನೇತೃತ್ವದಲ್ಲಿ ವಿಜಯನಗರ ಜಿಲ್ಲೆಯಲ್ಲಿರುವ ಖಾಸಗಿ ಆಸ್ಪತ್ರೆಗಳ ಮುಖ್ಯಸ್ಥರು ಮತ್ತು ಆರೋಗ್ಯ ಇಲಾಖೆಯ ಅಧಿಕಾರಿಗಳೊಂದಿಗೆ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಮಂಗಳವಾರ ಸಭೆ ನಡೆಯಿತು.

ಈ ವೇಳೆ ಮಾತನಾಡಿದ ಜಿಲ್ಲಾಧಿಕಾರಿ ಎಂ.ಎಸ್‌. ದಿವಾಕರ್‌ ಅವರು, ಸರಿಯಾಗಿ ಚಿಕಿತ್ಸೆ ಸಿಗದೇ ಖಾಸಗಿ ಆಸ್ಪತ್ರೆಗಳಲ್ಲಿ ಸಾವುಗಳು ಸಂಭವಿಸುತ್ತಿವೆ ಎಂಬ ದೂರಿನ ಬಗ್ಗೆ ಖಾಸಗಿ ಆಸ್ಪತ್ರೆಗಳು ಗಂಭೀರವಾಗಿ ಪರಿಗಣಿಸಬೇಕು. ಖಾಸಗಿ ಆಸ್ಪತ್ರೆಗಳಿಗೆ ಬರುವ ಯಾವುದೇ ರೋಗಿಗಳು ಮತ್ತು ಆ ರೋಗಿಯ ಸಂಬಂಧಿಕರೊಂದಿಗೆ ಆಸ್ಪತ್ರೆಯ ವೈದ್ಯರು ಹಾಗೂ ಸಿಬ್ಬಂದಿಯು ಸಹನೆ, ಸಂಯಮ ಮತ್ತು ತಾಳ್ಮೆಯಿಂದ ನಡೆದುಕೊಳ್ಳಬೇಕು. ದುರ್ವರ್ತನೆ ತೋರಬಾರದು. ಮಾನವೀಯತೆಯಿಂದ ನಡೆದುಕೊಳ್ಳಬೇಕು. ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸಾ ಲೋಪ ಎಸಗಿರುವುದು ಕಂಡುಬಂದಲ್ಲಿ ಯಾರೇ ಆಗಲಿ ಕಾನೂನು ಕ್ರಮ ಎದುರಿಸಬೇಕಾಗುತ್ತದೆ ಎಂದರು.

ಈ ವೇಳೆ ಎಸ್ಪಿ ಶ್ರೀಹರಿಬಾಬು ಮಾತನಾಡಿ, ವೈದ್ಯರನ್ನು ದೇವರ ಸಮಾನ ಎಂದು ನಮ್ಮ ಸಮಾಜ ಗೌರವಯುತ ಸ್ಥಾನ ನೀಡಿದೆ. ಕೆಲವು ವೈದ್ಯರು ಮತ್ತು ಅವರ ಆಸ್ಪತ್ರೆಗಳಲ್ಲಿನ ಸಿಬ್ಬಂದಿ ತೋರುವ ನಿರ್ಲಕ್ಷ್ಯದಿಂದಾಗಿ ಸಾವುಗಳು ಸಂಭವಿಸಿ ಇಡೀ ವೈದ್ಯ ಸಮೂಹವನ್ನೇ ಕೆಟ್ಟ ದೃಷ್ಟಿಯಿಂದ ನೋಡುವಂತಾಗುತ್ತದೆ. ವೈದ್ಯರು ಮತ್ತು ಸಾರ್ವಜನಿಕ ಮಧ್ಯೆ ಇರುವ ನಂಬಿಕೆಗೆ ಧಕ್ಕೆ ಬಾರದ ಹಾಗೆ ಮತ್ತು ಸಾರ್ವಜನಿಕರಿಗೆ ವೈದ್ಯರ ಮೇಲೆ ವಿಶ್ವಾಸ ಬರುವ ಹಾಗೆ ಎಲ್ಲಾ ವೈದ್ಯರು ಮತ್ತು ಆಯಾ ಆಸ್ಪತ್ರೆಗಳಲ್ಲಿನ ಪ್ರಾಮಾಣಿಕಯಿಂದ, ನಿರ್ಲಕ್ಷ್ಯಕ್ಕೆ ಅವಕಾಶವಿಲ್ಲದಂತೆ ಕಾರ್ಯನಿರ್ವಹಿಸಬೇಕು ಎಂದರು.

ಡಿಎಚ್‌ಒ ಡಾ. ಶಂಕರ್‌ ನಾಯ್ಕ ಮಾತನಾಡಿ, ಖಾಸಗಿ ಆಸ್ಪತ್ರೆಗಳು ಕೆಪಿಎಂಇ ಕಾಯ್ದೆ ಅನುಸಾರವೇ ಇರಬೇಕು. ನೋಂದಣಿ ಸಮಯದಲ್ಲಿ ಯಾವ ವೈದ್ಯರು ಮತ್ತು ಯಾವ ಸಿಬ್ಬಂದಿಯನ್ನು ಡಿಕ್ಲೆರೇಷನ್ ಮಾಡಲಾಗಿರುತ್ತದವೋ ಅದೇ ರೀತಿಯ ವೈದ್ಯರು ಮತ್ತು ಅವಶ್ಯಕ ಸಿಬ್ಬಂದಿಯನ್ನು ಆಸ್ಪತ್ರೆ ಹೊಂದಿರಬೇಕು. ಇಲ್ಲದಿದ್ದರೆ ಪರವಾನಗಿ ರದ್ದುಪಡಿಸಲಾಗುವುದು. ಯಾವುದೇ ಖಾಸಗಿ ಆಸ್ಪತ್ರೆಗಳು ಕೆಪಿಎಂಇ ಕಾಯ್ದೆಯನ್ನು ಉಲ್ಲಂಘಿಸಿರುವುದು ಗೊತ್ತಾದಲ್ಲಿ ಅಂತಹ ಆಸ್ಪತ್ರೆಗಳ ಮೇಲೆ ಕ್ರಿಮಿನಲ್ ಮೊಕದ್ದಮೆ ದಾಖಲಿಸಲಾಗುವುದು. ಆಸ್ಪತ್ರೆಯಲ್ಲಿನ ಬಯೋಮೆಡಿಕಲ್ ತ್ಯಾಜ್ಯವನ್ನು ನಿಯಮಾನುಸಾರ ವಿಲೆಗೆ ಕ್ರಮವಹಿಸದಿದ್ದಲ್ಲಿ ಸಹ ಕ್ರಿಮಿನಲ್ ಮೊಕದ್ದಮೆ ಕಾನೂನು ಕ್ರಮವನ್ನು ಎದುರಿಸಬೇಕಾಗುತ್ತದೆ ಎಂದರು.

ಖಾಸಗಿ ಆಸ್ಪತ್ರೆಯ ಎಲ್ಲ ಕೋಣೆಗಳಲ್ಲಿ ಕಡ್ಡಾಯವಾಗಿ ಸಿಸಿಟಿವಿ ಅಳವಡಿಸಬೇಕು. ಎಲ್ಲಾ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸಾ ದರವನ್ನು ಪ್ರದರ್ಶಿಸಿ ಅದೇ ರೀತಿ ಪಾಲನೆ ಮಾಡಬೇಕು. ನಿಗದಿಪಡಿಸಿದ ದರಕ್ಕಿಂತ ಅನವಶ್ಯಕವಾಗಿ ಹೆಚ್ಚಿನ ಹಣ ಪಡೆಯಬಾರದು.

ಅಪ್ರಾಪ್ತ ವಯಸ್ಸಿನವರು ಗರ್ಭಿಣಿ ಎಂದು ಗೊತ್ತಾದಲ್ಲಿ ಈ ಬಗ್ಗೆ ಕೂಡಲೇ 1098 ಅಥವಾ ಆರೋಗ್ಯ ಇಲಾಖೆ ಅಥವಾ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗೆ ಮಾಹಿತಿ ನೀಡಬೇಕು. ಗಂಡಾಂತರ ಗರ್ಭಿಣಿ ಎಂದು ತಿಳಿದಲ್ಲಿ ಕೂಡಲೇ ಆರೋಗ್ಯ ಇಲಾಖೆಗೆ ಮಾಹಿತಿ ನೀಡಬೇಕು. ಸಾಂಕ್ರಾಮಿಕ ರೋಗಗಳು, ನಾಯಿ ಕಡಿತ, ಹಾವು ಕಡಿತ ಪ್ರಕರಣಗಳ ಬಗ್ಗೆ ಸಹ ಆರೋಗ್ಯ ಇಲಾಖೆಗೆ ಮಾಹಿತಿ ನೀಡಬೇಕು ಎನ್ನುವ ನಿಯಮವನ್ನು ಖಾಸಗಿ ಆಸ್ಪತ್ರೆಗಳಲ್ಲಿನ ವೈದ್ಯರು ಮತ್ತು ಸಿಬ್ಬಂದಿಯು ತಪ್ಪದೇ ಪಾಲನೆ ಮಾಡಬೇಕು ಎಂದು ಸಭೆಯಲ್ಲಿ ನಿರ್ದೇಶನ ನೀಡಲಾಯಿತು.

ಆಸ್ಪತ್ರೆಗಳಲ್ಲಿ ಹೆಣ್ಣು ಭ್ರೂಣ ಲಿಂಗ ಪತ್ತೆ ಹಾಗೂ ಭ್ರೂಣ ಹತ್ಯೆ ಪ್ರಕರಣಗಳು ಕಂಡುಬಂದಲ್ಲಿ ಕಠಿಣ ಕಾನೂನು ಕ್ರಮ ಜರುಗಿಸಲಾಗುವುದು. ಕೆಪಿಎಂಇ ಕಾಯಿದೆ ಅನುಸಾರ ಕಾರ್ಯನಿರ್ವಹಿಸದೇ ನಿಯಮ ಉಲ್ಲಂಘಿಸಿ ಲೋಪ ಎಸಗಿರುವುದು ಕಂಡುಬಂದಲ್ಲಿ ಕೆಪಿಎಂಇ ಕಾಯಿದೆ ಅಡಿ ಕ್ರಮ ಜರುಗಿಸಲಾಗುವುದು ಎಂದು ಸಭೆಯಲ್ಲಿ ಎಚ್ಚರಿಕೆ ನೀಡಲಾಯಿತು.

ಸಭೆಯಲ್ಲಿ ಐಎಂಎ ಅಧ್ಯಕ್ಷ ಡಾ. ಶ್ರೀನಿವಾಸ್‌ ದೇಶಪಾಂಡೆ ಹಾಗೂ ಜಿಲ್ಲೆಯ ವಿವಿಧ ಖಾಸಗಿ ಆಸ್ಪತ್ರೆಗಳ ವೈದ್ಯರು ಮತ್ತು ಆರೋಗ್ಯ ಇಲಾಖೆಯ ಎಲ್ಲಾ ಕಾರ್ಯಕ್ರಮ ಅನುಷ್ಠಾನಾಧಿಕಾರಿಗಳು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಭಗವಂತನ ಶಕ್ತಿ ಪಡೆದವರಿಂದ ಡಿಕೆಶಿ ಸಿಎಂ ಆಗುವ ದಿನಾಂಕ ನಿಗದಿ : ಇಕ್ಬಾಲ್
ಜನ ನಂಗೆ ಇನ್ನೊಂದು ಅವಕಾಶ ಕೊಡಲಿ : ಎಚ್ಡಿಕೆ