ಕನ್ನಡಪ್ರಭ ವಾರ್ತೆ ತುಮಕೂರು
ಜಿಲ್ಲೆಯ ವಿವಿಧ ಕಡೆಗಳಿಂದ ಆಗಮಿಸಿದ್ದ ನೂರಾರು ದಲಿತ ಸಂಘರ್ಷ ಸಮಿತಿ ಪದಾಧಿಕಾರಿಗಳು ಮತ್ತು ಮುಖಂಡರು ಜಿಲ್ಲಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ನಡೆಸಿ, ಕೋಮು ಪ್ರಚೋದನಾ ಹೇಳಿಕೆ ನೀಡುತ್ತಿರುವ ಸರ್ಕಾರ ಕೂಡಲೇ ಕಲ್ಲಡ್ಕ ಪ್ರಭಾಕರ್ ಭಟ್ ಅವರನ್ನು ಬಂಧಿಸಿ, ರಾಜ್ಯದಿಂದ ಗಡಿಪಾರು ಮಾಡಬೇಕೆಂದು ಆಗ್ರಹಿಸಿದರು.
ಈ ವೇಳೆ ಮಾತನಾಡಿದ ದಸಂಸ ಜಿಲ್ಲಾ ಸಂಚಾಲಕ ಕುಂದೂರು ತಿಮ್ಮಯ್ಯ, ಚುನಾವಣಾ ಸಂದರ್ಭದಲ್ಲಿ ದೇಶದ ಜನರು ಎದುರಿಸುತ್ತಿರುವ ಜ್ವಲಂತ ಸಮಸ್ಯೆಗಳಿಂದ ಜನರ ಮನಸ್ಸನ್ನು ಬೇರೆಡೆಗೆ ತಿರುಗಿಸುವ ನಿಟ್ಟಿನಲ್ಲಿ ಮುಸ್ಲಿಂ ಮಹಿಳೆಯರಿಗೆ ಶಾಶ್ವತ ಗಂಡನ ಕೊಟ್ಟಿದ್ದು, ಮೋದಿ ಸರ್ಕಾರ ಎಂಬಂತಹ ಹೇಳಿಕೆಗಳನ್ನು ನೀಡಿ, ಇಡೀ ಮಹಿಳಾ ಕುಲಕ್ಕೆ ಅವಮಾನ ಮಾಡಿದ್ದಾರೆ. ಇದೇ ವ್ಯಕ್ತಿ 2019ರ ಚುನಾವಣೆಯ ವೇಳೆಯೂ ದೇಶದಲ್ಲಿ ಹನುಮಾನ ಭಕ್ತರು ಮಾತ್ರ ಉಳಿಯಬೇಕು. ಟಿಪ್ಪು ಭಕ್ತರು ತೊಲಗಬೇಕು ಎಂದ ಹೇಳಿಕೆ ನೀಡಿ ಕೋಮು ಭಾವನೆ ಕೆರಳುವಂತೆ ಮಾಡಿದ್ದರು. ಹಾಗಾಗಿ ಇಂತಹ ಅಪಾಯಕಾರಿ ವ್ಯಕ್ತಿಯನ್ನು ಸರ್ಕಾರ ಬಂಧಿಸಿ, ಗಡಿಪಾರು ಮಾಡಬೇಕೆಂಬುದು ಆಗ್ರಹಿಸಿದರು.ದಸಂಸ ಜಿಲ್ಲಾ ಸಂಘಟನಾ ಸಂಚಾಲಕ ವಿರೂಪಾಕ್ಷ ಡ್ಯಾಗೇರಹಳ್ಳಿ ಮಾತನಾಡಿ, ದಸಂಸ ಹುಟ್ಟಿದಾಗಿನಿಂದಲೂ ಕಲ್ಲಡ್ಕ ಪ್ರಭಾಕರ ಭಟ್ಟ ಮತ್ತು ಆನಂತಕುಮಾರ ಹೆಗಡೆಯಂತಹ ಮನುವಾದಿಗಳ ಕೆಟ್ಟ ನಡೆಯ ವಿರುದ್ಧ ಹೋರಾಡುತ್ತಲೇ ಬಂದಿದೆ. ಚುನಾವಣೆ ಬರುವವರೆಗೂ ಜನರ ಕಣ್ಣಿಗೆ ಕಾಣದೆ, ಅವರ ಕಷ್ಟ ಸುಖಃಗಳನ್ನು ಆಲಿಸದೆ ಮೈಮರೆಯುವ ಇವರು, ಚುನಾವಣೆ ಬಂದಾಗ ದತ್ತೆಂದು ಹಿಂದುತ್ವ, ಕೋಮುವಾದಿ ಹೇಳಿಕೆಗಳ ಮೂಲಕ ಪ್ರಚಾರ ಪಡೆದು, ಅಧಿಕಾರ ಹಿಡಿಯುವ ಸುಲಭದ ದಾರಿ ಕಂಡು ಕೊಂಡಿದ್ದಾರೆ. ಇಂತಹವರಿಗೆ ಜನರು ಚುನಾವಣೆಗಳಲ್ಲಿ ಸರಿಯಾದ ಪಾಠ ಕಲಿಸಬೇಕೆಂಬುದು ನಮ್ಮ ಒತ್ತಾಯವಾಗಿದೆ ಎಂದರು.
ದಲಿತ ಮುಖಂಡ ಕೋಡಿಯಾಲ ಮಹದೇವ್ ಅವರು ಮನವಿ ಪತ್ರವನ್ನು ಓದಿ ಜಿಲ್ಲಾಧಿಕಾರಿಗಳಿಗೆ ಸಲ್ಲಿಸಿದರು. ಈ ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಘಟನಾ ಸಂಚಾಲಕರಾದ ಶಿವನಂಜಪ್ಪ ಚೇಳೂರು, ಕುಂದೂರು ಮುರುಳಿ, ಲಕ್ಕೇನಹಳ್ಳಿ ನರಸೀಯಪ್ಪ, ನರಸಿಂಹಪ್ಪ ಪಾವಗಡ, ನಾಗರಾಜು ಉಪ್ಪಾರಹಳ್ಳಿ, ರಿಯಾಜ್ ಮರಳೂರು ದಿಣ್ಣೆ, ಜಿಲ್ಲಾ ಮಹಿಳಾ ಸಂಚಾಲಕಿ ಲಾವಣ್ಯ, ನಂದಿನಿ ಸೇರಿದಂತೆ ನೂರಾರು ಜನರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.
ಕಾಂತರಾಜು ವರದಿ ಜಾರಿಗೆ ಒತ್ತಾಯ