ಕಾನೂನು ನೆರವು, ಅರಿವು ಎಲ್ಲರಿಗೂ ಅಗತ್ಯ

KannadaprabhaNewsNetwork | Updated : Nov 12 2023, 01:01 AM IST

ಸಾರಾಂಶ

ರಾಷ್ಟ್ರೀಯ ಕಾನೂನು ಸೇವೆಗಳ ದಿನ ಕಾರ್ಯಕ್ರಮ

ಕನ್ನಡಪ್ರಭ ವಾರ್ತೆ ಸೊರಬ

ಸಮಾಜದಲ್ಲಿ ಬದುಕುವ ಪ್ರತಿಯೊಬ್ಬರಿಗೂ ಕಾನೂನಿನ ನೆರವು ಮತ್ತು ಮಾಹಿತಿಯ ಅರಿವು ಹೊಂದುವುದು ಅಗತ್ಯವಾಗಿದೆ ಎಂದು ಸೊರಬ ನ್ಯಾಯಾಲಯ ಹಿರಿಯ ಸಿವಿಲ್ ನ್ಯಾಯಾಧೀಶ ಪ್ರಭಾಕರ ರಾವ್ ಹೇಳಿದರು. ಪಟ್ಟಣದ ಸ್ತ್ರೀ ಶಕ್ತಿ ಭವನದಲ್ಲಿ ತಾಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘ, ತಾಲೂಕು ಆಡಳಿತ, ಪೋಲೀಸ್ ಇಲಾಖೆ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ರಾಷ್ಟ್ರೀಯ ಕಾನೂನು ಸೇವೆಗಳ ದಿನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಪ್ರತಿಯೊಬ್ಬ ಭಾರತೀಯ ಪ್ರಜೆಯೂ ಸಂವಿಧಾನದ ಆಶಯದಂತೆ ಹಕ್ಕು ಸ್ವಾತಂತ್ರ್ಯವನ್ನು ಅನುಭವಿಸಲು ಅವಕಾಶವಿದೆ. ಯಾವುದೇ ಕಾನೂನು ಜಾರಿಗೆ ತರುವುದರಿಂದ ತೊಂದರೆ ಉಂಟಾಗುತ್ತಿದೆ ಎಂಬುದು ಮುಖ್ಯ ಎನಿಸುವುದಿಲ್ಲ ಹಾಗೂ ಜಾರಿ ತಡೆಯಲು ಸಾಧ್ಯವಿಲ್ಲ. ಕಾನೂನು ಇರುವವರೆಗೆ ಅದರ ಪಾಲನೆ ಅನಿವಾರ್ಯ ಎಂದರು.

ನಮ್ಮ ಚಿಂತನೆ, ಆಲೋಚನೆ, ಪ್ರತಿಕ್ರಿಯೆಗಳು ಕಾಯಿದೆ ಪರಿಪಾಲನೆಯ ಜೊತೆಗೆ ಇರಬೇಕು. ಕಾನೂನು ಹಾಗೂ ಧರ್ಮ ಪರಿಪಾಲನೆ ನಿಂತ ನೀರಲ್ಲ. ಕಾನೂನು ಬಿಟ್ಟು ಸಮಾಜವಿರಲು ಸಾಧ್ಯವಿಲ್ಲ. ಮಹಿಳೆಯರು, ಮಕ್ಕಳು, ನೊಂದವರು, ದೌರ್ಜನ್ಯಕ್ಕೆ ಒಳಗಾದ ಅನೇಕ ಅಸಹಾಯಕರಿಗೆ ಉಚಿತ ಕಾನೂನು ನೆರವು ನೀಡುವ ಉದ್ದೇಶದಿಂದ ಕಾನೂನು ಸೇವಾ ಪ್ರಾಧಿಕಾರ ಸಮಿತಿ ರಚಿಸಲಾಗಿದೆ. ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಕರೆ ನೀಡಿದರು.

ಹಿರಿಯ ವಕೀಲ ಹಾಗೂ ಪರಿಸರ ಜಾಗೃತಿ ಟ್ರಸ್ಟ್ ಅಧ್ಯಕ್ಷ ಎಂ.ಆರ್. ಪಾಟೀಲ್ ಮಾತನಾಡಿ, ಸಮಾಜದಲ್ಲಿ ಬದುಕುವ ಪ್ರತಿಯೊಬ್ಬ ಪ್ರಜೆಯೂ ಕಾನೂನಿನ ಅಡಿಯಲ್ಲಿ ನಡೆಯುವ ಮೂಲಕ ಸಂವಿಧಾನದ ಆಶಯದಂತೆ ಹಕ್ಕು ಸ್ವಾತಂತ್ರ‍್ಯಗಳನ್ನು ಹೊಂದಲು ಮುಂದಾಗಬೇಕು ಎಂದರು.

ಹಿರಿಯ ವಕೀಲ ವೈ.ಜಿ. ಪುಟ್ಟಸ್ವಾಮಿ ಮಾತನಾಡಿ, ಕಾನೂನು ಅರಿವು ಕೊರತೆಯಿಂದ ಇಂದು ವಿವಾಹ ವಿಚ್ಛೇದನ, ಕೌಟುಂಬಿಕ ವಿಘಟನೆ ಹಾಗೂ ಅಪಘಾತ ಪ್ರಕರಣಗಳು ನಡೆಯುತ್ತಿವೆ. ಇವುಗಳ ಬಗ್ಗೆ ಅರಿವು ಹೊಂದುವುದು ಮುಖ್ಯ ಎಂದರು.

ಕಿರಿಯ ಸಿವಿಲ್ ನ್ಯಾಯಾಧೀಶ ರಾಘವೇಂದ್ರ ಉಪಾದ್ಯ ಮಾತನಾಡಿದರು. ತಾಲೂಕು ವಕೀಲರ ಸಂಘದ ಅಧ್ಯಕ್ಷ ಸಿ.ವೈ. ಅಶೋಕ್ ಕೊಡಕಣಿ, ವಕೀಲರ ಸಂಘದ ಕಾರ್ಯದರ್ಶಿ ಅರುಣ್ ಎಸ್.ಎನ್. ತೆಲಗುಂದ್ಲಿ, ಸಂಘದ ಉಪಾಧ್ಯಕ್ಷೆ ಮಂಜುಳಾ, ತಹಸೀಲ್ದಾರ್ ಹುಸೇನ್ ಸರಕಾವಸ್, ತಾ.ಪಂ. ಇಒ ಪ್ರದೀಪ್‌ಕುಮಾರ್, ಕೃಷಿ ಸಹಾಯಕ ನಿರ್ದೇಶಕ ಕೆ.ಜಿ.ಕುಮಾರ್, ಕ್ಷೇತ್ರ ಶಿಕ್ಷಣಾಧಿಕಾರಿ ಸತ್ಯನಾರಾಯಣ, ಪುರಸಭೆ ಮುಖ್ಯಾಧಿಕಾರಿ ಬಾಲಚಂದ್ರ, ಪಿಎಸ್‌ಐ ನಾಗರಾಜ್, ಮಾಳಪ್ಪ, ತಾ.ಪಂ. ಮಾಜಿ ಸದಸ್ಯ ಕೆ.ಮಂಜುನಾಥ್ ಹಳೇ ಸೊರಬ, ಚಂದ್ರು, ವಿನೋದ್ ಮೊದಲಾದವರು ಇದ್ದರು.

- - -

-11ಕೆಪಿಸೊರಬ-02:

ಸೊರಬ ಪಟ್ಟಣದಲ್ಲಿ ರಾಷ್ಟ್ರೀಯ ಕಾನೂನು ಸೇವೆಗಳ ದಿನ ಕಾರ್ಯಕ್ರಮವನ್ನು ಹಿರಿಯ ಸಿವಿಲ್ ನ್ಯಾಯಾಧೀಶ ಪ್ರಭಾಕರ ರಾವ್ ಉದ್ಘಾಟಿಸಿದರು.

Share this article