ಮಾಜಿ ಸೈನಿಕರ ಸಮಸ್ಯೆಗಳಿಗೆ ಕಾನೂನು ನೆರವು: ನ್ಯಾ. ವಿ.ಹನುಮಂತಪ್ಪ

KannadaprabhaNewsNetwork |  
Published : Aug 07, 2025, 12:45 AM IST
ಚಿಕ್ಕಮಗಳೂರು ತಾಲೂಕು ಪಂಚಾಯತಿ ಆವರಣದಲ್ಲಿರುವ ಮಾಜಿ ಸೈನಿಕರ ಸಂಘಕ್ಕೆ ಭೇಟಿ ನೀಡಿದ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ, ನ್ಯಾಯಾಧೀಶ ವಿ.ಹನುಮಂತಪ್ಪ ಮಾಜಿ ಸೈನಿಕರ ಸಮಸ್ಯೆ ಆಲಿಸಿದರು. ಮಾಜಿ ಸೈನಿಕರ ಸಂಘದ ಅಧ್ಯಕ್ಷ ಮಂಜುನಾಥ್ ಸೇರಿದಂತೆ ಪದಾಧಿಕಾರಿಗಳು ಇದ್ದರು. | Kannada Prabha

ಸಾರಾಂಶ

ಚಿಕ್ಕಮಗಳೂರು, ಕರ್ತವ್ಯದಲ್ಲಿರುವ ಸೈನಿಕರು ಹಾಗೂ ಮಾಜಿ ಸೈನಿಕರಿಗೆ ಅನುಕೂಲ ಒದಗಿಸಿಕೊಡುವ ಉದ್ದೇಶದಿಂದ ಕಾನೂನು ಸಲಹಾ ಸಮಿತಿ ಇಡೀ ದೇಶದಾದ್ಯಂತ ಅಸ್ಥಿತ್ವಕ್ಕೆ ಬರುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹಾಗೂ ಹಿರಿಯ ನ್ಯಾಯಾಧೀಶ ವಿ.ಹನುಮಂತಪ್ಪ ನಗರದ ತಾಪಂ ಆವರಣದ ಮಾಜಿ ಸೈನಿಕರ ಸಂಘದ ಕಚೇರಿಗೆ ಬುಧವಾರ ತೆರಳಿ ಅವರ ಕುಂದುಕೊರತೆ ಆಲಿಸಿದರು.

- ಮಾಜಿ ಸೈನಿಕರ ಸಮಸ್ಯೆ ಆಲಿಸಿದ ನ್ಯಾಯಾಧೀಶರು

ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರು

ಕರ್ತವ್ಯದಲ್ಲಿರುವ ಸೈನಿಕರು ಹಾಗೂ ಮಾಜಿ ಸೈನಿಕರಿಗೆ ಅನುಕೂಲ ಒದಗಿಸಿಕೊಡುವ ಉದ್ದೇಶದಿಂದ ಕಾನೂನು ಸಲಹಾ ಸಮಿತಿ ಇಡೀ ದೇಶದಾದ್ಯಂತ ಅಸ್ಥಿತ್ವಕ್ಕೆ ಬರುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹಾಗೂ ಹಿರಿಯ ನ್ಯಾಯಾಧೀಶ ವಿ.ಹನುಮಂತಪ್ಪ ನಗರದ ತಾಪಂ ಆವರಣದ ಮಾಜಿ ಸೈನಿಕರ ಸಂಘದ ಕಚೇರಿಗೆ ಬುಧವಾರ ತೆರಳಿ ಅವರ ಕುಂದುಕೊರತೆ ಆಲಿಸಿದರು.

ಜಿಲ್ಲಾ ಕೇಂದ್ರಗಳಲ್ಲಿ ಸೈನಿಕರು ಹಾಗೂ ಮಾಜಿ ಸೈನಿಕರ ಸಮಸ್ಯೆ ಆಲಿಸಲು ಕಾನೂನು ಸಲಹಾ ಸಮಿತಿ ಕಚೇರಿ ಪ್ರಾರಂಭಿಸಲಾಗುತ್ತದೆ. ಸೈನಿಕರು ಹಾಗೂ ಮಾಜಿ ಸೈನಿಕರಿಗೆ ಯಾವುದೇ ಸಮಸ್ಯೆಗಳಿದ್ದಾಗ ಕಾನೂನು ನೆರವು ನೀಡಲು ವಕೀಲರ ಸೇವೆಯನ್ನೂ ಒದಗಿಸಲಾಗುವುದು. ಸ್ಥಳೀಯವಾಗಿ ಸೈನಿಕರು ಹಾಗೂ ಮಾಜಿ ಸೈನಿಕರ ಸಮಸ್ಯೆ ಆಲಿಸಿ, ಪರಿಹರಿಸುವ ನಿಟ್ಟಿನಲ್ಲಿ ಕಾನೂನು ಸಲಹಾ ಸಮಿತಿ ಕಾರ್ಯನಿರ್ವಹಿಸಲಿದೆ ಎಂದು ವಿ.ಹನುಮಂತಪ್ಪ ತಿಳಿಸಿದರು.

ನ್ಯಾಯಾಧೀಶರ ಎದುರು ತಮ್ಮ ಸಮಸ್ಯೆ ಹೇಳಿಕೊಂಡ ಮಾಜಿ ಸೈನಿಕರು, ನ್ಯಾಯಾಧೀಶರೇ ತಮ್ಮ ಬಳಿ ಬಂದು ಸಮಸ್ಯೆ ಆಲಿಸುತ್ತಿರುವುದು ಖುಷಿ ತಂದಿದೆ. ಆದರೆ, ಜಿಲ್ಲೆಯಲ್ಲಿ ಮಾಜಿ ಸೈನಿಕರಿಗೆ ಮೀಸಲಿಟ್ಟ ಜಾಗಗಳು ಬೇರೆಯವರಬಳಿ ಇವೆ. ಹೀಗಾಗಿ ಮಾಜಿ ಸೈನಿಕರಿಗೆ ಮೀಸಲಿಟ್ಟ ಜಾಗವನ್ನು ಅವರಿಗೆ ನೀಡಬೇಕು ಎಂದು ಮನವಿ ಮಾಡಿದರು.

ಚಿಕ್ಕಮಗಳೂರು ನಗರಕ್ಕೆ ಹೊಂದಿಕೊಂಡಂತಿರುವ ನಲ್ಲೂರು ಗೇಟ್ ಬಳಿ ಮಾಜಿ ಸೈನಿಕರ ನಿವೇಶನಕ್ಕೆಂದು ಜಿಲ್ಲಾಧಿಕಾರಿ ಜಾಗ ಮೀಸಲಿರಿಸಿದ್ದರು. ಆ ಜಾಗವನ್ನು ಬೇರೆಯವರು ಒತ್ತುವರಿ ಮಾಡಿ ಇದೀಗ ಹೈಕೋರ್ಟ್ ಮೆಟ್ಟಿಲೇರಿದ್ದಾರೆ. ಇದಲ್ಲದೆ ಸಖರಾಯಪಟ್ಟಣ ಹಾಗೂ ಸಾರಗೋಡು ಭಾಗದಲ್ಲಿ ಮಾಜಿ ಸೈನಿಕರಿಗೆ ಮೀಸಲಿಟ್ಟ ಜಾಗದಲ್ಲಿ ಬಲಾಡ್ಯರು ಒತ್ತುವರಿ ಮಾಡಿದ್ದಾರೆ ಎಂದು ನ್ಯಾಯಾಧೀಶರಿಗೆ ಮಾಹಿತಿ ನೀಡಿದರು.

ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಾಧೀಶರು ಈ ಬಗ್ಗೆ ಅಗತ್ಯ ದಾಖಲೆ ನೀಡಿದರೆ ಜಿಲ್ಲಾಧಿಕಾರಿಗಳೊಂದಿಗೆ ಚರ್ಚಿಸುವ ಭರವಸೆ ನೀಡಿದರು. ಮಾಜಿ ಸೈನಿಕರಿಗೆ ಅನುಕೂಲ ಮಾಡುವ ನಿಟ್ಟಿನಲ್ಲಿ ವಕೀಲರ ಸೇವೆಯ ಭರವಸೆ ನೀಡಿದರು.

ಈ ಸಂದರ್ಭದಲ್ಲಿ ಮಾಜಿ ಸೈನಿಕರ ಸಂಘದ ಅಧ್ಯಕ್ಷ ಮಂಜುನಾಥ್ ಹಾಗೂ ಸಂಘದ ಪದಾಧಿಕಾರಿ ಉಪಸ್ಥಿತರಿದ್ದರು. 6 ಕೆಸಿಕೆಎಂ 1ಚಿಕ್ಕಮಗಳೂರು ತಾಪಂ ಆವರಣದ ಮಾಜಿ ಸೈನಿಕರ ಸಂಘಕ್ಕೆ ಭೇಟಿ ನೀಡಿದ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ, ನ್ಯಾಯಾಧೀಶ ವಿ.ಹನುಮಂತಪ್ಪ ಮಾಜಿ ಸೈನಿಕರ ಸಮಸ್ಯೆ ಆಲಿಸಿದರು. ಮಾಜಿ ಸೈನಿಕರ ಸಂಘದ ಅಧ್ಯಕ್ಷ ಮಂಜುನಾಥ್ ಸೇರಿದಂತೆ ಪದಾಧಿಕಾರಿಗಳು ಇದ್ದರು.

PREV

Recommended Stories

ರೇಣುಕಾಂಬೆ ದರ್ಶನಕ್ಕೆ ಬಂದಿದ್ದಾಗ ಮಗುವಿಗೆ ಜನ್ಮ ನೀಡಿದ ಅವಿವಾಹಿತೆ
ರಾಜ್ಯದಲ್ಲಿ ಆ.15ರ ಬಳಿಕ ಭಾರೀ ಮಳೆ