ಪ್ರತಿ ತಿಂಗಳು ಕಾನೂನು ಅರಿವು ನೆರವು ಕಾರ್ಯಕ್ರಮ: ಎಚ್.ಎಸ್.ಶಿವರಾಜು

KannadaprabhaNewsNetwork |  
Published : Sep 02, 2024, 02:10 AM IST
1ಕೆಎಂಎನ್ ಡಿ14 | Kannada Prabha

ಸಾರಾಂಶ

ಶತಮಾನಗಳಿಂದ ರೂಢಿಯಲ್ಲಿರುವ ಬಹಿಷ್ಕಾರ ಎಂಬ ಅನಿಷ್ಟ ಪದ್ಧತಿ ಬೇರು ಸಮೇತ ಕಿತ್ತೊಗೆಯಲು ಪ್ರತಿಯೊಬ್ಬರೂ ಕಾನೂನಿನ ಮಹ್ವತ ತಿಳಿದುಕೊಳ್ಳಬೇಕು. ಮೂಲಭೂತ ಹಕ್ಕುಗಳನ್ನು ಪಡೆದುಕೊಳ್ಳಬೇಕೆಂದರೆ ನಮ್ಮ ಕರ್ತವ್ಯಗಳನ್ನೂ ಸಹ ಪ್ರಾಮಾಣಿಕವಾಗಿ ನಿರ್ವಹಿಸಬೇಕು.

ಕನ್ನಡಪ್ರಭ ವಾರ್ತೆ ನಾಗಮಂಗಲ

ಸಮಾಜದ ಪ್ರತಿಯೊಬ್ಬರಿಗೂ ಕಾನೂನು ಅರಿವು ಮೂಡಿಸುವ ಜೊತೆಗೆ ಮೂಲ ಸೌಕರ್ಯದಿಂದ ವಂಚಿತರಾಗದಂತೆ ದೇಶದ ಸರ್ವೋಚ್ಛ ನ್ಯಾಯಾಲಯದ ನಿರ್ದೆಶನದಂತೆ ಪ್ರತಿ ತಿಂಗಳು ಕನಿಷ್ಠ ನಾಲ್ಕೈದು ಬಾರಿ ವಿವಿಧ ಬಗೆಯ ಕಾನೂನು ಅರಿವು ನೆರವು ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ ಎಂದು ಸಿವಿಲ್ ನ್ಯಾಯಾಧೀಶ ಎಚ್.ಎಸ್.ಶಿವರಾಜು ಹೇಳಿದರು.

ತಾಲೂಕಿನ ಪಾಲಗ್ರಹಾರ ಗ್ರಾಪಂ ಆವರಣದಲ್ಲಿ ತಾಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘ, ಅಭಿಯೋಜನಾ ಇಲಾಖೆ, ತಾಲೂಕು ಪಂಚಾಯ್ತಿ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಹಭಾಗಿತ್ವದಲ್ಲಿ ಆಯೋಜಿಸಿದ್ದ ಬಹಿಷ್ಕಾರ ಪದ್ಧತಿ ನಿರ್ಮೂಲನೆ, ಮೂಲಭೂತ ಹಕ್ಕು ಮತ್ತು ಕರ್ತವ್ಯ ಕುರಿತು ಕಾನೂನು ಅರಿವು ನೆರವು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಶತಮಾನಗಳಿಂದ ರೂಢಿಯಲ್ಲಿರುವ ಬಹಿಷ್ಕಾರ ಎಂಬ ಅನಿಷ್ಟ ಪದ್ಧತಿ ಬೇರು ಸಮೇತ ಕಿತ್ತೊಗೆಯಲು ಪ್ರತಿಯೊಬ್ಬರೂ ಕಾನೂನಿನ ಮಹ್ವತ ತಿಳಿದುಕೊಳ್ಳಬೇಕು. ಮೂಲಭೂತ ಹಕ್ಕುಗಳನ್ನು ಪಡೆದುಕೊಳ್ಳಬೇಕೆಂದರೆ ನಮ್ಮ ಕರ್ತವ್ಯಗಳನ್ನೂ ಸಹ ಪ್ರಾಮಾಣಿಕವಾಗಿ ನಿರ್ವಹಿಸಬೇಕು ಎಂದರು.

ತಾಲೂಕಿನ ಪಾಲಗ್ರಹಾರ ವ್ಯಾಜ್ಯಮುಕ್ತ ಗ್ರಾಮ ಎಂಬುದು ಬಹಳ ಖುಷಿಯ ವಿಚಾರ. ಹಳ್ಳಿಗಳಲ್ಲಿ ಯಾವುದೇ ಸಣ್ಣ ಪುಟ್ಟ ಸಮಸ್ಯೆಗಳು ಉದ್ಭವಿಸಿದಲ್ಲಿ ಅದನ್ನು ಸ್ಥಳೀಯವಾಗಿಯೇ ಬಗೆಹರಿಸಿಕೊಳ್ಳಬೇಕು. ಅಲ್ಲಿ ಸಮಸ್ಯೆ ಇತ್ಯರ್ಥವಾಗದಿದ್ದರೆ ಮಾತ್ರ ನ್ಯಾಯಾಲಯದಲ್ಲಿ ಕಾನೂನಿನ ಚೌಕಟ್ಟಿನಡಿಯಲ್ಲಿ ಬಗೆಹರಿಸಿಕೊಂಡು ಶಾಂತಿ ನೆಮ್ಮದಿಯಿಂದ ಜೀವನ ನಡೆಸಬೇಕು ಎಂದರು.

ಬಹಿಷ್ಕಾರ ಪದ್ಧತಿ ನಿರ್ಮೂಲನೆ ವಿಷಯ ಕುರಿತು ವಕೀಲ ಜಿ.ಎಸ್.ಭರತ್ ಹಾಗೂ ಮೂಲಭೂತ ಹಕ್ಕು ಮತ್ತು ಕರ್ತವ್ಯ ವಿಷಯ ಕುರಿತು ವಕೀಲೆ ಎಸ್.ವಿ.ಕವನಶ್ರೀ ಉಪನ್ಯಾಸ ನೀಡಿದರು. ವಕೀಲರ ಸಂಘದ ಅಧ್ಯಕ್ಷ ಮಹದೇವು, ಗ್ರಾಪಂ ಅಧ್ಯಕ್ಷೆ ಪುಷ್ಪಾಂಜಲಿ, ಎಎಸ್‌ಐ ಚನ್ನಬಸಪ್ಪ, ಗ್ರಾಮದ ಮುಖ್ಯಸ್ಥ ಪಿ.ಡಿ.ತಿಮ್ಮಯ್ಯ ಕಾರ್ಯಕ್ರಮ ಕುರಿತು ಮಾತನಾಡಿದರು.

ಕಾರ್ಯಕ್ರಮದಲ್ಲಿ ಅಪರ ಸರ್ಕಾರಿ ವಕೀಲ ಪಿ.ಸಿ.ಮಂಜುನಾಥ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಮೇಲ್ವಿಚಾರಕಿ ಕೆ.ಎನ್.ದಿವ್ಯ, ಗ್ರಾಪಂ ಮಾಜಿ ಅಧ್ಯಕ್ಷೆ ರಾಧಾ ನಾಗರಾಜು, ಸದಸ್ಯ ಪಾಪಣ್ಣ, ಪಿಡಿಒ ಚಂದ್ರೇಶ್, ವಕೀಲ ಪುರುಷೋತ್ತಮ ಸೇರಿದಂತೆ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಗ್ರಾಮಸ್ಥರು ಇದ್ದರು.

PREV

Recommended Stories

ದೀಪಾವಳಿ; ರಾಜ್ಯದ ವಿವಿಧೆಡೆ ಬಿಎಂಟಿಸಿಯಿಂದ 960 ಬಸ್‌ - ಗೋವಾಗೂ ವಿಶೇಷ ರೈಲು
ಬೆಂಗಳೂರು ನಗರವೊಂದರಲ್ಲೇ 943 ಟನ್‌ ಆಹಾರ ವ್ಯರ್ಥ: ಸಿಎಂ