ವಿದ್ಯಾರ್ಥಿಗಳಿಗೆ ಕಾನೂನು ಅರಿವು ಅಗತ್ಯ: ಇಂದುಶೇಖರ್

KannadaprabhaNewsNetwork |  
Published : Nov 19, 2026, 02:00 AM IST
ಜಿಲ್ಲಾ ವಕೀಲರ ಸಂಘದ ಮಾಜಿ ಅಧ್ಯಕ್ಷ ಉಮ್ಮತ್ತೂರು ಇಂದುಶೇಖರ್ ಹೇಳಿದರು. | Kannada Prabha

ಸಾರಾಂಶ

ತಮಗಾಗಿ, ಸಮಾಜಕ್ಕಾಗಿ ವಿದ್ಯಾರ್ಥಿಗಳು ಕಾನೂನು ಪಾಲಿಸಬೇಕು. ವಕೀಲರು ನೀಡಿರುವ ಕಾನೂನು ಅರಿವನ್ನು ವಿದ್ಯಾರ್ಥಿಗಳು ಸದುಪಯೋಗ ಪಡಿಸಿಕೊಳ್ಳಬೇಕು .

ಕನ್ನಡಪ್ರಭ ವಾರ್ತೆ, ಚಾಮರಾಜನಗರ

ವಿದ್ಯಾರ್ಥಿಗಳಿಗೆ ಪಠ್ಯಪುಸ್ತಕದ ಅಭ್ಯಾಸದ ಜೊತೆಗೆ ಕಾನೂನುಗಳ ಅರಿವು ಕೂಡ ಇರಬೇಕು. ಸಾಮಾಜಿಕ ಬದಲಾವಣೆ ವಿದ್ಯಾರ್ಥಿಗಳಿಂದ ಮಾತ್ರ ಸಾಧ್ಯ ಎಂದು ಜಿಲ್ಲಾ ವಕೀಲರ ಸಂಘದ ಮಾಜಿ ಅಧ್ಯಕ್ಷ ಉಮ್ಮತ್ತೂರು ಇಂದುಶೇಖರ್ ಹೇಳಿದರು.

ತಾಲೂಕಿನ ಅಮಚವಾಡಿ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಪದವಿಪೂರ್ವ ಶಿಕ್ಷಣ ಇಲಾಖೆ, ಸರ್ಕಾರಿ ಪದವಿಪೂರ್ವ ಕಾಲೇಜು ವತಿಯಿಂದ ನಡೆದ ರಾಷ್ಟ್ರೀಯ ಕಾನೂನು ಸೇವೆಗಳ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಎಷ್ಟೇ ಕಾನೂನು ಅರಿವು ಕೊಟ್ಟರೂ ಕೂಡ ಬಾಲ್ಯವಿವಾಹ, ಮೂಡನಂಬಿಕೆ ಹೆಚ್ಚಾಗಿ ನಡೆಯುತ್ತಿದೆ. ಇದಕ್ಕೆ. ಶಿಕ್ಷಣದ ಕೊರತೆ ಕಾರಣವಾಗಿದೆ. ಗಂಡಿಗೆ 21 ವರ್ಷ, ಹೆಣ್ಣಿಗೆ 18 ವರ್ಷ ತುಂಬಿದ್ದರೆ ಮಾತ್ರ ವಿವಾಹ ಮಾಡಬೇಕು. ಇಲ್ಲವಾದರೆ ಅದು ಕಾನೂನಿಗೆ ವಿರುದ್ಧವಾಗಿರುತ್ತದೆ. ಬಾಲ್ಯ ವಿವಾಹ ಮಾಡುವ ಪೋಷಕರಿಗೂ ಕಲ್ಯಾಣಮಂಟಪ ಮಾಲೀಕರಿಗೂ ಪೂಜಾರಿಗೂ ಶಿಕ್ಷೆಗೆ ಗುರಿಯಾಗಬೇಕಾಗುತ್ತದೆ. ಬಾಲ್ಯವಿವಾಹದಿಂದ ಮಕ್ಕಳ ಆರೋಗ್ಯ ಶಿಕ್ಷಣದ ಮೇಲೆ ಪರಿಣಾಮ ಬೀರುತ್ತದೆ. ಬಾಲ್ಯ ವಿವಾಹ ಪ್ರಕರಣಕ್ಕೆ ಜಿಲ್ಲಾ ನ್ಯಾಯಾಲದಲ್ಲೂ ಶಿಕ್ಷೆಯಾಗಿರುವ ನಿದರ್ಶನಗಳಿವೆ ಎಂದು ಹೇಳಿದರು. ಪೋಕ್ಸೋ ಕಾಯ್ದೆಯನ್ನು 2012ರಲ್ಲಿ ಕೇಂದ್ರ ಸರ್ಕಾರ ಜಾರಿಗೆ ತಂದಿದೆ. 18 ವರ್ಷದೊಳಗಿನ ಮಕ್ಕಳ ಮೇಲೆ ನಡೆಯುವ ಲೈಂಗಿಕ ದೌರ್ಜನ್ಯವನ್ನು ಯಾರೇ ಮಾಡಿದ್ದರೂ ಕೂಡ ಅವರಿಗೆ ಕಠಿಣ ಶಿಕ್ಷೆಗೆ ಗುರಿಪಡಿಸಲಾಗುವುದು. ಜೊತೆಗೆ 10 ಲಕ್ಷದವರೆಗೂ ಡಂಡ ವಿಧಿಸಲಾಗುತ್ತದೆ ಎಂದು ವಿವರಿಸಿದರು.ವಾಹನ ಚಲನೆ ಮಾಡಬೇಕಾದರೆ 18 ವರ್ಷ ತುಂಬಿರಬೇಕು. ವಾಹನ ಪರವಾನಗಿ ಹೊಂದಿರಬೇಕು. ವಾಹನ ವಿಮೆ ಮಾಡಿಸಿರಬೇಕು ಎಂದರು.

ಉಪನ್ಯಾಸಕ ಸುರೇಶ್ ಋಗ್ವೇದಿ ಮಾತನಾಡಿ, ಇಡೀ ದೇಶದ್ಯಾಂತ ಕಾನೂನು ಸೇವೆಗಳ ಪ್ರಾಧಿಕಾರ ದಿನಾಚರಣೆಯನ್ನು ಆಚರಿಸಲಾಗುತ್ತದೆ. ಭವಿಷ್ಯದ ಪ್ರಜೆಗಳಾದ ವಿದ್ಯಾರ್ಥಿಗಳಿಗೆ, ಯುವಕರಿಗೆ ಸಾಮಾನ್ಯ ಕಾನೂನು ಅರಿವು ಮೂಡಿಸಲಾಗುತ್ತದೆ. ಕಾನೂನುಗಳ ಅರಿವು, ಜಾಗೃತಿ ಮತ್ತು ಸಮಗ್ರವಾದ ತಿಳಿವಳಿಕೆಯನ್ನು ವಿಶೇಷವಾಗಿ ಕರ್ನಾಟಕ ಸರ್ಕಾರ, ಪದವಿ ಪೂರ್ವ ಶಿಕ್ಷಣ ಇಲಾಖೆಯು ನಿರಂತರವಾಗಿ ಮಾಡಿಕೊಂಡು ಬರುತ್ತಿದೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಕಾಲೇಜು ಪ್ರಾಂಶುಪಾಲ ಶಿವನಂಜಪ್ಪ ಮಾತನಾಡಿ, ತಮಗಾಗಿ, ಸಮಾಜಕ್ಕಾಗಿ ವಿದ್ಯಾರ್ಥಿಗಳು ಕಾನೂನು ಪಾಲಿಸಬೇಕು. ವಕೀಲರು ನೀಡಿರುವ ಕಾನೂನು ಅರಿವನ್ನು ವಿದ್ಯಾರ್ಥಿಗಳು ಸದುಪಯೋಗ ಪಡಿಸಿಕೊಳ್ಳಬೇಕು ಎಂದರು. ಕಾರ್ಯಕ್ರಮದಲ್ಲಿ ಉಪನ್ಯಾಸಕರಾದ ಬಸವಣ್ಣ, ಬಿ.ಎನ್.ರಮೇಶ್, ಎಂ.ಪವಿತ್ರ, ಸುರೇಶ್, ಎನ್.ಪಲ್ಲವಿ ಹಾಗೂ ವಿದ್ಯಾರ್ಥಿಗಳು ಹಾಜರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಉಡುಪಿ: ಕಿಶೋರ ಯಕ್ಷಗಾನ ಸಂಭ್ರಮಕ್ಕೆ ಚಾಲನೆ
ಕುಡಿಯುವ ನೀರಿನ ಸಮಸ್ಯೆಯಾಗದಂತೆ ಕ್ರಮಕೈಗೊಳ್ಳಿ