ಸೋಮರಡ್ಡಿ ಅಳವಂಡಿ
ವಿವಿಧ ಕಾರಣಗಳಿಂದಾಗಿ ರಾಜ್ಯದಲ್ಲಿ ಹಲವು ವರ್ಷಗಳಿಂದ ಶಿಕ್ಷಕರ ನೇಮಕಾತಿ ನಡೆಯದ ಹಿನ್ನೆಲೆಯಲ್ಲಿ ವಯೋಮಿತಿ ಮೀರಿದ ಅಭ್ಯರ್ಥಿಗಳಿಗೂ ಸ್ಪರ್ಧೆಗೆ ಅವಕಾಶ ಕಲ್ಪಿಸಲು ರಾಜ್ಯ ಸರ್ಕಾರ 2026 ಜ. 29ರಂದು ನೇರ ನೇಮಕಾತಿಯಲ್ಲಿ ಒಂದು ಬಾರಿಗೆ ಐದು ವರ್ಷಗಳ ವಯೋಮಿತಿ ಸಡಿಲಿಕೆ ನೀಡಿ ಆದೇಶ ಹೊರಡಿಸಿತ್ತು. ಆದರೆ, ಪ್ರಸ್ತುತ ನಡೆಯುತ್ತಿರುವ 15 ಸಾವಿರ ಶಿಕ್ಷಕರ ನೇಮಕಾತಿಯಲ್ಲಿ ಈ ವಿನಾಯಿತಿ ನೀಡದಿರುವುದು ಅಭ್ಯರ್ಥಿಗಳ ಅಸಮಾಧಾನಕ್ಕೆ ಕಾರಣವಾಗಿದೆ.
ಸರ್ಕಾರ ಈ ಹಿಂದೆ ನೀಡಿದ್ದ ಮೂರು ವರ್ಷಗಳ ವಯೋಮಿತಿ ವಿನಾಯಿತಿ ಆದೇಶವನ್ನು ತಿದ್ದುಪಡಿ ಮಾಡಿ, 2026 ಜ. 29ರಂದು ಮಾಡಿರುವ ಆದೇಶದಲ್ಲಿ ಐದು ವರ್ಷಗಳಿಗೆ ಹೆಚ್ಚಿಸಿತ್ತು. ಎಲ್ಲ ಅಭ್ಯರ್ಥಿಗಳಿಗೂ ಅವರ ವರ್ಗದ ಗರಿಷ್ಠ ವಯೋಮಿತಿಗೆ ಹೆಚ್ಚುವರಿಯಾಗಿ ಐದು ವರ್ಷಗಳ ಸಡಿಲಿಕೆ ಅನ್ವಯವಾಗಲಿದೆ ಎಂದು ಆದೇಶದಲ್ಲಿ ಸ್ಪಷ್ಟಪಡಿಸಲಾಗಿದೆ. ಅದರಂತೆ ಮೊರಾರ್ಜಿ ದೇಸಾಯಿ ವಸತಿ ಶಾಲೆಗಳು ಸೇರಿದಂತೆ ವಿವಿಧ ಇಲಾಖೆಗಳ ನೇಮಕಾತಿಗಳಲ್ಲಿ ಈ ವಿನಾಯಿತಿ ಜಾರಿಗೊಳಿಸಲಾಗಿದೆ. ಆದರೆ, ಶಿಕ್ಷಣ ಇಲಾಖೆಯ 15 ಸಾವಿರ ಶಿಕ್ಷಕರ ನೇಮಕಾತಿಯಲ್ಲಿ ಮಾತ್ರ ಈ ಸೌಲಭ್ಯ ನೀಡದಿರುವುದು ತಾರತಮ್ಯದ ಪ್ರಶ್ನೆಯನ್ನು ಹುಟ್ಟುಹಾಕಿದೆ.12 ವರ್ಷಗಳಿಂದ ಅವಕಾಶವೇ ಇಲ್ಲ: ಕರ್ನಾಟಕ ಶಿಕ್ಷಣ ಇಲಾಖೆಯ ಸೇವೆಗಳ ನಿಯಮಗಳು 1967ರಲ್ಲಿನ ಗರಿಷ್ಠ ವಯೋಮಿತಿ ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ 40 ವರ್ಷ, ಹಿಂದುಳಿದ ವರ್ಗದ ಅಭ್ಯರ್ಥಿಗಳಿಗೆ 43 ವರ್ಷ ಹಾಗೂ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಪ್ರವರ್ಗ-1ರ ಅಭ್ಯರ್ಥಿಗಳಿಗೆ 45 ವರ್ಷಗಳ ವರೆಗೆ ವಯೋಮಿತಿ ಇದೆ. 2026 ಜ. 29ರಂದು ಹೊರಡಿಸಿರುವ ಆದೇಶದಂತೆ ಮುಂಬರುವ ಎಲ್ಲ ನೇಮಕಾತಿ ಅಧಿಸೂಚನೆಯಲ್ಲಿ 5 ವರ್ಷಗಳ ವಯೋಮಿತಿ ಹೆಚ್ಚುವರಿ ಸಡಿಲಿಕೆ ಅಳವಡಿಸುವಂತೆ ಸರ್ಕಾರ ಸೂಚಿಸಿದೆ. ಇದನ್ನು ಜಾರಿ ಮಾಡಬೇಕು ಎನ್ನುವುದು ಬೇಡಿಕೆಯಾಗಿದೆ.
ಹೀಗಾಗಿ ಸರ್ಕಾರವೇ ಹೊರಡಿಸಿರುವ ಆದೇಶವನ್ನು ಶಿಕ್ಷಣ ಇಲಾಖೆಯ ನೇಮಕಾತಿಯಲ್ಲಿಯೂ ಅನ್ವಯಿಸಬೇಕು ಎಂದು ಅಭ್ಯರ್ಥಿಗಳು ಆಗ್ರಹಿಸಿದ್ದಾರೆ. ಈ ಸಂಬಂಧ ಕೆಲವು ಅಭ್ಯರ್ಥಿಗಳು ಕರ್ನಾಟಕ ಆಡಳಿತ ನ್ಯಾಯಮಂಡಳಿ (ಕೆಎಟಿ) ಹಾಗೂ ಹೈಕೋರ್ಟ್‌ನಲ್ಲಿ ಪ್ರತ್ಯೇಕವಾಗಿ ಕಾನೂನು ಹೋರಾಟ ನಡೆಸುತ್ತಿದ್ದಾರೆ.
ಸರ್ಕಾರದ ವಾದ: ಸರ್ಕಾರ ಈಗ ಶಿಕ್ಷಣ ಇಲಾಖೆಯ ನಿಯಮದ ಪ್ರಕಾರ ಎಸ್‌ಸಿ-ಎಸ್‌ಟಿಗಳಿಗೆ 45 ವರ್ಷಗಳ ವರೆಗೂ ಅವಕಾಶ ಇದ್ದು, ಮತ್ತೆ 5 ವರ್ಷ ಸಡಿಲಿಕೆ ಮಾಡಿದರೆ 50 ವರ್ಷಗಳಾಗುತ್ತದೆ. ಸೇವಾ ಅವಧಿ ಕೇವಲ 10 ವರ್ಷ ಉಳಿಯುತ್ತದೆ ಎನ್ನುವ ಕಾರಣ ಮುಂದೆ ಮಾಡಿ ಶಿಕ್ಷಕರ ನೇಮಕಾತಿಯಲ್ಲಿ 5 ವರ್ಷಗಳ ವಯೋಮಿತಿ ಸಡಿಲಿಕೆಯನ್ನು ಕೈಬಿಡುತ್ತಿದೆ. ಆದರೆ, ಇದು ಸರಿಯಲ್ಲ. ಹತ್ತು ವರ್ಷಗಳ ಸೇವೆಗಾದರೂ ಅವಕಾಶ ನೀಡಬೇಕು ಎನ್ನುವುದು ಆಗ್ರಹವಾಗಿದೆ.