ಕೊಪ್ಪಳ: ಕೈಗಾರಿಕಾ ಮಾಲಿನ್ಯ ನಿಯಂತ್ರಣ ಹಾಗೂ ಜನರ ಆರೋಗ್ಯ ರಕ್ಷಣೆಗೆ ಆಗ್ರಹಿಸಿ ಕೊಪ್ಪಳ ಬಚಾವೋ ಆಂದೋಲನ ಸಮಿತಿ ಮತ್ತು ಕೊಪ್ಪಳ ತಾಲೂಕು ಪರಿಸರ ಹಿತರಕ್ಷಣಾ ಸಮಿತಿ ಜಂಟಿಯಾಗಿ ಕರೆ ನೀಡಿದ್ದ ಕೊಪ್ಪಳ ಬಂದ್ಗೆ ಶನಿವಾರ ವ್ಯಾಪಕ ಬೆಂಬಲ ವ್ಯಕ್ತವಾಯಿತು. ನಗರದ ಅಂಗಡಿ, ಮುಂಗಟ್ಟುಗಳು ಸ್ವಯಂಪ್ರೇರಿತವಾಗಿ ಬಂದ್ ಮಾಡಿ ಹೋರಾಟಕ್ಕೆ ಸಾಥ್ ನೀಡಲಾಯಿತು.
ನಗರದ ಗವಿಮಠದಿಂದ ಆರಂಭವಾದ ಬೃಹತ್ ಪ್ರತಿಭಟನಾ ಮೆರವಣಿಗೆ ಗಡಿಯಾರ ಕಂಬದ ಮೂಲಕ ಜವಾಹರ ರಸ್ತೆಯಲ್ಲಿ ಸಾಗಿತು. ಈ ಸಂದರ್ಭದಲ್ಲಿ ಸರ್ಕಾರ ಹಾಗೂ ಕೈಗಾರಿಕೆಗಳ ವಿರುದ್ಧ ಘೋಷಣೆಗಳನ್ನು ಕೂಗಿದ ಪ್ರತಿಭಟನಾಕಾರರು, ''ಕಾರ್ಖಾನೆ ತೊಲಗಿಸಿ, ಬದುಕಲು ಬಿಡಿ'' ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕೊಪ್ಪಳ ನಗರ ಸೇರಿದಂತೆ ಸುತ್ತಮುತ್ತಲಿನ 20ಕ್ಕೂ ಹೆಚ್ಚು ಗ್ರಾಮಗಳು ಕೈಗಾರಿಕಾ ಮಾಲಿನ್ಯದಿಂದ ತೀವ್ರ ಸಮಸ್ಯೆ ಎದುರಿಸುತ್ತಿವೆ. ಜನರ ಆರೋಗ್ಯ, ಕೃಷಿ, ಜಲಮೂಲ ಹಾಗೂ ಪರಿಸರದ ಮೇಲೆ ದುಷ್ಪರಿಣಾಮ ಉಂಟಾಗುತ್ತಿದೆ. ಹೀಗಾಗಿ ಜನವಸತಿ ಪ್ರದೇಶಗಳ ಸಮೀಪದಲ್ಲಿರುವ ಮಾಲಿನ್ಯಕಾರಕ ಕಾರ್ಖಾನೆಗಳನ್ನು ಕೂಡಲೇ ಸ್ಥಳಾಂತರಿಸಬೇಕು. ಜನರ ಜೀವದ ಜತೆ ಚೆಲ್ಲಾಟವಾಡುವುದನ್ನು ನಿಲ್ಲಿಸಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.ಇಟಗಿಯ ಗುರುಶಾಂತವೀರ ಸ್ವಾಮೀಜಿ ಸೇರಿದಂತೆ ಅನೇಕ ಶ್ರೀಗಳು ಸಾನ್ನಿಧ್ಯ ವಹಿಸಿದ್ದರು.
ಕಪ್ಪತ್ತಗುಡ್ಡ ನಂದಿವೇರಿ ಮಠದ ಶಿವಕುಮಾರ ಸ್ವಾಮೀಜಿ ಮಾತನಾಡಿ, ಇದು ಕೇವಲ ಪರಿಸರ ಹೋರಾಟವಲ್ಲ, ಪ್ರಕೃತಿಯ ಉಳಿವಿಗಾಗಿ ನಡೆಯುತ್ತಿರುವ ಹೋರಾಟ. ಬಾಧಿತ ಗ್ರಾಮಗಳಿಗೆ ಭೇಟಿ ನೀಡಿದಾಗ ಅಲ್ಲಿನ ಜನರ ನೋವು, ಸಂಕಷ್ಟ ಕಣ್ಣಾರೆ ಕಂಡಿದ್ದೇನೆ. ಶುದ್ಧ ಗಾಳಿಯೇ ಇಲ್ಲದ ಪರಿಸ್ಥಿತಿ ನಿರ್ಮಾಣವಾಗಿದೆ. ಬಂಡವಾಳಶಾಹಿಗಳ ಹಿಡಿತದಿಂದ ಕೊಪ್ಪಳವನ್ನು ರಕ್ಷಿಸಬೇಕಿದೆ. ಅಂಗಡಿ ಬಂದ್ ಮಾಡಿದರೆ ಸಾಲದು, ಜನರು ಹೋರಾಟದಲ್ಲಿ ನೇರವಾಗಿ ಪಾಲ್ಗೊಳ್ಳಬೇಕು. ಸರ್ಕಾರ ಜನರ ಸಂಖ್ಯಾಬಲಕ್ಕೆ ಹೆದರುತ್ತದೆ. ಕಪ್ಪತ್ತಗುಡ್ಡ ಉಳಿವಿನ ಹೋರಾಟದಲ್ಲಿ ಜನರು ದೊಡ್ಡ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರಿಂದ ಯಶಸ್ಸು ಸಿಕ್ಕಿತ್ತು. ಅದೇ ರೀತಿಯಲ್ಲಿ ಕೊಪ್ಪಳದ ಪುಣ್ಯಭೂಮಿ ಉಳಿಸಲು ಒಗ್ಗಟ್ಟಾಗಬೇಕು ಎಂದರು.
ನಟ ಚೇತನ್ ಅಹಿಂಸಾ ಮಾತನಾಡಿ, ಸಿನಿಮಾ ನಟರು ಅಥವಾ ಶ್ರೀಮಂತರಿಂದ ಮಾತ್ರ ಕೊಪ್ಪಳ ಉಳಿಯುವುದಿಲ್ಲ. ತಳಮಟ್ಟದಿಂದ ರೂಪುಗೊಳ್ಳುವ ಜನಪರ ಹೋರಾಟದಿಂದ ಮಾತ್ರ ಬದಲಾವಣೆ ಸಾಧ್ಯ. ಎಡ, ಬಲ ಎಂಬ ಭೇದ ಮರೆತು ಸತ್ಯದ ಪರವಾಗಿ ಎಲ್ಲರೂ ಒಂದಾಗಬೇಕು. ಜನರನ್ನು ದಿಕ್ಕು ತಪ್ಪಿಸುವ ಹೋರಾಟಗಳ ನಡುವೆ ಈ ಹೋರಾಟ ಜನರ ಬದುಕು ಮತ್ತು ಪರಿಸರದ ಉಳಿವಿಗಾಗಿ ನಡೆಯುತ್ತಿದೆ. ಅಧಿಕಾರಿಗಳು ಹಾಗೂ ಆಡಳಿತಗಾರರು ಜನರ ಮನವಿಗಳನ್ನು ನಿರ್ಲಕ್ಷಿಸುತ್ತಿದ್ದಾರೆ. ಹೀಗಾಗಿ ಜನರ ರಾಜಕೀಯ ಶಕ್ತಿ ಗಟ್ಟಿಯಾಗಬೇಕು ಎಂದರು.
ಮೈನಳ್ಳಿಯ ಸಿದ್ದೇಶ್ವರ ಶಿವಾಚಾರ್ಯ ಮಹಾಸ್ವಾಮೀಜಿ ಮಾತನಾಡಿ, ಕಾರ್ಖಾನೆಗಳಿಂದ ಪರಿಸರಕ್ಕೆ ಹಾನಿಯಾಗುತ್ತಿದೆ. ಕೇವಲ 22 ಗ್ರಾಮಗಳಲ್ಲ, ಇನ್ನೂ ಅನೇಕ ಗ್ರಾಮಗಳು ಮಾಲಿನ್ಯದ ಪರಿಣಾಮ ಎದುರಿಸುತ್ತಿವೆ. ಕಾರ್ಖಾನೆಗಳಿಗೆ ನೀಡುವ ನೀರನ್ನು ರೈತರಿಗೆ ನೀಡಿದರೆ ಕೃಷಿಗೆ ಅನುಕೂಲವಾಗಲಿದೆ. ಹೋರಾಟಕ್ಕೆ ಸದಾ ಬೆಂಬಲ ನೀಡುವುದಾಗಿ ತಿಳಿಸಿದರು.
ಹಿರಿಯ ನ್ಯಾಯವಾದಿ ಸಂಧ್ಯಾ ಮಾದಿನೂರು ಮಾತನಾಡಿ, ನಿರೀಕ್ಷಿತ ಮಟ್ಟದಲ್ಲಿ ಹೋರಾಟ ನಡೆಯುತ್ತಿಲ್ಲ. ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕು. ಕಾರ್ಖಾನೆಗಳ ಉತ್ಪಾದನೆ ಆರಂಭವಾಗುತ್ತಿರುವುದು ಹೋರಾಟವನ್ನು ಹತ್ತಿಕ್ಕುವ ಪ್ರಯತ್ನದ ಭಾಗವಾಗಿರಬಹುದು. ಜನರ ಸಮಸ್ಯೆಗಳನ್ನು ಆಳುವವರೇ ನಿರ್ಲಕ್ಷಿಸುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಎದ್ದು ಹೋದ ಹೇಮಲತಾ ನಾಯಕ: ಕಾರ್ಯಕ್ರಮದಲ್ಲಿ ಭಾಗವಹಿಸಿ ವೇದಿಕೆಯ ಮೇಲಿದ್ದ ವಿಧಾನಪರಿಷತ್ ಸದಸ್ಯೆ ಹೇಮಲತಾ ನಾಯಕ ಅವರಿಗೆ ಭಾಷಣ ಮಾಡಲು ಅವಕಾಶ ನೀಡದೇ ಇರುವುದರಿಂದ ಆಕ್ರೋಶಗೊಂಡು ಹೊರಹೋದರು.ಜನಪ್ರತಿನಿಧಿಗಳನ್ನು ನಾವು ಆಹ್ವಾನಿಸಿಲ್ಲ. ಇದು ಜನರ ಹೋರಾಟವಾಗಿದ್ದು, ಇಲ್ಲಿ ಜನಪ್ರತಿನಿಧಿಗಳು ಯಾರಿಗೂ ನಾವು ಅವಕಾಶ ನೀಡುವುದಿಲ್ಲ ಎಂದು ಕಾರ್ಯಕ್ರಮ ನಿರೂಪಣೆ ಮಾಡುತ್ತಿದ್ದ ಮಂಜನಾಥ ಗೊಂಡಬಾಳ ಹೇಳಿದ್ದರಿಂದ ಹೇಮಲತಾ ನಾಯಕ ಎದ್ದು ಹೋದರು.ಅವರು ವೇದಿಕೆಯಿಂದ ಎದ್ದು ಹೋಗುತ್ತಿದ್ದಂತೆ ಬಿಜೆಪಿ ಮುಖಂಡರಾದ ರಾಜು ಬಾಕಳೆ ಮತ್ತು ಎ.ವಿ. ಕಣವಿ ಅವರು ಸಂಘಟಕದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ವಿಧಾನಪರಿಷತ್ನಲ್ಲಿ ಹೆಚ್ಚು ಬಾರಿ ಕಾರ್ಖಾನೆಗಳ ಕುರಿತು ಮಾತನಾಡಿದ ಅವರನ್ನೇ ಅಪಮಾನ ಮಾಡಲಾಗಿದೆ. ಇದು ಸರಿಯಲ್ಲ ಎಂದು ಕಿಡಿಕಾರಿದರು.
ದಸರಾ ಉದ್ಘಾಟನೆ ತಿರಸ್ಕರಿಸಿದ್ದರೆ ಗವಿಮಠದ ಶ್ರೀಗಳು ಗಾಂಧಿ, ಅಂಬೇಡ್ಕರ್ ಸಾಲಿನಲ್ಲಿ ನಿಲ್ಲುತ್ತಿದ್ದರು
ಮೈಸೂರು ದಸರಾ ಉತ್ಸವದ ಉದ್ಘಾಟನೆಯ ಆಹ್ವಾನವನ್ನು ಗವಿಮಠದ ಶ್ರೀಗಳು ತಿರಸ್ಕರಿಸಿದ್ದರೆ ಮಹಾತ್ಮ ಗಾಂಧೀಜಿ ಹಾಗೂ ಡಾ. ಬಿ.ಆರ್. ಅಂಬೇಡ್ಕರ್ ಅವರ ಸಾಲಿನಲ್ಲಿ ನಿಲ್ಲುತ್ತಿದ್ದರು ಎಂದು ಜೇವರ್ಗಿಯ ಸಿದ್ದಬಸವ ಕಬೀರ ಸ್ವಾಮೀಜಿ ಅಭಿಪ್ರಾಯಪಟ್ಟರು.ಶನಿವಾರ ಇಲ್ಲಿ ಕಾರ್ಖಾನೆಗಳ ವಿರುದ್ಧ ನಡೆದ ಹೋರಾಟದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಬಲ್ದೋಟಾ ಕಾರ್ಖಾನೆ ವಿರುದ್ಧದ ಹೋರಾಟವನ್ನು ಗವಿಮಠದ ಗವಿಸಿದ್ದೇಶ್ವರ ಮಹಾಸ್ವಾಮೀಜಿಗಳೇ ಆರಂಭಿಸಿದ್ದರು. ಆದರೆ, ಹೋರಾಟ ಇನ್ನೂ ಕಾರ್ಯಗತವಾಗದ ಹಿನ್ನೆಲೆಯಲ್ಲಿ ಮೈಸೂರು ದಸರಾ ಉತ್ಸವದ ಉದ್ಘಾಟನೆಗೆ ತೆರಳಬಾರದಿತ್ತು ಎಂಬುದು ತಮ್ಮ ಅಭಿಪ್ರಾಯ ಎಂದರು.ಈ ಕುರಿತು ಶ್ರೀಗಳು ದಸರಾ ಉದ್ಘಾಟನೆಗೆ ತೆರಳುವುದಿಲ್ಲ ಎಂಬ ಸುದ್ದಿ ಹರಡಿದಾಗ ತಮಗೆ ಅತ್ಯಂತ ಸಂತೋಷವಾಗಿತ್ತು. ಆದರೆ, ಆ ಸುದ್ದಿ ಸುಳ್ಳು ಎಂಬುದು ತಿಳಿದಾಗ ಬೇಸರವಾಯಿತು. ಈ ಸಂದರ್ಭದಲ್ಲಿ ದಸರಾ ಉದ್ಘಾಟನೆಯ ಆಹ್ವಾನ ತಿರಸ್ಕರಿಸುವಂತಹ ನಿರ್ಧಾರ ಕೈಗೊಂಡಿದ್ದರೆ, ಗವಿಮಠದ ಶ್ರೀಗಳು ಗಾಂಧೀಜಿ ಮತ್ತು ಅಂಬೇಡ್ಕರ್ ಅವರಂತೆ ಸಾಮಾಜಿಕ ಹೋರಾಟದ ಇತಿಹಾಸದಲ್ಲಿ ಗುರುತಿಸಿಕೊಳ್ಳುತ್ತಿದ್ದರು. ದೇಶದಲ್ಲಿಯೇ ಶ್ರೇಷ್ಠ ಸ್ಥಾನ ಪಡೆಯುವ ಅವಕಾಶವಿತ್ತು ಎಂದು ವಿಷಾದಿಸಿದರು.