ಬಡ ರೈತರ ಬದುಕಿನ ಜತೆ ಒತ್ತುವರಿ ತೆರವು ವಿಚಾರದಲ್ಲಿ ಸರ್ಕಾರ, ಅರಣ್ಯ ಇಲಾಖೆಯಾಗಲಿ ಚೆಲ್ಲಾಟ- ತೆರವುಗೊಳಿಸಿದರೆ ಕಾನೂನಾತ್ಮಕ ಹೋರಾಟ: ಶಿವಣ್ಣ

KannadaprabhaNewsNetwork |  
Published : Aug 26, 2024, 01:43 AM ISTUpdated : Aug 26, 2024, 09:06 AM IST
ನರಸಿಂಹರಾಜಪುರದ ಪತ್ರಿಕಾ ಭವನದಲ್ಲಿ ಜಿಲ್ಲಾ ದಲಿತ ಪ್ರಗತಿಪರ ಸಂಘಟನೆಗಳ ಮುಖಂಡ ಎಚ್.ಎಂ.ಶಿವಣ್ಣ ಸುದ್ದಿ ಗೋಷ್ಠಿಯಲ್ಲಿ ಮಾತನಾಡಿದರು.ಈ ಸಂದರ್ಭದಲ್ಲಿ ಮುಖಂಡರಾದ ನ್ಯಾಯವಾದಿ ಷಡಾಕ್ಷರಪ್ಪ, ಚಿತ್ರಪ್ಪ ಯರಬಾಳ್, ಸ್ಟೀವನ್ ಇದ್ದರು. | Kannada Prabha

ಸಾರಾಂಶ

ನರಸಿಂಹರಾಜಪುರ, ದಲಿತರ, ಬಡ ರೈತರ ಬದುಕಿನ ಜತೆ ಒತ್ತುವರಿ ತೆರವು ವಿಚಾರದಲ್ಲಿ ಸರ್ಕಾರ, ಅರಣ್ಯ ಇಲಾಖೆಯಾಗಲಿ ಚೆಲ್ಲಾಟವಾಡಲು ಬಂದರೆ ಕಾನೂನಾತ್ಮಕ ಜನಾಂದೋಲನ ಮಾಡುವುದಾಗಿ ಜಿಲ್ಲಾ ದಲಿತ ಪ್ರಗತಿಪರ ಸಂಘಟನೆಗಳ ಮುಖಂಡ ಎಚ್.ಎಂ. ಶಿವಣ್ಣ ತಿಳಿದರು.

 ನರಸಿಂಹರಾಜಪುರ : ದಲಿತರ, ಬಡ ರೈತರ ಬದುಕಿನ ಜತೆ ಒತ್ತುವರಿ ತೆರವು ವಿಚಾರದಲ್ಲಿ ಸರ್ಕಾರ, ಅರಣ್ಯ ಇಲಾಖೆಯಾಗಲಿ ಚೆಲ್ಲಾಟವಾಡಲು ಬಂದರೆ ಕಾನೂನಾತ್ಮಕ ಜನಾಂದೋಲನ ಮಾಡುವುದಾಗಿ ಜಿಲ್ಲಾ ದಲಿತ ಪ್ರಗತಿಪರ ಸಂಘಟನೆಗಳ ಮುಖಂಡ ಎಚ್.ಎಂ. ಶಿವಣ್ಣ ತಿಳಿದರು

ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಪ.ಜಾತಿ, ಪಂಗಡ ಹಾಗೂ ಹಿಂದುಳಿದವರಿಗೆ ಈ ವರೆಗೂ ಒಂದಿಂಚೂ ಭೂಮಿ ಲಭಿಸಿಲ್ಲ. ಗಿರಿಜನ ಹಾಡಿ, ದಲಿತರು ವಾಸಿಸುವ ಸ್ಥಳಗಳಲ್ಲಿ, ಕಂದಾಯ, ಅರಣ್ಯ ಜಾಗದಲ್ಲಿ ನೂರಾರು ವರ್ಷದಿಂದ ಬದುಕು ಕಟ್ಟಿಕೊಂಡು ಕೃಷಿ ಮಾಡಿಕೊಂಡು ಬರುತ್ತಿದ್ದಾರೆ. ಉಚ್ಛ ನ್ಯಾಯಾಲಯ ಒತ್ತುವರಿ ತೆರವುಗೊಳಿಸಲು ಆದೇಶಿಸಿದೆ ಎಂಬ ಆದೇಶ ಹಿಡಿದುಕೊಂಡು ನಿರ್ಗತಿಕರು, ಭೂ ಹೀನರು, ದಲಿತರು, ಬಡ ರೈತರ ಕೃಷಿ ಭೂಮಿಯನ್ನು ಅರಣ್ಯ ಇಲಾಖೆಯವರು ತೆರವು ಮಾಡುತ್ತಿರುವುದು ಖಂಡನೀಯ ಎಂದರು.

ಪರಿಸರ ಸಂರಕ್ಷಣೆ, ಕಾಡು ಉಳಿಸುವುದು ನಮ್ಮೆಲ್ಲರ ಕರ್ತವ್ಯ. ಆದರೆ, ಬದುಕಿಗಾಗಿ ಕೃಷಿ ಮಾಡಲು ಬಳಸುತ್ತಿರುವ ಒತ್ತುವರಿ ಭೂಮಿ ತೆರವು ಸರಿಯಲ್ಲ. ಬಲಾಢ್ಯ ಸಮುದಾಯದವರ ನೂರಾರು ಎಕರೆ ಒತ್ತುವರಿಯನ್ನು ಮೊದಲು ತೆರವುಗೊಳಿಸಲಿ. ಬಡವರ, ದಲಿತರ ಎರಡು ಅಥವಾ ಮೂರು ಎಕರೆ ಭೂಮಿ ತೆರವು ಮಾಡಬಾರದು. ಇಂತಹ ಸಣ್ಣಪುಟ್ಟ ಒತ್ತುವರಿದಾರರನ್ನು ಮುಂದಿಟ್ಟುಕೊಂಡು ನೂರಾರು ಎಕ್ರೆ ಒತ್ತುವರಿ ಮಾಡಿದ ಬಲಾಢ್ಯರು ತಮ್ಮ ಭೂಮಿ ಉಳಿಸಿ ಕೊಳ್ಳುವ ಹುನ್ನಾರ ನಡೆಸುತ್ತಿದ್ದಾರೆ ಎಂದು ಆರೋಪಿಸಿದರು.

ಪ್ರಜಾಪ್ರಭುತ್ವದಲ್ಲಿ ನೆಲ, ಜಲ, ಸಂಪತ್ತು ಎಲ್ಲರಿಗೂ ಸಮಾನ ಹಂಚಿಕೆಯಾಗಬೇಕು. ಆದರೆ, ಇದಕ್ಕೆ ತದ್ವಿರುದ್ಧವಾಗಿ ನಡೆಯು ತ್ತಿದೆ. ಸರ್ಕಾರಗಳು ದಲಿತರಿಗೆ, ಬಡ ರೈತರಿಗೆ, ನಿರ್ಗತಿಕರಿಗೆ ಸಾಮಾಜಿಕ ಹಾಗೂ ಆರ್ಥಿಕ ನ್ಯಾಯ ಕೊಡುವಲ್ಲಿ ಸಂಪೂರ್ಣ ವಿಫಲವಾಗಿವೆ. ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ನ್ಯಾಯ, ಸಮಾನತೆ ದೊರೆಯದೆ ದಲಿತರ ಮೇಲೆ ದೌರ್ಜನ್ಯ ಗಳು ನಡೆಯು ತ್ತಲೇ ಇವೆ ಎಂದು ವಿಷಾಧಿಸಿದರು.

ತಾಲೂಕಿನ ಬೈರಾಪುರ ಗ್ರಾಮದಲ್ಲಿ ದಲಿತ ಸಮುದಾಯದ ವ್ಯಕ್ತಿಗೆ ಅರಣ್ಯಾಧಿಕಾರಿ ತಮ್ಮ ವೈಯಕ್ತಿಕ ದ್ವೇಷಕ್ಕೆ ನೂರಾರು ವರ್ಷಗಳಿಂದ ಕೃಷಿ ಮಾಡಿಕೊಂಡು ಬಂದ ಆಳೆತ್ತರಕ್ಕೆ ಬೆಳೆದ ಬೆಳೆ, ಗಿಡ, ಮರಗಳನ್ನು ರಾತ್ರೋ ರಾತ್ರಿ ಕಡಿದು ಹಾಕಿದ್ದಾರೆ. ತೀರ್ಥಹಳ್ಳಿಯಲ್ಲಿಯೂ 25 ಜನರು ಒಬ್ಬ ಮಹಿಳೆ ಮೇಲೆ ಒತ್ತುವರಿ ತೆರವು ವಿಚಾರವಾಗಿ ಹಲ್ಲೆಗೆ ಮುಂದಾಗಿದ್ದಲ್ಲದೆ ದೌರ್ಜನ್ಯ ಕ್ಕೊಳಗಾದ ಮಹಿಳೆ ಮೇಲೆಯೇ ಕರ್ತವ್ಯಕ್ಕೆ ಅಡ್ಡಿ ಪಡಿಸಿದ್ದರೆಂದು ಸುಳ್ಳು ಕೇಸು ದಾಖಲಿಸಿದ್ದಾರೆ ಎಂದರು.

ಶಿವಮೊಗ್ಗ ನ್ಯಾಯವಾದಿ ಷಡಾಕ್ಷರಪ್ಪ ಮಾತನಾಡಿ, ಸರ್ಕಾರ 2015 ರ ಫೆ.13 ರಂದು 2 ರಿಂದ 3 ಎಕರೆವರೆಗಿನ ಒತ್ತುವರಿ ತೆರವುಗೊಳಿಸಬಾರದೆಂದು ಆದೇಶ ಮಾಡಿರುತ್ತದೆ. ಆದರೆ, ಕೇರಳದ ವೈನಾಡು ಭಾಗದಲ್ಲಿ ಆದ ಭೂ ಕುಸಿತ ಹಿನ್ನೆಲೆಯಲ್ಲಿ ಏಕಾ ಏಕಿ ರಾಜ್ಯದಲ್ಲಿ ಒತ್ತುವರಿ ತೆರವಿಗೆ ಮುಂದಾಗಿರುವುದು ಖಂಡನೀಯ. ತಮ್ಮ ಬದುಕು, ಜೀವನಕ್ಕಾಗಿ ಇರುವ ಒಂದೆರಡು ಎಕರೆಒತ್ತುವರಿ ಭೂಮಿ ತೆರವು ಮಾಡಬಾರದು ಎಂದರು.

ನೂರಾರು ಎಕರೆ ಒತ್ತುವರಿದಾರರ, ಬಲಾಢ್ಯರ ಭೂಮಿಯನ್ನು ಮೊದಲು ತೆರವುಗೊಳಿಸಲಿ ? ಎಂದು ಸವಾಲು ಹಾಕಿದರು. ರೈತರು, ದಲಿತರು ಭೂಮಿಯಲ್ಲಿ ಗಿಡ ಬೆಳೆಸುವ ಮುನ್ನವೇ ತಡೆಯಬೇಕಿದ್ದ ಇಲಾಖೆ ಅಧಿಕಾರಿಗಳು ಗಿಡಗಳು ಬೆಳೆದು ಫಸಲು ನೀಡುವ ಸಂದರ್ಭದಲ್ಲಿ ತೆರವಿಗೆ ಮುಂದಾಗಿರುವ ಉದ್ದೇಶವಾದರೂ ಏನು? ಎಂದು ಪ್ರಶ್ನಿಸಿದರು.

ಈ ಸಂದರ್ಭದಲ್ಲಿ ದಲಿತ ಮುಖಂಡರಾದ ಚಿತ್ರಪ್ಪಯರಬಾಳ್‌, ಸ್ಟೀವನ್ ಇದ್ದರು.

PREV

Recommended Stories

ಧರ್ಮಸ್ಥಳ ಗ್ರಾಮ ಕೇಸ್‌ ರೀತಿ ಶ್ವಾನ ಮೂಳೆ ಪತ್ತೆಗೆ ಎಸ್‌ಐಟಿ?
ಎಸ್ಸೆಸ್ಸೆಲ್ಸಿ- ಪಿಯು : ಈ ವರ್ಷವೂ 3 ಪರೀಕ್ಷೆ ಉದ್ದೇಶ ಫೇಲ್‌