ವಿಮೆ ಹಣ ಪಡೆಯಲು ಕಾನೂನು ಹೋರಾಟ: ಶಾಸಕ ಶಿವರಾಮ ಹೆಬ್ಬಾರ್

KannadaprabhaNewsNetwork |  
Published : Feb 23, 2025, 12:30 AM IST
ಪೊಟೋ೨೨ಎಸ್.ಆರ್.ಎಸ್೧ (ಉತ್ತರಕನ್ನಡ ಜಿಲ್ಲೆಯ ಎಲ್ಲ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಅಧ್ಯಕ್ಷರು ಹಾಗೂ ಮುಖ್ಯ ಕಾರ್ಯನಿರ್ವಾಹಕರಿಗೆ ರಾಜ್ಯ ಮಟ್ಟದ ವಿಶೇಷ ತರಬೇತಿ ಕಾರ್ಯಕ್ರಮವನ್ನು ಶಿವರಾಮ ಹೆಬ್ಬಾರ ಉದ್ಘಾಟಿಸಿದರು.) | Kannada Prabha

ಸಾರಾಂಶ

ಜಿಲ್ಲೆಯ ೫೨ ಗ್ರಾಪಂ ವ್ಯಾಪ್ತಿಯ ರೈತರಿಗೆ ಮಾತ್ರ ₹೧೦.೯೬ ಕೋಟಿ ಬೆಳೆ ವಿಮೆ ಪರಿಹಾರ ಬಿಡುಗಡೆಯಾಗಿದೆ.

ಶಿರಸಿ: ರೈತರಿಗೆ ವಿಮೆ ತಪ್ಪಿಸುವ ಹುನ್ನಾರಕ್ಕೆ ವಿಮಾ ಕಂಪೆನಿ ಕೈ ಹಾಕಿದ್ದು, ಜಿಲ್ಲಾ ಮಧ್ಯವರ್ತಿ ಬ್ಯಾಂಕ್ ಜಿಲ್ಲೆಯಲ್ಲಿರುವ ಸಹಕಾರಿ ಸಂಘದ ಪ್ರತಿನಿಧಿಗಳ ಸಭೆ ನಡೆಸಿ ಕೋರ್ಟಲ್ಲಿ ಪ್ರಕರಣ ದಾಖಲಿಸಲು ತೀರ್ಮಾನಿಸಿದ್ದೇವೆ ಎಂದು ಶಾಸಕ, ಕೆಡಿಸಿಸಿ ಬ್ಯಾಂಕ್ ಅಧ್ಯಕ್ಷ ಶಿವರಾಮ ಹೆಬ್ಬಾರ್ ಹೇಳಿದರು.

ಅವರು ಶನಿವಾರ ನಗರದ ಕೆಡಿಸಿಸಿ ಬ್ಯಾಂಕ್‌ನ ಸುಂದರ್ ರಾವ್ ಪಂಡಿತ ಸ್ಮಾರಕ ಸಭಾಭವನದಲ್ಲಿ ರಾಜ್ಯ ಸಹಕಾರ ಮಹಾಮಂಡಳ, ಜಿಲ್ಲಾ ಸಹಕಾರ ಯೂನಿಯನ್, ಸಹಕಾರ ಇಲಾಖೆ, ಕೆಡಿಸಿಸಿ ಬ್ಯಾಂಕ್, ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಆಶ್ರಯದಲ್ಲಿ ಹಮ್ಮಿಕೊಂಡ ಜಿಲ್ಲೆಯ ಕೃಷಿ ಸಹಕಾರ ಸಂಘಗಳ ಅಧ್ಯಕ್ಷರು, ಮುಖ್ಯ ಕಾರ್ಯನಿರ್ವಾಹಕರ ರಾಜ್ಯ ಮಟ್ಟದ ವಿಶೇಷ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ, ಮಾತನಾಡಿದರು.

ಜಿಲ್ಲೆಯ ೫೨ ಗ್ರಾಪಂ ವ್ಯಾಪ್ತಿಯ ರೈತರಿಗೆ ಮಾತ್ರ ₹೧೦.೯೬ ಕೋಟಿ ಬೆಳೆ ವಿಮೆ ಪರಿಹಾರ ಬಿಡುಗಡೆಯಾಗಿದೆ. ಮಳೆ ಮಾಪನ ಕೇಂದ್ರದ ಅಂಕಿ-ಅಂಶಗಳು ಸರಿಯಿಲ್ಲ ಎಂದು ವಿಮೆ ಕಂಪೆನಿ ಹೇಳುತ್ತಿದೆ. ಕಳೆದ ವರ್ಷ ₹೭೬ ಕೋಟಿ ನಮ್ಮ ಜಿಲ್ಲೆಗೆ ಬಂದಿತ್ತು. ರಾಜ್ಯದ ಉಳಿದ ಜಿಲ್ಲೆಯಲ್ಲಿ ಸರಿಯಾಗಿದೆ. ಇಲ್ಲಿ ಏಕೆ ಸರಿಯಿಲ್ಲ? ವಿಮಾ ಕಂಪೆನಿ ರೈತರಿಗೆ ಮೋಸ ಮಾಡುತ್ತಿದೆ. ಇದರ ವಿರುದ್ಧ ಹೋರಾಟ ಅನಿವಾರ್ಯವಾಗಿದೆ ಎಂದರು.

ಜಿಲ್ಲಾ ಮಧ್ಯವರ್ತಿ ಬ್ಯಾಂಕ್ ನಲ್ಲಿರುವ ಹಣಕ್ಕೆ ನಾವು ಮಾಲಕರಲ್ಲ. ನಾವು ಅದರ ಸೇವಕರು. ಜಿಲ್ಲೆಯಲ್ಲಿ ಕೆಡಿಸಿಸಿ ಬ್ಯಾಂಕ್ ₹೧೧೦೦ ಕೋಟಿ ಬೆಳೆ ಸಾಲ ವಿತರಣೆ ಮಾಡಿದ್ದು, ₹೫೫೦ರಿಂದ ₹೬೦೦ ಕೋಟಿ ಮಧ್ಯಮಾವಧಿ ಸಾಲ ವಿತರಣೆಯಾಗಿದೆ. ಕೇವಲ ೨೬ರಿಂದ ೩೦ ಪ್ರತಿಶತ ಜನರು ಹಣ ಠೇವಣಿ ಇಟ್ಟಿದ್ದಾರೆ. ಕೃಷಿಕರಲ್ಲದವರು ಶೇ.೭೦ ಹಣ ಇಟ್ಟಿದ್ದಾರೆ. ಶೂನ್ಯ ಪ್ರತಿಶತ ಬಡ್ಡಿ ದರದಲ್ಲಿ ಸಾಲ ಪಡೆಯುವುದು ರೈತರ ಹಕ್ಕು. ಶ್ರೀಮಂತ ರೈತರು ಶೂನ್ಯ ಬಡ್ಡಿದರಲ್ಲಿ ಸಾಲ ಪಡೆದು ರಾಷ್ಟ್ರೀಕೃತ ಬ್ಯಾಂಕ್ ನಲ್ಲಿ ಠೇವಣಿ ಇಡುತ್ತಿದ್ದಾರೆ. ಜಿಲ್ಲಾ ಮಧ್ಯವರ್ತಿ ಬ್ಯಾಂಕ್ ಬಲಿಷ್ಠವಾಗಿಡಲು ಇಲ್ಲಿಯೇ ಠೇವಣಿ ಇಡಬೇಕು ಎಂದರು.

ಶಿರಸಿ ಟಿಎಂಎಸ್ ಅಧ್ಯಕ್ಷ ಜಿ.ಟಿ.ಹೆಗಡೆ ತಟ್ಟೀಸರ ಮಾತನಾಡಿ, ಜನಸಾಮಾನ್ಯರಿಗೆ ಸಹಕಾರ ತತ್ವ, ಸಿದ್ಧಾಂತ ಪರಿಕಲ್ಪನೆ ತಿಳಿಸಬೇಕಿರುವುದು ಅವಶ್ಯಕ. ಶಾಲಾ ಪಠ್ಯ ಪುಸ್ತಕದಲ್ಲಿ ಸಹಕಾರ ವಿಷಯ ಅಳವಡಿಸಿದರೆ ಮುಂದಿನ ದಿನಗಳಲ್ಲಿ ಸಹಕಾರ ವ್ಯವಸ್ಥೆ ಇನ್ನಷ್ಟು ಬಲಿಷ್ಠಗೊಳ್ಳಲು ಸಾಧ್ಯ ಎಂದರು.

ಜಿಲ್ಲಾ ಸಹಕಾರ ಯೂನಿಯನ್ ಅಧ್ಯಕ್ಷ ವಿ.ಎನ್.ಭಟ್ಟ ಅಳ್ಳಂಕಿ ಅಧ್ಯಕ್ಷತೆ ವಹಿಸಿದ್ದರು.

ಕೆಡಿಸಿಸಿ ಬ್ಯಾಂಕ್ ನಿರ್ದೇಶಕ ಸುರೇಶ್ಚಂದ್ರ ಹೆಗಡೆ ಕೆಶಿನ್ಮನೆ, ಜಿಲ್ಲಾ ಸಹಕಾರಿ ಯೂನಿಯನ್ ಉಪಾಧ್ಯಕ್ಷ ಶ್ರೀಪಾದ ರಾಯ್ಸದ್, ನಿರ್ದೇಶಕ ಮಹೇಂದ್ರ ಭಟ್ಟ, ಸಹಕಾರ ಸಂಘಗಳ ಉಪ ನಿಬಂಧಕ ಜಿ.ಕೆ.ಭಟ್ಟ, ಸಹಕಾರ ಸಂಘಗಳ ಸಹಾಯಕ ನಿಬಂಧಕ ಅಜಿತ ಶಿರಹಟ್ಟಿ, ಕೆಡಿಸಿಸಿ ಬ್ಯಾಂಕ್ ವ್ಯವಸ್ಥಾಪಕ ನಿರ್ದೇಶಕ ಶ್ರೀಕಾಂತ ಭಟ್ಟ, ಸಹಕಾರ ಯೂನಿಯನ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಗೋಪಾಲ ನಾಯಕ ಮತ್ತಿತರರು ಇದ್ದರು.

ಅಧ್ಯಕ್ಷರು, ಮುಖ್ಯ ಕಾರ್ಯನಿರ್ವಾಹಕರ ಹಕ್ಕು, ಜವಾಬ್ದಾರಿ, ಕರ್ತವ್ಯ, ಸಹಕಾರ ಸಂಘಗಳ ಕಾಯ್ದೆಯ ಮುಖ್ಯಾಂಶ ಕುರಿತು ಸಹಕಾರ ಸಂಘಗಳ ಅಪರ ನಿಬಂಧಕ ಎ.ಸಿ. ದಿವಾಕರ್, ಲೆಕ್ಕ ಪರಿಶೋಧನೆಕುರಿತು ವಿಶ್ರಾಂತ ಜಂಟಿ ನಿರ್ದೇಶಕ ಮಂಜುನಾಥ ಹೆಗಡೆ, ಕೃಷಿ ಪತ್ತಿನ ಸಹಕಾರ ಸಂಘಗಳಲ್ಲಿ ವಿವೇಚನಾಯುಕ್ತ ಮಾನದಂಡಗಳ ಅಳವಡಿಕೆ, ಬಡ್ಡಿ, ಬಿಲ್ಲುಗಳ ಕುರಿತು ವಿಶ್ರಾಂತ ಲೆಕ್ಕಪರಿಶೋಧಕ ಜಿ.ಕೆ.ರಾಮಪ್ಪ ಉಪನ್ಯಾಸ ನೀಡಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನಸಿಕ ಖಿನ್ನತೆ ಸ್ವಯಂ ಮೌಲ್ಯಮಾಪನಕ್ಕೆ ನಿಮ್ಹಾನ್ಸ್‌ ಆ್ಯಪ್‌
ಒಂದೇ ದಿನ ಜಡ್ಜ್‌ ಮುಂದೆ 60 ಪರೋಲ್‌ ಅರ್ಜಿ!