- ಮಾನವ ಹಕ್ಕುಗಳ ದಿನಾಚರಣೆ ಅಂಗವಾಗಿ ಪೌರ ಕಾರ್ಮಿಕರಿಗೆ ಕಾನೂನು ಅರಿವು ಕಾರ್ಯಕ್ರಮ
ಸಂವಿಧಾನದ ಆಶಯದಂತೆ ಸರ್ವರಿಗೂ ಸಮಾನತೆ, ಸಮಬಾಳು, ವ್ಯಕ್ತಿ ಗೌರವ, ಸಮಪಾಲು ಎಂಬಂತೆ ಸಮಾಜದಲ್ಲಿ ಎಲ್ಲರನ್ನೂ ಗೌರವದಿಂದ ಕಾಣಬೇಕು. ಜಾತಿ ಬೇಧ ಮಾಡಬಾರದು ಎಂದು ಹಿರಿಯ ಸಿವಿಲ್ ನ್ಯಾಯಾಧೀಶ ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ವಿ. ಹನುಮಂತಪ್ಪ ಕರೆ ನೀಡಿದರು.ಮಾನವ ಹಕ್ಕುಗಳ ದಿನಾಚರಣೆ ಅಂಗವಾಗಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ವಕೀಲರ ಸಂಘ, ನಗರಸಭೆ ಹಾಗೂ ವಾರ್ತಾ ಇಲಾಖೆ ಸಂಯುಕ್ತಾಶ್ರಯದಲ್ಲಿ ಗುರುವಾರ ನಗರಸಭೆಯಲ್ಲಿ ಏರ್ಪಡಿಸಲಾಗಿದ್ದ ಪೌರ ಕಾರ್ಮಿಕರಿಗೆ ಕಾನೂನು ಅರಿವು ಕಾರ್ಯಕ್ರಮವನ್ನು ಗಿಡಕ್ಕೆ ನೀರೆರೆಯುವ ಮೂಲಕ ಉದ್ಘಾಟಿಸಿ ಮಾತನಾಡಿದರು.ಸಂವಿಧಾನದ ಪೀಠಿಕೆಯಲ್ಲಿ ಹೇಳಿರುವಂತೆ ಭಾರತದ ಪ್ರಜೆಗಳಾದ ನಾವೆಲ್ಲರೂ ಒಂದೇ ಎಂಬ ಮನೋಭಾವ ಮೂಡಬೇಕು. ವಿವಿಧತೆಯಲ್ಲಿ ಏಕತೆ, ಭಾಷೆ, ಭಿನ್ನವಾದ ಸಂಸ್ಕೃತಿ ಇವೆಲ್ಲವನ್ನು ಮೀರಿ ನಾವು ಭಾರತೀಯರು ಎಂಬ ಭಾವನೆ ಬೆಳೆಸಿಕೊಳ್ಳಬೇಕು ಎಂದು ಹೇಳಿದರು.ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಸಂವಿಧಾನದಲ್ಲಿ ಈ ದೇಶದ ನಾಗರಿಕರಿಗೂ ಮೂಲಭೂತವಾದ ಸಾಕಷ್ಟು ಹಕ್ಕುಗಳನ್ನು ನೀಡಿದ್ದಾರೆ. ಸಾಮಾಜಿಕ, ರಾಜಕೀಯ, ಆರ್ಥಿಕ ನ್ಯಾಯ ಎಂಬ ಮೂರು ನ್ಯಾಯಗಳನ್ನು ಉಲ್ಲೇಖಿಸಿ ದ್ದಾರೆಂದರು.ದೇಶದ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸ್ಪರ್ಧೆ ಮಾಡುವವರನ್ನು ಮತದಾರನ ಬಳಿಗೆ ಕರೆಸುವ ಮತದಾನ ಸಾರ್ವಜನಿಕರ ಒಂದೇ ಮೌಲ್ಯ ಇರುವ ಆಯುಧವಿದ್ದಂತೆ. ಇದು ರಾಜಕೀಯ ಸಮಾನತೆ ಎಂದ ಅವರು, ಇತ್ತೀಚೆಗೆ ಮದ್ಯಪಾನ ಮಾಡಿ ಮತದಾನ ಮಾಡುತ್ತಿರುವುದು ವಿಷಾಧನೀಯ ಎಂದರು.ಪವಿತ್ರವಾದ ಮತದಾನ ತಾಯಿಯಂತೆ. ಅದನ್ನು ಐದು, ಹತ್ತು ಸಾವಿರಕ್ಕೆ ಹಾಗೂ ಉಡುಗೊರೆಗಳಿಗೆ ಮದ್ಯಪಾನಕ್ಕೆ ಮಾರಾಟ ಮಾಡಬಾರದು. ಇದು ಬದಲಾಗದಿದ್ದರೆ ಸಂವಿಧಾನದ ಆಶಯಗಳು ಬದಲಾಗಲು ಸಾಧ್ಯವಿಲ್ಲ ಎಂದು ಹೇಳಿದರು.ಸ್ವಚ್ಛತಾ ಕಾಯಕವನ್ನು ಕೇವಲ ಕೆಲವೇ ಸಮುದಾಯದ ಜನರು ಮಾಡುತ್ತಿದ್ದಾರೆ. ಇಂತಹ ಕೆಲಸಕ್ಕೆ ನಗರಸಭೆಯಿಂದ ಅರ್ಜಿ ಆಹ್ವಾನಿಸಿದರೆ ಎಷ್ಟು ಮಂದಿ ಅರ್ಜಿ ಸಲ್ಲಿಸುತ್ತೀರಿ ಎಂದು ಪ್ರಶ್ನಿಸಿದ ಅವರು, ಯಾರೂ ಅರ್ಜಿ ಸಲ್ಲಿಸುವುದಿಲ್ಲ. ತಾಯಿ ಸ್ಥಾನದಲ್ಲಿದ್ದು, ಸಮಾಜದ ಹೊಲಸನ್ನು ತೆಗೆದು ಸ್ವಚ್ಛ ಮಾಡುತ್ತಿರುವವರು ಪೌರ ಕಾರ್ಮಿಕರು ಎಂದು ಶ್ಲಾಘಿಸಿದರು.ಸಮಾಜದ ಮುಖ್ಯ ವಾಹಿನಿಯಲ್ಲಿ ಜಾತಿ ಹೆಸರಿನಲ್ಲಿ ಪೌರ ಕಾರ್ಮಿಕರನ್ನು ನಿಂದನೆ ಮಾಡದೆ ವ್ಯಕ್ತಿ ಗೌರವದಿಂದ ಕಾಣಬೇಕು. ಜೊತೆಗೆ ಹೆಣ್ಣು ಭ್ರೂಣಹತ್ಯೆ ನಿಲ್ಲಬೇಕೆಂದು ಸಲಹೆ ನೀಡಿದರು.ನಗರಸಭಾಧ್ಯಕ್ಷೆ ಶೀಲಾ ದಿನೇಶ್ ಮಾತನಾಡಿ, ಪೌರ ಕಾರ್ಮಿಕರು ತಮ್ಮ ಮಕ್ಕಳಿಗೆ ಉನ್ನತ ಶಿಕ್ಷಣ ಕೊಡಿಸುವ ಮೂಲಕ ಆರ್ಥಿಕ, ಸಾಮಾಜಿಕವಾಗಿ ಸದೃಢರಾಗಬೇಕೆಂದು ಕರೆ ನೀಡಿದರು.ಮಹಿಳೆಯರೂ ಸೇರಿದಂತೆ ಸಮಾಜದ ಪ್ರತಿಯೊಬ್ಬರೂ ಕಾನೂನಿನ ಬಗ್ಗೆ ಅರಿವು ಹೊಂದಬೇಕು. ಇದು ಎಲ್ಲರೂ ಅಳವಡಿಸಿ ಕೊಂಡಾಗ ಸಮಾಜದಲ್ಲಿರುವ ಮೌಢ್ಯತೆ ದೂರವಾಗುತ್ತದೆ ಎಂದು ತಿಳಿಸಿದರು.ಈ ಸಂದರ್ಭದಲ್ಲಿ ವಕೀಲರಾದ ಶಶಿ, ನಗರಸಭೆ ಕಚೇರಿ ವ್ಯವಸ್ಥಾಪಕ ರವಿ, ಸಹಾಯಕ ಕಾರ್ಯಪಾಲಕ ಅಭಿಯಂತರ (ಪರಿಸರ) ವೆಂಕಟೇಶ್ ಸೇರಿದಂತೆ ಆರೋಗ್ಯ ನಿರೀಕ್ಷಕರಾದ ರಂಗಪ್ಪ, ಈಶ್ವರ್, ವೆಂಕಟೇಶ್, ಅಣ್ಣಯ್ಯ, ಶ್ರೀನಿವಾಸ್, ಸೂಪರ್ ವೈಸರ್‌ಗಳು, ಪೌರ ಕಾರ್ಮಿಕರು, ಸಮುದಾಯ ಸಂಪನ್ಮೂಲ ವ್ಯಕ್ತಿಗಳು ಭಾಗವಹಿಸಿದ್ದರು. ಚಂದ್ರಶೇಖರ್ ಸ್ವಾಗತಿಸಿದರು. 11 ಕೆಸಿಕೆಎಂ 1ಚಿಕ್ಕಮಗಳೂರು ನಗರಸಭೆಯಲ್ಲಿ ಗುರುವಾರ ನಡೆದ ಪೌರ ಕಾರ್ಮಿಕರಿಗಾಗಿ ಕಾನೂನು ಅರಿವು ಕಾರ್ಯಕ್ರಮವನ್ನು ಗಿಡಕ್ಕೆ ನೀರೆರೆಯುವ ಮೂಲಕ ನ್ಯಾಯಾಧೀಶ ವಿ. ಹನುಮಂತಪ್ಪ ಉದ್ಘಾಟಿಸಿದರು.